ನವದೆಹಲಿ : ದೇಶದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಡಿಸಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳಿಗೆ ಮಹತ್ವದ ಕಿವಿಮಾತನ್ನ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಪ್ರಧಾನಿ ಮೋದಿ ಪ್ರತಿಯೊಂದು ಗ್ರಾಮವೂ ಕೊರೊನಾದಿಂದ ಮುಕ್ತ ಮಾಡಬೇಕು ಎಂಬ ಶಪಥವನ್ನ ಜಿಲ್ಲಾಧಿಕಾರಿಗಳು ಕೈಗೊಳ್ಳಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ.
ಡಿಸಿಗಳು ಫೀಲ್ಡ್ ಕಮಾಂಡರ್ಗಳಂತೆ ಕೆಲಸ ಮಾಡಬೇಕಿದೆ. ಕೋವಿಡ್ 19 ನಿಯಂತ್ರಣದ ಜೊತೆಯಲ್ಲಿ ಜನರ ಜೀವನ ನಿರ್ವಹಣೆಯಲ್ಲೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಕೊರೊನಾ ತುತ್ತತುದಿಯನ್ನ ತಲುಪಿ ಇದೀಗ ಇಳಿಕೆ ಕಾಣುತ್ತಿದೆ. ಪ್ರತಿ ವ್ಯಕ್ತಿಯ ಜೀವ ರಕ್ಷಣೆಗಾಗಿ ಪ್ರತಿಯೊಬ್ಬರೂ ಹೋರಾಟ ನಡೆಸಬೇಕು ಎಂದು ಹೇಳಿದ್ದಾರೆ. ಮಳೆಗಾಲ ಇರೋದ್ರಿಂದ ಆಸ್ಪತ್ರೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಹುದು. ಆಕ್ಸಿಜನ್ ಸಮಸ್ಯೆ ಉಂಟಾಗಬಹುದು. ಹಿಂದಿನ ವರ್ಷ, ಮೊದಲನೇ ಕೊರೋನಾ ಅಲೆ ದಾಳಿ ಇಟ್ಟ ವೇಳೆ ಪ್ರತೀ ಸಭೆಯಲ್ಲೂ ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳ ಬಗ್ಗೆ ಹೆಚ್ಚು ಹಗಮನಹರಿಸುವಂತೆ ಸೂಚಿಸಿದ್ದೆ. ಈ ಬಾರಿಯೂ ಇದೇ ಮನವಿ ಮಾಡುತ್ತೇನೆ. ಹಳ್ಳಿ ಹಳ್ಳಿಗಳಲ್ಲೂ ಜಾಗೃತಿ ಮೂಡಿಸಿ, ಐಸೋಲೇಷನ್, ಕ್ವಾರಂಟೈನ್ ಪ್ರಮಾಣ ಹೆಚ್ಚಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕವನ್ನು ಪ್ರತಿನಿಧಿಸಿ ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು,ಕಲ್ಬುರ್ಗಿ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಹಾಸನ, ಬಳ್ಳಾರಿ, ಮೈಸೂರು,ತುಮಕೂರು, ಕೋಲಾರ,ಕೊಡಗು,ಉಡುಪಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.