ಬೆಂಗಳೂರು: ಪೆಟ್ರೋಲ್ ಬಂಕ್ ಮಾಲೀಕರು ಮೇ 31ರಂದು ತೈಲ ಖರೀದಿ ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದ್ದು, ಅವಶ್ಯಕತೆಗೆ ಅನುಗುಣವಾಗಿ ತೈಲ ಪೂರೈಕೆ ಮಾಡದ ಕಾರಣ ಪೆಟ್ರೋಲ್ ಬಂಕ್ಗಳು ಕಾರ್ಯನಿರ್ವಹಿಸುವುದಿಲ್ಲ.
ಕೇಂದ್ರ ಸರ್ಕಾರವು ಎರಡು ಬಾರಿ ತೆರಿಗೆ ಕಡಿತಗೊಳಿಸಿದೆ. ಆದರೆ ಪ್ರತಿ ಬಾರಿ ತೈಲ ಖರೀದಿಗೆ ಸಂಬಂಧಿಸಿ ಹೆಚ್ಚುವರಿಯಾಗಿ ಪಾವತಿ ಮಾಡಲಾಗಿದ್ದ ತೆರಿಗೆ ಹಣವನ್ನು ಮರುಪಾವತಿ ಮಾಡಿಲ್ಲ. ಹೀಗಾಗಿ ಪ್ರತಿ ಡೀಲರುಗಳಿಗೆ ಕನಿಷ್ಠ 7 ರಿಂದ 8 ಲಕ್ಷ ನಷ್ಟವಾಗಿದೆ. ಬೇಡಿಕೆಗೆ ತಕ್ಕಂತೆ ಪೆಟ್ರೋಲ್, ಡಿಸೇಲ್ ಪೂರೈಕೆ ಮಾಡದ ಬಿಪಿಸಿಎಲ್ ಮತ್ತು ಹೆಚ್ಪಿಸಿಎಲ್ ಕಂಪನಿಗಳು ಅಗತ್ಯಕ್ಕೆ ಅನುಗುಣವಾಗಿ ತೈಲ ಪೂರೈಕೆ ಮಾಡುವಂತೆಯೂ ಬೇಡಿಕೆಗಳಲ್ಲಿ ಒಳಗೊಂಡಿದೆ ಎಂದು ತಿಳಿಸಲಾಗಿದೆ.
ಇದನ್ನು ಓದಿ: ಕೇರಳ, ಒಡಿಶಾ, ರಾಜಸ್ಥಾನ ರಾಜ್ಯದಿಂದಲೂ ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಕಡಿತ
ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಪೆಟ್ರೋಲ್ ಬಂಕ್ ಮಾಲೀಕರು ಮುಂದಾಗಿದ್ದು, ತೈಲ ಖರೀದಿ ಮಾಡುವುದಿಲ್ಲ. ಇದರಿಂದ ನಾಳೆ ಪೆಟ್ರೋಲ್ ಡಿಸೇಲ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಆದರೆ ಈ ಮುಷ್ಕರದಿಂದ ವಾಹನ ಸವಾರರಿಗೆ ಬಹುತೇಕ ಸಮಸ್ಯೆ ಆಗೋದಿಲ್ಲ ಎನ್ನಲಾಗುತ್ತಿದೆ.
ಅಂದರೆ, ಈಗಾಗಲೇ ಪೆಟ್ರೋಲ್ ಬಂಕ್ನಲ್ಲಿ ಇರುವಷ್ಟು ಪೆಟ್ರೋಲ್, ಡಿಸೇಲ್ ಮಾತ್ರ ಪೂರೈಕೆ ಮಾಡಲಾಗುತ್ತದೆ. ಅವುಗಳು ಖಾಲಿಯಾದಲ್ಲಿ ಪೆಟ್ರೋಲ್, ಡೀಸೆಲ್ ಖರೀಸದ ಹಿನ್ನೆಲೆಯಲ್ಲಿ ಮತ್ತೆ ಪೂರೈಕೆಯಾಗುವವರೆಗೂ ಬಂಕ್ಗಳು ಖಾಲಿಯಿರಲಿವೆ.
ಈ ಹಿಂದೆ ತೈಲ ಶೇಖರಿಸಿಕೊಂಡು ವ್ಯಾಪಾರವಾದ ನಂತರ ಮರುದಿನ ಹಣ ಪಾವತಿಸುವ ವ್ಯವಸ್ಥೆ ಇತ್ತು. ಈಗ ಮೊದಲೇ ಮುಂಗಡವಾಗಿ ಹಣ ನೀಡಿ ಖರೀದಿ ಮಾಡಬೇಕಿದೆ. ಬ್ಯಾಂಕ್ ವಹಿವಾಟು ನಿಧಾನವಾದರೆ ವಿತರಕರು ತೊಂದರೆಗೆ ಸಿಲುಕುತ್ತಿದ್ದಾರೆ. ಸಾಲದ ರೂಪದಲ್ಲಿ ಹಣ ತಂದರೂ ಬೇಡಿಕೆಗೆ ತಕ್ಕಷ್ಟು ತೈಲ ಪೂರೈಕೆಯಾಗುತ್ತಿಲ್ಲ. ಎಂದು ಪೆಟ್ರೋಲ್ ಬಂಕ್ ಮಾಲೀಕರ ಹೇಳಿದ್ದಾರೆ.
ಇದನ್ನು ಓದಿ: ಪೆಟ್ರೋಲ್-ಡೀಸೆಲ್ ಬೆಲೆ ನಿಯಂತ್ರಣಕ್ಕೆ ಚುನಾವಣೆ ಪರಿಹಾರ: ಪ್ರಿಯಾಂಕಾ ಚತುರ್ವೇದಿ
2017ಕ್ಕೆ ಹೋಲಿಸಿದರೆ ಈಗೀನ ತೈಲ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಪೆಟ್ರೋಲ್ ಬಂಕ್ಗಳಿಗೆ ನೀಡಲಾಗುವ ಕಮೀಷನ್ ಮಾತ್ರ ಹೆಚ್ಚಳ ಮಾಡಿಲ್ಲ. ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಮಾಡಿದ ಮನವಿಗೂ ಸ್ಪಂದನೆ ಸಿಕ್ಕಿಲ್ಲ. ಬಂಕ್ ಸಿಬ್ಬಂದಿಗಳ ವೇತನ ಪ್ರತಿವರ್ಷ ಪರಿಷ್ಕರಣೆ ಆಗಬೇಕು. ಮೂಲ ಸೌಕರ್ಯ ಸೇರಿದಂತೆ ಇತರ ಖರ್ಚುಗಳಿಂದ ನಿರ್ವಹಣಾ ವೆಚ್ಚ ಅಧಿಕವಾಗುತ್ತಿದೆ ಅದ್ದರಿಂದ ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ.
ಪ್ರತಿ ಬಂಕ್ನಲ್ಲಿ ಎರಡರಿಂದ ಮೂರು ದಿನಕ್ಕೆ ಆಗುವಷ್ಟು ತೈಲ ಸಂಗ್ರಹ ಇರುತ್ತದೆ. ಹಾಗಾಗಿ ನಾಳಿನ ಒಂದು ದಿನದ ಮುಷ್ಕರದಿಂದ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ತಿಳಿಸಿದ್ದಾರೆ. ತೈಲ ಕಂಪನಿಗಳು ಮುಂಗಡವಾಗಿ ಕಟ್ಟಿದ ತೆರಿಗೆ ಹಣವನ್ನು ಮರುಪಾವತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ: ಜನರ ಆಕ್ರೋಶಕ್ಕೆ ಮಣಿದ ಕೇಂದ್ರ: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ
ಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟದ ಉಪಾಧ್ಯಕ್ಷ ಎ. ತಾರಾನಾಥ್ ಮಾತನಾಡಿ, “ಸಾರಿಗೆ ಸಂಸ್ಥೆಗಳು ಖರೀದಿ ಮಾಡಿದ ಡೀಸೆಲ್ಗೆ ಶುಲ್ಕವನ್ನು ಪಾವತಿ ಮಾಡದೆ ಕಂಪನಿಗಳನ್ನು ನಷ್ಟಕ್ಕೆ ದೂಡುತ್ತಿವೆ. ಅದರ ಪರಿಣಾಮ ಸಾಮಾನ್ಯ ವಿತರಕನ ಮೇಲೆ ಹೇರಲಾಗುತ್ತಿದೆ. ಬೇಡಿಕೆಗೆ ತಕ್ಕಷ್ಟು ಪೆಟ್ರೋಲ್, ಡೀಸೆಲ್ ಪೂರೈಕೆಯಾಗುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡಿದ್ದು, ಶೆಲ್, ನಾಯರಾ ಖಾಸಗಿ ಪೆಟ್ರೋಲಿಯಂ ಕಂಪನಿಗಳೂ ಸಹ ಮುಷ್ಕರದಲ್ಲಿ ಭಾಗಿಯಾಗಲಿವೆ. ಇದ್ದಷ್ಟು ಪ್ರಮಾಣದಲ್ಲಿ ಮಾತ್ರ ತೈಲ ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.