ನವದೆಹಲಿ: ದೇಶದಲ್ಲಿ ಇಂಧನ ಪೂರೈಕೆ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿನ ಎಲ್ಲ ನಿರ್ಬಂಧಗಳನ್ನು ಜುಲೈ 1ರಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಈ ಕುರಿತು ಆದೇಶ ಹೊರಡಿಸಿರುವ ಕೇಂದ್ರ, ಜೂನ್ 11ರಂದು ಜಾರಿಗೊಳಿಸಿದ್ದ ಎಲ್ಲ ನಿಯಮಗಳು ಇನ್ನು ಮುಂದೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅದರಂತೆ, ಪ್ರತಿ ವ್ಯಕ್ತಿಗೆ ಗರಿಷ್ಠ 200 ಲೀಟರ್ ಡೀಸೆಲ್ ಮಾರಾಟ ಮಿತಿ ಕೂಡ ರದ್ದುಗೊಂಡಿದೆ.
ಇದನ್ನೂ ಓದಿ: “ಅರ್ಹ ಮತದಾರರನ್ನು ಕೈಬಿಡಲು ಆಯೋಗಕ್ಕೆ ಅಧಿಕಾರವಿಲ್ಲ” – ಎಸ್ಐಆರ್ ವಿರುದ್ಧ ಸಿದ್ದರಾಮಯ್ಯ ಕಿಡಿ
ಹಿಂದಿನ ಆದೇಶದ ಪ್ರಕಾರ, ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರು ಚಿಲ್ಲರೆ ಇಂಧನ ಮಳಿಗೆಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಸುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಂತಹ ಗ್ರಾಹಕರು ತಮ್ಮ ಅಗತ್ಯಗಳನ್ನು ಮೀಸಲಾದ ಸರಬರಾಜು ಜಾಲಗಳ ಮೂಲಕವೇ ಪೂರೈಸಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು.
ಇದರ ಜೊತೆಗೆ, ಸಗಟು ಪ್ರಮಾಣದಲ್ಲಿ ಡೀಸೆಲ್ ಖರೀದಿಯಿಂದ ಚಿಲ್ಲರೆ ಮಳಿಗೆಗಳಲ್ಲಿ ಅಸಾಮಾನ್ಯ ಬೇಡಿಕೆ ಉಂಟಾದಲ್ಲಿ, ಸಂಬಂಧಿತ ಗ್ರಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ ಸೂಚನೆ ನೀಡಲಾಗಿತ್ತು.
ಆದರೆ ಇತ್ತೀಚಿನ ಪರಿಶೀಲನೆ ಬಳಿಕ ಪೂರೈಕೆ ಮತ್ತು ವಿತರಣಾ ವ್ಯವಸ್ಥೆ ಸ್ಥಿರವಾಗಿರುವುದನ್ನು ಗಮನಿಸಿ, ಈ ಎಲ್ಲ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಇದರಿಂದ ಜುಲೈ 1ರಿಂದ ದೇಶಾದ್ಯಂತ ಇಂಧನ ಮಾರಾಟವು ಹಿಂದಿನಂತೆ ಸಾಮಾನ್ಯ ರೀತಿಯಲ್ಲಿ ನಡೆಯಲಿದೆ.
ಇದನ್ನೂ ನೋಡಿ: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ‘ವಿಐಪಿ’! ಪಾಸ್ಪೋರ್ಟ್ ಕಥೆ ಏನು? ಎಸ್ಐಆರ್ ಸುತ್ತ ಪ್ರಶ್ನೆಗಳ ಹುತ್ತ |
