ಸಂಧ್ಯಾಸೊರಬ
ಬೆಂಗಳೂರು: ಕಳೆದೊಂದು ವಾರದಿಂದ ರಾಜ್ಯರಾಜಕಾರಣದಲ್ಲಿ ಫೋನ್ ಟ್ಯಾಪಿಂಗ್ (ದೂರವಾಣಿ ಕದ್ದಾಲಿಕೆ) ವಿಚಾರ ಮುನ್ನಲೆಗೆ ಬಂದಿದ್ದು, ಆಡಳಿತಾರೂಢ ಕಾಂಗ್ರೆಸ್ ಅನ್ನು ಕಟ್ಟಿಹಾಕೋಕೆ ವಿಪಕ್ಷಗಳು ಇದೀಗ ಫೋನ್ ಕದ್ದಾಲಿಕೆಯ ಆರೋಪವನ್ನು ಅಸ್ತ್ರವನ್ನಾಗಿ ಬಳಸಿಕೊಂಡು ದಾಳಗಳನ್ನು ಉರುಳಿಸುತ್ತಿವೆ. ಈ ಆರೋಪ ಸದ್ಯಕ್ಕೆ ಎನ್ಡಿಎ ಒಕ್ಕೂಟ ಸೇರಿರುವ ಜೆಡಿಎಸ್‌ನ ರಾಜ್ಯಾಧ್ಯಕ್ಷ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯಿಂದ ಆರಂಭವಾಗಿದ್ದರೂ, ಬಿಜೆಪಿಯೇನೂ ಇದರಿಂದ ದೂರ ಉಳಿದಿಲ್ಲ.
ಇತ್ತೀಚೆಗೆ ಷ್ಯಾಡೋ ಸಿಎಂ ಎಂದು ಕರೆಯಲ್ಪಡುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೂಡ ಅದೆಷ್ಟೋ ಮೊತ್ತಕ್ಕೆ ಇಂತಹ ಫೋನ್‌ಗಳೂ ಈಗ ಚೀನಾದಲ್ಲಿ ಲಭ್ಯವಿದೆ ಎಂದಿದ್ದಾರೆ. ಇದೇ ದಾಳವನ್ನಿಟ್ಟುಕೊಂಡು ಬಿಜೆಪಿಯ ಮಾಜಿ ಶಾಸಕರು ವಕ್ತಾರರು ಎಲ್ಲರೂ ಸೇರಿ ಸೀದಾ ಕಾಂಗ್ರೆಸ್‌ನತ್ತ ಬಾಣ ಹೂಡುತ್ತಿದ್ದಾರೆ. ಕುಮಾರಸ್ವಾಮಿ ರಾಜ್ಯಸರ್ಕಾರವೇ ತಮ್ಮ ಫೋನ್ ಟ್ಯಾಪಿಂಗ್ ಮಾಡುತ್ತಿದೆ. ಮನೆಯಲ್ಲಿ ಮಾತನಾಡುವ ವಿಚಾರ ಅದು ಹೇಗೆ ಇವರತ್ತ ಹೋಗುತ್ತಿದೆಯೋ ಗೊತ್ತಾಗುತ್ತಿಲ್ಲ. ತಮ್ಮನ್ನು ಸೇರಿದಂತೆ ತಮ್ಮ ಆಪ್ತರ ಒಟ್ಟು 40 ಮಂದಿಯ ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂದು ಹೇಳಿದ್ದಾರೆ.
ಹಾಗಾದರೆ ಕುಮಾರಸ್ವಾಮಿ ಮಾಡಿರುವ ಈ ಆರೋಪಕ್ಕೆ ಸಾಕ್ಷಿ ಪುರಾವೆ ಇದೆಯಾ ಎಂದು ಗೃಹ ಸಚಿವ ಪರಮೇಶ್ವರ್ ಕೇಳಿದ್ದಾರೆ. ಇದೆಲ್ಲಾ ಸರಿ. ಆದರೆ ಈ “ಫೋನ್ ಟ್ಯಾಪಿಂಗ್ “ ಬೇಕಂತಲೇ ಹರಿಬಿಡಲಾಗಿದೆಯಾ, ಅಥವಾ ವಿಷಯಾಂತರ ಮಾಡಲಿಕ್ಕೆ ಈ ದಾಳವನ್ನ ವಿಪಕ್ಷಗಳು ಉರುಳಿಸಿವೆಯಾ ಗೊತ್ತಿಲ್ಲ. ಆದರೆ ಈ “ಫೋನ್ ಟ್ಯಾಪಿಂಗ್ ಎನ್ನುವ ಗುಮ್ಮಾ “ ಎನ್ನುವುದು ಇಂದು ನಿನ್ನೆಯಿಂದ ರಾಜಕಾರಣದಲ್ಲಿ ಬಳಕೆಯಾಗುತ್ತಿಲ್ಲ. ರಾಜಕಾರಣಿಗಳುಇದನ್ನು ಹೇಳುವುದಕ್ಕೆ ಏಕೆ? ಹಿರಿಯ ಪತ್ರಕರ್ತರೊಬ್ಬರು ಜನಶಕ್ತಿ ಮೀಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ “ಫೋನ್ ಟ್ಯಾಪಿಂಗ್” ಎನ್ನುವ ವಿಚಾರ ಕರ್ನಾಟಕ ರಾಜ್ಯದಲ್ಲಿ ಹೇಗೆ ಯಾವಾಗ ಬಳಕೆಯಾಯಿತು? ಎನ್ನುವ ವಿಶ್ಲೇಷಣಾ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇದು ನಿನ್ನೆ ಮೊನ್ನೆಯದಲ್ಲ, ಸುಮಾರು 40 ವರ್ಷಗಳ ಹಿಂದಿನಿಂದಲೇ ಇದು ಇದೆ. ಮಾಜಿ ಸಿಎಂ ದಿ.ದೇವರಾಜು ಅರಸು ಕಾಲದಿಂದಲೇ ಇಂತಹ ಫೋನ್ ಟ್ಯಾಪಿಂಗ್ ಗುಸುಗುಸು ಕೇಳಿಬಂದಿತ್ತು. ಅಧಿಕೃತವಲ್ಲದಿದ್ದರೂ ಅನಧಿಕೃತವಾಗಿ ಫೋನ್ ಟ್ಯಾಪಿಂಗ್ ಮಾತುಗಳು ಕೇಳಿಬಂದಿದ್ದವು. ಅದು ಮುನ್ನಲೆಗೆ ಬರಲಿಲ್ಲ. ಆಗ ಟೆಲಿಫೋನ್ ಟ್ಯಾಪಿಂಗ್ ಅಷ್ಟು ಸುಲಭವಾಗಿರಲಿಲ್ಲ.ಏಕೆಂದರೆ, ಈಗಿನಷ್ಟೂ ಟೆಕ್ನಾಲಜಿಯೂ ಇರಲಿಲ್ಲ, ಮೊಬೈಲೂ ಇರಲಿಲ್ಲ. ಏನಿದ್ದರೂ ಲ್ಯಾಂಡ್ಲೈನ್ ಫೋನ್. ದಿ.ಎಸ್.ಬಂಗಾರಪ್ಪರ ದೂರವಾಣಿ ಕದ್ದಾಲಿಕೆಯಾಗಿತ್ತು ಎಂದು ಹಿರಿಯರಿಂದ ಕೇಳಿ ಬಂದ ಮಾತುಗಳಿವೆ. ಇದು ಮುನ್ನಲೆಗೆ ಬರಲೇ ಇಲ್ಲ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿಯೂ ದೂರವಾಣಿ ಕದ್ದಾಲಿಕೆ ವಿಚಾರ ಎಷ್ಟರಮಟ್ಟಿಗೆ ಹೋಯಿತೆಂದರೆ, ಅವರು ರಾಜೀನಾಮೆ ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.ಜನತಾಪಕ್ಷದ ಶಾಸಕರಾಗಿದ್ದ ಬೈರೇಗೌಡರು (ಈಗಿನ ಕಂದಾಯ ಸಚಿವ ಕೃಷ್ಣಬೈರೇಗೌಡರ ತಂದೆ) ಸದನದಲ್ಲಿಯೇ ಮಾಜಿ ಸಿಎಂ ವೀರಪ್ಪ ಮೊಯ್ಲಿ ವಿರುದ್ಧ ಫೋನ್ ಟ್ಯಾಪಿಂಗ್ ವಿಚಾರ ಚರ್ಚೆಗೆ ಬಂದಿತ್ತು. ಸದನದಲ್ಲಿ ಸದ್ದು ಮಾಡಿದ್ದೇ ಸರಿ, ಒಂದೆರಡು ದಿನ ವೀರಪ್ಪ ಮೊಯ್ಲಿ ಕಾಣಲಿಲ್ಲ ಅದು ಅಲ್ಲಿಗೇ ಮುಗಿಯಿತು.ನಂತರ ಬಂದಿದ್ದು ದಿ. ಎಸ್.ಬಂಗಾರಪ್ಪ ಸಿಎಂ ಆಗಿದ್ದಾಗ.
ಇದನ್ನೂ ಓದಿ : ಎಸ್ಐಟಿಗೆ ಸುಳಿವಾಗಬಲ್ಲದೆನ್ನುವ ದೇವೇಗೌಡರ ಹುಟ್ಟುಹಬ್ಬಕ್ಕೆ ವಿದೇಶದಿಂದ ಬಂದ ಕರೆಯ ಊಹಾಪೋಹ
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರ ಸಹಪಾಠಿ ಆಗಿದ್ದಂತಹ ಸ್ಯಾಮ್ ಪಿತ್ರೋಡಾ ಅವರನ್ನು ಅಮೆರಿಕಾದಿಂದ ಭಾರತಕ್ಕೆ ತಮ್ಮೊಂದಿಗೆ ಕರೆದುಕೊಂಡು ಬಂದರು. ಸ್ಯಾಮ್ ಪಿತ್ರೋಡಾ ಅವರಿಂದ ರಾಜೀವ್ ಗಾಂಧಿಯಿಂದ ಭಾರತ ದೇಶದಲ್ಲಿ ದೂರಸಂಪರ್ಕ ಕ್ರಾಂತಿಯೇ ಭಾರತದಲ್ಲಿ ಆಯಿತು. ರಾಜೀವ್ ಗಾಂಧಿ ಅವರು ಐಟಿಬಿಟಿಗೆ ಹಾಕಿದ ಬುನಾದಿಯೇ ಈಗ ಮೊಬೈಲ್ ಫೋನ್, ಸ್ಯಾಟ್ಲೈಟ್ ಹೆಚ್ಚಾಗಿ ಬರಲು ಸಾಧ್ಯವಾಯಿತು. ಆ ಸಂದರ್ಭದಲ್ಲಿ ದೂರವಾಣಿ ಸಂಪರ್ಕ (ಲ್ಯಾಂಡ್ಲೈನ್ ಸೌಲಭ್ಯ) ಪಡೆಯಬೇಕು ಎನ್ನುವುದು ಒಂದು ಬಿಡಿಎ ಸೈಟ್ ಪಡೆಯುವಷ್ಟು ಹರಸಾಹಸದ ಕಷ್ಟದ ಕೆಲಸವಾಗಿತ್ತು.
ಒಂದಿಷ್ಟು ಜನ ರೌಡಿಗಳ ಮನೆಯಲ್ಲಿ ಲ್ಯಾಂಡ್ಲೈನ್ ಇತ್ತು. ಅಂಥ ರೌಡಿಗಳ ಮೇಲೆ ನಿಗಾವಹಿಸಲು ಸರ್ಕಾರ ಮತ್ತು ಗೃಹ ಇಲಾಖೆ ಫೋನ್ ಟ್ಯಾಪಿಂಗ್ ಮಾಡಲು ಅದನ್ನು ಬಳಸಿಕೊಂಡಿತ್ತು .ಇದೆಲ್ಲಾ ಗುಪ್ತವಾಗಿತ್ತು ಎನ್ನಲಾಗಿದೆ.ಅದಾದ ಮೇಲೆ ಟೆಲಿಫೋನ್ ಟ್ಯಾಪಿಂಗ್ ಕೇಳಿ ಬರಲಿಲ್ಲ.
ಹೆಚ್.ಡಿ.ಕುಮಾರಸ್ವಾಮಿ ಎರಡನೇ ಬಾರಿ ಸಿಎಂ ಆಗಿದ್ದಾಗ ಸರ್ಕಾರ ಬೀಳುತ್ತದೆ ಎನ್ನುವ ಸನ್ನಿವೇಶದಲ್ಲಿ ಆಪರೇಷನ್ ಕಮಲ ಸುದ್ದಿಯಿದ್ದಾಗ ಆ ಸಂದರ್ಭದಲ್ಲಿ ಹೆಚ್ಡಿಕೆ ಟೆಲಿಫೋನ್ ಟ್ಯಾಪಿಂಗ್ ಮಾಡಿದ್ದರು ಅದು ಕೂಡ ಆದಿ ಚುಂಚನಗಿರಿ ಮಠಾಧೀಶರದ್ದು ಎನ್ನುವ ಸುದ್ದಿ ಹರಿದಾಡಿತ್ತು. ಆ ಸುದ್ದಿ ಎಷ್ಟು ಬೇಗ ಬಂದಿತೋ ಅಷ್ಟೇ ವೇಗವಾಗಿ ಬಿದ್ದುಹೋಯಿತು. ಅಷ್ಟರಲ್ಲಿ ಸರ್ಕಾರವೂ ಬಿದ್ದುಹೋಯಿತು.
ಈಗ ಕುಮಾರಸ್ವಾಮಿ ಟೆಲಿಫೋನ್ ಟ್ಯಾಪಿಂಗ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಅದಕ್ಕೆ ದಾಖಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇನ್ನು ಅಥವಾ ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆಯೋ ಗೊತ್ತಿಲ್ಲ. ಯಾವ ಆಧಾರವನ್ನಿಟ್ಟುಕೊಂಡು ಸಾಕ್ಷಿಯನ್ನಿಟ್ಟುಕೊಂಡು ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆಯೋ ಅಥವಾ ದಾಖಲ ಅವರ ಹತ್ತಿರ ಇದೆಯೋ ಇಲ್ಲವೋ ಗೊತ್ತಿಲ್ಲ. ವಿಷಯಾಂತರ ಆಗಲೀ ಎಂದು ಮಾಡಿದ್ದಾರೆಯೋ ಇನ್ನು ರಾಜಕೀಯ ತಂತ್ರಗಾರಿಕೆಯಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆಯೋ ಗೊತ್ತಿಲ್ಲ. ಎಲ್ಲಿಯೂ ಅವರು ರಿಟರ್ನ್ ಸ್ಟೇಟ್ಮೆಂಟ್ ಕೊಟ್ಟಿಲ್ಲ, ದೂರು ಕೊಟ್ಟಿಲ್ಲ ಫೋನ್ ಕದ್ದಾಲಿಕೆ ಬಗ್ಗೆ ಸಾಕ್ಷಿ ಆಧಾರಗಳೇನು ಎನ್ನುವುದನ್ನು ಬಹಿರಂಗವಾಗಿ ತೋರಿಸಿಲ್ಲ . ಹೀಗಾಗಿ ಇವರ ಈ ಆರೋಪ ನಿರಾಧಾರ ಎನ್ನಬಹುದು.
ಈ ಮೊಬೈಲ್ ಸ್ಯಾಟ್ಲೈಟ್ ಮೂಲಕ ಯೂಸ್ ಆಗುತ್ತಿದೆ. ಇತ್ತೀಚೆಗೆ ಪೆಗಾಸಸ್ ಎಂದು ಕೇಳಿ ಬಂದಿತ್ತು. ಸರ್ಕಾರದವರದ್ದು ಅಥವಾ ವಿಪಕ್ಷಗಳದ್ದು ಫೋನ್ ಕದ್ದಾಲಿಕೆ ಆಗುತ್ತಿದೆ ಎಂದು ಆರೋಪ ಪ್ರತ್ಯಾರೋಪ ಕೇಳಬರುತ್ತಿವೆ. ಪೊಲೀಸ್ ಇಲಾಖೆಯಲ್ಲಿ ಲೋಕೇಷನ್ ಟವರ್ ಟ್ರ್ಯಾಕಿಂಗ್ ಮೊಬೈಲ್ ನಂಬರನ್ನು ಮಾಡಬಹುದು. ಆದರೆ ಈಗ ಫೋನ್ ರಿಕಾರ್ಡಿಂಗ್ ಮಾಡಿ ಯಾರೋ ಮಾತನಾಡಿದ್ದನ್ನು ಕೇಳಿಸಬಹುದು ಸದ್ಯಕ್ಕೆ ಹೇಳಬಹುದೇ ಹೊರತು ಫೋನ್ ಟ್ಯಾಪಿಂಗ್ ಎನ್ನುವುದು ಆರೋಪವಷ್ಟೇ ಆಗಿದೆ. ಇಲ್ಲಿಯವರೆಗೆ ಕೇಳಿಬಂದಿರುವ ರಾಜಕಾರಣಿಗಳ ಈ ಫೋನ್ ಟ್ಯಾಪಿಂಗ್ ವಿಚಾರ ಆರೋಪ ತಾರ್ಕಿಕ ಅಂತ್ಯ ಕಂಡಿದ್ದೇ ಇಲ್ಲ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದಕ್ಕೆ ತನಿಖೆಯೇ ನಡೆಯಬೇಕು ಇಲ್ಲವಾದರೆ ಅದು “ಗಾಳಿಯಲ್ಲಿ ಗುಂಡೇ” ಎಂದು ಹೇಳಿದ್ದಾರೆ.