ನವದೆಹಲಿ: ಇಸ್ರೇಲ್ ಮೂಲದ ಪೆಗಾಸಸ್ ಸಾಫ್ಟ್ವೇರ್ ಮೂಲಕ ನಡೆಸಲಾಗಿದೆ ಎನ್ನಲಾದ ಬೇಹುಗಾರಿಕೆ ಅಥವಾ ಫೋನ್ ಕದ್ದಾಲಿಕೆ ಹಗರಣವನ್ನು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕೆಂದು 500ಕ್ಕೂ ಹೆಚ್ಚು ಗಣ್ಯರು ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯನ್ನು ಸಲ್ಲಿಸಲಾಗಿದ್ದು, ಮುಂದಿನ ವಾರದಿಂದ ವಿಚಾರಣೆ ಆರಂಭಿಸಲಾಗುವುದು ಎಂದು ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
ಭಾರತದ ವಿರೋಧಪಕ್ಷದ ನಾಯಕರು, ಪತ್ರಕರ್ತರು ಮುಂತಾದವರನ್ನು ಗುರಿಯಾಗಿಸಿಕೊಂಡು ಪೆಗಾಸಸ್ ಸಾಫ್ಟ್ವೇರ್ ಮೂಲಕ ಬೇಹುಗಾರಿಕೆ ಅಥವಾ ಫೋನ್ ಕದ್ದಾಲಿಕೆ ನಡೆದಿದೆ ಎಂಬ ಗಂಭೀರ ಆರೋಪವಿದೆ. ಈ ಬಗ್ಗೆ ದೇಶದ ಸಾಮಾಜಿಕ ಕಾರ್ಯಕರ್ತರು, ಮಾನವ ಹಕ್ಕು ಹೋರಾಟಗಾರರು, ಮಹಿಳಾ ಹಕ್ಕುಗಳ ಹೋರಾಟಗಾರರು ಸೇರಿದಂತೆ 500ಕ್ಕೂ ಹೆಚ್ಚಿನ ಗಣ್ಯರು ಹಾಗೂ ಸಂಸ್ಥೆಗಳು ಈ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರಿಗೆ ಪತ್ರ ಬರೆದು, ಪ್ರಕರಣದ ತೀವ್ರತೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಪೆಗಾಸಸ್: ಸರ್ವಾಧಿಕಾರಶಾಹಿಯ ಸೈಬರ್ ಆಯುಧ
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಎಸ್‌ಐಟಿ ತಂಡದಿಂದ ವಿಶೇಷ ತನಿಖೆ ನಡೆಸಬೇಕೆಂದು ಹಿರಿಯ ಪತ್ರಕರ್ತರಾದ ಎನ್. ರಾಮ್ ಮತ್ತು ಶಶಿಕುಮಾರ್ ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರ ಪರವಾಗಿ ವಾದ ಮಂಡಿಸಿದ್ದ ವಕೀಲ ಕಪಿಲ್ ಸಿಬಲ್ ಮಿಲಿಟರಿ ದರ್ಜೆಯ ಬೇಹುಗಾರಿಕಾ ತಂತ್ರಜ್ಞಾನ ಬಳಸಿ ಗೂಢಚಾರಿಕೆ ನಡೆಸಿದ್ದು, ಅನೇಕರ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಲ್ಲದೆ, ಅವರ ಖಾಸಗಿ ಮಾಹಿತಿಗಳ ಸೋರಿಕೆಯೂ ಒಳಗೊಂಡಿದೆ ಎಂದು ಕಪಿಲ್ ಸಿಬಲ್ ಅವರ ವಾದವಾಗಿದೆ. ನ್ಯಾಯಮೂರ್ತಿಗಳು, ಪತ್ರಕರ್ತರು, ವಿಪಕ್ಷ ನಾಯಕರ ಫೋನ್ಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂದು ನ್ಯಾಯಾಲಯ ತಿಳಿಸಲಾಗಿದೆ. ಸುಪ್ರೀಂ ಕೊರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಮುಂದಿನ ವಾರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ಪೆಗಾಸಸ್ ಗೂಢಚಾರಿಕೆ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತಿತರ ರಾಜಕೀಯ ನಾಯಕರು ಒತ್ತಾಯಿಸುತ್ತಿದ್ದಾರೆ.
ಪೆಗಾಸಸ್ ಪಿತೂರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿಚಾರಣೆಗೆ ಮುಂದಾಗಿದ್ದ ಸಂಸದೀಯ ಸ್ಥಾಯಿ ಸಮಿತಿ ವಿರುದ್ಧ ಬಿಜೆಪಿ ಸದಸ್ಯರು ತಿರುಗಿ ಬಿದ್ದಿದ್ದಾರೆ. ಇದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಕಿಡಿಕಾರಿದ್ದಾರೆ. ‘ಪಿತೂರಿ ಬಯಲಿಗೆಳೆಯುವ ದಿಸೆಯಲ್ಲಿ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿ ದಿಟ್ಟ ಹೆಜ್ಜೆ ಇರಿಸಿತ್ತು. ಇದರ ಉದ್ದೇಶವನ್ನು ಅರ್ಥ ಮಾಡಿಕೊಳ್ಳದ ಕೆಲವು ದುಷ್ಟಶಕ್ತಿಗಳು ತಿರುಗಿಬಿದ್ದವು. ವಿಚಾರಣೆ ವಿಷಯದಲ್ಲಿ ಅವರು ಸಂಸದೀಯ ಸ್ಫೂರ್ತಿ ಮರೆತು, ‘ಪಿಂಗ್ ಪಾಂಗ್ ಪಂದ್ಯ’ (ಟೇಬಲ್ ಟೆನಿಸ್ ಮಾದರಿಯ ಪಂದ್ಯ)ಕ್ಕೆ ಇಳಿದಿದ್ದಾರೆ’ ಎಂದು ಟೀಕಿಸಿದ್ದಾರೆ. ಶಶಿ ತರೂರ್ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಲು ಬಿಜೆಪಿ ಒತ್ತಾಯಿಸುತ್ತಿದೆ.
ಇದನ್ನು ಓದಿ: ‘ಪೆಗಾಸಸ್’ ಬಳಸಿ 300ಕ್ಕೂ ಹೆಚ್ಚು ಭಾರತೀಯ ಗಣ್ಯರ ಫೋನ್‌ಗಳು ಹ್ಯಾಕ್
‘ಇಸ್ರೇಲ್ ಕಂಪನಿ ಎನ್‌ಎಸ್‌ಒ ತಯಾರಿಸಿರುವ ‘ಪೆಗಾಸಸ್ ಸ್ಪೈವೇರ್’ ಅನ್ನು ಬಳಸಿಕೊಂಡು ವ್ಯಾಪಕ ದುರ್ಬಳಕೆ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ದೇಶದಲ್ಲಿ ಈ ಸಂಶಯಾಸ್ಪದ ಸ್ಪೈವೇರ್ ಮಾರಾಟ, ವರ್ಗಾವಣೆ ಮತ್ತು ಬಳಕೆ ಮಾಡಬಾರದು. ತಕ್ಷಣ ಅದರ ತಡೆಗೆ ಆದೇಶ ನೀಡಬೇಕು’ ಎಂದು ಈ ಗಣ್ಯರು ಮನವಿ ಮಾಡಿದ್ದಾರೆ.
ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಕೋರ್ಟ್ ಸಿಬ್ಬಂದಿ ವಿರುದ್ಧವೂ ಪೆಗಾಸಸ್ ಕದ್ದಾಲಿಕೆ ನಡೆಸಲಾಗಿದೆ ಎನ್ನುವ ಆರೋಪವಿದೆ ಎಂದು ಗಣ್ಯರು ಪ್ರಸ್ತಾಪಿಸಿದ್ದಾರೆ. ಮಹಿಳೆಯರು ಇದರ ಬಲಿಪಶುಗಳಾಗಿರುವುದು ಕಳವಳಕಾರಿ ಸಂಗತಿ ಎಂದಿದ್ದಾರೆ.
ಸಾಮಾಜಿಕ ಹೋರಾಟಗಾರರಾದ ಅರುಣಾ ರಾಯ್, ಅಂಜಲಿ ಭಾರದ್ವಾಜ್, ಹರ್ಷ ಮಂಡೇರ್, ಖ್ಯಾತ ವಕೀಲೆ ವೃಂದಾ ಗ್ರೋವರ್, ಝುಮಾ ಸೇನ್ ಪತ್ರಕ್ಕೆ ಸಹಿ ಹಾಕಿದ ಗಣ್ಯರಲ್ಲಿ ಸೇರಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನದಲ್ಲೂ ಪೆಗಾಸಸ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಕಲಾಪ ಆರಂಭವಾದ ಒಂದು ವಾರವಿಡೀ ಅಧಿವೇಶನವನ್ನು ಮುಂದೂಡಬೇಕಾದ ಪರಿಸ್ಥಿತಿ ಎದುರಾಗಿತ್ತು.
ಇಸ್ರೆಲ್‌ನ ಎನ್‌ಎಸ್‌ಒನ ಪೆಗಾಸಸ್ ಗೂಢಚರ್ಯೆ ಕುತಂತ್ರಾಂಶ ಬಳಸಿ 300ಕ್ಕೂ ಹೆಚ್ಚು ಭಾರತೀಯರ ದೂರವಾಣಿ ಸಂಖ್ಯೆಗಳ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ಒಕ್ಕೂಟವೊಂದು ವರದಿ ಮಾಡಿತ್ತು.