ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಪೆಗಾಸಸ್ ತಂತ್ರಾಂಶ ಮೂಲಕ ಬೇಹುಗಾರಿಕೆ ನಡೆಸುತ್ತಿರುವ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಭಾರತದ ಪ್ರಜಾಪ್ರಭುತ್ವಕ್ಕೆ ಪೆಟ್ಟು ನೀಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಗ್ರರ ಮೇಲೆ ಪ್ರಯೋಗಿಸಬೇಕಾದ ಈ ಪೆಗಾಸಸ್ ಬೇಹುಗಾರಿಕೆಯನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಪ್ರಜಾಪ್ರಭುತ್ವದ ವಿರುದ್ಧ ಬಳಕೆ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಅಂತರಾತ್ಮಕ್ಕೆ ಹೊಡೆತ ಕೊಟ್ಟಂತೆ ಎಂದೂ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ: ಏನಿದು ಪೆಗಾಸಸ್ ತಂತ್ರಾಂಶ? ಫೋನ್ ಹೇಗೆ ಹ್ಯಾಕ್ ಆಗಬಹುದು?
14 ಪ್ರತಿಪಕ್ಷಗಳ ನಾಯಕರ ಸಭೆ ನಂತರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದೆ. ಕೇಂದ್ರ ಸರಕಾರ ಸದನದಲ್ಲಿ ಪೆಗಾಸಸ್ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುತ್ತಿಲ್ಲ. ಭಾರತೀಯರ ಮೇಲೆ ಪೆಗಾಸಸ್ ಮತ್ತು ಬೇಹುಗಾರಿಕೆ ಹೇಗೆ ನಡೆಯುತ್ತಿದೆ ಎಂಬುದನ್ನು ಪ್ರಶ್ನೆ ಮಾಡುತ್ತಿದ್ದೇವೆ ಅಷ್ಟೇ, ನಮಗೆ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವ ಉದ್ದೇಶವಿಲ್ಲ. ನಾವು ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಈ ವಿಚಾರವಾಗಿ ಸಂಸತ್ತಿನಲ್ಲಿ ನಾವು ಎಲ್ಲಾ ವಿರೋಧ ಪಕ್ಷದ ನಾಯಕರು ಚರ್ಚಿಸಲು ನಿರ್ಧರಿಸಿದ್ದೇವೆ. ಆದರೆ, ಸಂಸತ್ತಿನಲ್ಲಿ ನಾವು ಮಾತನಾಡಲು ಬಯಸಿದರೆ, ನಮ್ಮ ದನಿಯನ್ನು ಹತ್ತಿಕ್ಕಲಾಗುತ್ತಿದೆ. ಕೇಂದ್ರ ಸರ್ಕಾರ ಪೆಗಾಸಸ್ನ್ನು ಖರೀದಿಸಿದೆಯೇ ಎಂಬುದು ನಮಗೆ ಗೊತ್ತಾಗಬೇಕು. ಹೌದು ಅಥವಾ ಇಲ್ಲ ಎಂದು ಉತ್ತರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಅವರಿಗೆ ಏನು ಸಮಸ್ಯೆ? ಎಂದರು.
ಪೆಗಾಸಸ್ ಬೇಹುಗಾರಿಕೆ ಎಂಬುದು ರಾಷ್ಟ್ರೀಯತೆ ವಿಚಾರವಾಗಿದೆ. ಇದನ್ನು ಬಳಿಸಿಕೊಂಡು ಪ್ರಜಾಪ್ರಭುತ್ವದ ಮೇಲೆ ಧಾಳಿ ಮಾಡಲಾಗುತ್ತಿದೆ. ನಮಗಿದು ದೇಶದ್ರೋಹದಂತೆ ಕಾಣಿಸುತ್ತಿದೆ. ನನ್ನ ಪ್ರಕಾರ ಇದು ಇದು ಖಾಸಗಿ ವಿಚಾರವಲ್ಲ. ರಾಷ್ಟ್ರ-ವಿರೋಧಿ ಕಾರ್ಯಚಟುವಟಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
14 ಪ್ರತಿಪಕ್ಷಗಳ ಪರವಾಗಿ ಸಭೆಯಲ್ಲಿ ಅಧೀರ್ ರಂಜನ್ ಚೌಧರಿ, ಜೈರಾಮ್ ರಮೇಶ್, ಮಲ್ಲಿಕಾರ್ಜುನ ಖರ್ಗೆ, ಡಿಎಂಕೆಯ ಟಿ.ಆರ್.ಬಾಬು, ತಿರುಚಿ ಸಿವಾ, ಎನ್ಸಿಪಿ ಸುಪ್ರಿಯಾ ಸುಲೆ, ಪ್ರಫುಲ್ ಪಟೇಲ್, ಶಿವಸೇನೆಯ ಸಂಜಯ್ ರಾವತ್ ಸೇರಿ ಇನ್ನೂ ಹಲವು ಪ್ರಮುಖ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಅಲ್ಲದೆ, ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ, ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ, ಶಿವಸೇನೆ, ರಾಷ್ಟ್ರೀಯ ಜನತಾ ದಳ, ಸಮಾಜವಾದಿ, ಭಾರತೀಯ ಕಮ್ಯುನಿಸ್ಟ್ ಪಾರ್ಟಿ(ಸಿಪಿಐ), ಸಿಪಿಐ(ಎಂ), ನ್ಯಾಷನಲ್ ಕಾನ್ಫರೆನ್ಸ್, ಆಮ್ ಆದ್ಮಿ ಪಕ್ಷ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಆರ್‌ಎಸ್‌ಪಿ, ಕೇರಳ ಕಾಂಗ್ರೆಸ್(ಎಂ) ಮತ್ತು ವಿಸಿಕೆ ಪಕ್ಷದ ನಾಯಕರು ಹಾಜರಾಗಿದ್ದರು.
ಇದನ್ನು ಓದಿ: ಪೆಗಾಸಸ್: ಸರ್ವಾಧಿಕಾರಶಾಹಿಯ ಸೈಬರ್ ಆಯುಧ
ಇಂದು ಅಧಿವೇಶನದ ಕಲಾಪದ ವೇಳೆಯಲ್ಲಿ ಸಂಸತ್ತಿನ ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯಿಂದ ಲೋಕಸಭೆಯಲ್ಲಿ ಗದ್ದಲ ಉಂಟಾಗಿ ಕಲಾಪವನ್ನು ಕೆಲಕಾಲ ಮುಂದೂಡಬೇಕಾಯಿತು. ಕಾಂಗ್ರೆಸ್ ನ ಸದಸ್ಯರು ಸಭಾಧ್ಯಕ್ಷರು ಹಾಗೂ ಖಜಾನೆ ಬೆಂಚುಗಳತ್ತ ಕಾಗದಗಳನ್ನು ಎಸೆದು ಪ್ರತಿಭಟನೆ ನಡೆಸಿದ್ದರು.
ಇಂದು ಕಲಾಪ ಪ್ರಾರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳ ಸದಸ್ಯರು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ತೀವ್ರಸ್ವರೂಪ ಪಡೆದುಕೊಂಡಿತು.
ಸಂಸದರ ಪ್ರತಿಭಟನೆಯಿಂದಾಗಿ ಈವರೆಗೂ ಒಂದು ಒಂದು ದಿನ ಉಭಯ ಕಲಾಪಗಳು ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ಇದರ ನಡುವೆಯೂ ಕೇಂದ್ರ ಸರಕಾರ ಕೆಲವು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳುತ್ತಿದೆ. ಇನ್ನೊಂದು ಕಡೆ ಕೇಂದ್ರ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರೆದಿದೆ.