ಸಾಗರ :ದಲಿತ ಸಮುದಾಯಕ್ಕೆ ಸೇರಿದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಇಲ್ಲಿನ ವರದಹಳ್ಳಿ ರಸ್ತೆಯ ವನಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಚ್.ಪಿ.ಮಂಜಪ್ಪ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ವನಶ್ರೀ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ಬಾಲಕಿ ಮೇಲೆ ಶಾಲೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮಂಜಪ್ಪ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿ ಮಂಜಪ್ಪ ತಲೆಮರೆಸಿಕೊಂಡಿದ್ದು ಪೋಕ್ಸೊ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆಯೂ ಶಾಲೆಯಲ್ಲಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಸಂಬಂಧ ಸಾಗರದ ವನಶ್ರೀ ವಸತಿ ವಿದ್ಯಾಲಯದ ಮುಖ್ಯಸ್ಥ ವನಶ್ರೀ ಮಂಜಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು.
2023ರ ಜೂ.8ರಂದು 13 ವರ್ಷದ ಬಾಲಕಿಯೋರ್ವಳು ಇದೇ ವಸತಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಈ ಸಾವಿಗೆ ಶಾಲೆಯ ಮುಖ್ಯಸ್ಥ ಮಂಜಪ್ಪ ಕಾರಣ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಇದರೊಂದಿಗೆ 14 ವರ್ಷ ವಯಸ್ಸಿನ ಮತ್ತೋರ್ವ ಬಾಲಕಿಗೂ ಶಾಲೆಯ ಮುಖ್ಯಸ್ಥರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿತ್ತು. ಈ ಎರಡೂ ಪ್ರಕರಣದಲ್ಲಿ ಆರೋಪಿ ಮಂಜಪ್ಪ ಜೈಲು ಪಾಲಾಗಿದ್ದರು.