ಪೆಟ್ರೋಲ್‌, ಡೀಸೆಲ್ ಬೆಲೆ: ಐದು ರಾಜ್ಯಗಳ ಚುನಾವಣೆ ಮುಗಿಯುವ ವರೆಗೂ ಬಚಾವ್?

ಸಿ. ಸಿದ್ದಯ್ಯ
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಗಳಲ್ಲಿ ಭಾರೀ ಹೆಚ್ಚಳ ಆಗಲಿದೆಯೇ? ಅಥವ  ಐದು ರಾಜ್ಯಗಳ ಚುನಾವಣೆ ಮುಗಿಯುವ ವರೆಗೂ ತಾತ್ಕಾಲಿಕವಾಗಿ ಜನಗಳು ಬಚಾವ್ ‍ಆಗಬಹುದೇ ? ಚುನಾವಣೆ ಮುಗಿಯುತ್ತಿದ್ದಂತೆ ಯಾವ ಪ್ರಮಾಣದಲ್ಲಿ ಬೆಲೆ ಹೆಚ್ಚಳ ಆಗಬಹುದು? ಅಡುಗೆ ಅನಿಲದ ಕೊರತೆ ಇನ್ನೂ ಎಷ್ಟು ದಿನಗಳ ಕಾಲ ಇರುತ್ತದೆ? ಅಥವಾ ಕೊರತೆ ಇನ್ನಷ್ಟು ಹೆಚ್ಚುತ್ತದೆಯೇ? ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಕೊರತೆಯೂ ಉಂಟಾಗಬಹುದೇ? ? ಈ ಸಂಕಟಗಳನ್ನು ತಪ್ಪಿಸಲು ಸಾಧ್ಯವಿರಲಿಲ್ಲವೇ?ಇವೆಲ್ಲ ಈಗ ಜನರನ್ನು ಕಾಡುತ್ತಿರುವ ಪ್ರಶ್ನೆಗಳು. ಚುನಾವಣೆ 

ಇರಾನ್‌ ಮೇಲೆ ಅಮೆರಿಕ – ಇಸ್ರೇಲ್‌ ಯುದ್ಧದಿಂದಾಗಿ, ಇರಾನ್‌ ಹಾರ್ಮೂಜ್‌ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳ ಸಂಚಾರಕ್ಕೆ ತಡೆಯೊಡ್ಡಿದ ಕಾರಣದಿಂದಾಗಿ, ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 100 ಡಾಲರ್ ದಾಟಿದೆ. ಕಳೆದ 20 ದಿನಗಳಲ್ಲಿ ಇದು ಶೇ 50 ರಷ್ಟು ಹೆಚ್ಚಳವಾಗಿದೆ. ಇದುವರೆಗಿನ ಚಾಳಿಯ ಪ್ರಕಾರ ಭಾರತದಲ್ಲಿ ಇದರಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಶೇಕಡಾ 50 ರಷ್ಟು ಹೆಚ್ಚಳವಾಗುವ ಭಯ ಇತ್ತು.ಅಂದರೆ ಲೀಟರ್ ಗೆ ಸರಿಸುಮಾರು 50 ರೂಪಾಯಿ ಹೆಚ್ಚಳ. ಆದರೂ ಹಾಗಾಗಿಲ್ಲ, ಏಕೆ?! ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟ ಮಾಡಬೇಕಾದ್ದರಿಂದಲೇ? ಅಂತಿಮ ಮತದಾನದ ದಿನವಾದ ಏಪ್ರಿಲ್ 29 ರ ವರೆಗೂ ಅದನ್ನು ಮುಂದೂಡಲಾಗಿದೆಯೇ?

ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಆಡುಗೆ ಅನಿಲದ ಮೇಲಿನ ದರ ಹೆಚ್ಚಳ ಮಾಡಲಾಗಿದೆ. ಅಡುಗೆ ಅನಿಲದ (LPG) ದರ 2026 ಮಾರ್ಚ್ ಮೊದಲ ವಾರದಲ್ಲಿ 60 ರೂಪಾಯಿ ಏರಿಕೆಯಾಗಿದೆ. ಇದರೊಂದಿಗೆ 14.2 ಕೆಜಿ ಅನಿಲದ ಗೃಹಬಳಕೆ ಸಿಲಂಡರ್ ಬೆಲೆ ಬೆಂಗಳೂರಿನಲ್ಲಿ 913 ರೂ ಆಗಿದೆ. ವಾಣಿಜ್ಯ ಬಳಕೆಯ 19 ಕೆಜಿ ಅನಿಲದ ಸಿಲಂಡರ್ ಬೆಲೆಯೂ ಮೊತ್ತೊಮ್ಮೆ 115 ರೂ ಹೆಚ್ಚಳವಾಗಿ, 1,981 ರೂ. ಆಗಿದೆ.

ಆಟೋ ಎಲ್‌ ಪಿಜಿ ಮತ್ತು ಸಿಎನ್‌ ಜಿ ದರವೂ ಬಾರೀ ಹೆಚ್ಚಳವಾಗಿದೆ. ಜೊತೆಗೆ ಇವುಗಳ ಕೊರತೆಯೂ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ದುಡಿಮೆಗೆ ಸಂಕಷ್ಟ ಎದುರಾಗಿದೆ. ಅನಿಲದ ಕೊರತೆಯಿಂದ ದೇಶಾದ್ಯಂತ ಜನರು ರೊಚ್ಚಿಗೆದ್ದಿದ್ದಾರೆ. ಇದನ್ನೇ ಕಾಳಸಂತೆಕೋರರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ವಾಣಿಜ್ಯ ಬಳಕೆಯ ಸಿಲಿಂಡರ್‌ ಬಳಕೆ ಮಾಡುವ ಹೋಟೆಲುಗಳು, ಪೇಯಿಂಗ್‌ ಗೆಸ್ಟ್‌ ಗಳು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಗೆ, ವೃದ್ಧಾಶ್ರಮಗಳು, ಆಸ್ಪತ್ರೆಗಳು, ಅನಿಲ ಬಳಕೆ ಮಾಡುವ ಕೈಗಾರಿಕೆಗಳು ತೀರ್ವ ಸಂಕಷ್ಟ ಎದುರಿಸುತ್ತಿವೆ. ಇವೆಲ್ಲವೂ ಸರಪಳಿಯಂತೆ ಹಲವರನ್ನು ಸಂಕಷ್ಟಗಳಿಗೆ ದೂಡಿವೆ. ಹಲವು ಹೋಟೆಲ್‌ ಕಾರ್ಮಿಕರ ಮತ್ತು ಗಿಗ್‌ ಕಾರ್ಮಿಕರ ಮತ್ತು ಕೈಗಾರಿಕೆಗಳ ಕಾರ್ಮಿಕರ ಉದ್ಯೋಗಕ್ಕೆ ಕುತ್ತು ಬಂದಿದೆ.

ಚಿತ್ರ ಕೃಪೆ: ಎಂ. ಅಲಿ@ ಫೆಸ್‍ಬುಕ್

ಐದು ರಾಜ್ಯಗಳ ಚುನಾವಣೆ ಮೇಲೆ ಪರಿಣಾಮ

ಇದೆಲ್ಲದರ ಜೊತೆಗೆ ಈಗ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಏಪ್ರಿಲ್‌ ತಿಂಗಳಲ್ಲಿ ನಡೆಯುವ ಐದು ರಾಜ್ಯಗಳ ಚುನಾವಣೆಯಲ್ಲಿ ತೀರ್ವ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಅಂತಿಮ ಮತದಾನದ ದಿನವಾದ ಏಪ್ರಿಲ್ 29 ರ ವರೆಗೂ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ ಆಗುವುದಿಲ್ಲ ಎಂದು ನಂಬಬಹುದು. ಮತದಾನ ಮುಗಿದ ದಿನವೇ ಲೀಟರ್ ಗೆ ಕನಿಷ್ಠವೆಂದರೂ 20 ರಿಂದ 30 ರೂಪಾಯಿ ಹೆಚ್ಚಳವಾಗಬಹುದು. ಯುದ್ಧ ಎಷ್ಟು ಕಾಲ ನಡೆಯುತ್ತಿದೆ ಎಂಬುದರ ಮೇಲೆ ತೈಲ ಬೆಲೆಯೂ ನಿರ್ಧಾರವಾಗುತ್ತದೆ. ಯುದ್ಧ ಇನ್ನಷ್ಟು ದಿನ ಮುಂದುವರಿದರೆ, ಕಚ್ಚಾ ತೈಲ ಬೆಲೆ 200 ಅಮೆರಿಕನ್‌ ಡಾಲರ್ ಆಗಬಹುದು ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ. ಹೀಗೇನಾದರೂ ಆದರೆ, ಭಾರತದ ತೈಲ ಕಂಪನಿಗಳು ಚುನಾವಣೆಯ ಮತದಾನ ಮುಗಿಯುವವರೆಗೂ ಇಂದಿನ ಬೆಲೆಯಲ್ಲೇ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ನಷ್ಟ ಅನುಭವಿಸಲು ಸಿದ್ದವಾಗಿವೆಯೇ? ಅದರಲ್ಲೂ ರಿಲಯನ್ಸ್, ನಯಾರ, ಎಸ್ಸಾರ್, ಸೆಲ್ ನಂತಹ ಖಾಸಗಿ ತೈಲ ಕಂಪನಿಗಳು ಇದಕ್ಕೆ ಸಿದ್ದವಿವೆಯೇ?

ಖಾಸಗಿ ತೈಲ ಕಂಪನಿಗಳು ಭಾರತದಲ್ಲಿ ಕಡಿಮೆ ದರಕ್ಕೆ ಪೆಟ್ರೋಲ್, ಡೀಸೆಲ್ ಮಾರಾಟ ಮಾಡಿ ನಷ್ಟ ಅನುಭವಿಸುವುದನ್ನು ತಪ್ಪಿಸಿಕೊಳ್ಳಲು, ತಮ್ಮಲ್ಲಿರುವ ಅಥವಾ ಗಲ್ಫ್‌ ರಾಷ್ಟ್ರಗಳಲ್ಲದ ಇದರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲವನ್ನು ಸಂಸ್ಕರಿಸಿ ಯೂರೋಪ್ ನ ರಾಷ್ಟ್ರಗಳಿಗೆ, ಅಥವಾ ನೆರೆಯ ರಾಷ್ಟ್ರಗಳಿಗೆ ರಫ್ತು ಮಾಡಿ ಲಾಭ ಮಾಡಿಕೊಳ್ಳಲು ಮುಂದಾಗುತ್ತವೆ. ಭಾರತದಲ್ಲಿನ ತಮ್ಮ ಒಡೆತನದ ಪೆಟ್ರೋಲ್ ಬಂಕ್ ಗಳನ್ನು ಕೆಲಕಾಲ (ಇಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಚಿಲ್ಲರೆ ಮಾರಾಟ ಮಾಡಿದರೆ ನಷ್ಟ ಉಂಟಾಗುವುದಿಲ್ಲ ಎಂಬ ಭರವಸೆ ಬರುವವರೆಗೆ) ಮುಚ್ಚುತ್ತವೆ. ಈ ಹಿಂದೆಯೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಏರಿಕೆ ಆಗಿದ್ದಾಗ ರಿಲಯನ್ಸ್ ನಂತಹ ಖಾಸಗಿ ಪೆಟ್ರೋಲ್ ಬಂಕುಗಳು ವರ್ಷಾನುಗಟ್ಟಲೆ ಮುಚ್ಚಿದ್ದವು ಎಂಬುದನ್ನು ನೆನಪಿಸಿಕೊಳ್ಳೋಣ. ಹೀಗೇನಾದರೂ ಆದರೆ, ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಕೊರತೆ ಮತ್ತಷ್ಟು ಹೆಚ್ಚಾಗುತ್ತದೆ. ಚುನಾವಣೆ

ಕೇಂದ್ರ ಸರ್ಕಾರದ ನಿಯಂತ್ರಣವಿಲ್ಲ, ಆದರೆ….

ಇವೆಲ್ಲದರ ನಡುವೆ ನಾವು ಒಂದು ಅಂಶವನ್ನು ಗಮನಿಸಬೇಕಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿಯ ಮೇಲಿದ್ದ ಸರ್ಕಾರದ ನಿಯಂತ್ರಣವನ್ನು ತೆಗೆದುಹಾಕಿದ್ದು, “ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಮಾರುಕಟ್ಟೆ ನಿರ್ಧರಿಸುತ್ತದೆ ಮತ್ತು ಅಂತರರಾಷ್ಟ್ರೀಯ ಬೆಲೆಗಳನ್ನು ಅವಲಂಬಿಸಿವೆ” ಎಂದು ದರ ಏರಿಕೆಯಾದಾಗಲೆಲ್ಲ  ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ. ಆದರೂ, ಸಾಮಾನ್ಯ ದಿನಗಳಲ್ಲಿ ಆಗಾಗ್ಗೆ ಪೆಟ್ರೋಲ್‌ ದರ ಪರಿಸ್ಕರಣೆ ಮಾಡುವ ತೈಲ ಕಂಪನಿಗಳು, ದೇಶದಲ್ಲಿ ಯಾವುದಾದರು ಚುನಾವಣೆಗಳು ನಡೆದಾಗ ತಿಂಗಳು ಕಾಲ ಬೆಲೆ ಹೆಚ್ಚಳವನ್ನು ತಡೆ ಹಿಡಿಯುತ್ತವೆ ಎಂಬುದಂತೂ ಸತ್ಯ. ಈ ರೀತಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿಪಡಿಸುವ ವಿಷಯದಲ್ಲಿ ತೈಲ ಕಂಪನಿಗಳನ್ನು ಕೇಂದ್ರ ಸರ್ಕಾರ ನಿಯಂತ್ರಿಸುತ್ತಿರುವುದನ್ನು ನೋಡುತ್ತಲೇ ಬಂದಿದ್ದೇವೆ.

ರಿಲಯನ್ಸ್, ನಯಾರ ದಂತಹ ಖಾಸಗಿ ಕಂಪನಿಗಳು ರಷ್ಯಾದಿಂದ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ಆಮದು ಮಾಡಿಕೊಂಡರೂ, ಅದರ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಿರಲಿಲ್ಲ.  ಇದರ ವಿರುದ್ಧ ಸರ್ಕಾರದಿಂದ ಯಾವುದೇ ಕ್ರಮ ಇಲ್ಲ.

ಇದನ್ನೂ ಓದಿ : ಅಮೆರಿಕದ ದಾದಾಗಿರಿಗೆ ಮೋದಿ ಸರ್ಕಾರವೇಕೆ ಮಂಡಿಯೂರುತ್ತಿದೆ?

ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದಾಗ ಅದಕ್ಕೆ ಅನುಗುಣವಾಗಿ ಭಾರತದಲ್ಲಿ ಬೆಲೆ ಇಳಿಕೆ ಮಾಡುವುದಿಲ್ಲ. 2014ರ ಪ್ರಾರಂಭದಲ್ಲಿ 120 ಅಮೆರಿಕನ್ ಡಾಲರ್ ಇದ್ದ ಬ್ಯಾರಲ್ ಕಚ್ಚಾ ತೈಲದ ಬೆಲೆ ಒಮ್ಮೆ35 ಡಾಲರ್ ವರೆಗೂ ಕುಸಿದಿತ್ತು. ಕಚ್ಚಾ ತೈಲ ದರ ಕಡಿಮೆ ಆದ ಸಂದರ್ಭದಲ್ಲೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿತ ಮಾಡಲಿಲ್ಲ. ಈ ಮೂಲಕ ತೈಲ ಕಂಪನಿಗಳು ಗ್ರಾಹಕರನ್ನು ಸುಲಿಗೆ ಮಾಡುತ್ತಿವೆ. ಇದನ್ನು ತಡೆಯುವ ಯಾವುದೇ ಪ್ರಯತ್ನವನ್ನು ಕೇಂದ್ರದ ಮೋದಿ ಸರ್ಕಾರ ಮಾಡುತ್ತಿಲ್ಲ. ಜೊತೆಗೆ, ಅಬಕಾರಿ ತೆರಿಗೆ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರವೂ ಈ ದರ ಕಡಿತದ ಲಾಭ ಗ್ರಾಹಕರಿಗೆ ತಲುಪದಂತೆ ನೋಡಿಕೊಂಡಿದೆ.

ರಿಲಯನ್ಸ್, ನಯಾರ ದಂತಹ ಖಾಸಗಿ ಕಂಪನಿಗಳು ರಷ್ಯಾದಿಂದ ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ಆಮದು ಮಾಡಿಕೊಂಡರೂ, ಅದರ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಿರಲಿಲ್ಲ. ಅಂದರೆ, ಕಡಿಮೆ ಬೆಲೆಗೆ ಪೆಟ್ರೋಲ್‌, ಡೀಸೆಲ್‌ ಮಾರಿರಲಿಲ್ಲ. ಬದಲಾಗಿ ಅಂತರರಾಷ್ಟ್ರೀಯ ಮಟ್ಟದ ದರಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸಿ ಗ್ರಾಹಕರನ್ನು ವಂಚಿಸುತ್ತಿವೆ. ಇದರ ವಿರುದ್ಧ ಸರ್ಕಾರದಿಂದ ಯಾವುದೇ ಕ್ರಮ ಇಲ್ಲ. ಇದೂ ಅಲ್ಲದೆ, ಭಾರತಕ್ಕೆ ಅಗತ್ಯವಾದ ತೈಲದ ಶೇಕಡಾ 15ರಷ್ಟು ತೈಲವನ್ನು ಭಾರತದಲ್ಲೇ ಹೊರತೆಯಲಾಗುತ್ತದೆ. ಈ ತೈಲವನ್ನೂ ಅಂತರರಾಷ್ಟ್ರೀಯ ತೈಲ ಬೆಲೆಯಲ್ಲೇ ಗ್ರಾಹಕರಿಗೆ ಮಾರಲಾಗುತ್ತದೆ. ಅಂದರೆ, ಈ ಖಾಸಗಿ ತೈಲಕಂಪನಿಗಳು ಗ್ರಾಹಕರನ್ನು ಸಾಧ್ಯವಿರುವಷ್ಟೂ ಸುಲಿಗೆ ಮಾಡಿ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿವೆ. ಸಾರ್ವಜನಿಕ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಇವುಗಳಿಗೆ ಈ ರೀತಿ ಬಂದ ಲಾಭದ ಪಾಲು ಕೇಂದ್ರ ಸರ್ಕಾರಕ್ಕೆ ಹೋಗಿದೆ.

2024–25ರಲ್ಲಿ ಪೆಟ್ರೋಲಿಯಂ ವಲಯದಿಂದ ಕೇಂದ್ರ ಖಜಾನೆಗೆ ಬಂದ ಹಣ 4,15,244 ಕೋಟಿ ರೂ.ಗಳು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿಗದಿ ಮತ್ತು ಕೇಂದ್ರ ಆದಾಯದ ಸಂಗ್ರಹದ ಕುರಿತು ಡಿಸೆಂಬರ್ 15, 2025 ರಂದು ರಾಜ್ಯಸಭೆಯಲ್ಲಿ ನೀಡಿದ ಉತ್ತರದಲ್ಲಿ ಸರ್ಕಾರ ಇದನ್ನು ಹೇಳಿದೆ. ಈ ಮೊತ್ತಗಳಲ್ಲಿ ಅಬಕಾರಿ ಸುಂಕ, ಕಸ್ಟಮ್ಸ್ ಸುಂಕ, ಸೆಸ್, ಜಿಎಸ್‌ಟಿ ಘಟಕಗಳು, ರಾಯಧನ, ಕಾರ್ಪೊರೇಟ್ ತೆರಿಗೆಗಳು, ಸಾರ್ವಜನಿಕ ವಲಯದ ತೈಲ ಕಂಪನಿಗಳಿಂದ ಲಾಭಾಂಶ ಮತ್ತು ಪರಿಶೋಧನೆಯಿಂದ ಪೆಟ್ರೋಲಿಯಂ ಲಾಭ ಸೇರಿವೆ.

ಈಗ ನಮ್ಮ ಮುಂದಿರುವ ಪ್ರಶ್ನೆ :

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಬಾರಿಯಾಗಿ ಹೆಚ್ಚಲಿವೆಯೇ? ಐದು ರಾಜ್ಯಗಳ ಚುನಾವಣೆ ಮುಗಿಯುವರೆಗೂ ಇದೇ ಬೆಲೆಯಲ್ಲಿ ಸಿಗುತ್ತವೆಯೇ? ಚುನಾವಣೆ ಮುಗಿಯುತ್ತಿದ್ದಂತೆ ಯಾವ ಪ್ರಮಾಣದಲ್ಲಿ ಬೆಲೆ ಹೆಚ್ಚಳ ಆಗಬಹುದು? ಅಡುಗೆ ಅನಿಲದ ಕೊರತೆ ಇನ್ನೂ ಎಷ್ಟು ದಿನಗಳ ಕಾಲ ಇರುತ್ತದೆ? ಅಥವಾ ಈ ಕೊರತೆ ಇನ್ನಷ್ಟು ಹೆಚ್ಚುತ್ತದೆಯೇ? ಪೆಟ್ರೋಲ್, ಡೀಸೆಲ್ ಕೊರತೆಯೂ ಉಂಟಾಗಬಹುದೇ? ಇದನ್ನು ತಪ್ಪಿಸಲು ಸಾಧ್ಯವಿತ್ತೇ?

ಯುದ್ಧ ಆದಷ್ಟು ಬೇಗ ನಿಂತರೂ ಈ ಎಲ್ಲಾ ಸಮಸ್ಯೆಗಳು ಕೆಲ ತಿಂಗಳುಗಳ ಕಾಲ ಜನರನ್ನು ಕಾಡುತ್ತವೆ. ಯುದ್ಧ ಮುಂದುವರಿದರೆ, ಜನತೆಯ ಬದುಕು ತೀವ್ರ ಸಂಕಷ್ಟಗಳಿಗೆ ಸಿಲುಕುತ್ತದೆ. ದೇಶದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಇಂತಹ ಗಂಭೀರ ಸನ್ನಿವೇಶಗಳನ್ನು ಎದುರಿಸಲು ಸಾಧ್ಯವಿತ್ತೇ? ಖಂಡಿತಾ ಸಾಧ್ಯವಿತ್ತು. ಜನತೆಗೆ / ದೇಶಕ್ಕೆ ಆಗತ್ಯವಾದ ವಸ್ತುಗಳನ್ನು (ಆಹಾರ ಧಾನ್ಯಗಳು, ಪೆಟ್ರೋಲಿಯಂ ಉತ್ಪನ್ನಗಳು ಇತ್ಯಾದಿ) ಕನಿಷ್ಠ ಆರು ತಿಂಗಳಿಗೆ ಅಗತ್ಯವಾದಷ್ಟು ದಾಸ್ತಾನು ಇಡಬೇಕಾದ ಹೊಣೆಗಾರಿಕೆ ಕೇಂದ್ರ ಸರಕಾರದ್ದು. ಆದರೆ, ಸರ್ಕಾರ ಇದನ್ನು ಕಡೆಗಣಿಸುತ್ತಿದೆ.

ಯುದ್ದ, ಬರಗಾಲ, ಪ್ರಕೃತಿ ವಿಕೋಪದ ಸಂದರ್ಭಗಳಿಗೆಂದೇ ಇಂತಹ ಅಗತ್ಯ ವಸ್ತುಗಳನ್ನು ಕನಿಷ್ಟ ಪಕ್ಷ ಆರು ತಿಂಗಳಿಗೆ ಬೇಕಾಗುವಷ್ಟು ದಾಸ್ತಾನು ಇಡಬೇಕು. ಲಾಭವೇ ಮುಖ್ಯ ಎಂಬ ಮನಸ್ಥಿತಿ ಇರುವ ಆಳುವವರಿಂದ ಇದೆಲ್ಲವನ್ನೂ ನಿರೀಕ್ಷಿಸುವುದು ಕಷ್ಟ.

ತೈಲ ಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣ ತೊಡಗಿಸದೇ ಇರುವುದು

ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಹಿಂದಿನ ಕಣ್ಣೋಟವನ್ನು ನಮ್ಮನ್ನು ಆಳುವವರು ಕೈಬಿಟ್ಟ ನೀತಿಯೂ ಇಂದಿನ ತೈಲ ಕೊರತೆ ಮತ್ತು ಬೆಲೆ ಏರಿಕೆಯಂತಹ ಪರಿಸ್ಥಿತಿಗೆ ಕಾರಣ. 1990ರ ದಶಕದಲ್ಲಿ ತೈಲವನ್ನು ಆಮದು ಮಾಡಿಕೊಳ್ಳಬೇಕೆಂದು ಪ್ರತಿಪಾದಿಸುವ ಒಂದು ಬಲವಾದ ಲಾಬಿ ಮೂಡಿಬಂತು. ವಿಶ್ವಬ್ಯಾಂಕ್, ಎನ್ರೋನ್ ನಂತಹ ಬಹುರಾಷ್ಟ್ರೀಯ ತೈಲ ಕಂಪನಿಗಳು, ಪೆಟ್ರೋಲಿಯಂ ಮಂತ್ರಾಲಯ ಹಾಗೂ ಹಣಕಾಸು ಮಂತ್ರಾಲಯ ಇವರೆಲ್ಲಾ ಸೇರಿ ಭಾರತ ತನ್ನ ತೈಲ ಅವಶ್ಯಕತೆಯ 50-60 ಶೇಕಡಾವನ್ನು ಆಮದುಗಳಿಂದಲೇ ಪೂರೈಸಿಕೊಳ್ಳಬೇಕು ಎಂಬ ಒಂದು ಏಕಾಭಿಪ್ರಾಯ ವಿಕಾಸಗೊಳಿಸಿದರು.

ದೇಶೀ ತೈಲ ಉತ್ಪಾದನೆಯಲ್ಲಿ ತೀವ್ರ ಇಳಿಕೆಯೂ ಇಂದಿನ ಸ್ಥಿತಿಗೆ ಕಾರಣ.1984-85ರಲ್ಲಿ ದೇಶ ತನ್ನ ಅಗತ್ಯದ ಶೇ. 70ರಷ್ಟನ್ನು ದೇಶೀ ಉತ್ಪಾದನೆಯಿಂದಲೇ ಪೂರೈಸಿಕೊಳ್ಳುತ್ತಿತ್ತು.  90ರ ದಶಕದಲ್ಲಿ ದೇಶದ ತೈಲ ಬೇಡಿಕೆಯಲ್ಲಿ ಶೇ. 50ರಷ್ಟನ್ನು ಆಮದಿನಿಂದ ಪೂರೈಸಲಾಗುತ್ತಿತ್ತು. ಆದರೆ, ಇಂದು ಶೇ. 85 ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯು 2011-12 ರಿಂದ ನಿರಂತರವಾಗಿ ಕುಸಿಯುತ್ತಿದೆ. ಹೀಗಾಗಲು ತೈಲ ಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣ ತೊಡಗಿಸದೇ ಇರುವುದು ಒಂದು ಮುಖ್ಯ ಕಾರಣ. ಇದನ್ನು ಸರಿಪಡಿಸದಿದ್ದರೆ ಈ ಸಮಸ್ಯೆ ದೇಶವನ್ನು ಬಾಧಿಸುತ್ತಲೇ ಇರುತ್ತದೆ.

ಭಾರತದಲ್ಲಿ 25 ದಿನಗಳಿಗೆ ಬೇಕಾಗುವಷ್ಟು ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ದಾಸ್ತಾನು ಇದೆ ಎಂದು ಕೆಲವು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರ ಎಸ್ಮಾ ಕಾಯ್ದೆ ಜಾರಿಗೊಳಿಸಿದೆಯಾದರೂ, ಕಾಳಸಂತೆ ವ್ಯಾಪಾರ ವ್ಯಾಪಕವಾಗಿದೆ. ಕಾಳಸಂತೆ ಮಾರಾಟಕ್ಕೆ ಅವಕಾಶ ಇಲ್ಲದಂತೆ, ಸರ್ಕಾರ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರೆ, ಮತ್ತು ನಿಜವಾಗಿಯೂ 25 ದಿನಗಳಿಗೆ ಬೇಕಾಗುವಷ್ಟು ದಾಸ್ತಾನು ಇದ್ದರೆ, ಕನಿಷ್ಟ ಪಕ್ಷ 25 ದಿನಗಳು ಅನಿಲದ ಕೊರತೆ ಇಲ್ಲದಂತೆ ನೋಡಿಕೊಳ್ಳಬಹುದಿತ್ತು. ನಂತರವೂ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಜನರಿಗೆ ಭರವಸೆ ಕೊಟ್ಟು, ಅದಕ್ಕೆ ಪೂರಕವಾಗಿ ಆಮದಿಗೆ ಕ್ರಮ ತೆಗೆದುಕೊಂಡಿದ್ದರೆ, ನಂತರವೂ ಅನಿಲದ ಕೊರತೆ ಉಂಟಾಗುತ್ತಿರಲಿಲ್ಲ. ಈಗಿನ ಈ ದಾಸ್ತಾನು ಏನೇನೂ ಸಾಲದು. ಯುದ್ದ, ಬರಗಾಲ, ಪ್ರಕೃತಿ ವಿಕೋಪದ ಸಂದರ್ಭಗಳಿಗೆಂದೇ ಇಂತಹ ಅಗತ್ಯ ವಸ್ತುಗಳನ್ನು ಕನಿಷ್ಟ ಪಕ್ಷ ಆರು ತಿಂಗಳಿಗೆ ಬೇಕಾಗುವಷ್ಟು ದಾಸ್ತಾನು ಇಡಬೇಕು. ಲಾಭವೇ ಮುಖ್ಯ ಎಂಬ ಮನಸ್ಥಿತಿ ಇರುವ ಆಳುವವರಿಂದ ಇದೆಲ್ಲವನ್ನೂ ನಿರೀಕ್ಷಿಸುವುದು ಕಷ್ಟ.

ಇದನ್ನೂ ನೋಡಿ : ಜೀವನೋಪಾಯದ ಮೇಲೆ ದಾಳಿ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಮಹಿಳಾ ದಿನದ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *