ಶಿವಮೊಗ್ಗ : ಸಿಟಿ ಸೆಂಟರ್ ಮಾಲ್ ಬಳಿ 75ನೇ ಸ್ವಾತಂತ್ರ ಆಚರಣೆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಈ ಭಾವಚಿತ್ರಗಳ ಮಧ್ಯದಲ್ಲಿ ನುಸುಳಿದ್ದ ಸಾವರ್ಕರ್ ಭಾವಚಿತ್ರವನ್ನು ಸಾರ್ವಜನಿಕರು ತೆರವು ಮಾಡಿಸಿದ ಘಟನೆ ನಡೆದಿದೆ.
ಸಾವರ್ಕರ್ ಸ್ವಾತಂತ್ರ ಹೋರಾಟಗಾರರೇ ಅಲ್ಲ, ಅವರ ಭಾವಚಿತ್ರ ಯಾಕೆ ಹಾಕಿದ್ದೀರಿ? ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟು ಬಂದ ಸಾವರ್ಕರ್ ಹೇಗೆ ಸ್ವಾತಂತ್ರ ಹೋರಾಟಗಾರನಾಗಲು ಸಾಧ್ಯ ಎಂದು ಆಕ್ಷೇಪಿಸಿದರು.ಅಲ್ಲದೆ ಸಾವರ್ಕರ್ ಭಾವಚಿತ್ರ ತೆಗೆಯುವಂತೆ ಪ್ರತಿಭಟನೆ ಆರಂಭಿಸಿದರು.
ಸ್ವಾತಂತ್ರಕ್ಕಾಗಿ ಜೀವ ಕೊಟ್ಟವರ ಭಾವಚಿತ್ರ ಹಾಕುವಂತೆ ಸಾರ್ವಜನಿಕರು ಪಟ್ಟು ಹಿಡಿದರು. ಈ ವೇಳೆ ಸಾವರ್ಕರ್ ಭಾವಚಿತ್ರತೆರವುಗೊಳಿಸಿ ಅಬ್ದುಲ್ ಕಲಾಮ್ ಅಝಾದ್ ಅವರ ಭಾವಚಿತ್ರ ಹಾಕುವುದಾಗಿ ಹೇಳಿದ ಮಾಲ್ ಸಿಬ್ಬಂದಿ ಸಮಸ್ಯೆ ಪರಿಹರಿಸಿಕೊಂಡರು.
ಇತ್ತ ಮಾಲ್ ಮುಂಭಾಗ, ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಧರಣಿ ನಡೆಸಿದರು. ಆಕ್ಷೇಪ ವ್ಯಕ್ತಪಡಿಸಿದವರ ಬಂಧನ ಆಗುವವರೆಗೆ ತಾವು ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಶಾಂತಗೊಳಿಸಿದರು.
ಸಿಟಿ ಸೆಂಟರ್ ಮಾಲ್ನಲ್ಲಿ ನಡೆದ ಘಟನೆಯಿಂದ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿಯೇ ಮಾಲ್ನೊಳಗೆ ಮತ್ತು ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.