ಬೆಂಗಳೂರು: ಎಲ್ಲಾ ಜೀವನಾವಶ್ಯಕ ವಸ್ತುಗಳ ಬೆಲೆ ಪ್ರತಿದಿನ ಗನನಕ್ಕೆ ಏರುತ್ತಿರುವ ಈ ಹೊತ್ತಿನಲ್ಲಿ ದಿನನಿತ್ಯ ಬಳಸಲಾಗುತ್ತಿರುವ ವಸ್ತುಗಳ ಬೆಲೆ `100 ಆಸುಪಾಸಿನಲ್ಲಿದೆ. ಪೆಟ್ರೋಲ್ ಬೆಲೆಯೂ ಸಹ ಇದೇ ಮಟ್ಟದಲ್ಲಿ ಆಸುಪಾಸಿನಲ್ಲಿದ್ದು, ಈಗ ಮತ್ತೆ ನೂರು ರೂಪಾಯಿ ಬೆಲೆ ಸುದ್ದಿ ಮಾಡುತ್ತಿರುವುದು ಟೊಮೋಟೋ.
ಈರುಳ್ಳಿ, ಪೆಟ್ರೋಲ್ ನಂತರದ ಸ್ಥಾನವನ್ನು ಟೊಮೋಟೊ ಆಕ್ರಮಿಸಿಕೊಂಡಿದೆ. ಈಗ ಬೆಂಗಳೂರಿನಲ್ಲಿ 1 ಕೆಜಿ ಟೊಮೋಟೊ ಬೆಲೆ `100 ಆಗಿದೆ.
ಬೆಂಗಳೂರಿನ ಕೆಲವು ಭಾಗಗಳಲ್ಲಿ, ಉತ್ತಮ ಗುಣಮಟ್ಟದ ಟೊಮೋಟೊಗಳು `100 ಗೆ ಮಾರಾಟ ಮಾಡಲಾಗುತ್ತದೆ. ಕಳೆದ ಕೆಲವು ವಾರಗಳಿಂದ ಟೊಮೆಟೊ ಬೆಲೆ ಏರುಗತಿಯಲ್ಲಿದೆ, ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕಿಲೋ ಬೆಲೆ 98-100 ರೂ. ಮತ್ತು ಹಾಪ್ಕಾಮ್ಸ್ ಮಳಿಗೆಗಳಲ್ಲಿ 93 ರೂ. ಆಗಿದೆ.
ಇದನ್ನು ಓದಿ: ಮಣ್ಣಿನಿಂದ ಹಬ್ಬದ ಅಡುಗೆ ಮಾಡಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ಹೊರಹಾಕಿದ ಮಹಿಳೆಯರು
ಕಳೆದ ಹಲವು ದಿನಗಳಿಂದ ಅಧಿಕ ಪ್ರಮಾಣದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಟೊಮೋಟೊ ಬೆಲೆಗಳು ಗಗನಕ್ಕೇರಿದೆ. ರಾಜ್ಯದ ಹಲವು ಭಾಗಗಳಲ್ಲಿ ಬೆಳೆದಿದ್ದ ಟೊಮೋಟೊ ಮಳೆಯಿಂದಾಗಿ ನಾಶವಾಗಿದೆ, ಇದರ ಜೊತೆಗೆ ಟೊಮೋಟೊ ಗುಣಮಟ್ಟ ಕೂಡ ಹಾಳಾಗಿದೆ. ಹೆಚ್ಚು ಬೆಲೆ ಕೊಟ್ಟು ಖರೀದಿಸಿದರೂ ಟೊಮೋಟೋ ಒಳಗೆ ಕೊಳೆತು ಹುಳುಗಳು ಇರುವುದು ಕಂಡುಬಂದಿದೆ.
ಅಗತ್ಯ ಅಡುಗೆ ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಹಣಕಾಸು ನಿರ್ವವಣೆಯಲ್ಲಿ ಸಾಕಷ್ಟು ಏರುಪೇರಾಗಿದೆ. ಟೊಮೋಟೊ ಮಾತ್ರವಲ್ಲದೇ, ಎಲ್ಲ ವಸ್ತುಗಳ ಬೆಲೆಯೂ ಜಾಸ್ತಿಯಾಗುತ್ತಿದ್ದು, ಜೀವನ ಸಾಗಿಸುವುದೇ ದುಸ್ತರವಾಗಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಅಧಿಕ ಮಳೆ ಸುರಿದ ಪರಿಣಾಮವಾಗಿ ತಿಪಟೂರು, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಟೊಮೋಟೊ ಬೆಳೆ ಹಾನಿಯಾಗಿದೆ. ಕೋಲಾರದ ಭಾಗಗಳಲ್ಲಿ ಕೆಲ ಪ್ರದೇಶಗಳಲ್ಲಿ ಮಾತ್ರ ಬೆಳೆ ಉಳಿದುಕೊಂಡಿದೆ.
ಬೆಲೆ ಏರಿಕೆಯು ಕೇವಲ ಕೆಲವೇ ವಸ್ತುಗಳಿಗೆ ಮಾತ್ರ ಸೀಮಿತವಾಗದೆ, ಕಳೆದ ವರ್ಷ, ಮೊದಲ ಲಾಕ್ಡೌನ್ಗೆ ಮೊದಲು, ಅಡುಗೆ ಎಣ್ಣೆಯ ಬೆಲೆ 15 ಲೀಟರ್ಗೆ 1,300 ರೂ ಇತ್ತು. ಈಗ 2,500 ರೂ ಆಗಿದೆ. ಹಲವು ಸೊಪ್ಪು-ತರಕಾರಿಗಳು, ಬೇಳೆಕಾಳುಗಳ ಬೆಲೆಗಳು ಸಹ `50 ರಿಂದ `80-90ರ ಆಸುಪಾಸಿನಲ್ಲಿದೆ. ಎಲ್ಪಿಜಿ ಸಿಲಿಂಡರ್ ಬೆಲೆಯೂ ಸಹ ಏರಿಕೆ ಕಂಡಿದೆ. ಗೃಹ ಬಳಕೆ ಸಿಲಿಂಡರ್ ದರ `1000 ಸಮೀಪದಲ್ಲಿದ್ದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ದರ `2000 ಮೇಲ್ಪಟ್ಟಿದೆ. ಬೆಲೆ ಏರಿಕೆಯ ಬಿಸಿಯಿಂದಾಗಿ ಜನರು ಹೈರಾಣಾಗಿದ್ದಾರೆ.
ರೆಸ್ಟೋರೆಂಟ್ಗಳಲ್ಲಿ ತಿಂಡಿ ಪದಾರ್ಥಗಳ ಬೆಲೆಗಳನ್ನು ಏರಿಕೆ ಮಾಡಲು ಹೋಟೆಲ್ ಮಾಲೀಕರ ಸಂಘವು ತೀರ್ಮಾನಿಸಿದೆ. ಈಗಾಗಲೇ ಹೆಚ್ಚಿನವರು ಶೇಕಡಾ 5-15 ರಷ್ಟು ದರವನ್ನು ಹೆಚ್ಚಿಸಿದ್ದಾರೆ.
ಹೀಗಿದೆ ತರಕಾರಿ ದರ
- ಮೆಣಸಿನಕಾಯಿ – ರೂ.130
- ಉದ್ದ ಬದನೆಕಾಯಿ – ರೂ.92
- ಬೆಂಡೆಕಾಯಿ – ರೂ.76
- ಮೂಲಂಗಿ – ರೂ.62
- ಟೊಮ್ಯಾಟೋ – ರೂ.93
- ನುಗ್ಗೇ ಕಾಯಿ – ರೂ.234
- ದೋಣಿ ಮೆಣಸಿನಕಾಯಿ – ರೂ.130
- ಹೀರೇಕಾಯಿ – ರೂ.90
- ಹೂಕೋಸು – ಒಂದಕ್ಕೆ 54 ರೂ
ಹೀಗಿದೆ ಸೊಪ್ಪಿನ ಬೆಲೆ
- ಹರಿವೆ ಸೊಪ್ಪು – 1 ಕೆಜಿಗೆ ರೂ.72
- ಮೆಂತ್ಯ – ರೂ.135
- ಪಾಲಕ್ – ರೂ.100
- ದಂಟಿನ ಸೊಪ್ಪು – ರೂ.72
- ಸಬ್ಬಸಿಗೆ – ರೂ.80
- ಪಾಲಕ್ – ರೂ.100
- ನಾಟಿ ಕೊತ್ತಂಬರಿ – ರೂ.88