ಜಿ.ಎಸ್.ಮಣಿ
(ಕೇರಳದ ಮಾಜಿ ಹಣಕಾಸು ಮಂತ್ರಿ ಮತ್ತು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಪ್ರೊ.ಥಾಮಸ್ ಐಸಾಕ್ ಅವರ ಫೆಡರಲ್.ಕಾಮ್ ವೆಬ್ ಪತ್ರಿಕೆಯಲ್ಲಿ ಪ್ರಕಟವಾದ 22.10.25 ರ ಲೇಖನದ ಸಾರಾಂಶ)
ಈಗ ಕೇರಳದಲ್ಲಿ ಈ ವಿಷಯದ ವಿವಾದ ಎದ್ದಿದೆ. ಕಾರಣವಿಷ್ಟೆ. ಮೇಲೆ ಕಾಣಿಸಿದ ಶಾಲೆಗಳ ಹೆಸರಿನ ಅನುದಾನ ಪಡೆಯಲು ಕೇರಳದ ಎಡರಂಗ ಸರ್ಕಾರ ಹೆಜ್ಜೆ ಇಟ್ಟಿದೆ. ಇದು ಸೈದ್ದಾಂತಿಕ ರಾಜಿ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಹುಯಿಲೆಬ್ಬಿಸಲು ಪ್ರಯತ್ನಿಸುತ್ತಿವೆ. ಬಿಜೆಪಿ ಯ ರಾಜ್ಯ ಅಧ್ಯಕ್ಷರು ಸಿಪಿಐ ಎಂ) ಕ್ಷಮೆ ಕೇಳಬೇಕು ಎಂದೂ ಹೇಳಿದ್ದಾರೆ.ಅಂತಹ ಸೈದ್ದಾಂತಿಕ ರಾಜಿ ಇಲ್ಲಿ ಆಗುತ್ತಿದೆಯಾ ಎಂಬುದು ಮುಖ್ಯ ಪ್ರಶ್ನೆ. ಯಾಕೆ ಇಂಥ ಪ್ರಶ್ನೆ ಎಂದು ನೋಡಿದರೆ ಹೊಸ ಶಿಕ್ಷಣ ನೀತಿ ವಿರೋಧಿಸುವವರು ಪಿ ಎಂ ಶ್ರಿ ಅನುದಾನ ಪಡೆಯುವುದು ಸೈದ್ದಾಂತಿಕವಾಗಿ ಸರಿ ಅಲ್ಲ ಎಂಬ ಅವರ ಗ್ರಹಿಕೆ. . ಪಿಎಂಶ್ರಿ ನೆವದಲ್ಲಿ ಕೇರಳದ ಅಭಿವೃದ್ದಿಗೆ ತೊಡಕಾಗಬಲ್ಲ ಹಣಕಾಸು ವಂಚನೆಗೆ ಅವಕಾಶ ನೀಡುವುದೂ ಸಲ್ಲ. ಕೋಮುವಾದಿ ರಾಜಕೀಯಕ್ಕೆ ತಕ್ಕ ಪ್ರತಿರೋಧ ದೃಢವಾಗೇ ಇರುತ್ತದೆ. ಹೊಸ ಶಿಕ್ಷಣ ನೀತಿ ಒಪ್ಪಿಕೊಳ್ಳುವ ಮಾತಿಲ್ಲ ಭಾರತ ಒಕ್ಕೂಟದ ರಾಜ್ಯಗಳು ತಮ್ಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ಶಕ್ತಿ ಹೊಂದಿವೆಯೋ ಇಲ್ಲವೋ ಎಂಬ ಪ್ರಶ್ನೆಯೂ ಇದರೊಂದಿಗೆ ಬೆಸೆದುಕೊಂಡಿದೆ. ಹೋರಾಟ ಮತ್ತು ಅಭಿವೃದ್ದಿ ಎರಡನ್ನೂ ಮೇಳೈಸಿಕೊಂಡು ಮುನ್ನಡೆಯುವ ಅನಿವಾರ್ಯತೆ ಇಂದು ಇದೆ. ಎಂದು ಥಾಮಸ್ ಐಸಾಕ್ ಹೇಳಿದ್ದಾರೆ. ಕೇರಳ
ಹಿನ್ನೆಲೆ
ಕೇಂದ್ರದ ಪಿಎಂಶ್ರಿ ಯೋಜನೆಯ ಪ್ರಕಾರ ದೇಶದಾದ್ಯಂತ ಪ್ರತಿ ತಾಲೂಕಿನಲ್ಲಿ (ಬ್ಲಾಕ್) ಎರಡು ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಿ ಅನುದಾನ ನೀಡಲಾಗುತ್ತದೆ. ಒಟ್ಟು ದೇಶದಾದ್ಯಂತ 14500 ಇಂತಹ ಶಾಲೆಗಳು ಈ ಯೋಜನೆಯಡಿ ಬರಲಿವೆ. ಐದು ವರ್ಷಗಳ ಅವಧಿಯಲ್ಲಿ ಪ್ರತಿ ಶಾಲೆಗೆ ಸುಮಾರು 2 ಕೋಟಿ ರೂಪಾಯಿಗಳ ಅನುದಾನ ಬರಬಹುದು. ಕೇರಳ ಸರ್ಕಾರ ‘ಕೇರಳ ಮೂಲ ಸೌಕರ್ಯ ಮತ್ತು ಹೂಡಿಕೆ ನಿಧಿ ಮಂಡಳಿಯ‘ಡಿ ಈ ದಿಸೆಯಲ್ಲಿ ಮಾಡಿರುವ ಖರ್ಚಿಗೆ ಹೊಲಿಸಿದರೆ ಇದು ದೊಡ್ಡದಲ್ಲದಿದ್ದರೂ ನಿರ್ಲಕ್ಷಿಸುವಷ್ಟು ಸಣ್ಣದಲ್ಲ. ಕೇಂದ್ರ ಸರ್ಕಾರ ಈ ಅನುದಾನದ ಕರಾರನ್ನು ಸಮಗ್ರ ಶಿಕ್ಷಣ ಅಭಿಯಾನಕ್ಕೆ ತಳಕು ಹಾಕಿದೆ. ಕಳೆದ 2023-24 ರಲ್ಲಿ ಕೇರಳಕ್ಕೆ ಸಮಗ್ರ ಶಿಕ್ಷಣ ಅಭಿಯಾನದಡಿ 1031 ಕೋಟಿ ರೂಪಾಯಿಗಳು ಬಂದಿದ್ದವು. 2024-025 ರ ಸಾಲಿಗೆ ಕೇಂದ್ರ ಕೇರಳ ಪಿಎಂಶ್ರಿ ಒಪ್ಪಂದಕ್ಕೆ ಸಹಿ ಮಾಡದೆ ಸಮಗ್ರ ಶಿಕ್ಷಣ ಅಭಿಯಾನದಡಿ ಕವಡೆ ಕಾಸನ್ನು ನೀಡೆವು ಎಂದೂ ಹಠ ಹಿಡಿದ ಕಾರಣ ಒಂದು ಪೈಸೆಯ ಅನುದಾನವೂ ಬಂದಿಲ್ಲ.
ಸೈದ್ದಾಂತಿಕ ಬಲವಂತ
ಕೇಂದ್ರದ ಬಿಜೆಪಿ ಸರ್ಕಾರ ಕೇರಳದ ಎಡರಂಗ ಸರ್ಕಾರದ ಮೇಲೆ ಸೈದ್ದಾಂತಿಕ ಬಲವಂತ ಹೇರುವ ಹುನ್ನಾರ ಮಾಡುತ್ತಿರುವುದು ಸ್ಪಷ್ಟ. ಹಣ ಬೇಕಾದರೆ ನಮ್ಮ ದಾರಿಗೆ ಬನ್ನಿ ಎಂಬ ನಡೆ ಅವರದ್ದು. ಕೇಂದ್ರದ ಹಣ ಯಾರ ವೈಯಕ್ತಿಕ ಆಸ್ತಿಯೂ ಅಲ್ಲ ಎಂಬುದು ನಮಗೆಲ್ಲ ಸ್ಪಷ್ಟವಾಗೇ ಇದೆ. ಆದ್ದರಿಂದಲೇ ಇಂತಹ ಬಲವಂತಕ್ಕೆ ಚಾಣಾಕ್ಷತೆಯ ಪ್ರತಿಕ್ರಿಯೆಯ ಅವಶ್ಯಕತೆ ಇದೆ. ಸೈದ್ದಾಂತಿಕತೆ ಬಿಟ್ಟುಕೊಡದೆ ತಂತ್ರಗಾರಿಕೆಯ ಮೂಲಕ ಈ ಸಮಸ್ಯೆ ಎದುರಿಸುವ ಅಗತ್ಯ ಇದೆ. ಹಾಗೆ ಮಾಡದೇ ಹೋದರೆ ಐದು ವರ್ಷಗಳ ಅವಧಿಯಲ್ಲಿ ನ್ಯಾಯವಾಗಿ ಬರಬೇಕಾದ ಸುಮಾರು 5000 ಕೋಟಿ ರೂಪಾಯಿಗಳು ಬಾರದೇ ಹೋಗುತ್ತದೆ. ಕೇರಳದ ಜನ ಇಂತಹ ದುರ್ವಂಚನೆಯ ಬಲಿಪಶುಗಳಾಗುವುದನ್ನು ತಡೆಯಲು ಪ್ರಯತ್ನ ಮಾಡುವುದು ಅನಿವಾರ್ಯವಾಗುತ್ತದೆ.
ಇದನ್ನೂ ಓದಿ : ಫ್ಯಾಸಿಸಂ ಎಂಬುದು ಒಂದು ಪಕ್ಕಾ ಆಧುನಿಕ ವಿದ್ಯಮಾನ
ಪರಿಣಾಮಗಳು ಮತ್ತು ಎದುರಿಸುವ ತಂತ್ರಗಳು
ಪಿಎಂಶ್ರಿ ಒಪ್ಪಂದಕ್ಕೆ ಸಹಿ ಹಾಕಿದರೆ ಆಗಬಹುದಾದ ಪರಿಣಾಮಗಳು ಮತ್ತು ಅವುಗಳನ್ನು ಸೈದ್ದಾಂತಿಕವಾಗಿ ಎದುರಿಸುವ ಸಾಧ್ಯತೆಗಳನ್ನು ನೋಡೋಣ. ಮೊದಲನೆಯದಾಗಿ, ಬ್ಲಾಕಿಗೆ ಎರಡು ಶಾಲೆಗಳನ್ನು ಪಿಎಂಶ್ರಿ ಶಾಲೆಗಳೆಂದು ನಿಗದಿಪಡಿಸಿದರೆ ಅವುಗಳಿಗೆ ಕೇರಳದ ಪರಂಪರೆಗೆ ಅನುಗುಣವಾಗಿ ಸಮಾಜ ಸುಧಾರಕರು, ನವೋದಯ ನಾಯಕುರಗಳ ಹೆಸರಿಡುವ ಕೆಲಸ ಮಾಡಿ ರಾಜ್ಯದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪದ್ದತಿಯನ್ನು ಉಳಿಸಿಕೊಳ್ಳಬೇಕು. ಎರಡನೆಯದಾಗಿ, ಕೇಂದ್ರ ಸರ್ಕಾರ ಸ್ವಂತ ಹಣಕಾಸು ವ್ಯವಸ್ಥೆ ಇರುವ ಶಾಲೆಗಳನ್ನು ಈ ಯೋಜನೆಯಡಿ ಸೇರಿಸಿಕೊಂಡಿತೆ ಎಂಬುದು. ದೇಶದಲ್ಲಿ ಈಗ ಈ ಯೋಜನೆಯಡಿ ಇರುವ 10000ಕ್ಕೂ ಹೆಚ್ಚು ಶಾಲೆಗಳಲ್ಲಿ ಯಾವುದೂ ಸ್ವಂತ ಹಣಕಾಸು ವ್ಯವಸ್ಥೆ ಇರುವ ಶಾಲೆಯಿಲ್ಲ. ಅಂತಹ ಪ್ರಯತ್ನ ಕೇರಳವನ್ನು ಗುರಿ ಮಾಡಿಕೊಂಡು ನಡೆದರೆ ಕೇರಳ ಸರ್ಕಾರ ಅದನ್ನು ತೀವ್ರವಾಗಿ ಪ್ರತಿರೋಧಿಸಿ ತಡೆಯಬೇಕು. ಮೂರನೆಯದಾಗಿ, ಈ ಯೋಜನೆಯಡಿ ರಾಷ್ಟ್ರೀಯ ಪಠ್ಯ ಚೌಕಟ್ಟು ಅಳವಡಿಸಿಕೊಳ್ಳುವ ನಿಯಮವಿದ್ದರೂ ಸ್ಥಳೀಯ ವಿಷಯ ಮತ್ತು ಸಾಂದರ್ಭಿಕ ರೂಪಾಂತರ ಅಳವಡಿಸಿಕೊಳ್ಳುವ ಅವಕಾಶಗಳು ಸಾಕಷ್ಟು ಇರುತ್ತವೆ. ಕೇರಳದ ಶಿಕ್ಷಕ ವೃಂದ, ಪೋಷಕ-ಶಿಕ್ಷಕ ಸಂಘಗಳು ಮತ್ತು ಅಲ್ಲಿನ ಜನ ಸಮುದಾಯ ಸೈದ್ದಾಂತಿಕ ಅಪಹರಣವನ್ನು ತಡೆಯಬೇಕು. ಕೊನೆಯದಾಗಿ ಭಾಷೆಯ ಪ್ರಶ್ನೆ. ಕೇರಳದ ಶಾಲೆಗಳಲ್ಲಿ ಮೇಲ್-ಪ್ರಾಥಮಿಕ ವರ್ಗಗಳಲ್ಲಿ ಹಿಂದಿಯನ್ನು ಕಲಿಸುತ್ತಿರುವುದರಿಂದ ಈ ಪ್ರಶ್ನೆ ದೊಡ್ಡ ತೊಡಕಾಗುವ ಸಾಧ್ಯತೆ ಇಲ್ಲ.
ಸೈದ್ದಾಂತಿಕ ರಾಜಿ ಅಲ್ಲ
ಆದ್ದರಿಂದ ಪಿಎಂಶ್ರಿ ಒಪ್ಪಂದಕ್ಕೆ ಸಹಿ ಹಾಕಿದರೆ ಸೈದ್ದಾಂತಿಕವಾಗಿ ರಾಜಿ ಮಾಡಿಕೊಂಡಂತೆ ಅಲ್ಲ. ಕೋಮುವಾದಿ ರಾಜಕೀಯಕ್ಕೆ ತಕ್ಕ ಪ್ರತಿರೋಧ ದೃಢವಾಗೇ ಇರುತ್ತದೆ. ಹೊಸ ಶಿಕ್ಷಣ ನೀತಿ ಒಪ್ಪಿಕೊಳ್ಳುವ ಮಾತಿಲ್ಲ. ಪಿಎಂಶ್ರಿ ನೆವದಲ್ಲಿ ಕೇರಳದ ಅಭಿವೃದ್ದಿಗೆ ತೊಡಕಾಗಬಲ್ಲ ಹಣಕಾಸು ವಂಚನೆಗೆ ಅವಕಾಶ ನೀಡುವುದೂ ಸಲ್ಲ. ಇಷ್ಟಕ್ಕೂ ಶಿಕ್ಷಣ ರಾಜ್ಯಗಳ ವಿಷಯ. ಹಿಂದೆ ಕೇಂದ್ರದ ಕಾಂಗ್ರೆಸ್ ಸರ್ಕಾರ ರಾಜ್ಯಗಳ ವಿಷಯದಲ್ಲಿ ಕೇಂದ್ರ ಮೂಗು ತೂರಿಸುವ ಇಂತಹ ಅವಕಾಶಗಳನ್ನು ಸೃಷ್ಟಿಸಿತ್ತು. ಅದನ್ನು ಬಿ ಜೆ ಪಿ ಕೇಂದ್ರ ಸರ್ಕಾರ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ. ಕೇರಳದಲ್ಲಿನ ಕಾಂಗ್ರೆಸ್ ಎಡರಂಗವನ್ನು ಟೀಕಿಸುತ್ತಿದೆ. ಆದರೆ ಅದು ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳಲ್ಲಿ ಪಿಎಂಶ್ರಿ ಒಪ್ಪಂದ ಮಾಡಿಕೊಂಡಿದೆ. ಹೊಸ ಶಿಕ್ಷಣ ನೀತಿಗೆ ಗಟ್ಟಿ ಪ್ರತಿರೋಧ ತೋರಿಸಿಲ್ಲ.
ಭಾರತ ಒಕ್ಕೂಟದ ರಾಜ್ಯಗಳು ತಮ್ಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ಶಕ್ತಿ ಹೊಂದಿವೆಯೋ ಇಲ್ಲವೋ ಎಂಬ ಪ್ರಶ್ನೆಯೂ ಇದರೊಂದಿಗೆ ಬೆಸೆದುಕೊಂಡಿದೆ. ಹೋರಾಟ ಮತ್ತು ಅಭಿವೃದ್ದಿ ಎರಡನ್ನೂ ಮೇಳೈಸಿಕೊಂಡು ಮುನ್ನಡೆಯುವ ಅನಿವಾರ್ಯತೆ ಇಂದು ಇದೆ.
*****************************************************
ಪಿ ಎಂ ಶ್ರಿ ಒಪ್ಪಂದಕ್ಕೆ ಸಹಿ ಹಾಕಲು ಎಡರಂಗ ಸರ್ಕಾರದ ನಿರ್ಧಾರ
ಕೇರಳದ ಶಿಕ್ಷಣ ಸಚಿವ ಎಂ ಸಿವನ್ ಕುಟ್ಟಿ ಅವರು ಎಡರಂಗ ಸರ್ಕಾರ ಪಿ ಎಂ ಶ್ರಿ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿದೆ ಎಂದು ತಿರುವನಂತಪುರದಲ್ಲಿ ಹೇಳಿದ್ದಾರೆ. ಇದು ಸೈದ್ದಾಂತಿಕ ರಾಜಿ ಅಲ್ಲ ಬದಲಿಗೆ ಒಂದು ತಂತ್ರಗಾರಿಕೆ ಎಂದು ಹೇಳಿದ್ದಾರೆ. ಶಿಕ್ಷಣ ರಂಗದಲ್ಲಿ ಆರ್ ಎಸ್ ಎಸ್ ಪ್ರಣೀತ ನೀತಿಗಳನ್ನು ಕೇಂದ್ರದ ಬಿ ಜೆ ಪಿ ಸರ್ಕಾರ ಜಾರಿಗೆ ತರಲು ಮಾಡುವ ಪ್ರಯತ್ನಗಳಿಗೆ ಎಡರಂಗದ ತಕ್ಕುದಾದ ಪ್ರತಿರೋಧ ಇದ್ದೇ ಇರುತ್ತದೆ ಎಂದೂ ಅವರು ಹೇಳಿದ್ದಾರೆ. ಕೇರಳ ರಾಜ್ಯ ಹಣಕಾಸಿನ ತೊಡಕುಗಳನ್ನು ಎದುರಿಸುತ್ತಿರುವಾಗ ಸಮಗ್ರ ಶಿಕ್ಷಣ ಯೋಜನೆಯ ಮತ್ತು ಇತರ ಯೋಜನೆಗಳ ಅನುದಾನಗಳನ್ನು ಕಳೆದುಕೊಳ್ಳಲು ಸಿದ್ದವಿಲ್ಲ ಎಂದು ಅವರು ಹೇಳಿದ್ದಾರೆ. ಈ ಒಪ್ಪಂದದಿಂದ ರಾಜ್ಯಕ್ಕೆ ಒಟ್ಟು (ಹಳೆಯ ಬಾಕಿ ಸೇರಿ) 1476.13 ಕೋಟಿ ರೂಪಾಯಿಗಳು ಬರಲಿವೆ ಎಂದು ಅವರು ಹೇಳಿದ್ದಾರೆ.
ಒಪ್ಪಂದಕ್ಕೆ ಸಹಿ ಮಾಡಿದೆವೆಂದ ಮಾತ್ರಕ್ಕೆ ನಾವು ಹೊಸ ಶಿಕ್ಷಣ ನೀತಿಯನ್ನು ಒಪ್ಪಿಕೊಂಡಂತೆ ಅಲ್ಲ. ಹೊಸ ಶಿಕ್ಷಣ ನೀತಿಗೆ ನಮ್ಮ ಪ್ರತಿರೋಧ ಇದ್ದೇ ಇರುತ್ತದೆ ಎಂದೂ ಅವರು ಹೇಳಿದ್ದಾರೆ.
(25.010.25 ರ ದಿ ಹಿಂದು ಪತ್ರಿಕೆಯ ವರದಿ)
*****************************************************
ಇದನ್ನೂ ನೋಡಿ :ದ್ವೇಷ ಬಿತ್ತುವ ಪಥಸಂಚಲನ ಬೇಡ – ಸಂವಿಧಾನ ದೀವಿಗೆ ಬೆಳಗುವ ಸೌಹಾರ್ದ ನಡಿಗೆ ಬೇಕು Janashakthi Media
