ಬಲಪಂಥೀಯ ಪಿಎಫ್ಐ ಸಂಘಟನೆಯನ್ನು ಐದು ವರ್ಷಗಳ ಅವಧಿಗೆ ನಿಷೇಧಿಸಲಾಗಿದೆ
ಕೇರಳ: ಕಾಲೇಜು ಪ್ರಾಧ್ಯಾಪಕರೊಬ್ಬರ ಕೈ ಕತ್ತರಿಸಿದ 2010ರ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಮೂವರು ಸದಸ್ಯರಿಗೆ ಕೊಚ್ಚಿಯ ವಿಶೇಷ ಎನ್ಐಎ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಇಡುಕ್ಕಿ ಜಿಲ್ಲೆಯ ತೊಡುಪುಳದ ನ್ಯೂಮನ್ ಕಾಲೇಜಿನ ಪ್ರಾಧ್ಯಾಪಕ ಟಿ.ಜೆ. ಜೋಸೆಫ್ ಅವರ ಬಲಗೈಯನ್ನು ಆರೋಪಿತ PFI ಕಾರ್ಯಕರ್ತರು ಕತ್ತರಿಸಿದ್ದರು.
ಎರಡನೇ ಹಂತದ ವಿಚಾರಣೆಯ ನಂತರ, ವಿಶೇಷ ಎನ್ಐಎ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಕೆ. ಭಾಸ್ಕರ್ ಅವರು ಸಜಿಲ್, ನಾಸರ್ ಮತ್ತು ನಜೀಬ್ಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಕಟ್ಟುನಿಟ್ಟಾದ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ), ಭಾರತೀಯ ದಂಡ ಸಂಹಿತೆ ಮತ್ತು ಸ್ಫೋಟಕ ವಸ್ತುಗಳ ಕಾಯಿದೆಯಡಿಯಲ್ಲಿ ಮೂವರು ತಪ್ಪಿತಸ್ಥರೆಂದು ತೀರ್ಪು ನೀಡಲಾಗಿತ್ತು.
ಪ್ರಕರಣದ ಮೊದಲ ಹಂತದ ವಿಚಾರಣೆಯಲ್ಲಿ, ಯುಎಪಿಎ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ 10 ವ್ಯಕ್ತಿಗಳನ್ನು ಅಪರಾಧಿಗಳೆಂದು ಘೋಷಿಸಲಾಗಿತ್ತು. ಇದೇ ವೇಳೆ ಇತರ ಮೂವರು ಅಪರಾಧಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ ತಪ್ಪಿತಸ್ಥರೆಂದು ತೀರ್ಪು ನೀಡಲಾಗಿತ್ತು ಹಾಗೂ 18 ಮಂದಿಯನ್ನು ಪ್ರಕರಣದಿಂದ ವಜಾ ಮಾಡಲಾಗಿತ್ತು.
ಇದನ್ನೂ ಓದಿ: ಕೇರಳ | ಪ್ರೊಫೆಸರ್ ಕೈ ಕತ್ತರಿಸಿದ ಪ್ರಕರಣ – 6 ಮಂದಿ ಪಿಎಫ್ಐ ಸದಸ್ಯರು ತಪ್ಪಿತಸ್ಥರೆಂದ ನ್ಯಾಯಾಲಯ
ಮೂವರನ್ನು ಅಪರಾಧಿಗಳೆಂದು ಘೋಷಿಸುವ ಸಂದರ್ಭದಲ್ಲಿ, ಎರಡನೇ ಆರೋಪಿ ಸಜಿಲ್ ದಾಳಿಯಲ್ಲಿ ಭಾಗವಹಿಸಿದ್ದರೆ, ಪ್ರಕರಣದ ಪ್ರಮುಖ ಸಂಚುಕೋರನಾಗಿದ್ದ ಮೂರನೇ ಆರೋಪಿ ನಾಸರ್ ಮತ್ತು ಐದನೇ ಆರೋಪಿ ನಜೀಬ್ “ಭಯೋತ್ಪಾದಕ ಕೃತ್ಯ” ವನ್ನು ಯೋಜಿಸಿದ್ದರು ಆದರೆ ಅದನ್ನು ಭಾಗವಹಿಸಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಒಟ್ಟು 54 ವ್ಯಕ್ತಿಗಳ ಪೈಕಿ 37 ಮಂದಿಯ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಇದರಲ್ಲಿ 31 ಮಂದಿ ವಿಚಾರಣೆಗೆ ಒಳಪಟ್ಟಿದ್ದಾರೆ.
ರಾಜ್ಯದ ಎರ್ನಾಕುಲಂ ಜಿಲ್ಲೆಯ ಮುವಾಟ್ಟುಪುಳದ ಚರ್ಚ್ನಲ್ಲಿ ಭಾನುವಾರದ ಸಾಮೂಹಿಕ ಪೂಜೆ ಮುಗಿಸಿ ಕುಟುಂಬ ಸಮೇತ ಮನೆಗೆ ಹಿಂದಿರುಗುತ್ತಿದ್ದಾಗ ಈ ದಾಳಿ ನಡೆದಿತ್ತು. ಇದರ ನಂತರ ಕೊಚ್ಚಿಯ ಆಸ್ಪತ್ರೆಯಲ್ಲಿ ಜೋಸೆಫ್ ಅವರ ಅಂಗೈಗೆ ಹೊಲಿಗೆ ಹಾಕಲಾಯಿತ್ತು. ಏಳು ಜನರ ದಾಳಿಕೋರರ ಗುಂಪು ಪ್ರೊಫೆಸರ್ ಅವರನ್ನು ವಾಹನದಿಂದ ಹೊರಗೆಳೆದು, ಅವರ ಮೇಲೆ ಹಲ್ಲೆ ನಡೆಸಿ ಬಲಗೈಯನ್ನು ಕತ್ತರಿಸಿದ್ದರು. ಕೈ ಕತ್ತರಿಸಿದ ಪ್ರಮುಖ ಆರೋಪಿ ಸವಾದ್ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳು ನ್ಯೂಮನ್ ಕಾಲೇಜಿನಲ್ಲಿ ಬಿಕಾಂ ಸೆಮಿಸ್ಟರ್ ಪರೀಕ್ಷೆಗೆ ಸಿದ್ಧಪಡಿಸಿದ ಪ್ರಶ್ನೆ ಪತ್ರಿಕೆಯಲ್ಲಿ ಧಾರ್ಮಿಕ ಅವಹೇಳನಕಾರಿ ಹೇಳಿಕೆಗಳಿಗಾಗಿ ಜೋಸೆಫ್ ಅವರನ್ನು ಕೊಲ್ಲಲು ಬಯಸಿದ್ದರು ಎಂದು ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೇಳಿದ್ದರು. ಪಿಎಫ್ಐ ಸಂಘಟನೆಯನ್ನು ಒಕ್ಕೂಟ ಸರ್ಕಾರ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ.
ಇದನ್ನೂ ಓದಿ: ಪಿಎಫ್ಐ ಮಾಡೆಲ್ ಹೋರಾಟ ಮತ್ತು ಫ್ಯಾಸಿಸ್ಟ್ ಆಡಳಿತದಲ್ಲಿ ಮುಸ್ಲಿಮ್ ಸಮುದಾಯ ಇಡಬೇಕಾದ ಎಚ್ಚರಿಕೆಯ ಹೆಜ್ಜೆಗಳು