ನವದೆಹಲಿ : ನಮ್ಮ ಸರ್ಕಾರದ ಅವಧಿಯಲ್ಲಿ ಯುವಜನರಿಗೆ ಉದ್ಯೋಗಾವಕಾಶ ಹೆಚ್ಚುತ್ತಿವೆ ಎಂದು ಪ್ರಧಾನಿಯವರು ಹೇಳುತ್ತಿದ್ದರೆ ಅಂಕಿಅಂಶಗಳು ಬೇರೆ ಕತೆಯನ್ನೇ ಹೇಳುತ್ತಿವೆ ಎಂದು ದಿ ಹಿಂದೂ ವರದಿ ಮಾಡಿದೆ.
ನಮ್ಮ ಯುವಜನರಿಗೆ ಜಾಗತಿಕವಾಗಿ ಉದ್ಯೋಗದ ಬಾಗಿಲುಗಳು ವಿಶಾಲವಾಗಿ ತೆರೆದುಕೊಂಡಿವೆ. ಸ್ವಾತಂತ್ರ್ಯಾನಂತರ ಬಹಳ ವರ್ಷಗಳ ಕಾಲ ತೆರೆದುಕೊಳ್ಳದಿದ್ದ ಉದ್ಯೋಗಾವಕಾಶಗಳು ಈಗ ನಮ್ಮ ಮನೆ ಬಾಗಿಲಿಗೇ ಬಂದಿವೆ. ಇವು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ಉದುರಿಸಿದ ನುಡಿಮುತ್ತುಗಳು !
ಅಂತರ್ರಾಷ್ಟ್ರೀಯ ಉದ್ಯೋಗ ಸಂಘಟನೆಯ ಭಾರತೀಯ ಉದ್ಯೋಗ ವರದಿಯನ್ನೂ ಒಳಗೊಂಡಂತೆ ಇನ್ನೂ ಹಲವಾರು ವರದಿಗಳು ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಆಳುವವರನ್ನು ಎಚ್ಚರಿಸುತ್ತಿರುವಾಗ, ಪ್ರಧಾನಿಯವರು ಯುಜನರ ಕುರಿತು ನೀಡಿದ ಈ ಮೇಲಿನ ಹೇಳಿಕೆಯು ನಿಜಕ್ಕೂ ಮಹತ್ವದ್ದಾಗಿದೆ.
“ನಮ್ಮ ದೇಶದ ಯುವಜನರು ಇನ್ನು ಮುಂದೆ ನಿಧಾನವಾಗಿ ಹೆಜ್ಜೆ ಹಾಕಲು ಬಯಸುವುದಿಲ್ಲ. ನಿಧಾನಗತಿಯ ಪ್ರಗತಿಯಲ್ಲಿ ಅವರಿಗೆ ನಂಬಿಕೆಯಿಲ್ಲ. ಬದಲಿಗೆ, ದಿಟ್ಟ ದಾಪುಗಾಲು ಹಾಕುವ ಹೊಸ ಮೈಲುಗಲ್ಲನ್ನು ಸಾಧಿಸುವ ಹುರುಪಿನಲ್ಲಿದ್ದಾರೆ ಅವರು. ಭಾರತಕ್ಕಿದು ಸುವರ್ಣ ಯುಗ ಎಂದು ಹೇಳಲು ಬಯಸುತ್ತೇನೆ. ಅಂತರ್ರಾಷ್ಟ್ರೀಯ ಸನ್ನಿವೇಶಕ್ಕೆ ಹೋಲಿಸಿದರೆ ಇದು ನಿಜಕ್ಕೂ ನಮಗೆ ಸುವರ್ಣ ಕಾಲವೇ ಸರಿ.” ಎಂದು ಮೋದಿಯವರು ಬಣ್ಣಿಸಿದರು.
ಒಂದು ವಾರದ ಹಿಂದೆ, “ಯುವಜನರಿಗೆ ಜಾಗತಿಕ ಉದ್ಯೋಗಾವಕಾಶಗಳು 2024” – ಎಂಬ ತನ್ನ ವರದಿಯಲ್ಲಿ ಐ.ಎಲ್.ಒ. ಹೀಗೆ ಹೇಳಿದೆ: ‘ಜಗತ್ತಿನಾದ್ಯಂತ ಇರುವ ಯುವಜನರಿಗೆ ಸುರಕ್ಷಿತ ಕೆಲಸ ಪಡೆಯುವುದು ಸಾಧ್ಯವಾಗುತ್ತಿಲ್ಕ ಮತ್ತು ಅವರು ವಾಸಿಸುತ್ತಿರುವ ದೇಶದ ವರಮಾನ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗದ ಲಭ್ಯತೆ ಕ್ಷೀಣಿಸುತ್ತಿದೆ.’
‘ಉದ್ಯೋಗ, ಶಿಕ್ಷಣ ಮತ್ತು ತರಬೇತಿ ಹೊಂದಿರದ 15 ರಿಂದ 24 ರ ವಯೋಮಾನದವರ ಸಂಖ್ಯೆಯು ಗಾಬರಿ ಹುಟ್ಟಿಸುತ್ತಿದೆ ಮತ್ತು ಕೋವಿಡ್-19 ನಂತರದ ಉದ್ಯೋಗ ಚೇತರಿಕೆಯು ಸಾರ್ವತ್ರಿಕವಾಗಿಲ್ಲ’ ಎಂದು ಐ.ಎಲ್.ಒ. ಎಚ್ಚರಿಸಿದೆ. ಕೆಲವು ಪ್ರದೇಶಗಳ ಯುವ ಜನರು ಮತ್ತು ಯುವತಿಯರು ಆರ್ಥಿಕ ಚೇತರಿಕೆಯ ಪ್ರಯೋಜನಗಳನ್ನು ಪಡೆಯಲಾಗುತ್ತಿಲ್ಲ ಎಂದು ಐ.ಎಲ್.ಒ. ವರದಿ ತಿಳಿಸಿದೆ.
ಭಾರತದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಮಾತ್ರವಲ್ಲ ಉದ್ಯೋಗದ ಪರಿಸ್ಥಿತಿಯನ್ನು ತಿಳಿಸುವ ಅಂಕಿ ಅಂಶಗಳು ಕೂಡ ಲಭ್ಯವಾಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಸರ್ಕಾರದ ಮೇಲೆ ದಾಳಿ ಮಾಡುತ್ತಿವೆ. ಅಂಕಿಅಂಶಗಳು ಹಾಗೂ ಕಾರ್ಯಕ್ರಮ ಜಾರಿ ಸಚಿವಾಲಯದ ರಾಷ್ಟ್ರೀಯ ದತ್ತಾಂಶ ಕಛೇರಿಯು 2011-12 ತನಕವೂ ಉದ್ಯೋಗ ಮತ್ತು ನಿರುದ್ಯೋಗ ಕುರಿತ ಸಮೀಕ್ಷೆಗಳನ್ನು ಬಿಡುಗಡೆ ಮಾಡುವ ಪರಿಪಾಟ ಹೊಂದಿತ್ತು. 2017 ರ ನಂತರ ಉದ್ಯೋಗ ಮತ್ತು ನಿರುದ್ಯೋಗ ಕುರಿತ ಸಮೀಕ್ಷೆಗಳ ಬದಲು ನಿಯತಕಾಲಿಕ ಕಾರ್ಮಿಕ ಪಡೆ (ಶಕ್ತಿ) ಸಮೀಕ್ಷೆಯನ್ನು (ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ-ಪಿ.ಎಲ್. ಎಫ್.ಎಸ್.) ಪ್ರಕಟಿಸುತ್ತಿದೆ.
“ಐ.ಎಲ್.ಒ.ದ ನಿರ್ವಚನೆಯ (ಡೆಫನಿಷನ್) ಆಧಾರದಲ್ಲಿ ಸಮಗ್ರವಾದ ಸಮೀಕ್ಷೆಯನ್ನು ನಡೆಸುವುದಾಗಿ 19 ನೇ ಕಾರ್ಮಿಕ ಸಂಖ್ಯಾಶಾಸ್ತ್ರಜ್ಞರ ಅಂತರ್ರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವು ತನ್ನ ಬದ್ಧತೆಯನ್ನು ದೃಢೀಕರಿಸಿದೆ. ಅಂತಹ ಒಂದು ಸಮೀಕ್ಷೆ ನಡೆಸುವುದಾಗಿ ಮಾತು ಕೊಟ್ಟು ಬಂದಿದ್ದರೂ ಸಹ ಭಾರತವು ಯಾವರೀತಿಯ ಪ್ರಾಯೋಗಿಕ ಸಮೀಕ್ಷೆಯನ್ನೂ ನಡೆಸಲಿಲ್ಲ” ಎಂದು ಕಾರ್ಮಿಕ ಅರ್ಥಶಾಸ್ತ್ರಜ್ಞ ಸಂತೋಷ್ ಮೆಹ್ರೋತ್ರ ಹೇಳುತ್ತಾರೆ.
“ಆದಾಗ್ಯೂ, 2017 ರಲ್ಲಿ ಪಿ.ಎಲ್.ಎಫ್.ಎಸ್.ನ ಸಮೀಕ್ಷಾ ವರದಿಯು “ಭಾರತದಲ್ಲಿ ಕಳೆದ 45 ವರ್ಷದಲ್ಲಿ ಅತ್ಯಂತ ಹೆಚ್ಚು ನಿರುದ್ಯೋಗ ದರ ಈಗ ಇದೆ” ಎಂದು ತಿಳಿಸಿದೆ.
ಮೊದಲ ಪಿ.ಎಲ್.ಎಫ್.ಎಸ್. ಪ್ರಕಾರ ಗ್ರಾಮೀಣ ವಿದ್ಯಾವಂತ ಪುರುಷರ ನಿರುದ್ಯೋಗ ದರವು 2004-05 ಮತ್ತು 2011-12 ರ ನಡುವಿನ ಅವಧಿಯಲ್ಲಿ ಶೇಕಡಾ 3.5 – 4.4 ಇದ್ದದ್ದು 2017-18 ರ ಹೊತ್ತಿಗೆ ಶೇಕಡಾ 10.5 ರಷ್ಟು ಹೆಚ್ಚಾಯಿತು. ವಿದ್ಯಾವಂತ ಮಹಿಳೆಯರ ನಿರುದ್ಯೋಗ ದರವು ಶೇಕಡಾ 9.7-15.2 ನಿಂದ 2017-18 ರ ಹೊತ್ತಿಗೆ ಶೇಕಡಾ 17.3 ರಷ್ಟಾಗಿತ್ತು.
ಪಟ್ಟಣ ಪ್ರದೇಶಗಳ ವಿದ್ಯಾವಂತ ಪುರುಷರ ನಿರುದ್ಯೋಗ ದರವು ಶೇಕಡಾ 3.6-5.1 ರಷ್ಟು ಇದ್ದದ್ದು 2017-18 ರ ಹೊತ್ತಿಗೆ ಶೇಕಡಾ 9.2 ರಷ್ಟಾಗಿತ್ತು. ಪಟ್ಟಣ ಪ್ರದೇಶಗಳ ವಿದ್ಯಾವಂತ ಮಹಿಳೆಯರ ನಿರುದ್ಯೋಗ ದರವು ಶೇಕಡಾ 10.3-15.6 ಇದ್ದದ್ದು 2017-18 ರ ಹೊತ್ತಿಗೆ ಶೇಕಡಾ 19.8 ರಷ್ಟಾಗಿ ಈ ವಿಷಯದಲ್ಲಿ ಮೋದಿಯವರ ಮೂರನೇ ಅವಧಿಯ ಆಡಳಿತ ಕೂಡ ತನ್ನ ಧೋರಣೆಯನ್ನು ಯಾವುದೇ ರೀತಿಯಲ್ಲೂ ಬದಲಾವಣೆ ಮಾಡಿಲ್ಲ. ಈ ಸನ್ನಿವೇಶವು ನೀತಿ ಪ್ರೇರಿತ ಆಘಾತವೆಂದು ಮೆಹ್ರೋತ್ರ ಹೇಳುತ್ತಾರೆ.
ಕೇಂದ್ರ ಸರ್ಕಾರವು ಈಗ ಆರ್.ಬಿ.ಐ. (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಪ್ರಕಟಿಸಿರುವ ದತ್ತಾಂಶಗಳ ಮೇಲೆ ಅವಲಂಬಿತವಾಗಿದೆ. ಅದು ಕೆ.ಎಲ್.ಇ.ಎಂ.ಎಸ್. (ಬಂಡವಾಳ, ಶ್ರಮ, ಶಕ್ತಿ, ಸಾಮಗ್ರಿಗಳು ಮತ್ತು ಸೇವೆಗಳು – ಕ್ಯಾಪಿಟಲ್, ಲೇಬರ್, ಎನರ್ಜಿ, ಮೆಟೀರಿಯಲ್ಸ್ ಅಂಡ್ ಸರ್ವಿಸಸ್) ದತ್ತಾಂಶಗಳು ಎಂದು ನಾಮಾಂಕತಗೊಂಡಿದೆ. ಅದರ ಪ್ರಕಾರ 2017-18 ರಲ್ಲಿ 47.5 ಕೋಟಿ ಇದ್ದ ಉದ್ಯೋಗಗಳು 2023-24 ರ ಹೊತ್ತಿಗೆ 64.33 ಕೋಟಿಯಷ್ಟಾಗಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್) ಯ ಭವಿಷ್ಯ ನಿಧಿ ಯೋಜನೆಗೆ ಹೊಸದಾಗಿ 1.3 ಕೋಟಿ ಸದಸ್ಯರು ನೋಂದಾಯಿಸಿಕೊಂಡಿದ್ದಾರೆಂಬ ಲೆಕ್ಕವನ್ನು ಕಾರ್ಮಿಕ ಸಚಿವಾಲಯ ತೋರಿಸುತ್ತಿದೆ. ಅದೂ ಅಲ್ಲದೆ, ಕಳೆದ 6.5 ವರ್ಷಗಳಲ್ಲಿ (ಸೆಪ್ಟೆಂಬರ್ 2017 ರಿಂದ ಮಾರ್ಚ್ 2024 ರವರೆಗೆ) ನಿವ್ವಳ 6.2 ಕೋಟಿಗೂ ಹೆಚ್ಚು ಸದಸ್ಯರು ಭವಿಷ್ಯ ನಿಧಿ ಯೋಜನೆಗೆ ಸೇರಿರುವುದರಿಂದ ಅಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬ ಲೆಕ್ಕ ತೋರಿಸುತ್ತಿದೆ. ಇದು ನಮ್ಮ ಈಗಿನ ಕೇಂದ್ರ ಸರ್ಕಾರದ ವಾದ !.
ಕೋವಿಡ್-19 ರ ಅವಧಿಯ ಸಂಕಟದ ಸಮಯದಲ್ಲಿ ಕೃಷಿ ವಲಯಕ್ಕೆ ಹಿಂದಿರುಗಿದ ವಲಸೆ ಕಾರ್ಮಿಕರನ್ನೂ ಆರ್.ಬಿ.ಐ.ನ ಕೆ.ಎಲ್.ಇ.ಎಂ.ಎಸ್. ದತ್ತಾಂಶಕ್ಕೆ ಸೇರಿಸಿಕೊಂಡು ಲೆಕ್ಕ ಹಾಕಿದೆ ಎಂದು ಅರ್ಥಶಾಸ್ತ್ರಜ್ಞ ಸಂತೋಷ್ ಮೆಹ್ರೋತ್ರ ಬೊಟ್ಟು ಮಾಡಿ ತೋರಿಸುತ್ತಾರೆ. “ಮೋದಿ ಸರ್ಕಾರವು ಜಾರಿಗೆ ತಂದ ಅಮಾನ್ಯೀಕರಣ, ಅಯೋಜಿತ ಜಿ.ಎಸ್.ಟಿ. ಹಾಗೂ ಲಾಕ್ಡೌನ್ ಗಳು ಇಂತಹ ದುಃಸ್ಥಿತಿಗೆ ಕಾರಣವಾಗಿದೆ.” ಎಂದು ಮೆಹ್ರೋತ್ರ ಬೇಸರಪಟ್ಟುಕೊಂಡರು.
(ಕನ್ನಡಕ್ಕೆ ಟಿ.ಸುರೇಂದ್ರರಾವ್)