ಎರಡನೇ ಬಾರಿ ಕೇರಳ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಪಿಣರಾಯಿ ವಿಜಯನ್

ತಿರುವನಂತಪುರಂ : ಕೇರಳ ವಿಧಾನಸಭೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಪಿಣರಾಯಿ ವಿಜಯನ್ ಇಂದು, ಗುರುವಾರ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎಪ್ರಿಲ್-ಮೇ ನಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ LDF 140 ಸ್ಥಾನಗಳಲ್ಲಿ ಬರೋಬ್ಬರಿ 99 ಸ್ಥಾನಗಳನ್ನು ಗೆದ್ದು ಎರಡನೇ ಅವಧಿಗೆ ಸರಕಾರ ರಚಿಸಿದೆ.

 

ತಿರುವನಂತಪುರಂ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಮಾಣ ವಚನ ಬೋಧಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಸಮಾರಂಭದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಮಿತಿಗೊಳಿಸಬೇಕು ಎಂದು ಕೇರಳ ಹೈಕೋರ್ಟ್‌ ಬುಧವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸರಳ ಸಮಾರಂಭದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ  ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಸೇರಿದಂತೆ ಕೇರಳದ ಪಕ್ಷದ ಪ್ರಮುಖರು ಭಾಗವಹಿಸಿದ್ದರು.  ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದ, ಬೀಡಿ ಕಾರ್ಮಿಕ ಚಲಾದನ್‌, ಆಡು ಸಾಕುವ ಸುಬೈದಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಿಎಂ ಪಿಣರಾಯಿ ವಿಜಯನ್‌ ಇವರಿಬ್ಬರಿಗೂ ವಿಶೇಷ ಆಹ್ವಾನವನ್ನು ನೀಡಿದ್ದರು. ಬೀಡಿ ಕಾರ್ಮಿಕ ಚಲಾದನ್ ಜನಾರ್ಧನನ್‌, ಈ ಹಿಂದೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಮ್ಮ ಖಾತೆಯಲ್ಲಿದ್ದ ಎರಡು ಲಕ್ಷವನ್ನು ದೇಣಿಗೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದರು. ಹಾಗೆಯೇ ಆಡು ಸಾಕುವ ಮಹಿಳೆ ಸುಬೈದಾ, ಎರಡು ಬಾರಿ ತನ್ನ ಆಡು, ಕುರಿಗಳನ್ನು ಮಾರಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಸುದ್ದಿಯಾಗಿದ್ದರು.

ಇಂದು ಸಂಜೆ  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಮೊದಲ ಸಂಪುಟ ಸಭೆ ನಡೆಯಲಿದೆ. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ.

Donate Janashakthi Media

Leave a Reply

Your email address will not be published. Required fields are marked *