ನವದೆಹಲಿ : ನರೇಂದ್ರ ಮೋದಿಯೇ ಪ್ರಧಾನಿಯಾಗಿ ಪ್ರಖ್ಯಾತಿ ಪಡೆದುಕೊಂಡಂತಹ ವ್ಯಕ್ತಿ ಎನ್ನುತ್ತಿದ್ದವರೆಲ್ಲ, ಈಗ ಮೋದಿ ಜನಪ್ರಿಯರಲ್ಲ ಎಂಬ ಅಭಿಪ್ರಾಯಗಳನ್ನು ನೀಡುತ್ತಿರುವ ಬಗ್ಗೆ ಇಂಡಿಯಾ ಟುಡೇ ಸಮೀಕ್ಷೆಯಿಂದ ಬಹಿರಂಗಗೊಳ್ಳುತ್ತಿವೆ. ಕಳೆದ ಆರು ತಿಂಗಳಲ್ಲಿ ಮೋದಿ ಜನಪ್ರಿಯತೆ ಭಾರೀ ಪ್ರಮಾಣದಲ್ಲಿ ಕುಸಿದಿರುವ ಬಗ್ಗೆ ಮಾಹಿತಿಗಳನ್ನು ಕರೆ ಹಾಕಿದೆ ಇಂಡಿಯಾ ಟುಡೇ ಸಮೀಕ್ಷೆಗಳು.
ಇಂಡಿಯಾ ಟುಡೇ ನಡೆಸಿದ ಸಮೀಕ್ಷೆ ಪ್ರಕಾರ ಮುಂದಿನ ಪ್ರಧಾನಿ ಯಾರಾಗಬೇಕೆಂದು ಎಂಬ ವಿಷಯದಲ್ಲಿ ಮೋದಿ ಅವರಿಗೆ ಶೇ.24ರಷ್ಟು ಮಂದಿ ಮಾತ್ರ ಬೆಂಬಲ ಸೂಚಿಸಿದ್ದಾರೆ. 2020ರ ಆಗಸ್ಟ್ ನಲ್ಲಿ ಉತ್ತಮ ಪ್ರಧಾನಿ ಯಾರಿರಬೇಕೆಂದು ಸರ್ವೆ ನಡೆಸಿದಾಗ ಮೋದಿ ಅವರನ್ನು ಶೇ.66 ಮಂದಿ ಆಯ್ಕೆ ಮಾಡಿದ್ದರು. ಜನವರಿಯಲ್ಲಿ ನಡೆಸಿದ ಸರ್ವೆಯಲ್ಲಿ ಮೋದಿ ಜನಪ್ರಿಯತೆ ಶೇ.38ಕ್ಕೆ ಭಾರೀ ಕುಸಿತ ಕಂಡಿತು. ಮತ್ತೀಗ ಶೇ.24ಕ್ಕೆ ಬಂದು ತಲುಪಿದೆ.
ಇದನ್ನು ಓದಿ: ಉಚಿತ ಭಾಷಣದ ಖಚಿತ ಅನುಮಾನಗಳು! ಮೋದಿ ಯೂ ಟರ್ನ್ ಹೊಡೆದದ್ದು ಯಾಕೆ?!
ಸಮೀಕ್ಷೆಗಳ ಪ್ರಕಾರ ಕಳೆದ ಒಂದು ವರ್ಷದಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ. ಅದರಲ್ಲೂ ಕಳೆದ ಆರು ತಿಂಗಳಲ್ಲಿ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹೆಚ್ಚಾಗಿದ್ದು ಪ್ರಧಾನಿ ಆಯ್ಕೆಯಲ್ಲಿ ಶೇ.7 ರಿಂದ ಶೇ.10ಕ್ಕೆ ಹೆಚ್ಚಳ ಕಂಡಿದೆ. ಯೋಗಿ ಆದಿತ್ಯನಾಥ ಜನಪ್ರಿಯತೆ ಶೇ.10 ರಿಂದ 11ಕ್ಕೆ ಹೆಚ್ಚಾಗಿದೆ. 2020ರ ಆಗಸ್ಟ್‌ನಲ್ಲಿ ಯೋಗಿ ಆದಿತ್ಯನಾಥ ಜನಪ್ರಿಯತೆ ಶೇ.3ರಷ್ಟಿತ್ತು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನಪ್ರಿಯತೆ ಕೂಡ ಹೆಚ್ಚುತ್ತಾ ಸಾಗಿದೆ. ಮೊದಲ ನಾಲ್ಕು ಮಂದಿಯಲ್ಲಿ ಅವರು ಸ್ಥಾನ ಪಡೆದಿದ್ದರೆ, ಮಮತಾ ಬ್ಯಾನರ್ಜಿಯವರು ಐದನೇ ಸ್ಥಾನದಲ್ಲಿದ್ದಾರೆ.
ಸಮೀಕ್ಷೆ ಪ್ರಕಾರ ರಾಹುಲ್ ಗಾಂಧಿ, ಯೋಗಿ ಆದಿತ್ಯನಾಥ, ಮಮತಾ ಬ್ಯಾನರ್ಜಿ ಜನಪ್ರಿಯತೆ ಹೆಚ್ಚಳವಾಗಿದ್ದರೆ ಸೋನಿಯಾ ಗಾಂಧಿ ಜನಪ್ರಿಯತೆ ತಟಸ್ಥವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜನಪ್ರಿಯತೆ ಕುಸಿಯುತ್ತಿರುವುದು ನಿಚ್ಛಳವಾಗಿದೆ.
ಇದನ್ನು ಓದಿ: ಸ್ವಾತಂತ್ರ್ಯ ದಿನದ ಮೋದಿ ಭಾಷಣದಲ್ಲಿ ಮತ್ತೆ ಮತ್ತೆ ಅದೇ ರಾಗ: ವ್ಯಾಪಕ ಟೀಕೆ
ಇವೆಲ್ಲವೂಗಳ ನಡುವೆ ಯೋಗಿ ಆದಿತ್ಯನಾಥ ಮುಂದಿನ ಎನ್‌ಡಿಎ ಪ್ರಧಾನಿಯಾಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ. ಆದರೆ ಮುಂದಿನ ದಿನಗಳಲ್ಲಿ ಜನರ ಒಲವು ಯಾರ ಕಡೆ ವಾಲಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇಂಡಿಯಾ ಟುಡೇ ʻಆಫ್ ಮೂಡ್ ಆಫ್ ದಿ ನೇಷನ್ʼ ಸಮೀಕ್ಷೆಯು 2021ರ ಜುಲೈ 10 ರಿಂದ 20ರ ನಡುವೆ 19 ರಾಜ್ಯಗಳ 115 ಸಂಸತ್ ಮತ್ತು 230 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 14,559 ಸಂದರ್ಶನಗಳನ್ನು ನಡೆಸಿತು. (ಶೇ.71ರಷ್ಟು ಗ್ರಾಮೀಣ ಮತ್ತು ಶೇ.29ರಷ್ಟು ನಗರ ಪ್ರದೇಶಗಳು) ಮತ್ತು ಶೇ.50ರಷ್ಟು ಮುಖಾಮುಖಿ ಮತ್ತು ಶೇ.50ರಷ್ಟು ದೂರವಾಣಿ ಸಂದರ್ಶನಗಳನ್ನು ಕೈಗೊಂಡಿತ್ತು.
ಸಮೀಕ್ಷೆಯ ಸಂದರ್ಭದಲ್ಲಿ ಎನ್‌ಡಿಎ ಸರಕಾರದ ಸಾಧನೆಯೆಂದರೆ ರಾಮ ಮಂದಿರದ ತೀರ್ಪು 370 ನೇ ವಿಧಿ ರದ್ದತಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದರೆ. ಶೇ.29 ಜನರು ಕೇಂದ್ರ ಸರ್ಕಾರದ ಅತಿದೊಡ್ಡ ವೈಫಲ್ಯವೆಂದರೆ ಬೆಲೆ ಏರಿಕೆ ಮತ್ತು ಹಣದುಬ್ಬರ, ನಂತರ ನಿರುದ್ಯೋಗ ಎಂದು ತಿಳಿಸಿದ್ದಾರೆ.
ಭಾರತ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಕೋವಿಡ್ -19 ಸಾಂಕ್ರಾಮಿಕ ಎಂದು ಶೇ.23ರಷ್ಟು ಜನರು ಮತ್ತು ಬೆಲೆ ಏರಿಕೆ ಮತ್ತು ಹಣದುಬ್ಬರ ಎಂದು ಶೇ.19ರಷ್ಟು ಜನರ ಅಭಿಪ್ರಾಯವಾಗಿದೆ. ಅದೇ ರೀತಿಯಲ್ಲಿ ಶೇ.17 ಜನರು ನಿರುದ್ಯೋಗವು ಭಾರತವನ್ನು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ ಎಂದಿದ್ದಾರೆ.
ಶೇ.71ರಷ್ಟು ಜನರು ಕೋವಿಡ್ -19 ಭಾರತದಲ್ಲಿ ಸರ್ಕಾರಿ ಅಂಕಿಅಂಶಗಳಲ್ಲಿ ವರದಿಗಿಂತ ಹೆಚ್ಚಿನ ಸಾವುಗಳು ಸಂಭವಿಸಿದೆ, ಸರಕಾರ ಅಂಕಿಅಂಶಗಳು ಸತ್ಯವಲ್ಲ ಎಂದು ಭಾವಿಸಿದ್ದಾರೆ. ಶೇ.44ರಷ್ಟು ಜನರು ಎರಡನೇ ಅಲೆಯಲ್ಲಿ ಜನರ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯಗಳೆರಡೂ ಕಾರಣವೆಂದು ತಿಳಿಸಿದ್ದಾರೆ.
ಶೇ.69ರಷ್ಟು ಜನರು ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಆದಾಯ ಸಾಕಷ್ಟು ಕುಸಿದಿದೆ ಎಂದಿದ್ದರೆ, ಶೇ.17ರಷ್ಟು ಜನರು ಉದ್ಯೋಗ ಕಳೆದುಕೊಂಡಿರುವ ಬಗ್ಗೆ ನೋವನ್ನು ತೋಡಿಕೊಂಡಿದ್ದಾರೆ. ಶೇ.46ರಷ್ಟು ಮಂದಿ ದೊಡ್ಡ ಉದ್ಯಮಗಳಿಗೆ ಮಾತ್ರ ಎನ್‌ಡಿಎ ಸರ್ಕಾರದ ಆರ್ಥಿಕ ನೀತಿಗಳಿಂದ ಹೆಚ್ಚಿನ ಪ್ರಯೋಜನವಾಗಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಆರ್ಥಿಕ ನಿರ್ವಹಣೆಗೆ ಸಂಬಂಧಿಸಿದಂತೆ 2021ರ ಜನವರಿಯ ಸಮೀಕ್ಷೆಯಲ್ಲಿ ಉತ್ತಮ ಕೆಲಸವೆಂದು ಶೇ.66ರಷ್ಟು ಮತ ದೊರೆತಿದ್ದರೆ, ಈ ಬಾರಿ ಶೇ.47ಕ್ಕೆ ಕುಸಿದಿದೆ. ಕೋಮು ಸೌಹಾರ್ದತೆ ವಿಚಾರವಾಗಿ ಸರ್ಕಾರದ ಧೋರಣೆಗಳ ಬಗ್ಗೆ 2021ರ ಜನವರಿ ಶೇ.55ರಷ್ಟು ಇದ್ದದ್ದು, 2021ರ ಆಗಸ್ಟ್ ಪ್ರಕಾರ ಶೇ.34ಕ್ಕೆ ಕುಸಿದಿದೆ. ಅದೇ ರೀತಿಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬಂದಿದೆ ಎಂದು ಜನವರಿ ಶೇ.22ರಷ್ಟು ಮಂದಿ ತಿಳಿಸಿದ್ದರೆ, ಈ ಬಾರಿ ಶೇ.34ಕ್ಕೆ ಏರಿಕೆ ಕಂಡಿದೆ.
ಭಾರತವು ಮಹಿಳೆಯರಿಗೆ ಸುರಕ್ಷಿತದ ಬಗ್ಗೆ ಶೇ.38ರಷ್ಟು ಪರವಾಗಿದ್ದರೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಶೇ.45ರಷ್ಟು ಹಾಗೂ ಶೇ.51ರಷ್ಟು ಜನರು ಬಂಧನದ ಭಯದಿಂದ ಭಾರತದಲ್ಲಿ ಪ್ರತಿಭಟನೆ ಮಾಡಲು ಹೆದರುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ.
57% ಜನರು ಕೇಂದ್ರ ಸರ್ಕಾರವು ಸುಮಾರು ಒಂದು ವರ್ಷದಿಂದ ರೈತರು ಪ್ರತಿಭಟನೆ ಮಾಡುತ್ತಿರುವ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡಬೇಕು ಎಂದು ಭಾವಿಸುತ್ತಾರೆ, ಮತ್ತು 61% ಜನರು ಎರಡು ಮಕ್ಕಳನ್ನು ಹೊಂದಿರುವ ಜನರನ್ನು ಉದ್ಯೋಗಗಳು, ಪ್ರಯೋಜನಗಳು ಮತ್ತು ಚುನಾವಣೆಗಳಿಂದ ನಿರ್ಬಂಧಿಸುವ ಪರವಾಗಿ ಮತ ಚಲಾಯಿಸಿದ್ದಾರೆ.
ಮಾಹಿತಿ ಸಂಗ್ರಹ: ವಿನೋದ ಶ್ರೀರಾಮಪುರ