ಕಲುಷಿತ ನೀರಿನಿಂದ ವ್ಯಕ್ತಿ ಸಾವಿಗೆ ಸರಕಾರದ ವೈಫಲ್ಯವೇ ಕಾರಣ: ಅಶ್ವತ್ಥನಾರಾಯಣ್

ಬೆಂಗಳೂರು: ಸಿದ್ದರಾಮಯ್ಯ ಬಲಗೈ ಬಂಟ ಮರಿಗೌಡರ ಊರಿನಲ್ಲಿ ಕಲುಷಿತ ನೀರು ಸೇವಿಸಿ ಒಬ್ಬರು ಮೃತಪಟ್ಟಿದ್ದಾರೆ. ಕೆ.ಸಾಲುಂಡಿಯಲ್ಲಿ ಈ ದುರ್ಘಟನೆ ನಡೆದಿದೆ. ಪಕ್ಕದ ಊರಿನಲ್ಲಿ ಜನರಿಗೆ ವಾಂತಿ ಭೇದಿ (ಕಾಲರಾ) ಕಾಣಿಸಿಕೊಂಡಿದೆ. ಡಿಎಚ್‍ಒಗೆ ದೂರು ನೀಡಿದ್ದರೂ ಗಮನ ಹರಿಸಿಲ್ಲ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಆರೋಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ರ ಜಿಲ್ಲೆ ಆಗಿದ್ದರೂ, ಪ್ರಭಾವಿ ಸಚಿವ ಮಹದೇವಪ್ಪ ಅವರು ಇದ್ದರೂ ಒಬ್ಬರು ಮೃತಪಟ್ಟಿದ್ದಾರೆ; 37 ಜನರು ಆಸ್ಪತ್ರೆಯಲ್ಲಿರುವುದು ಸರಕಾರದ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ ಎಂದು ಟೀಕಿಸಿದರು. ಜಿಲ್ಲಾಡಳಿತವು ಕುಡಿಯುವ ನೀರಿನ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ಷೇಪಿಸಿದರು.

ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಯ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರನ್ನು ಕುಡಿದು 9 ಜನರು ಮೃತಪಟ್ಟ ಘಟನೆ ನಮ್ಮ ಕಣ್ಮುಂದೆ ಇದೆ. ತನಿಖೆ ಮಾಡಿದಾಗ ಕುಡಿಯುವ ನೀರಿಗೆ ಮನುಷ್ಯನ ಮಲ, ವಿಷಕಾರಿ ಅಂಶಗಳು ಸೇರಿತ್ತು ಎಂದು ತನಿಖೆ, ಡಿಎಚ್‍ಒ ವರದಿಯಿಂದ ತಿಳಿದುಬಂದಿತ್ತು ಎಂದು ನುಡಿದರು.

ಇದನ್ನೂ ಓದಿ: ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್; ಬೆಂಗಳೂರು

ಈ 9 ಜನರ ಸಾವು ನಮ್ಮ ಕಣ್ಮುಂದೆ ಇರುವಾಗಲೇ ಮುಖ್ಯಮಂತ್ರಿಗಳ ಜಿಲ್ಲೆ ಮೈಸೂರಿನಲ್ಲಿ 18ನೇ ವಾರ್ಡಿನಲ್ಲಿ ಕೆ.ಸಾಲುಂಡಿ ಎಂಬಲ್ಲಿ ಕಲುಷಿತ ಚರಂಡಿ ನೀರು ಕುಡಿಯುವ ನೀರಿಗೆ ಸೇರುವ ದೂರು ಇತ್ತು. ಡಿಎಚ್‍ಒ ಗಮನಕ್ಕೆ ತಂದರೂ ಎಚ್ಚತ್ತುಕೊಂಡಿಲ್ಲ. ಒಬ್ಬರು ಮೃತಪಟ್ಟಿದ್ದಾರೆ 73 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 23 ಮಕ್ಕಳು ಸೇರಿ 37 ಜನರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

ನಿನ್ನೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮುಂದೆ ತಮಿಳುನಾಡು ಸರಕಾರ ಹೋಗಿ ಮೇ ತಿಂಗಳ ಕೊನೆಯ ಒಳಗೆ ತಮಗೆ 6.5 ಟಿಎಂಸಿ ನೀರನ್ನು ಬಿಡಲು ಒತ್ತಾಯಿಸಿತ್ತು. ಕಳೆದ ಸಾಲಿನಲ್ಲಿ ಡಿ.ಕೆ.ಶಿವಕುಮಾರ್ ಅವರು ಮೈಮರೆತಂತೆ ಈ ಬಾರಿ ಮೈಮರೆಯಬಾರದು ಎಂದು ಬಿಜೆಪಿ ಒತ್ತಾಯಿಸುವುದಾಗಿ ಹೇಳಿದರು. ಕಳೆದ ಸಾರಿ 3-4 ಬಾರಿ ನೀರು ಬಿಟ್ಟ ಬಳಿಕ ಸರ್ವ ಪಕ್ಷಗಳ ಸಭೆ ಕರೆದಿದ್ದರು ಎಂದು ಟೀಕಿಸಿದರು. ಪ್ರಾಧಿಕಾರದ ಮುಂದೆ ಸ್ಪಷ್ಟ ಅಂಕಿಅಂಶಗಳೊಂದಿಗೆ ವಾದ ಮಂಡಿಸಲು ಆಗ್ರಹಿಸಿದರು.

ಐಸಿಸಿ (ನೀರಾವರಿ ಸಲಹಾ ಸಮಿತಿ) ಸಭೆಯನ್ನು ಜುಲೈ ಬದಲಾಗಿ ಜೂನ್‍ನಲ್ಲೇ ಕರೆದು ಕಾಲುವೆ ಮತ್ತು ರೈತರಿಗೆ ನೀರು ಕೊಡಬೇಕು. ಕಾವೇರಿ ಕೊಳ್ಳ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಅವರು ಒತ್ತಾಯಿಸಿದರು. ಮೇಕೆದಾಟು ಸಂಬಂಧ ಈಗಾಗಲೇ ಸಾಧ್ಯಾಸಾಧ್ಯತೆ ವರದಿ ಕೊಡಲಾಗಿದೆ. ಡಿಪಿಆರ್ ಕೂಡ ಆಗಿದೆ. ಬಿಜೆಪಿ ಸರಕಾರ 1 ಸಾವಿರ ಕೋಟಿ ಹಣ ಮೀಸಲಿಟ್ಟಿತ್ತು. ನನ್ನ ನೀರು ನನ್ನ ಹಕ್ಕು ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ಸಿಗರು, ಕೇಂದ್ರದ ಮೇಲೆ ಗೂಬೆ ಕೂರಿಸದೆ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ವಕ್ತಾರ ಹೆಚ್.ಎನ್. ಚಂದ್ರಶೇಖರ್ ಅವರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ಪ್ರಜ್ವಲ್ ರೇವಣ್ಣ ಲೈಂಗಿಕ ಹತ್ಯಾಕಾಂಡ ಗೊತ್ತಿದ್ದು ಬಿಜೆಪಿ ಯಾಕೆ ಟಿಕೆಟ್ ನೀಡಿತು? ವಿಡಿಯೋ ಹಂಚಿದವರಿಗೂ ಶಿಕ್ಷೆಯಾಗಲಿ

Donate Janashakthi Media

Leave a Reply

Your email address will not be published. Required fields are marked *