ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಶೂ, ಸಾಕ್ಸ್ ವಿತರಿಸುತ್ತಿದ್ದೆವು. ಬಿಜೆಪಿ ಅದನ್ನೂ ಕೊಡಲು ತಯಾರಿಲ್ಲದೆ ನಿಲ್ಲಿಸಲು ಮುಂದಾಯಿತು. ನಾವು ಒತ್ತಾಯ ಮಾಡಿದ್ದಾಗ ಈಗ ನೀಡಲು ಮುಂದಾಗಿದ್ದಾರೆ, ಸಂತೋಷ ಕೊಡಲಿ, ಮಕ್ಕಳಿಗೆ ಸಾಕ್ಸ್, ಶೂಗಳನ್ನು ನೀಡಬೇಕು ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಶಾಲಾ ಮಕ್ಕಳಿಗೆ ಸರ್ಕಾರವು ಶೂ, ಸಾಕ್ಸ್ ಕೊಡದಿದ್ದರೆ ನಾವು ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದ ಬೆನ್ನಲ್ಲೇ, ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜನರಿಂದ ಸಂಗ್ರಹಿಸಿದ ಒಂದು ಕೋಟಿ ರೂಪಾಯಿ ಹಣ ಎಲ್ಲಿಗೆ ಹೋಯಿತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಕೇಳಿದ್ದ ಪ್ರಶ್ನೆ ಮಾಡಿದ್ದರು.
ಈ ಬಗ್ಗೆ ಸಿದ್ದರಾಮಯ್ಯ ಅವರನ್ನು ಸುದ್ದಿಗಾರರು ಕೇಳಿದಾಗ, ಕೋವಿಡ್ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಕೋವಿಡ್ ನಿಧಿ ಎಂದು ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿದ್ದರು, ಅದು ಎಲ್ಲಿಗೆ ಹೋಯಿತು ಎಂದು ಕೇಳಿದರು.
ಶಾಲೆಗಳು ಆರಂಭವಾಗಿ ವಾರಗಳು ಕಳೆದಿವೆ. ಸರ್ಕಾರ ಈಗಾಗಲೇ ಸಮವಸ್ತ್ರ, ಪಠ್ಯಪುಸ್ತಕ, ಶೂ, ಸಾಕ್ಸ್ ನೀಡಬೇಕಾಗಿತ್ತು. ಇನ್ನಾದರೂ ತಡಮಾಡದೆ ನೀಡಲಿ ಎಂದು ಒತ್ತಾಯ ಮಾಡಿದರು.
ರಾಜ್ಯದಲ್ಲಿ ಮಳೆ ಹಾನಿ ವಿಚಾರವಾಗಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲೆಗೆ ಹೋಗುತ್ತಿಲ್ಲ. ಜನರ ಕಷ್ಟ ಸುಖಗಳನ್ನು ಕೇಳಬೇಕಲ್ಲ. ಬೆಂಗಳೂರಿನಲ್ಲಿ ಸಭೆ ನಡೆಸಿದರೆ ಏನು ಪ್ರಯೋಜನ, ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮುಖ್ಯಮಂತ್ರಿಗಳು ಸಹ ಸ್ಥಳಕ್ಕೆ ಭೇಟಿ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಪರಿಹಾರ ಕೊಟ್ಟಿದ್ದಾರೆಯೇ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.