ಚೆನ್ನೈ: ತಮಿಳುನಾಡಿನ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿಯೊಬ್ಬರು ರಾಜ್ಯಪಾಲ ಆರ್.ಎನ್. ರವಿ ಅವರಿಂದ ಪದವಿ ಸ್ವೀಕರಿಸಲು ನಿರಾಕರಿಸಿದ ಘಟನೆ ನಡೆದಿದೆ. ರಾಜ್ಯಪಾಲರು ‘ತಮಿಳುನಾಡು ಹಿತಾಸಕ್ತಿಗೆ ವಿರುಧ್ದವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಉಪಕುಲಪತಿಗಳಿಂದ ತಮ್ಮ ಪದವಿಯನ್ನು ಪಡೆದರು.
ತಿರುನಲ್ವೇಲಿಯ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ ಜೀನ್ ಜೋಸೆಫ್ ಎಂಬ ಪಿಎಚ್‌ಡಿ ವಿದ್ಯಾರ್ಥಿನಿ ರಾಜ್ಯಪಾಲರಿಂದ ಪದವಿ ಪಡೆಯಲು ನಿರಾಕರಿಸಿದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ರಾಜ್ಯಪಾಲರಿಂದ ಪ್ರಮಾಣ ಪತ್ರ ಸ್ವೀಕರಿಸಲು ನಿರಾಕರಿಸಿದ ಬಳಿಕ ವಿಶ್ವವಿದ್ಯಾಲಯದ ಉಪಕುಲಪತಿ ಎಂ ಚಂದ್ರಶೇಖರ್ ಅವರಿಂದ ಪದವಿ ಪಡೆದಿರುವುದಾಗಿ ವರದಿ ತಿಳಿಸಿದೆ. ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಫಿಡೆಲ್ ನಿನ್ನ ಹೆಸರದು ಸಿಡಿಲ್ ಸದ್ದು ಸಾಮ್ರಾಜ್ಯಕ್ಕೆ …
ಈ ಬೆಳವಣಿಗೆಯ ಬಳಿಕ ಮಾತನಾಡಿರುವ ಪಿಎಚ್‌ಡಿ ವಿದ್ಯಾರ್ಥಿನಿ ಜೀನ್ ಜೋಸೆಫ್, “ರಾಜ್ಯಪಾಲ ಆರ್ ಎನ್ ರವಿ ತಮಿಳರು ಮತ್ತು ತಮಿಳುನಾಡು ವಿರೋಧಿ. ಹಾಗಾಗಿ, ಅವರ ಕೈಯಿಂದ ಪದವಿ ಪ್ರಮಾಣಪತ್ರ ಸ್ವೀಕರಿಸದಿರಲು ಮೊದಲೇ ನಿರ್ಧರಿಸಿದ್ದೆ. ಹಾಗಾಗಿ, ಅವರ ಎದುರಲ್ಲೇ ನನ್ನ ಪ್ರತಿಭಟನೆ ದಾಖಲಿಸಿ, ನಮ್ಮದೇ ವಿವಿಯ ಉಪಕುಲಪತಿ ಎಂ ಚಂದ್ರಶೇಖರ್ ಅವರಿಂದ ಪದವಿ ಪ್ರಮಾಣ ಪತ್ರ ಪಡೆದಿದ್ದೇನೆ” ಎಂದು ತಿಳಿಸಿದ್ದಾರೆ.
ಪಿಎಚ್‌ಡಿ ವಿದ್ಯಾರ್ಥಿನಿ ಜೀನ್ ಜೋಸೆಫ್ ಡಿಎಂಕೆ ನಾಗರಕೋಯಿಲ್ ಕಾರ್ಪೊರೇಷನ್ ಉಪ ಕಾರ್ಯದರ್ಶಿ ಎಂ ರಾಜನ್ ಅವರ ಪತ್ನಿ ಎಂದು ತಿಳಿದುಬಂದಿದ್ದು, ಘಟಿಕೋತ್ಸವ ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರನ್ನು ನಿರ್ಲಕ್ಷ್ಯಿಸಲು ಮೊದಲೇ ಯೋಜಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ವಿದ್ಯಾರ್ಥಿನಿ ಜೀನ್ ಜೋಸೆಫ್ ಅವರು ರಾಜ್ಯಪಾಲರನ್ನು ನಿರ್ಲಕ್ಷ್ಯಿಸಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ತಿರುನಲ್ವೇಲಿಯಲ್ಲಿ ನಡೆದ ಈ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಗೋವಿ ಚೆಝಿಯಾನ್ ಕೂಡ ಭಾಗವಹಿಸಿರಲಿಲ್ಲ. ‘ಆಡಳಿತಾತ್ಮಕ ಬದ್ಧತೆಗಳ’ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ ಎಂದು ಉಪಕುಲಪತಿ ಎನ್ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ರಾಜ್ಯಪಾಲ- ತಮಿಳುನಾಡು ಸರ್ಕಾರದ ನಡುವಿನ ಸಂಘರ್ಷ
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮತ್ತು ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಡಿಎಂಕೆ ಸರ್ಕಾರದ ನಡುವಿನ ಸಂಘರ್ಷವು ಹಲವಾರು ಕಾರಣಗಳಿಂದಾಗಿ ದೇಶದ ಗಮನ ಸೆಳೆದಿದೆ.
ರಾಜ್ಯಪಾಲ ಆರ್.ಎನ್. ರವಿ ಮಧುರೈನ ಒಂದು ಎಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ‘ಕಂಬ ರಾಮಾಯಣಂ’ ಕವಿಯ ಗೌರವಕ್ಕಾಗಿ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಕೇಳಿಕೊಂಡಿದ್ದರು. ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೂ ಕಾರಣವಾಗಿತ್ತು. ಡಿಎಂಕೆ, ಕಾಂಗ್ರೆಸ್, ಮತ್ತು ಇತರ ಪ್ರತಿಪಕ್ಷಗಳು ಇದನ್ನು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವೆಂದು ಟೀಕಿಸಿದ್ದವು. ರವಿ ಅವರನ್ನು ಗವರ್ನರ್ ಹುದ್ದೆಯಿಂದ ತೆಗೆದುಹಾಕುವಂತೆಯೂ ಆಗ್ರಹಿಸಿದ್ದರು.
ತಮಿಳುನಾಡು ವಿಧಾನಸಭೆಯ ಅಧಿವೇಶನದಲ್ಲಿ ರಾಷ್ಟ್ರಗೀತೆಯನ್ನು ಆರಂಭದಲ್ಲಿ ಮತ್ತು ಕೊನೆಯಲ್ಲಿ ಹಾಡಬೇಕೆಂದು ರವಿ ಸಲಹೆ ನೀಡಿದ್ದರು. ಆದರೆ, ಸರ್ಕಾರವು ಈ ಸಲಹೆಯನ್ನು ತಿರಸ್ಕರಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ರವಿ ಸಾಂಪ್ರದಾಯಿಕ ಭಾಷಣವನ್ನು ಓದದೆ ಸದನದಿಂದ ಹೊರನಡೆಯುವ ಮೂಲಕ ಸುದ್ದಿಯಾಗಿದ್ದರು.
ಇದನ್ನೂ ನೋಡಿ: Karnataka Legislative Assembly Live – Day 02 – ವಿಧಾನಸಭೆಯ ಮುಂಗಾರು ಅಧಿವೇಶನದ ನೇರ ಪ್ರಸಾರ – ದಿನ 2
