ಪ್ರಧಾನಿ ‘ಕಸ ಹೆಕ್ಕಿದ್ದು’ ನಿಜವೇ! ಪ್ರತಿದಿನ ಮಿಲಿಯನ್ ಹಣ ಖರ್ಚು ಮಾಡುವ ಭದ್ರತಾ ಸಿಬ್ಬಂದಿ ಕೆಲಸವೇನು?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರಗತಿ ಮೈದಾನ ಸಮಗ್ರ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್ ಪಾಸ್ʼಗಳನ್ನು ಉದ್ಘಾಟಿಸಿದರು. ಆದರೆ ಮಾಧ್ಯಮದಲ್ಲಿ ಸುದ್ದಿಯಾಗಿದ್ದು ಮಾತ್ರ ಮೋದಿಯವರು ಅಲ್ಲಿದ್ದ ಕಸವನ್ನು ಹೆಕ್ಕಿದ್ದು.

ಹೌದು, ಸುರಂಗದ ಪರಿಶೀಲನೆ ನಡೆಸುತ್ತಿದ್ದ ವೇಳೆ ಅವರಿಗೆ ಅಲ್ಲಿ ಬಿದ್ದಿದ್ದ ಕಸ ಹಾಗೂ ಬಳಸಿ ಬಿಸಾಡಿದ ನೀರಿನ ಬಾಟಲ್ ಕಂಡುಬಂದಿದೆ. ಕೂಡಲೇ ಅದನ್ನು ತೆಗೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ಬೀಚ್ನಲ್ಲಿ ವಾಕ್ ಮಾಡುತ್ತಿದ್ದ ವೇಳೆ ನರೇಂದ್ರ ಮೋದಿಯವರು ಅಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕುವ ವಿಡಿಯೋ ವೈರಲ್ ಆಗಿತ್ತು. ಪ್ರಶ್ನೆ ಇರುವುದು ಏನೆಂದರೆ, ಉದ್ಘಾಟನೆಯ ಸುತ್ತ ಮುತ್ತ ಜಾಗವನ್ನು ಸಹಜವಾಗಿ ಸ್ವಚ್ಛಗೊಳಿಸುತ್ತಾರೆ. ನೆನಪಿಗೆ ತರುವುದಾದರೆ, ನಮ್ಮೂರಿಗೆ ಶಾಸಕ, ಸಚಿವ, ಮುಖ್ಯಮಂತ್ರಿ ಬರುತ್ತಾರೆ ಎಂದರೆ, ಆ ಜಾಗದಲ್ಲಿ ರಸ್ತೆಗುಂಡಿ ಇದ್ದರೆ ಅವುಗಳನ್ನು ಮುಚ್ಚುತ್ತಾರೆ. ಗಿಡಗಳು ಅಡ್ಡ ಇದ್ದರೆ ಅವಗಳನ್ನು ಕತ್ತರಿಸಿ ಬಿಸಾಕುತ್ತಾರೆ. ಅಲ್ಲಿ ಜನ ಓಡಾಡದಂತೆ ನಿರ್ಬಂಧ ಹೇರುತ್ತಾರೆ. ಆ ಜಾಗ ಫಳ, ಫಳ ಹೊಳೆಯುತ್ತಿರುತ್ತದೆ. ನಮ್ಮ ಮುಖ ಕಾಣುವಷ್ಟು. ಅಲ್ಲಿ ಕಸ, ಕಡ್ಡಿ, ನೀತಿನ ಬಾಟಲಿ ಉದ್ಘಾಟನೆಗಿಂತ ಮುಂಚೆ ಬೀಳಲು ಸಾಧ್ಯವೇ ಇಲ್ಲ!

ಈಗ ಇದೇ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಪ್ರಧಾನಿ ಭೇಟಿಯಾಗುವ ಜಾಗವನ್ನು ಮೊದಲೇ ಸ್ವಚ್ಛವಾಗಿರಿಸುವುದಿಲ್ಲವೇ ಎಂದು ಹಲವು ನೆಟ್ಟಿಗರು ಪ್ರಶ್ನಿಸಿದ್ದಾರೆ. ಉದ್ಘಾಟನೆಗೂ ಮುನ್ನವೇ ಕಸ ಹೇಗೆ ಇರುತ್ತದೆ ಮತ್ತು SPG ಏನು ಮಾಡಿತು? ಅವರು ಪ್ರದೇಶವನ್ನು ಪರಿಶೀಲಿಸಿಲ್ಲವೇ, ಸ್ವಚ್ಛಗೊಳಿಸಲಿಲ್ಲವೇ? ಎಂಬ ಪ್ರಶ್ನೆಗಳನ್ನು ಎತ್ತಿರುವ ಟಿಆರ್‌ಎಸ್‌ ಪಕ್ಷದ ಯತೀಶ್‌ ರೆಡ್ಡಿ, ಪ್ರಧಾನಿಯವರ ಪ್ರಚಾರ ತಂಡವು (ಪಿಆರ್) ಮೊದಲೇ ಕಸಗಳನ್ನು ಸುರಿದು ನಂತರ ಹೆಕ್ಕುವಂತೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

‘ಪ್ರದೇಶವನ್ನು ಸರಿಯಾಗಿ ಸ್ವಚ್ಛಗೊಳಿಸದೆ ಮತ್ತೊಮ್ಮೆ SPG ನಮ್ಮ ಪ್ರಧಾನಿಗಳ ಜೀವಕ್ಕೆ ಅಪಾಯವನ್ನುಂಟುಮಾಡಿದೆ! ಪ್ರಧಾನ ಮಂತ್ರಿಯ ಭದ್ರತೆಯ ಮುಖ್ಯಸ್ಥರಾಗಿರುವವರನ್ನು ವಜಾಗೊಳಿಸಬೇಕು.’ ಎಂದು ವ್ಯಂಗ್ಯವಾಗಿ ಲಾವಣ್ಯ ಬಲ್ಲಾಳ್ ಟ್ವೀಟ್‌ ಮಾಡಿದ್ದಾರೆ.

‘ಪ್ರಧಾನಿಯವರ ಕಾರ್ಯಕ್ರಮ ಇದ್ದ ಅತಿ ಭದ್ರತೆಯ ಸುರಂಗಕ್ಕೆ ಪಕ್ಷಿಗಳೂ ಹಾರುತ್ತಿರಲಿಲ್ಲ. ಹಾಗಿರುವಾಗ, ಕಸ, ನೀರಿನ ಬಾಟಲಿ ಎಲ್ಲಿಂದ ಬಂತು?’ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಬಿವಿ ಪ್ರಶ್ನಿಸಿದ್ದಾರೆ.

‘3000 ಎಸ್‌ಪಿಜಿ ಸಿಬ್ಬಂದಿಗಳು ಪ್ರತಿದಿನ ಸುಮಾರು 20 ಮಿಲಿಯನ್ ರೂಪಾಯಿಗಳ ಬಜೆಟ್ ಅನ್ನು ಆತ್ಮೀಯ ನಾಯಕನ (ಪ್ರಧಾನಿ ಮೋದಿಯ) ಭದ್ರತೆಗಾಗಿ ಖರ್ಚು ಮಾಡುತ್ತಾರೆ. ಆದರೂ, ಅವರು (ಮೋದಿಯ) ಯೋಜಿತ ಭೇಟಿಯ ಮೊದಲು ಸ್ವಚ್ಛಗೊಳಿಸಲು ವಿಫಲರಾಗುತ್ತಾರೆಯೇ?’ ಎಂದು ಅಶೋಕ್‌ ಸ್ವೈನ್‌ ಪ್ರಶ್ನಿಸಿದ್ದಾರೆ.

 

ಪ್ರಚಾರದ ಹುಚ್ಚಿಗಾಗಿ ಇದನ್ನು ಮಾಡಲಾಯಿತೆ, ಅಥವಾ ನಿಜಕ್ಕೂ ಸ್ವಚ್ಛ ಮಾಡಿರಲಿಲ್ಲವೆ? ಭಾರತವು ಪರಿಸರ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿದೆ ಎಂಬುದನ್ನು ಈ ಘಟನೆ ನೆನಪಿಸಿದೆ. ಕಾರ್ಯಕ್ರಮಕ್ಕೂ ಮುನ್ನ ಸ್ವಚ್ಛಗೊಳಿಸಿದ್ದ ದೃಶ್ಯಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರ್ಯಕ್ರಮಕ್ಕೂ ಮುನ್ನ ಸ್ವಚ್ಛಗೊಳಿಸಿದ್ದ ದೃಶ್ಯ
ಕಾರ್ಯಕ್ರಮಕ್ಕೂ ಮುನ್ನ ಸ್ವಚ್ಛಗೊಳಿಸಿದ್ದ ದೃಶ್ಯ
ಕಾರ್ಯಕ್ರಮಕ್ಕೂ ಮುನ್ನ ಸ್ವಚ್ಛಗೊಳಿಸಿದ್ದ ದೃಶ್ಯ
Donate Janashakthi Media

Leave a Reply

Your email address will not be published. Required fields are marked *