ಅಫ್ಘಾನಿಸ್ತಾನದಲ್ಲಿ ಘರ್ಷಣೆ: ಭಾರತೀಯ ಪತ್ರಕರ್ತ ಡ್ಯಾನಿಷ್‌ ಸಿದ್ದೀಕಿ ಹತ್ಯೆ

ಕಾಬೂಲ್:‌ ಅಫ್ಘಾನಿಸ್ತಾನದ ಕಂದಹಾರ್‌ ನಲ್ಲಿ ಸ್ಪಿನ್‌ ಬೊಲಾಕ್‌ ಜಿಲ್ಲೆಯಲ್ಲಿ ನಡೆದ ನಡೆದ ಘರ್ಷಣೆಯಲ್ಲಿ ಭಾರತೀಯ ರಾಯಿಟರ್ಸ್‌ ಸುದ್ದಿ ಸಂಸ್ಥೆ ಪತ್ರಕರ್ತ ಡ್ಯಾನಿಷ್‌ ಸಿದ್ದೀಕಿಯನ್ನು ಹತ್ಯೆ ಮಾಡಲಾಗಿದೆ. ಅವರು ಅಫ್ಗಾನಿಸ್ತಾನದ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಪ್ರದೇಶಗಳ ಸ್ಥಿತಿಗತಿ ಕುರಿತು ವರದಿ ಮಾಡುವ ಸಂದರ್ಭದಲ್ಲಿ ಹತ್ಯೆ ನಡೆದಿದೆ ಎಂದು ವರದಿಯಾಗಿದೆ.

ಮುಂಬೈ ಮೂಲದ ಡ್ಯಾನಿಷ್‌ ಸಿದ್ದಕಿ ಹತ್ಯೆಯ ಬಗ್ಗೆ ಅಫಘಾನ್ ಸುದ್ದಿ ಚಾನೆಲ್ TOLOnews ವರದಿ ಮಾಡಿದೆ. ಅಫ್ಘಾನಿಸ್ತಾನದ ಭಾರತದ ರಾಯಭಾರಿ ಫರೀದ್ ಮಾಮುಂಡ್ಜೆ ಟ್ವಿಟ್ಟರ್ ನಲ್ಲಿ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

ಇದನ್ನು ಓದಿ: ದಕ್ಷಿಣ ಆಫ್ರಿಕಾದಲ್ಲಿ ಬುಗಿಲೆದ್ದಿದೆ ಹಿಂಸಾಚಾರ: 72 ಭಾರತೀಯರು ಸಾವು

ಕಳೆದ ಹಲವು ದಿನಗಳಿಂದ, ಡ್ಯಾನಿಷ್‌ ಸಿದ್ದಿಕಿ ಅಫ್ಘಾನಿಸ್ತಾನದ ಕಂದಹಾರ್‌ ನಲ್ಲಿ ವರದಿ ಮಾಡುತ್ತಿದ್ದರು. ಅವರು ಕೆಲವು ಕಾರ್ಯಾಚರಣೆಗಳಲ್ಲಿ ಅಫಘಾನ್ ವಿಶೇಷ ಪಡೆಗಳೊಂದಿಗೆ ಸೇರಿಕೊಂಡು ವರದಿ ತಯಾರಿಸುತ್ತಿದ್ದರು ಎಂದು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಅಫ್ಘಾನ್ ವಿಶೇಷ ಪಡೆಗಳು ತಾಲಿಬಾನ್ ದಾಳಿಗೆ ಒಳಗಾದಾಗ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದ ಡ್ಯಾನಿಷ್ ಸಿದ್ದಿಕಿ ಅವರು, 2007 ರಲ್ಲಿ ಜಾಮಿಯಾದ ಎಜೆಕೆ ಸಮೂಹ ಸಂವಹನ ಸಂಶೋಧನಾ ಕೇಂದ್ರದಿಂದ ಸಮೂಹ ಸಂಹವನ ವಿಷಯದಲ್ಲೂ ಪದವಿ ಪಡೆದಿದ್ದರು.

ಟಿವಿ ವಾಹಿನಿಯ ವರದಿಗಾರರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಸಿದ್ದಿಕಿ, ನಂತರ ಛಾಯಾಚಿತ್ರಗ್ರಾಹಕರಾಗಿ ವೃತ್ತಿಯನ್ನು ಬದಲಿಸಿ, 2010ರಲ್ಲಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ’ಇಂಟರ್ನಿ’ಯಾಗಿ ಸೇರಿದ್ದರು. ಅದೇ ಸಂಸ್ಥೆಯ ಸ್ಟಾಫ್‌ ಫೋಟೊಗ್ರಾಫರ್‌ ಆಗಿ ಪುಲಿಟ್ಜರ್‌ ಪ್ರಶಸ್ತಿಗೂ ಭಾಜನರಾಗಿದ್ದರು.

2018 ರಲ್ಲಿ, ಡ್ಯಾನಿಷ್‌ ಸಿದ್ದಿಕಿ ಮತ್ತು ಅವರ ಸಹೋದ್ಯೋಗಿ ಅಡ್ನಾನ್ ಅಬಿಡಿ ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟಿನ ಸಮಸ್ಯೆ ಚಿತ್ರಿಸಿದ್ದಕ್ಕಾಗಿ ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರೆನಿಸಿದ್ದರು. ಪ್ರಪಂಚದಾದ್ಯಂತದ ವ್ಯಾಪಕವಾದ ಹಲವು ಸಮಸ್ಯೆಗಳನ್ನು ವರದಿ ಮಾಡಿದ್ದರು. ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳು, 2020 ರ ದೆಹಲಿ ಗಲಭೆಗಳು, ಕೋವಿಡ್-19 ಸಾಂಕ್ರಾಮಿಕ, 2015 ರಲ್ಲಿ ನೇಪಾಳ ಭೂಕಂಪ, 2016-17ರಲ್ಲಿ ಮೊಸುಲ್ ಕದನ, ಮತ್ತು ಹಾಂಗ್ ಕಾಂಗ್‌ನಲ್ಲಿ ನಡೆದ 2019–2020 ಪ್ರತಿಭಟನೆಗಳನ್ನೂ ತಮ್ಮ ಕ್ಯಾಮೆರಾದಲ್ಲಿ ದಾಖಲಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *