- ನಿಬಂಧನೆ ಉಲ್ಲಂಘಿಸಿದ 1621 ಮಂದಿ ರೈತರಿಗೆ ಹಣ ಕಟ್ಟಲು ನೋಟಿಸ್
ಕೋಲಾರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಕಿಸಾನ್ ಯೋಜನೆಯಡಿ ಕೋಲಾರ ಜಿಲ್ಲೆಯಲ್ಲಿ, ಸಹಾಯ ಧನ ಪಡೆದುಕೊಂಡ ರೈತರಿಗೆ ಕೃಷಿ ಇಲಾಖೆ ನೋಟೀಸ್ ನೀಡಿ ಹಣ ವಾಪಸ್ ಕಟ್ಟುವಂತೆ ಸೂಚಿಸಿದೆ.
ಪಿಎಂ ಕಿಸಾನ್ ಯೋಜನೆಗೆ ರೈತರು ಅರ್ಜಿ ಸಲ್ಲಿಸಲು ಕೆಲ ನಿಬಂಧನೆಗಳನ್ನು ಅರ್ಜಿಯಲ್ಲಿ ವಿಧಿಸಲಾಗಿತ್ತು. ಆದರೆ ರೈತರೆಂದು ದಾಖಲೆ ನೀಡಿ, ತಪ್ಪು ಮಾಹಿತಿ ನೀಡಿದವರಿಗೆ ಮಾತ್ರ ನೋಟೀಸ್ ಜಾರಿ ಮಾಡಲಾಗಿದೆ, ಯೋಜನೆಯಡಿ ಸಹಾಯಧನ ಪಡೆಯಲು ಆದಾಯ ತೆರಿಗೆ ಪಾವತಿ ಮಾಡದವರು, ಸರ್ಕಾರಿ ಪಿಂಚಣಿ ಸೌಲಭ್ಯ ಪಡೆಯುವರು, ಕೆಲ ಲಾಭದಾಯಕ ಹುದ್ದೆಯನ್ನ ನಿರ್ವಹಿಸುವರು ಅರ್ಜಿ ಸಲ್ಲಿಸಬಾರದು ಎಂಬ ನಿಯಮವನ್ನ ಉಲ್ಲೇಖಿಸಲಾಗಿತ್ತು. ಸರ್ಕಾರದ ನಿಯಮಗಳನ್ನು ಒಪ್ಪಿ ಘೋಷಣಾ ಪತ್ರಕ್ಕೆ ಸಹಿಹಾಕಿದ್ದ ರೈತರು, ಇದೀಗ ಆದಾಯ ತೆರಿಗೆ ಪಾವತಿ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಇದೀಗ ರೈತರಿಗೆ ಹಣ ವಾಪಾಸ್ ಕಟ್ಟಲು ಸೂಚಿಸಿದೆ.
ಹಾಗಾಗಿ ಕೋಲಾರ ಜಿಲ್ಲೆಯಲ್ಲಿ ಕೃಷಿ ಇಲಾಖೆ 1621 ಮಂದಿ ರೈತರಿಗೆ ನೋಟೀಸ್ ನೀಡಿ, ಕಂತುಗಳಲ್ಲಿ ಪಡೆದುಕೊಂಡ ಹಣ ಹಿಂತಿರುಗಿಸಿ ಎಂದು ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪದೇವಿ, ಸ್ವಯಂ ಘೋಷಣಾ ಪತ್ರದಲ್ಲಿ ನಿಯಮಗಳನ್ನ ಅತಿಕ್ರಮಿಸಿರುವ ಕೆಲವರು ತಪ್ಪು ಮಾಹಿತಿ ನೀಡಿದ್ದಾರೆ. ಹಾಗಾಗಿ ಕೆಲವರಿಗೆ ಮಾತ್ರ ನೋಟೀಸ್ ನೀಡಲಾಗಿದ್ದು ಹಣ ವಾಪಸ್ ಕಟ್ಟಲು ಸೂಚನೆ ನೀಡಲಾಗಿದೆ. ಆದರೆ ಸಮಯಾಕಾಶ ನಿಗದಿ ಮಾಡಿಲ್ಲ, ಹಣ ಪಡೆದವರು ವಾಪಸ್ ನೀಡಿ ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ತಪ್ಪು ಮಾಹಿತಿ ನೀಡಿರುವ ರೈತರಿಗೆ ಸಹಾಯ ಧನ ತಲುಪದಂತೆ ತಡೆಹಿಡಿಯಲಾಗಿದೆ, ಇನ್ನು ಸರ್ಕಾರದ ನೋಟಿಸ್ ಬಗ್ಗೆ ರೈತರು ಕಿಡಿಕಾರಿದ್ದು ನೋಟೀಸ್ ಹಿಂಪಡೆಯಲು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಕೃಷಿ ಇಲಾಖೆಯ ಅಧಿಕಾರಿಗಳು ಮಾತ್ರ ಹೋಬಳಿ ಮಟ್ಟದಲ್ಲಿ ರೈತರಿಗೆ ನೋಟೀಸ್ ನೀಡುತ್ತಿದ್ದು, ಸಹಾಯಧನದ ಹಣವನ್ನ ಕೇಂದ್ರದ ಕೃಷಿ ಇಲಾಖೆಯ ಹೆಸರಲ್ಲಿ ಡಿಡಿ ಮೂಲಕ ಕಟ್ಟುವಂತೆ ನೋಟೀಸ್ ನಲ್ಲಿ ತಿಳಿಸಿದೆ.
ಜೊತೆಗೆ ಹಣವನ್ನು ಹಿಂತಿರುಗಿಸದೆ ಹೋದಲ್ಲಿ ಕೃಷಿ ಇಲಾಖೆಯ ಎಲ್ಲಾ ಸವಲತ್ತುಗಳನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂತಲೂ ತಿಳಿಸಿದ್ದಾರೆ. ಜೊತೆಗೆ ಮುಂದೆ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವರು ನಿಯಮಗಳನ್ನು ತಪ್ಪದೆ ಪಾಲಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.