1- ಪಿಲ್ಲರ್ ನಂ, 803
ದಿಲ್ಜಿತ್ ಸರ್‌ಪಂಚ್ ಸಿಂಗ್
ಟಿಕ್ರಿ ಬಾರ್ಡರ್,
ದೆಹಲಿ
2- ಪಿಲ್ಲರ್ ನಂ. ೭೮೦,
ವಿರೇಂದರ್ ಸಿಂಗ್
ಟಿಕ್ರಿ ಬಾರ್ಡರ್
ದೆಹಲಿ
ಈ ವಿಳಾಸಗಳು ದೆಹಲಿಯಲ್ಲಿ ಹಲವಾರು ವರ್ಷಗಳಿಂದ ವಾಸ ಮಾಡುತ್ತಿರುವ ಯಾರದ್ದೋ ಶಾಶ್ವತ ವಿಳಾಸಗಳಲ್ಲ. ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಜಗ್ಗದೆ ಇದ್ದರೇ ಶಾಶ್ವತ ವಿಳಾಸಗಳಾಗಿ ಮಾರ್ಪಡುವ ಜಾಗಗಳಿವು ಎನ್ನುವ ದಿಟ್ಟ ಎಚ್ಚರಿಕೆ ನೀಡಿರುವ ರೈತ ಹೋರಾಟಗಾರರದ್ದು.
ಹೌದು, ಈಗಾಗಲೇ ರೈತ ಹೋರಾಟ ಶುರಾವಾಗಿ 45ನೇ ದಿನಕ್ಕೆ ಕಾಲಿಟ್ಟಿದೆ. ತಮ್ಮ ಮನೆ, ಊರು, ಜಿಲ್ಲೆಗಳನ್ನು ತೊರೆದು ಇಲ್ಲಿ ನೆಲೆಸಿರುವ ರೈತರು ಇಲ್ಲಿಯೇ ಹೊಸ ವಿಳಾಸಗಳನ್ನು ನೀಡುವುದನ್ನು ಆರಂಭಿಸಿದ್ದಾರೆ. ತಮ್ಮ ಹಳ್ಳಿಗಳಿಂದ ಪ್ರತಿಭಟನಾ ಸ್ಥಳಕ್ಕೆ ಬರುವ ಗ್ರಾಮದ ಜನರಿಗೆ, ಪ್ರತಿಭಟನೆ ಬೆಂಬಲಿಸಲು ಬರುವ ಜನರಿಗೆ ತಮ್ಮ ಇರುವಿಕೆಯನ್ನು ತಿಳಿಸಲು ಈ ಪಿಲ್ಲರ್‌ಗಳನ್ನು ವಿಳಾಸವಾಗಿ ನೀಡುತ್ತಾರೆ.
ಈ ಪಿಲ್ಲರ್ ನಂಬರ್‌ಗಳು ಯಾವುವು ಎಂದು ಅನುಮಾನ ಮೂಡುತ್ತಿದ್ದರೇ, ಇವು ದೆಹಲಿಯ ಟಿಕ್ರಿ ಬಾರ್ಡರ್‌ನಲ್ಲಿರುವ ಮೆಟ್ರೊ ಪಿಲ್ಲರ್‌ಗಳು. ಟಿಕ್ರಿ ಬಾರ್ಡರ್ ಮೆಟ್ರೋ ನಿಲ್ದಾಣದ 750ನೇ ಮೆಟ್ರೋ ಪಿಲ್ಲರ್‌ನಿಂದ ಶುರುವಾಗುವ ಪಿಲ್ಲರ್ ವಿಳಾಸಗಳು, ಮೂರು ಮೆಟ್ರೋ ಸ್ಟೇಷನ್‌ಗಳನ್ನು ಸೇರಿಸುವ 820ನೇ ಪಿಲ್ಲರ್‌ವರೆಗೂ ಮುಂದುವರೆಯುತ್ತದೆ.
ಪಿಲ್ಲರ್‌ಗಳ ಕೆಳಗೆ ಟ್ರ್ಯಾಲಿಯಲ್ಲಿ ಜೀವನ ನಡೆಸುತ್ತಿರುವವರು, ಊಟ, ಚಹಾದ ಲಂಗರ್‌ಗಳನ್ನು ಹಾಕಿಕೊಂಡಿರುವವರು, ಮೆಡಿಕಲ್ ಕ್ಯಾಂಪ್‌ಗಳ ವಿಳಾಸ ದೊರೆಯುವುದು ಇದೇ ರೀತಿಯಲ್ಲಿ. ಇದಲ್ಲದೇ ರೈತ ಹೋರಾಟದ ಸುದ್ದಿ ಪತ್ರಿಕೆ ಟ್ರ್ಯಾಲಿ ಟೈಮ್ಸ್ ಇರುವುದು ಪಿಲ್ಲರ್ ನಂಬರ್ 783ನಲ್ಲೆ. ಅವರು ನಮಗೆ ಬರ ಹೇಳಿದ್ದು ಪಿಲ್ಲರ್ ವಿಳಾಸ ನೀಡಿಯೇ.
ಇದು ಮೇಟ್ರೋ ಕೆಳಗಿನ ಪಿಲ್ಲರ್‌ಗಳ ಟ್ರ್ಯಾಲಿ ವಿಳಾಸಗಳ ಕಥೆಯಾದರೇ, ಇನ್ನು ಬಹುದುರ್‌ಪುರ್ ಹೈವ್ ಕಡೆಯಲ್ಲಿ ಸುಮಾರು 10 ಕಿಲೋ ಮಿಟರ್ ಉದ್ದ ಟ್ರ್ಯಾಲಿಗಳನ್ನು ನಿಲ್ಲಿಸಿಕೊಂಡಿರುವ ರೈತ ಹೋರಾಟಗರರು ವಿಳಾಸ ನೀಡಲು ತಾವು ಕಂಡುಕೊಂಡಿರುವ ಮಾರ್ಗ ಮತ್ತಷ್ಟು ಕುತೂಹಲ ಮುಟ್ಟಿಸುತ್ತವೆ.
ರೈತ ಹೋರಾಟಗಾರರು ಪಂಜಾಬ್‌ನಿಂದ ಬಂದಿದ್ದರೇ ಅವರಿಗೆ, ಅವರ ಜಿಲ್ಲೆ, ಗ್ರಾಮದ ಹೆಸರುಗಳಲ್ಲಿ ಬೋರ್ಡ್‌ಗಳನ್ನು ನೀಡಲಾಗಿದೆ. ತಾವು ತಂಗಿರುವ ಟ್ರ್ಯಾಲಿ ಪಕ್ಕದ ರಸ್ತೆಯ ಬದಿಯಲ್ಲಿ ಇದನ್ನು ನೆಡಲಾಗಿದೆ. ತಾವು ಯಾವ ಜಿಲ್ಲೆಯ, ಎಷ್ಟು ದೂರದ ಗ್ರಾಮದಿಂದ ಬಂದಿದ್ದೇವೆ ಎಂಬುದನ್ನು ನಾಮ ಫಲಕದಲ್ಲಿ ಬರೆದಿರುತ್ತಾರೆ. ಇದನ್ನೂ ಕೂಡ ವಿಳಾಸ ರೀತಿ ಬಳಸಲಾಗುತ್ತಿದೆ.
ಒಂದೊಂದು ಟ್ರ್ಯಾಲಿಗೂ ಟ್ರ್ಯಾಲಿ ಸಂಖ್ಯೆ ನೀಡಲಾಗಿದೆ. ಇದನ್ನೂ ಜಿಲ್ಲೆಗಳ ಆಧಾರದಲ್ಲಿ ನೀಡಲಾಗಿದ್ದು, ಅದರಲ್ಲಿಯೂ ಹಲವು ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಉದಾಹರಣೆಗೆ ಪ್ಲಾಟ್ ನಂಬರ್ 201 ಎಂದಿದ್ದರೇ, ಮತ್ತೊಂದು ಟ್ರ್ಯಾಲಿಗೆ 201ಎ ಎಂದು ನೀಡಲಾಗಿದೆ.
ರೈತ ಹೋರಾಟಕ್ಕೆ ಪಾಳಿಗಳ ರೀತಿಯಲ್ಲಿ ಪ್ರತಿಭಟನಾಕಾರರು ತಮ್ಮ ತಮ್ಮ ಗ್ರಾಮಗಳಿಂದ ಬರುತ್ತಿರುವುದರಿಂದ ಅವರಿಗೆ ತಾವಿರುವ ಸ್ಥಳ ಹೇಗೆ ಸುಲಭವಾಗಿ ದೊರೆಯಬಹುದು ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಇಂತಹ ವ್ಯವಸ್ಥೆ ಮಾಡಲಾಗಿದೆ.
ನಮ್ಮ ತಂಡ ಕೂಡ ಟಿಕ್ರಿ ಬಾರ್ಡರ್‌ನಲ್ಲಿ ಇಳಿದು ರೈತ ಹೋರಾಟಗಾರರ ಸಭೆಗೆ ಹೋಗಲು ಕರೆ ಮಾಡಿದಾಗ ಅವರಿಂದ ನಮಗೆ ಸಿಕ್ಕ ವಿಳಾಸವು ಇದೆ ರೀತಿಯದ್ದು. ಪಿಲ್ಲರ್ 805 ರ ಬಳಿ ಬನ್ನಿ ಅಲ್ಲಿ ನಾವು ನಿಮಗೆ ಸಿಗುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡರಾದ ಸುರೀಂಧರ್ ಸಿಂಗ್ ಹೇಳಿದಾಗ ನಮಗೂ ಒಮ್ಮೆ ಅದ್ಯಾವ ಪಿಲ್ಲರ್ ಎಂಬ ಕುತೂಹಲ ಸಹಜವಾಗಿಯೇ ಮೂಡಿತ್ತು.
ಈಗಾಗಲೇ ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ವನಡುವೆ ನಡೆದ 8ನೇ ಸುತ್ತಿನ ಮಾತುಕಥೆ ಕೂಡ ಮುರಿದು ಬಿದ್ದಿದೆ. ಮುಂದಿನ ಮಾತುಕತೆಗಳನ್ನು ರೈತರು ಬಹಿಷ್ಕರಿಸುವ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ರೈತರ ದೃಢ ನಿರ್ಧಾರ ನೋಡಿದರೇ, ಈ ಪಿಲ್ಲರ್, ಬೋರ್ಡ್ ವಿಳಾಸಗಳು ಒಂದೆರಡು ವರ್ಷಗಳವರೆಗೆ ಶಾಶ್ವತ ವಿಳಾಸಗಳಾಗುವ ಮುನ್ಸುಚನೆಯೇ ಎಂಬ ಅನುಮಾನ ಕಾಡದೇ ಇರದು.
(ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ)