ಬೆಂಗಳೂರು: ಮೈಸೂರು, ಬೆಂಗಳೂರು, ಚೆನ್ನೈ ನಡುವೆ ಸಂಚಲಿಸಲಿರುವ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್ಫಾರಂ ಸಂಖ್ಯೆ 7ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ʻಮೇಕ್ ಇನ್ ಇಂಡಿಯಾʼದ ಘೋಷಣೆ ಭಾಗವಾಗಿ ನಿರ್ಮಾಣವಾಗಿರುವ ವಂದೇ ಭಾರತ್ ಈಗಾಗಲೇ ಅಸ್ತಿತ್ವದಲ್ಲಿರುವ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಪೂರಕವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಚಕ್ರಗಳಲ್ಲಿ ಭಾರತದ ಹೈ-ಸ್ಪೀಡ್ ತಂತ್ರಜ್ಞಾನದ ಪರಾಕ್ರಮಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ.
ಬುಧವಾರ ಹೊರತುಪಡಿಸಿ ವಾರದ ಆರು ದಿನ ರೈಲು ಸಂಚರಿಸಲಿದೆ. ಬೆಳಗ್ಗೆ 5:50ಕ್ಕೆ ಚೆನ್ನೈ ಸೆಂಟ್ರಲ್‌ನಿಂದ ಹೊರಡುವ ಎಕ್ಸ್‌ಪ್ರೆಸ್ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಆರ್‌ಎಸ್) ನಿಲ್ದಾಣದಲ್ಲಿ ಒಂದು ನಿಲುಗಡೆಯೊಂದಿಗೆ ಮಧ್ಯಾಹ್ನ 12:30 ಕ್ಕೆ ಮೈಸೂರು ತಲುಪುತ್ತದೆ. ರೈಲು ಪೆರಂಬೂರ್, ವೆಪ್ಪಂಪಟ್ಟು, ಕಟ್ಪಾಡಿ ಜಂಕ್ಷನ್, ಗುಡುಪಲ್ಲಿ ಮತ್ತು ಮಾಲೂರು ಅನ್ನು ಹಾದುಹೋಗುತ್ತದೆ.
ಭಾರತೀಯ ರೈಲ್ವೆಯಿಂದ ನಿರ್ವಹಿಸಲ್ಪಡುವ ಈ ಸೆಮಿ-ಹೈ-ಸ್ಪೀಡ್ ರೈಲು ವಿದ್ಯುಚ್ಛಕ್ತಿಯಿಂದ ಚಲಿಸುತ್ತದೆ ಮತ್ತು ಇದುವರೆಗೆ ಪ್ರಾರಂಭಿಸಲಾದ ರೈಲುಗಳ ಮುಂದುವರಿದ ಆವೃತ್ತಿಯಾಗಿದೆ. ಹವಾನಿಯಂತ್ರಿತ ಕೋಚ್‌ಗಳು ಮತ್ತು ರಿಕ್ಲೈನರ್ ಸೀಟ್ ಗಳನ್ನು ಒಳಗೊಂಡಿದೆ.
ಎರಡು ವಿಭಾಗಗಳನ್ನು ಹೊಂದಿರುವ ವಂದೇ ಭಾರತ್ ರೈಲು ಎಕ್ಸಿಕ್ಯುಟಿವ್ ಮತ್ತು ಎಕಾನಮಿ ಕಾರ್. ಎಕ್ಸಿಕ್ಯುಟಿವ್ ಕ್ಲಾಸ್‌ನಲ್ಲಿರುವ ಸೀಟುಗಳು 180-ಡಿಗ್ರಿ ತಿರುಗಿಸಬಹುದಾದ ಆಸನಗಳನ್ನು ಹೊಂದಿದ್ದು, ಎಕಾನಮಿ ಕ್ಲಾಸ್‌ನಲ್ಲಿರುವ ಸೀಟ್‌ಗಳನ್ನು ಸುಲಭವಾಗಿ ಒರಗಿಕೊಳ್ಳಲು ನಾಲ್ಕು-ಚಕ್ರ ವಾಹನಗಳಂತೆ ಮುಂದಕ್ಕೆ ಸ್ಲೈಡ್ ಮಾಡಬಹುದು. ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಡುವೆ 16 ಬೋಗಿಗಳೊಂದಿಗೆ ಸಂಚರಿಸಲಿದೆ ಮತ್ತು 1,128 ಪ್ರಯಾಣಿಕರಿಗೆ ಆಸನ ಸಾಮರ್ಥ್ಯವಿದೆ.
ವಂದೇ ಮಾತರಂ ರೈಲಿನ ಬಹುತೇಕ ಭಾಗಗಳನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಈ ರೈಲಿನ ದ್ವಾರಗಳು ಅತ್ಯಾಧುನೀಕ ತಂತ್ರಜ್ಞಾನದ ಮೂಲಕ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಲಿದೆ.
ಭಾರತದಲ್ಲಿ ಚಾಲನೆಗೊಂಡಿರುವ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದೆ. ಭಾರತದ ಎಂಜಿನ್‌ರಹಿತ ಮೊದಲ ಸೆಮಿ ಹೈಸ್ಪೀಡ್ ಟ್ರೈನ್ ಎನಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ 16 ಬೋಗಿಗಳಿರುವ ರೈಲಿನ ನಿರ್ಮಾಣಕ್ಕೆ ಅಂದಾಜು 115 ಕೋಟಿ ರೂ ಆಗುತ್ತದೆ. ಕೆಲ ಮಾಹಿತಿ ಪ್ರಕಾರ ಒಂದು ರೈಲು ನಿರ್ಮಾಣಕ್ಕೆ ವೆಚ್ಚ 140-200 ಕೋಟಿ ಆಗಬಹುದು ಎನ್ನಲಾಗಿದೆ.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ರೈಲು ನಿಲ್ದಾಣದಲ್ಲಿ ‘ಭಾರತ್ ಗೌರವ್ ಕಾಶಿ ದರ್ಶನ್’ ವಿಶೇಷ ರೈಲಿಗೆ ಚಾಲನೆ ನೀಡಿದರು. ಈ ರೈಲು ಯಾತ್ರಿಗಳನ್ನು ಕಾಶಿ, ಅಯೋಧ್ಯೆ ಸೇರಿದಂತೆ ಹಲವು ಪ್ರಮುಖ ಯಾತ್ರಾ ಸ್ಥಳಗಳಿಗೆ ಕೊಂಡೊಯ್ಯಲಿದ್ದು, ಒಂದು ವಾರದಲ್ಲಿ ಮರಳಿ ಬರಲಿದೆ.
ಪ್ರಯಾಣ ದರ
ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇಂದು ಬೆಂಗಳೂರಿನಿಂದ ಚೆನ್ನೈಗೆ ಹೊರಟಿದೆ. ಶನಿವಾರದಿಂದ (ನವೆಂಬರ್ 12) ನಿಯಮಿತವಾಗಿ ರೈಲು ಚಾಲನೆಯಲ್ಲಿರಲಿದೆ. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಬೆಳಗ್ಗೆ 5:50ಕ್ಕೆ ಹೊರಡುವ ಈ ರೈಲು ಮೈಸೂರನ್ನು ಮಧ್ಯಾಹ್ನ 12:20ಕ್ಕೆ ತಲುಪಲಿದೆ. ಬೆಳಗ್ಗೆ 10:20ಕ್ಕೆ ಬೆಂಗಳೂರಿಗೆ ಬರುತ್ತದೆ. ಅಂದರೆ ಚೆನ್ನೈನಿಂದ ಬೆಂಗಳೂರಿಗೆ ನಾಲ್ಕೂವರೆ ಗಂಟೆಯ ಪ್ರಯಾಣದ ಅವಧಿಯಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಕೇವಲ 2 ಗಂಟೆಯಲ್ಲಿ ಹೋಗುತ್ತದೆ.
ಇನ್ನು, ಮೈಸೂರಿನಿಂದ ಮಧ್ಯಾಹ್ನ 1:05ಕ್ಕೆ ನಿರ್ಗಮಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರನ್ನು ಮಧ್ಯಾಹ್ನ 2:55ಕ್ಕೆ ಮುಟ್ಟಿ ಚೆನ್ನೈಯನ್ನು ಸಂಜೆ 7:30ಕ್ಕೆ ತಲುಪಲಿದೆ.
ಮೈಸೂರು ಮತ್ತು ಚೆನ್ನೈ ಮಧ್ಯೆ ಬೆಂಗಳೂರಿನಲ್ಲಿ ನಿಲುಗಡೆ ಹೊಂದಿದ್ದು, ಮತ್ಯಾವ ನಿಲ್ದಾಣದಲ್ಲಿಯೂ ವಂದೇ ಭಾರತ್ ರೈಲು ನಿಲ್ಲುವುದಿಲ್ಲ. ಚೆನ್ನೈನಿಂದ ಮೈಸೂರಿಗೆ ಎಕನಾಮಿ ಕ್ಲಾಸ್‌ನಲ್ಲಿ ಹೋಗಲು 921 ರೂ ಅಗುತ್ತದೆ. ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ಪ್ರಯಾಣಿಸಲು 1,880 ರೂ ದರ ಇದೆ. ಮೈಸೂರಿನಿಂದ ಬೆಂಗಳೂರಿಗೆ ಹೋಗಲು ಎಕನಾಮಿ ಕ್ಲಾಸ್‌ಗೆ 368 ರು, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ 768 ರೂ ಅಗುತ್ತದೆ.
ಚೆನ್ನೈನಿಂದ ಮೈಸೂರಿನ ಮಧ್ಯೆ ಇರುವ ಸುಮಾರು 500 ಕಿ ಮೀ ದೂರವನ್ನು ಆರೂವರೆಗೆ ಗಂಟೆಯಲ್ಲಿ ಇದು ಕ್ರಮಿಸುತ್ತದೆ. ಅಂದರೆ, ಗಂಟೆಗೆ ಸುಮಾರು 80-100 ಕಿ ಮೀ ವೇಗದಲ್ಲಿ ಇದು ಸಾಗುತ್ತದೆ.