ಬೀದರ್: ಸಚಿವರು, ಮುಖ್ಯಮಂತ್ರಿ ಸೇರಿದಂತೆ ಅಧಿಕಾರದಲ್ಲಿ ಇರುವವರು ಕಾಂಗ್ರೆಸ್ ಮತ್ತು ವಿಪಕ್ಷದ ಒಕ್ಕೂಟದವಾದ ಇಂಡಿಯಾ ತೊರೆದು ಎನ್‌ಡಿಎ ಮತ್ತು ಮತ್ತು ಬಿಜೆಪಿ ಸೇರುತ್ತಿರುವ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರ ಬೆದರಿಕೆಗೆ ವಿರೋಧ ಪಕ್ಷದ ನಾಯಕರು ಎನ್‌ಡಿಎ ಸೇರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಪ್ರದೇಶವಾದ ಬೀದರ್‌ನ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಖರ್ಗೆ, ಈ ನಾಯಕರು ಒಂದಾ ಬೆದರಿಕೆಯಿಂದ ಎನ್‌ಡಿಎ ಸೇರುತ್ತಿದ್ದಾರೆ ಅಥವಾ ಅಧಿಕಾರದಲ್ಲಿ ಮುಂದುವರಿಯಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. “92ರ ಹರೆಯದ ಹೆಚ್.ಡಿ.ದೇವೇಗೌಡರಂತಹ ಹಿರಿಯ ನಾಯಕರೂ ತಮ್ಮ ಜೀವನದುದ್ದಕ್ಕೂ ಜಾತ್ಯತೀತತೆಯನ್ನು ಪ್ರತಿಪಾದಿಸುತ್ತಿದ್ದರು, ಆದರೂ ಈಗ ಅವರು ಎನ್‌ಡಿಎ ಭಾಗವಾಗಿದ್ದಾರೆ” ಎಂದು ಖರ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ | ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಬಿಜೆಪಿ
ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಚುನಾವಣಾ ಆಯೋಗದಂತಹ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ದುರ್ಬಲಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸಂಚು ರೂಪಿಸಿದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ ಎಂದು ಖರ್ಗೆ ಹೇಳಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೆ ದೆಹಲಿಯಲ್ಲಿ ಮಾತನಾಡಿದ್ದ ಖರ್ಗೆ ಅವರು, ಬಿಜೆಪಿಯತ್ತ ನಾಯಕರನ್ನು ಸೆಳೆಯಲು ಮೋದಿಯವರಿಗೆ ಏನು ಮದ್ದು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಬೇರೆ ಪಕ್ಷಗಳ ನಾಯಕರು ಸ್ವಯಂ ಪ್ರೇರಿತವಾಗಿ ಬಿಜೆಪಿ ಮತ್ತು ಎನ್‌ಡಿಎ ಸೇರುತ್ತಿದ್ದರೆ ನಾನೇನು ಮಾಡಬಲ್ಲೆ ಎಂದು ಮೋದಿ ನಗುತ್ತಲೇ ಹೇಳಿದ್ದಾರೆ ಎಂದು ಖರ್ಗೆ ವಿವರಿಸಿದ್ದರು.
ವಾಸ್ತವವಾಗಿ, ಬಿಜೆಪಿ, ಆರ್‌ಎಸ್‌ಎಸ್ ಮತ್ತು ಮೋದಿ ಆದಾಯ ತೆರಿಗೆ ಮತ್ತು ಇಡಿ ದಾಳಿಯ ಬೆದರಿಕೆಗಳ ಟ್ಯಾಬ್ಲೆಟ್‌ಗಳನ್ನು ನೀಡುತ್ತಿದ್ದಾರೆ. ಈ ಭಯ ವಿರೋಧ ಪಕ್ಷಗಳ ಪ್ರಮುಖ ನಾಯಕರನ್ನು ಎನ್‌ಡಿಎ ಸೇರುವಂತೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಬಯಸುವ ನಾವು ಒಗ್ಗಟ್ಟಿನಿಂದ ಎಲ್ಲಾ ಬೆದರಿಕೆಗಳನ್ನು ಎದುರಿಸಿ 2024 ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ‘ತತ್ವಜ್ಞಾನಿ ಬಸವಣ್ಣ ಸಾಂಸ್ಕೃತಿಕ ನಾಯಕ’ ಹಿನ್ನೆಲೆ ಮತ್ತು ಆಗಬೇಕಾದ ಕೆಲಸಗಳು – ವಿಶ್ಲೇಷಣೆ : ಮೀನಾಕ್ಷಿ ಬಾಳಿ