ಬೆಂಗಳೂರು: ರಾಜ್ಯ ಸರಕಾರ ಮಾರಾಟ ತೆರಿಗೆ ಹೆಚ್ಚಿಸಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿ ಜನರ ಬದುಕನ್ನು ದುಸ್ತರ ಮಾಡುತ್ತಿದೆ ಎಂದು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರದ ಬಿಜೆಪಿ ಸರಕಾರ ಮತ್ತು ಈ ಮೊದಲು ರಾಜ್ಯದಲ್ಲಿದ್ದ ಬಿಜೆಪಿ ಸರಕಾರದ ಜನ ವಿರೋಧಿ ಆರ್ಥಿಕ ನೀತಿಗಳಿಂದ ರೋಸಿ ಹೋಗಿಯೆ ಕರ್ನಾಟಕದ ಜನರು ಕಾಂಗ್ರೆಸ್ ಸರಕಾರವನ್ನು ಆಯ್ಕೆ ಮಾಡಿದ್ದರಲ್ಲವೇ? ಈಗ ನೀವೇನು ಮಾಡುತ್ತಿರುವುದು ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ ಏರಿಸುವ ಮೂಲಕ ಜನಸಾಮಾನ್ಯರಿಗೆ ಬರೆ ಎಳೆದ ಸರ್ಕಾರ: ಎಎಪಿ ಆಕ್ರೋಶ
ದುರಂತವೆಂದರೆ ಈ ಸರಕಾರವೂ ಕೂಡ ಚುನಾವಣೆ ಮುಗಿದ ನಂತರ ತನ್ನ ಬಣ್ಣ ಬದಲಿಸಿ ತಾನೂ ಕೂಡ ಆರ್ಥಿಕ ನೀತಿಯಲ್ಲಿ ಬಿಜೆಪಿಗಿಂತ ಭಿನ್ನವಾಗಿಲ್ಲ ಎಂಬುದನ್ನು ಸಾಬೀತು ಮಾಡಿದೆ. ಗ್ಯಾರಂಟಿಗಳ ಮೂಲಕ ಕೊಟ್ಟು ರಾಜ್ಯ ಸರಕಾರ ಈಗ ಡಿಸೇಲ್, ಪೆಟ್ರೋಲ್ ದರ ಏರಿಸುವ ಮೂಲಕ ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಸಿದುಕೊಳ್ಳುವ ತಂತ್ರಗಾರಿಕೆಗೆ ಇಳಿದಿದೆ. ಡಿಸೇಲ್, ಪೆಟ್ರೋಲ್ ದರ ಏರಿದರೆ ಉಳಿದೆಲ್ಲ ಜೀವನಾವಶ್ಯಕ ವಸ್ತುಗಳ ಬೆಲೆ ಏರುತ್ತದೆ ಎಂಬುದನ್ನು ತಿಳಿಸಿ ಹೇಳಬೇಕಿಲ್ಲ ಎಂದು ಹೇಳಿದರು.
ತಾನು ಸಾಮಾನ್ಯ ಜನರ ಪರ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಸರಕಾರ ತಕ್ಷಣ ಬೆಲೆ ಏರಿಕೆಯ ಆದೇಶವನ್ನು ವಾಪಸ್ಸು ಪಡೆದು ತನ್ನ ಬದ್ದತೆಯನ್ನು ತೋರಿಸಬೇಕು. ರಾಜ್ಯದ ಬೊಕ್ಕಸಕ್ಕೆ ಬೇಕಾದ ಸಂಪನ್ಮೂಲ ಕ್ರೋಢೀಕರಣಕ್ಕೆ ಜನಸಾಮಾನ್ಯರ ಮೇಲೆ ಹೊರೆ ಹೊರಿಸಬಾರದು, ತಕ್ಷಣವೇ ಏರಿಸಿದ ಪೆಟ್ರೋಲ್, ಡಿಸೆಲ್ ಬೆಲೆಗಳನ್ನು ಇಳಿಸಬೇಕೆಂದು ರಾಜ್ಯ ಕಾರ್ಯದರ್ಶಿ ದೇವಿ ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ನಿರಂಜನ 100 : ಬದುಕು ಬರಹ ಕುರಿತು ಮಹಾಂತೇಶ್ ಜೀವಣ್ಣವರ್ ಮಾತುಗಳು Janashakthi Media