ತಿರುವನಂತಪುರಂ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿ ಕೇರಳದಲ್ಲಿ ಮಳೆ ಮತ್ತು ಭೂಕುಸಿತದಿಂದ ಉಂಟಾಗಿರುವ ಸಂಕಷ್ಟ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು.
ತಾನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. “ಕೇರಳ ಮುಖ್ಯಮಂತ್ರಿ ಜೊತೆ ಭೂ ಕುಸಿತ ಹಾಗೂ ಮಳೆಯ ವಿಚಾರದಲ್ಲಿ ಮಾತುಕತೆ ನಡೆಸಿದೆ. ಸಂಬಂಧ ಪಟ್ಟ ಇಲಾಖೆಯು ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳಿಗೆ ಚಿಕಿತ್ಸೆ ಮೊದಲಾದ ಕಾರ್ಯವನ್ನು ಮಾಡುತ್ತಿದೆ. ಕೇರಳದಲ್ಲಿ ತೀವ್ರ ಮಳೆ ಹಾಗೂ ಭೂಕುಸಿತದಿಂದಾಗಿ ಕೆಲವು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬೇಸರವಾಗಿದೆ. ಮೃತರ ಕುಟುಂಬಕ್ಕೆ ಸಂತಾಪವನ್ನು ತಿಳಿಸುತ್ತೇವೆ,” ಎಂದಿದ್ದಾರೆ.
ಇದನ್ನು ಓದಿ: ಭಾರೀ ಮಳೆಯಿಂದಾಗಿ ಮೂರು ಮಂದಿ ನಿಧನ-10 ಮಂದಿ ನಾಪತ್ತೆ: 5 ಜಿಲ್ಲೆಗಳು ಗಂಭೀರ ಪರಸ್ಥಿತಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಕೇರಳಕ್ಕೆ ಎಲ್ಲ ನೆರವು ಒದಗಿಸುವುದಾಗಿ ಭಾನುವಾರ ಭರವಸೆ ನೀಡಿದ್ದಾರೆ. ಕೇರಳದ ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಎಲ್ಲ ಅಗತ್ಯ ನೆರವು ಒದಗಿಸಲಿದೆ ಎಂದು ಹೇಳಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ತಂಡಗಳನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕೇರಳದಲ್ಲಿ ಮಳೆ ಮತ್ತು ಭೂಕುಸಿತದಿಂದ ಈವರೆಗೆ 26 ಮಂದಿ ಮೃತಪಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ನಷ್ಟವಾಗಿದ್ದು, ಸಾಕಷ್ಟು ಜೀವಹಾನಿ ಸಂಭವಿಸಿದೆ.
ಭಾರೀ ಮಳೆಯಿಂದಾಗಿ ಶುಕ್ರವಾರ ಭೂ ಕುಸಿತವಾಗಿದ್ದು, ಈಗಲೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಡಿಆರ್‌ಎಫ್) ಕೇರಳದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಎನ್‌ಡಿಆರ್‌ಎಫ್ ಮಾತ್ರವಲ್ಲದೇ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳವು ಕೂಡಾ ಸ್ಥಳೀಯರ ಸಹಕಾರದೊಂದಿಗೆ ರಕ್ಷಣೆ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಕೊಟ್ಟಯಂ ಜಿಲ್ಲೆಯ ಕೂಟ್ಟಿಕಲ್ ಹಾಗೂ ಇಡ್ಡುಕ್ಕಿ ಜಿಲ್ಲೆಯ ಕೊಕ್ಕಯಾರ್‌ನಲ್ಲಿ ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಈಗಲೂ ನಾಪತ್ತೆಯಾದವರ ಪತ್ತೆ ಕಾರ್ಯ ನಡೆಸಲಾಗುತ್ತಿದೆ.