ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ‌ ಪ್ರತಿಭಟನೆಯ ಕರೆಯ ಭಾಗವಾಗಿ ಇಂದು ಪೆಟ್ರೋಲ್ ಬಂಕ್ ಗಳ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಅದರಂತೆಯೇ ರಾಜ್ಯದಲ್ಲಿಯೂ ಕಾಂಗ್ರೆಸ್‌ ಪಕ್ಷದ ನಾಯಕರು ಪ್ರತಿಭಟನೆಗಳನ್ನು ನಡೆಸಿದರು.

ಬೆಂಗಳೂರಿನ ಶಿವಾನಂದ ವೃತ್ತದ ಪೆಟ್ರೋಲ್ ಬಂಕ್ ಮುಂಭಾಗ `100-ನಾಟೌಟ್ ಹೆಸರಿನಲ್ಲಿ’ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಹಿರಿಯ ನಾಯಕ ಆರ್ ವಿ ದೇಶಪಾಂಡೆ, ದಿನೇಶ್‌ ಗುಂಡೂರಾವ್‌ ಸೇರಿದಂತೆ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ಇದನ್ನು ಓದಿ: ತೈಲ ದರ ಹೆಚ್ಚಳಕ್ಕೆ ಬೆಚ್ಚಿಬಿದ್ದ ಜನ! : ಟ್ಯಾಕ್ಸ್‌ ಹೆಸರಲ್ಲಿ ಜನರ ಹೊಟ್ಟೆ ಹೊಡೆಯುತ್ತಿದೆ ಸರಕಾರ!!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ʻಜನಸಾಮಾನ್ಯರು, ಬಡವರ ಪರ ಇರುವ ಸರ್ಕಾರ ಅಲ್ಲ, ಬಡವರ ರಕ್ತ ಹೀರುವ ಸರ್ಕಾರ, ಜನ ಕೊರೊನಾ ಸಂಕಷ್ಟದಿಂದ, ಸಾವು-ನೋವಿನಿಂದ, ಆರ್ಥಿಕ ಸಮಸ್ಯೆಗಳಿಂದ ಸಾಯುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್ ದರಗಳನ್ನು ಪದೇ ಪದೇ ದಿನನಿತ್ಯ ಹೆಚ್ಚಿಸಿದರೆ ಬಡವರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಜನಸಾಮಾನ್ಯರ ಮೇಲೆ ಕಾಳಜಿಯಿದ್ದರೆ ಇಂಧನಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಿ, ರಾಜ್ಯ ಸರ್ಕಾರಗಳು ಕೂಡ ಮಾಡಬೇಕು ಎಂದರು. ಇಲ್ಲದಿದ್ದರೆ ಜನತೆಗೆ ಬದುಕುವುದು ಬಹಳ ಕಷ್ಟವಾಗುತ್ತದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದ ಕೂಡಲೇ ಸಾಗಣೆ-ಸಾಗಾಟ ದರಗಳು ಸಹ ಹೆಚ್ಚಳವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುತ್ತದೆ. ದೇಶ ಹಾಳು ಮಾಡಬೇಡಿ ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.

ಇದನ್ನು ಓದಿ: ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಕಛೇರಿಗಳ ಮುಂದೆ ಪ್ರತಿಭಟನೆ: ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಕರೆ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ ʻ2021ರಲ್ಲಿ ಈವರೆಗೆ ಕೇಂದ್ರ ಸರ್ಕಾರ 48 ಬಾರಿ ಪೆಟ್ರೋಲ್ ಬೆಲೆ ಏರಿಸಿದೆ. ಅಗತ್ಯ ವಸ್ತುಗಳ, ಇಂಧನ ಬೆಲೆ ಏರಿಕೆಯಾಗಿದೆ ಹೊರತು ಜನಸಾಮಾನ್ಯರ ಆದಾಯ ಏರಿಕೆಯಾಗಿಲ್ಲ, ಕೊರೊನಾದಿಂದಾಗಿ ಮತ್ತಷ್ಟು ಕಡಿಮೆಯಾಗಿದೆ. ಬಡವರ ಕನಿಷ್ಠ ವೇತನವನ್ನು ಸಹ ಏರಿಕೆ ಮಾಡಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರತಿಭಟನಾ ನಿರತ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

Donate Janashakthi Media

Leave a Reply

Your email address will not be published. Required fields are marked *