ಪಟ್ಟು ಹಿಡಿದು ನಡೆಸಿರುವ ನವ-ಫ್ಯಾಸಿಸ್ಟ್ ಕೇಂದ್ರೀಕರಣ

ಅಧಿಕಾರದ ಮೂಲ ಜನತೆಯಾಗಿರದೆ, ಅವರನ್ನು ಪ್ರತಿನಿಧಿಸುವ ‘ಅಧಿನಾಯಕ’ ಎಂಬ ತಲೆಕೆಳಗಾದ ಪರಿಕಲ್ಪನೆಯ ಅಭಿವ್ಯಕ್ತಿಯೇ ಕೇಂದ್ರೀಕರಣ. ನವ ಉದಾರವಾದವು ಬಿಕ್ಕಟ್ಟಿನ ಅವಧಿಯನ್ನು ಪ್ರವೇಶಿಸುತ್ತಿದ್ದಂತೆ ಕಾರ್ಪೊರೇಟ್- ನವಫಾಸಿಸ್ಟ್ ಮೈತ್ರಿಯು ಅಸ್ತಿತ್ವಕ್ಕೆ ಬರುವುದರೊಂದಿಗೆ ಈ ಕೇಂದ್ರೀಕರಣ ಪ್ರಕ್ರಿಯೆಯು ಹೆಚ್ಚು ಬಲಗೊಳ್ಳುತ್ತದೆ. ಆದ್ದರಿಂದ ಎನ್‌ಡಿಎ ಸರ್ಕಾರವು ಸಂಪನ್ಮೂಲಗಳ ಮತ್ತು ಅಧಿಕಾರದ ಕೇಂದ್ರೀಕರಣವನ್ನು ಅಭೂತಪೂರ್ವ ಮಟ್ಟದಲ್ಲಿ ನಡೆಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಉಪಕುಲಪತಿಗಳ ನೇಮಕದಲ್ಲಿ ರಾಜ್ಯ ಸರಕಾರಗಳಿಗೆ ಪಾತ್ರವಿಲ್ಲದಂತೆ ಮಾಡುತ್ತಿರುವುದು ಇದರ ಇತ್ತೀಚಿನ ಉದಾಹರಣೆ. ಕೇಂದ್ರೀಕರಣ ಎಂಬುದು ಕೇಂದ್ರದಿಂದ ರಾಜ್ಯ ಸರ್ಕಾರಗಳ ದಮನವನ್ನು ಮತ್ತು ಆಮೂಲಕ ಸೂಚ್ಯವಾಗಿಯಾದರೂ ಪ್ರಾದೇಶಿಕ-ಭಾಷಾ ರಾಷ್ಟ್ರೀಯತೆಯ ಪ್ರಜ್ಞೆಯ ಅಪಮೌಲ್ಯೀಕರಣವನ್ನು ಒಳಗೊಂಡಿರುತ್ತದೆ. ಇದು ಪ್ರಜಾಪ್ರಭುತ್ವ-ವಿರೋಧಿ ಮಾತ್ರವಲ್ಲ, ಅತ್ಯಂತ ಗಂಭೀರ ದುಷ್ಪರಿಣಾಮಗಳನ್ನು ಕೂಡ ಉಂಟು ಮಾಡುವಂತದ್ದು, ದೂರದೃಷ್ಟಿಯಿಲ್ಲದ ಕೇಂದ್ರ ಸರ್ಕಾರಕ್ಕೆ ಇದರ ಪರಿವೆಯೇ ಇದ್ದಂತಿಲ್ಲ. ಪಟ್ಟು

ಪ್ರೊ. ಪ್ರಭಾತ್ ಪಟ್ನಾಯಕ್

ಅನು:ಕೆ.ಎಂ.ನಾಗರಾಜ್

ಆಧುನಿಕ ಭಾರತದ ಜನರ ಮನಸ್ಸಿನಲ್ಲಿ ಒಂದು ಇಬ್ಬಗೆಯ ರಾಷ್ಟ್ರೀಯ ಪ್ರಜ್ಞೆಯು ಒಡಮೂಡಿದೆ ಎಂಬುದನ್ನು ಪ್ರಸಿದ್ಧಮಾರ್ಕ್ಸ್ವಾದಿವಿದ್ವಾಂಸ ದಿವಂಗತ ಅಮಲೇಂದು ಗುಹಾ ಅವರು ಮನಸೆಳೆಯುವ ರೀತಿಯಲ್ಲಿ ವಾದಿಸಿದ್ದರು- ಬಂಗಾಳಿ, ಅಥವಾ ತಮಿಳು, ಅಥವಾ ಗುಜರಾತಿ ಅಥವಾ ಒಡಿಯಾ ಎಂಬ ಒಂದು ಸ್ಥಳೀಯ, ಪ್ರಾದೇಶಿಕ-ಭಾಷಾ ರಾಷ್ಟ್ರೀಯತೆಯ ಪ್ರಜ್ಞೆ ಮತ್ತು ಅದೇ ಸಮಯದಲ್ಲಿ ಅದರ ಮೇಲೆ ಚಾಚಿರುವ ಒಂದು ಅಖಿಲ-ಭಾರತೀಯ ಪ್ರಜ್ಞೆ. ಒಂದರ ಮೇಲೆ ಅತಿಯಾಗಿ ಒತ್ತು ನೀಡಿ ಮತ್ತೊಂದನ್ನು ಹೊರಗಿಡುವುದು ಅಪಾಯಕಾರಿ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ಈ ದ್ವೈತವನ್ನು ಅರಿತುಕೊಳ್ಳಬೇಕು ಮತ್ತು ಒಪ್ಪಿಕೊಳ್ಳಬೇಕು ಎಂದು ಅವರು ವಾದಿಸಿದ್ದರು. ನಿರ್ದಿಷ್ಟವಾಗಿ ಹೇಳುವುದಾದರೆ, ಅಖಿಲ-ಭಾರತೀಯ ಪ್ರಜ್ಞೆಯನ್ನು ಮಾತ್ರ ಒತ್ತಿಹೇಳುವ ಅತಿಯಾದ ಕೇಂದ್ರೀಕರಣವು ಒಂದು ಸ್ಥಳೀಯ ಪ್ರತ್ಯೇಕತಾವಾದ ಅಥವಾ ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುವ ಪ್ರತ್ಯೇಕತಾವಾದದ ರೂಪದಲ್ಲಿ ಒಂದು ವಿರುದ್ಧ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಪಟ್ಟು

ಇದನ್ನು ಅಮಲೇಂದು ಗುಹಾ ಇಂದಿರಾ ಗಾಂಧಿಯವರ ಅವಧಿಯಲ್ಲಿ ನಡೆದ ಅಧಿಕಾರದ ಕೇಂದ್ರೀಕರಣ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ 1980ರ ದಶಕದ ಆರಂಭದಲ್ಲಿ ಉಂಟಾದ ಅಸ್ಸಾಂ ಚಳವಳಿಯ ಸಂದರ್ಭದಲ್ಲಿ ಬರೆದಿದ್ದರು. ಅದಿನ್ನೂ ಹಿಂದುತ್ವ-ನವಫಾಸಿಸಂನ ಯಾವುದೇ ಕುರುಹುಗಳಿಂದಲೂ ಮುಕ್ತವಾಗಿದ್ದ ಸಮಯ. ಆದರೆ, ಇಂದು ನಮ್ಮ ಕಣ್ಣ ಮುಂದೆಯೇ ಅಚ್ಚರಿಪಡುಂತಹ ವೇಗದಲ್ಲಿ ತೆರೆದುಕೊಳ್ಳುತ್ತಿರುವ ನವ-ಫ್ಯಾಸಿಸ್ಟ್ ಕೇಂದ್ರೀಕರಣದ ಸನ್ನಿವೇಶದಲ್ಲಿ ಅದೇ ಬೆದರಿಕೆ ದೇಶದ ಮುಂದಿದೆ. ಪಟ್ಟು

ಇದನ್ನೂ ಓದಿ: ನಮ್ಮ ಮೆಟ್ರೊ : ಪ್ರಯಾಣ ದರ ಹೆಚ್ಚಿಸಿದ್ದು ಬಿಎಂಆರ್‌ಸಿಎಲ್‌; ನಮ್ಮ ಸರ್ಕಾರ ಅಲ್ಲ – ಸಿಎಂ ಸಿದ್ದರಾಮಯ್ಯ

ಫ್ಯಾಸಿಸಂನ ಇತರ ನಿರ್ದಿಷ್ಟತೆಗಳು ಏನೇ ಇರಲಿ, ಯಾವತ್ತೂ ಅದರೊಂದಿಗೆ ಅತಿಯಾದ ಕೇಂದ್ರೀಕರಣವೂ ಇರುತ್ತದೆ. ವಾಸ್ತವಾಂಶವೆಂದರೆ. ಅದರಲ್ಲಿ “ಅಧಿನಾಯಕ”ನ (ನಾಝಿಗಳ ‘ಫ್ಯೂರರ್’) ಆರಾಧನೆ ಅಧಿಕಾರದ ಮೂಲವನ್ನೇ ತಲೆಕೆಳಗು ಮಾಡುತ್ತದೆ: ಅಧಿಕಾರವು ಯಾವ ಜನತೆಯನ್ನು ನಾಯಕನು ಪ್ರತಿನಿಧಿಸಬೇಕಾಗಿದೆಯೋ ಆ ಜನತೆಯ ಬಳಿಯಲ್ಲ, ಬದಲಾಗಿ, ಆ “ಅಧಿನಾಯಕ”ನ ಬಳಿಯಿರುತ್ತದೆ. ಆ ಅಧಿನಾಯಕ ತಾನು ಜನತೆಯ ಆದರ್ಶ ಪ್ರತಿನಿಧಿ ಎಂದು ಹೇಳಿಕೊಳ್ಳುತ್ತಾನೆ, ಅದೂ ಒಂದು ಪಾರಲೌಕಿಕ ಅರ್ಥದಲ್ಲಿ, ಅದರಲ್ಲೂ ಆ ಜನತೆಯ ಒಂದು ಭಾಗವನ್ನು, ಉದಾಹರಣೆಗೆ ಹಿಂದೂಗಳನ್ನು, ಅಥವ ಯಾವುದೋ ಬಹುಸಂಖ್ಯಾತ ಜನಾಂಗವನ್ನು ( ಅದರಲ್ಲಿ “ಅನ್ಯ”ರೆಂದು ಪರಿಗಣಿಸಲಾದ ಜನರನ್ನು ಹೊರತುಪಡಿಸಿ) ಮಾತ್ರ ಪ್ರತಿನಿಧಿಸುವುದಾಗಿ ಹೇಳಿಕೊಳ್ಳುತ್ತಾನೆ. ಅಧಿಕಾರದ ಮೂಲದ ಈ ತಲೆಕೆಳಗಾದ ಪರಿಕಲ್ಪನೆಯ ಅಂತರ್ಗತ ಅಭಿವ್ಯಕ್ತಿಯೇ ಕೇಂದ್ರೀಕರಣ. ಎನ್‌ಡಿಎ ಸರ್ಕಾರವು ಸಂಪನ್ಮೂಲಗಳ ಮತ್ತು ಅಧಿಕಾರದ ಕೇಂದ್ರೀಕರಣವನ್ನು ಅಭೂತಪೂರ್ವ ಮಟ್ಟದಲ್ಲಿ ನಡೆಸಿದೆ. ಅದರಲ್ಲಿ ಆಶ್ಚರ್ಯವೇನಿಲ್ಲ. ಪಟ್ಟು

ಖಚಿತವಾಗಿ ಹೇಳುವುದಾದರೆ, ಸ್ವತಃ ನವ ಉದಾರವಾದವೇ ಕೇಂದ್ರೀಕರಣವನ್ನು ಬಯಸುತ್ತದೆ. ಏಕೆಂದರೆ, ಅದರಡಿಯಲ್ಲಿ ಅಧಿನಾಯಕತ್ವ ಚಲಾಯಿಸುವ ಕಾರ್ಪೊರೇಟ್-ಹಣಕಾಸು ಕೂಟವು, ಅಧಿಕಾರ ಮತ್ತು ಸಂಪನ್ಮೂಲಗಳನ್ನು ತನ್ನ ಇಚ್ಛಾನುಸಾರವಾಗಿ ಕೆಲಸ ಮಾಡುವ ಪ್ರಭುತ್ವದ ಕೈಯಲ್ಲೇ ಕೇಂದ್ರೀಕರಿಸಬೇಕೆಂದು ಬಯಸುತ್ತದೆ. ಆದರೆ ನವ ಉದಾರವಾದವು ಬಿಕ್ಕಟ್ಟಿನ ಅವಧಿಯನ್ನು ಪ್ರವೇಶಿಸುತ್ತಿದ್ದಂತೆ ಕಾರ್ಪೊರೇಟ್-ನವಫಾಸಿಸ್ಟ್ ಮೈತ್ರಿಯು ಅಸ್ತಿತ್ವಕ್ಕೆ ಬರುವುದರೊಂದಿಗೆ ಈ ಕೇಂದ್ರೀಕರಣ ಪ್ರಕ್ರಿಯೆಯು ಹೆಚ್ಚು ಬಲಗೊಳ್ಳುತ್ತದೆ. ಪಟ್ಟು

ಸಂಪನ್ಮೂಲಗಳ ಕೇಂದ್ರೀಕರಣ-ಜಿಎಸ್‌ಟಿ ಯ ಉದಾಹರಣೆ

ಹೆಚ್ಚು ವಿವರಗಳಿಗೆ ಹೋಗದೆ, ಸಂಪನ್ಮೂಲಗಳ ಕೇಂದ್ರೀಕರಣದ ಒಂದು ಸ್ಪಷ್ಟ ಉದಾಹರಣೆಯನ್ನು ಮಾತ್ರ ಹೇಳುವುದಾದರೆ, ಅದು ಹಳೆಯ ಮಾರಾಟ ತೆರಿಗೆ ಪದ್ಧತಿಯ ಸ್ಥಾನದಲ್ಲಿ ಪರಿಚಯಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಪದ್ಧತಿಯನ್ನೇ ನೋಡಿ. ಮಾರಾಟ ತೆರಿಗೆಯನ್ನು ಸಂವಿಧಾನದಲ್ಲಿ ರಾಜ್ಯ ಸರ್ಕಾರಗಳಿಗೆ ಆದಾಯದ ಮುಖ್ಯ ಮೂಲವಾಗಿ ಕಲ್ಪಿಸಲಾಗಿತ್ತು ಮತ್ತು ಅದು ಅವರ ಆದಾಯದ ಶೇ. 80ರಷ್ಟು ಕೊಡುಗೆ ನೀಡಿತ್ತು. ಮಾರಾಟ ತೆರಿಗೆ ಪದ್ಧತಿಯುನ್ನು ಬದಲಿಸುವ ಈ ನಿರ್ಧಾರವು ಸಂಪೂರ್ಣವಾಗಿ ಒಂದು ಹುಸಿ ವಾದವನ್ನು – ಅಂದರೆ, ಒಂದು ಮೌಲ್ಯವರ್ಧಿತ ತೆರಿಗೆಯು (ಸರಕು ಮತ್ತು ಸೇವಾ ತೆರಿಗೆಯು), ತೆರಿಗೆಗಳ ಮೇಲೆ ತೆರಿಗೆಗಳು ಬೀಳುವುದನ್ನು ತಪ್ಪಿಸುವುದರ ಜೊತೆಗೆ, ಪ್ರತಿಯೊಂದು ಸರಕಿನ ಮೇಲೂ ಒಂದೇ ದರದ ತೆರಿಗೆ ವಿಧಿಸಿದರೆ (ಅನೇಕ ದರಗಳಿದ್ದರೂ ಸಹ, ಅಂದರೆ, ಸರಕುಗಳಿಂದ ಸರಕುಗಳಿಗೆ ದರಗಳು ಬದಲಾದರೂ ಸಹ) ಅದು ರಾಷ್ಟ್ರೀಯ ಮಾರುಕಟ್ಟೆಯನ್ನು ಏಕೀಕರಿಸುವ ಪ್ರಯೋಜನವನ್ನು ಹೊಂದಿದೆ ಎಂಬ ತರ್ಕವನ್ನು-ಆಧರಿಸಿತ್ತು. ಈ ಏಕರೂಪದ ತೆರಿಗೆ ದರವನ್ನು ಹೊಂದಲು, ರಾಜ್ಯ ಸರ್ಕಾರಗಳಿಗಿಂತ ಬೇರೆಯಾದ ಒಂದು ಹೊಸ ಸಂಸ್ಥೆಯು ಈ ದರವನ್ನು ನಿಗದಿಪಡಿಸುವುದು ಅತ್ಯಗತ್ಯವಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರಗಳು ತಮ್ಮ ತೆರಿಗೆ ಅಧಿಕಾರವನ್ನು ಈ ಸಂಸ್ಥೆಗೆ ಬಿಟ್ಟುಕೊಡುವುದು ಅಗತ್ಯ, ಜಿಎಸ್‌ಟಿ ಕೌನ್ಸಿಲ್ ಎಂಬುದು ಈ ಸಂಸ್ಥೆ ಎಂದು ಹೇಳಲಾಯಿತು. ಅಲ್ಲಿ ಕೇಂದ್ರ ಸರ್ಕಾರವೂ ಸಹ ರಾಜ್ಯ ಸರ್ಕಾರಗಳೊಂದಿಗೆ ಪ್ರತಿನಿಧಿಸಲ್ಪಟ್ಟಿತ್ತು. ಪಟ್ಟು

ಇದೊಂದು ಹುಸಿ ತರ್ಕ ಎಂಬುದು ವಿಶ್ವದ ಅತಿ ದೊಡ್ಡ ಬಂಡವಾಳಶಾಹಿ ದೇಶವಾದ ಅಮೆರಿಕಾ ಸಂಯುಕ್ತ ಸಂಸ್ಥಾನದ ಬೇರೆ ಬೇರೆ ರಾಜ್ಯಗಳು ಒಕ್ಕೂಟ ತತ್ವಕ್ಕೆ ಅನುಗುಣವಾಗಿ ಬೇರೆ ಬೇರೆ ತೆರಿಗೆ ದರಗಳನ್ನು ಹೊಂದಿವೆ ಎಂಬುದನ್ನು ನಾವು ನೆನಪಿಸಿಕೊಂಡಾಗ ಸ್ಪಷ್ಟವಾಗುತ್ತದೆ. ಏಕೀಕೃತ ಮಾರುಕಟ್ಟೆಯನ್ನು ಯುಎಸ್ ಹೊಂದಿಲ್ಲ ಅಥವಾ ಅದರ ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ತೆರಿಗೆ ದರಗಳನ್ನು ಹೊಂದಿರುವುದರಿಂದ ಆರ್ಥಿಕ ಬಲ ಪಡೆಯುವಲ್ಲಿ ಅದು ಸೋತಿದೆ ಎಂದು ಯಾರೂ ವಾದಿಸುವುದು ಸಾಧ್ಯವಿಲ್ಲ. ಪಟ್ಟು

ಜಿಎಸ್‌ಟಿಯಿಂದಾಗಿ ರಾಜ್ಯ ಸರ್ಕಾರಗಳು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ತ್ಯಜಿಸಬೇಕಾಗಿ ಬಂತು. ಆದರೆ, ಮೂಲ ವರ್ಷದಿಂದ ಪ್ರಾರಂಭಿಸಿ, ಐದು ವರ್ಷಗಳ ಅವಧಿಗೆ ಕೇಂದ್ರವು ವಾರ್ಷಿಕ ಶೇ. 14ಕ್ಕಿಂತ ಕಡಿಮೆಯ ಆದಾಯ ನಷ್ಟವನ್ನು ಸರಿದೂಗಿಸುತ್ತದೆ ಎಂಬ ಭರವಸೆಯ ಮೇಲೆ ರಾಜ್ಯಗಳ ಮನವೊಲಿಸಲಾಯಿತು. ವಾಸ್ತವವಾಗಿ, ಜಿಎಸ್‌ಟಿ ಪೂರ್ವದ ಮತ್ತು ಜಿಎಸ್‌ಟಿ ನಂತರದ ಅವಧಿಯನ್ನು ಹೋಲಿಸಿದರೆ, ಜಿಎಸ್‌ಟಿಯಿಂದ ಬದಲಾಯಿಸಲಾದ ತೆರಿಗೆಗಳಿಂದ (ಅಂದರೆ, ಹಿಂದಿನ ಮಾರಾಟ ತೆರಿಗೆಯಿಂದ) ಬರುವ ಆದಾಯದ ಬೆಳವಣಿಗೆಯ ದರವು ರಾಜ್ಯಗಳಿಗೆ ಕೇಂದ್ರವು ಪಾವತಿಸಿದ ಪರಿಹಾರದೊಂದಿಗೆ ತಮ್ಮ ಪಾಲಿನ ಜಿಎಸ್‌ಟಿಯಿಂದ (ಎಸ್‌ಜಿಎಸ್‌ಟಿಯಿಂದ) ಬರುವ ಒಟ್ಟು ಆದಾಯದ ಬೆಳವಣಿಗೆಯ ದರವನ್ನು ಮೀರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕಿಂತಲೂ ಮಿಗಿಲಾಗಿ, ರಾಜ್ಯದ ಆಂತರಿಕ ಒಟ್ಟು ಉತ್ಪನ್ನ(ಜಿಎಸ್‌ಡಿಪಿ)ದ ಶೇಕಡಾವಾರು ಪ್ರಮಾಣದಲ್ಲಿಯೂ ಸಹ, ಎಸ್‌ಜಿಎಸ್‌ಟಿ ಮತ್ತು ಕೇಂದ್ರ ಪರಿಹಾರದಿಂದ ಬರುವ ಆದಾಯವು ಹೆಚ್ಚಿನ ರಾಜ್ಯಗಳಿಗೆ ಜಿಎಸ್‌ಟಿ-ಪೂರ್ವ ಅವಧಿಯಲ್ಲಿ ಜಿಎಸ್‌ಡಿಪಿಗೆ ಬದಲಾದ ತೆರಿಗೆಗಳಿಂದ ಬರುವ ಆದಾಯದ ಶೇಕಡಾವಾರುಗಿಂತ ಕಡಿಮೆಯಾಗಿದೆ. ಪಟ್ಟು

ಸಂಕ್ಷಿಪ್ತವಾಗಿ ಹೇಳುವುದಾದರೆ, ಕೇಂದ್ರ ನೀಡಿದ ಪರಿಹಾರವನ್ನು ಗಣನೆಗೆ ತೆಗೆದುಕೊಂಡಾಗಲೂ ರಾಜ್ಯಗಳು ಜಿಎಸ್‌ಟಿಯಿಂದಾಗಿ ಆದಾಯ ನಷ್ಟವನ್ನು ಅನುಭವಿಸಿವೆ. ಇನ್ನೂ ಮುಖ್ಯವಾಗಿ, ರಾಜ್ಯಗಳು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಳೆದುಕೊಂಡಿವೆ ಮತ್ತು ಅವು ಈಗ ಕೇಂದ್ರದ ಮುಂದೆ ಭಿಕ್ಷುಕರಾಗಿ ಕೈಚಾಚಿ ನಿಲ್ಲಬೇಕಾಗಿದೆ. ಇದು ಒಕ್ಕೂಟವಾದದ ವಿರುದ್ಧ ಒಂದು ಬಲವಾದ ಹೊಡೆತವೇ. ಪಟ್ಟು

ಅಧಿಕಾರದ ಕೇಂದ್ರೀಕರಣ-ರಾಜ್ಯಪಾಲರ ಬಳಕೆ

ಸಂಪನ್ಮೂಲಗಳ ಕೇಂದ್ರೀಕರಣದ ಜೊತೆಗೆ, ಅಧಿಕಾರವನ್ನು ಕೇಂದ್ರೀಕರಿಸಲು ಸಮಾನಾಂತರ ಕ್ರಮಗಳು ಸಹ ನಡೆಯುತ್ತಿವೆ ಮತ್ತು ಇದಕ್ಕಾಗಿ ಬಳಸಲಾಗುವ ಒಂದು ಸಾಧನವೆಂದರೆ ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರು. ಇತ್ತೀಚಿನ ದಿನಗಳಲ್ಲಿ ರಾಜ್ಯಪಾಲರು ಸಾಮಾನ್ಯವಾಗಿ ಹಿಂದುತ್ವ ನಿಷ್ಠರು ಅಥವಾ ಕೇಂದ್ರ ಸರ್ಕಾರದ ಆದೇಶಗಳನ್ನು ಪೂರೈಸಲು ಅವಲಂಬಿಸಬಹುದಾದ ವಿಧೇಯ ಅಧಿಕಾರಿವರ್ಗದಿಂದ ಬಂದವರು. ಆರಂಭದಲ್ಲಿ ಇದು ಹೆಚ್ಚಿನವರ ಹುಬ್ಬೇರಿಸಲಿಲ್ಲ ಏಕೆಂದರೆ ರಾಜ್ಯಪಾಲರ ಹುದ್ದೆಯನ್ನು ಸಾಮಾನ್ಯವಾಗಿ ನಿವೃತ್ತ ರಾಜಕಾರಣಿಗಳು ಅಥವಾ ಅಧಿಕಾರಿಗಳಿಗೆ ಒಂದು ಬಿಟ್ಟಿ ಗೌರವ ಎಂದು ಪರಿಗಣಿಸಲಾಗಿತ್ತು, ಏಕೆಂದರೆ ರಾಜ್ಯಪಾಲರನ್ನು ಕೇವಲ ನಾಮಮಾತ್ರದ ಮುಖ್ಯಸ್ಥರೆಂದು ಪರಿಗಣಿಸಲಾಗಿರುವುದರಿಂದ ಯಾವುದೇ ಹಾನಿ ಮಾಡಲು ಅವರಿಗೆ ಸಾಧ್ಯವಿಲ್ಲ ಎಂದೂ ಭಾವಿಸಲಾಗಿತ್ತು. ಆದರೆ ಈಗ ರಾಜ್ಯಪಾಲರು ತಮಗೂ ತೂಕವಿದೆಯೆಂದು ತೋರಿಸಲಾರಂಭಿಸಿದ್ದಾರೆ ಮತ್ತು ಚುನಾಯಿತ ರಾಜ್ಯ ಸರ್ಕಾರಗಳ ಚಟುವಟಿಕೆಗಳಿಗೆ ಅಡ್ಡಿಪಡಿಸಲು ಪ್ರಾರಂಭಿಸಿದ್ದಾರೆ. ಪಟ್ಟು

ಇದು ನಡೆಯುತ್ತಿರುವ ಒಂದು ನಿರ್ಣಾಯಕ ಕ್ಷೇತ್ರ ರಾಜ್ಯ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ್ದು. ಅಲ್ಲಿ ರಾಜ್ಯಪಾಲರು, ಈ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿ ಉಪಕುಲಪತಿಗಳನ್ನು ನೇಮಿಸುವ ಮತ್ತು ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಕಸಿದುಕೊಳ್ಳುವ ಕೆಲಸವನ್ನು ಸ್ವತಃ ವಹಿಸಿಕೊಂಡಿದ್ದಾರೆ. ಪಟ್ಟು

ಇದನ್ನೂ ನೋಡಿ: ಬೆಂಗಳೂರು ಏರ್ ಶೋ : ಉಕ್ಕಿನ ಹಕ್ಕಿಗಳ ಮ್ಯಾಜಿಕ್ #AeroShow2025 #AeroShowBengaluru Janashakthi Media

ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಮತ್ತು ಅದರ ನಿಷ್ಠಾವಂತರನ್ನೇ ಒಳಗೊಂಡಿರುವ ಒಂದು ಸಂಸ್ಥೆಯಾದ ವಿಶ್ವವಿದ್ಯಾಲಯ ಅನುದಾನ ಆಯೋಗವು(ಯುಜಿಸಿ), ದೇಶದ ಉನ್ನತ ಶಿಕ್ಷಣದ ಭವಿಷ್ಯಕ್ಕೆ ದೂರಗಾಮಿ ಪರಿಣಾಮಗಳನ್ನು ಬೀರುವ ಕರಡು ಮಾರ್ಗಸೂಚಿಗಳ ಗುಚ್ಛವನ್ನು ಬಿಡುಗಡೆ ಮಾಡಿದೆ; ನಾವು ಇಲ್ಲಿ ಈ ಮಾರ್ಗಸೂಚಿಗಳ ಒಂದು ಅಂಶದ ಬಗ್ಗೆ ಮಾತ್ರ ಪರಿಶೀಲಿಸೋಣ- ಅದು ರಾಜ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಆಯ್ಕೆಯಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ತೆಗೆದುಹಾಕುವ ಅಂಶ. ಪಟ್ಟು

ಈವರೆಗೆ ಉಪಕುಲಪತಿ ಹುದ್ದೆಗೆ ಹೆಸರುಗಳನ್ನು ಶಿಫಾರಸು ಮಾಡುವ ಮೂವರು ಸದಸ್ಯರ ಶೋಧನಾ ಸಮಿತಿಯು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿಯಿಂದ ನೇಮಕಗೊಂಡ ಇಬ್ಬರು ಸದಸ್ಯರನ್ನು ಮತ್ತು ಕುಲಪತಿಗಳು ಸೂಚಿಸಿದ ಒಬ್ಬ ಸದಸ್ಯರನ್ನು ಹೊಂದಿರಬೇಕಿತ್ತು (ಕುಲಪತಿಗಳು ಸಾಮಾನ್ಯವಾಗಿ ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವನ್ನು ಸಂಪರ್ಕಿಸುತ್ತಿದ್ದರು); ಆದರೆ ಕರಡು ಯುಜಿಸಿ ಮಾರ್ಗಸೂಚಿಗಳು ಈ ಮೂವರು ಸದಸ್ಯರು ಯುಜಿಸಿ ನಾಮನಿರ್ದೇಶಿತರನ್ನು, ಕುಲಪತಿಗಳ ನಾಮನಿರ್ದೇಶಿತರನ್ನು ಮತ್ತು ಕಾರ್ಯಕಾರಿ ಸಮಿತಿಯ ನಾಮನಿರ್ದೇಶಿತರನ್ನು ಒಳಗೊಂಡಿರಬೇಕು ಎಂದು ಷರತ್ತು ವಿಧಿಸುತ್ತವೆ. ಈ ವಿಷಯದಲ್ಲಿ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಳ್ಳುವ ಜವಾಬ್ದಾರಿಯನ್ನು ರಾಜ್ಯಪಾಲರು ಇನ್ನು ಮುಂದೆ ಹೊಂದಿಲ್ಲದ ಕಾರಣ, ರಾಜ್ಯ ಸರ್ಕಾರವು ತನ್ನಿಂದಲೇ ಅನುದಾನ ಪಡೆದ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಉಪಕುಲಪತಿಗಳ ನೇಮಕಾತಿಯಲ್ಲಿ ಯಾವುದೇ ಪಾತ್ರವನ್ನು ವಹಿಸುವುದಿಲ್ಲ, ಆದರೆ ಕೇಂದ್ರ ಸರ್ಕಾರವು, ಯುಜಿಸಿ ಮತ್ತು ರಾಜ್ಯಪಾಲರ ನಾಮನಿರ್ದೇಶಿತರ ಮೂಲಕ, ರಾಜ್ಯ ವಿಶ್ವವಿದ್ಯಾಲಯಗಳಲ್ಲಿಯೂ ಸಹ ಯಾರು ಉಪಕುಲಪತಿ ಆಗುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ. ಇದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಒಂದು ಪಟ್ಟು ಹಿಡಿದು ಮಾಡುತ್ತಿರುವ ಕೇಂದ್ರೀಕರಣವಾಗಿದೆ.

ಸಂವಿಧಾನದ ಅಪಾಯಕಾರೀ ಉಲ್ಲಂಘನೆ

ರಾಜ್ಯಪಾಲರು ರಾಜ್ಯ ಸರ್ಕಾರಗಳಿಂದ ಸಂಪೂರ್ಣವಾಗಿ ಸ್ವತಂತ್ರರಾಗಬೇಕು ಎಂಬುದು ಅಕ್ಷರಶಃ ಸಂವಿಧಾನಕ್ಕೆ ಮತ್ತು ಅದರ ಚೇತನಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ ಮತ್ತು ಅದು ಕೇಂದ್ರ ಸರ್ಕಾರದ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುವ ಮೂಲಕ, ರಾಜಕೀಯ ಕ್ಷೇತ್ರದಲ್ಲಿ ಅಧಿಕಾರದ ಕೇಂದ್ರೀಕರಣಕ್ಕೆ ಒಂದು ದೊಡ್ಡ ಒತ್ತನ್ನು ನೀಡಿದೆ. ಇನ್ನೂ ಮುಖ್ಯವಾಗಿ, ಚುನಾಯಿತ ರಾಜ್ಯ ಸರ್ಕಾರದ ಮೇಲೆ ಸವಾರಿ ಮಾಡುವ ಮೂಲಕ, ರಾಜ್ಯಪಾಲರು ಜನಾದೇಶವನ್ನು ನಿರ್ಲಕ್ಷಿಸುತ್ತಿದ್ದಾರೆ, ಇದು ಖಂಡಿತವಾಗಿಯೂ ವಿನಾಶಕಾರೀ ಪರಿಣಾಮಗಳನ್ನು ಉಂಟುಮಾಡಬಹುದು. ಚುನಾಯಿತರಲ್ಲದ ರಾಜ್ಯಪಾಲರು ಸ್ವತಂತ್ರವಾಗಿ ಮತ್ತು ಚುನಾಯಿತ ಸರ್ಕಾರದ ಇಚ್ಛೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ಅನುಮತಿಸಿದರೆ, ಅದು ಸ್ಪಷ್ಟವಾಗಿ ಪ್ರಜಾಪ್ರಭುತ್ವವನ್ನು ಮೊಟಕುಗೊಳಿಸುತ್ತದೆ. ಮತ್ತು ಆ ರೀತಿಯಲ್ಲಿ ಮೊಟಕುಗೊಳಿಸುವುದನ್ನು ಮುಂದುವರಿಸಿದರೆ, ಅನಿವಾರ್ಯವಾಗಿ ದೇಶದ ಸ್ಥಿರತೆಗೆ ಬೆದರಿಕೆ ಹಾಕುವ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ.

ಸಂವಿಧಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಪನ್ಮೂಲಗಳು ಮತ್ತು ಅಧಿಕಾರಗಳನ್ನು ಎಚ್ಚರಿಕೆಯಿಂದ ವ್ಯಾಖ್ಯಾನಿಸಿರುವುದು, ರಾಜ್ಯ ಸರ್ಕಾರಗಳ ಸಂಪನ್ಮೂಲಗಳನ್ನು ಹೆಚ್ಚಿಸಲು ಸ್ವತಂತ್ರ ಹಣಕಾಸು ಆಯೋಗದ ನಿಬಂಧನೆ, ಇವೆಲ್ಲವೂ ಆಧುನಿಕ ಭಾರತದ ಜನರು ಪಡೆದುಕೊಂಡಿರುವ ಇಬ್ಬಗೆಯ ರಾಷ್ಟ್ರೀಯ ಪ್ರಜ್ಞೆಗೆ ಅನುಗುಣವಾಗಿಯೇ ಸಮನ್ವಯಗೊಂಡಿರುವಂತವುಗಳು ಮತ್ತು ಅದರ ಎರಡೂ ಬದಿಗಳನ್ನು ಸಮತೋಲನಗೊಳಿಸುವ ಉದ್ದೇಶವನ್ನು ಹೊಂದಿರುವವುಗಳು. ಕೇಂದ್ರೀಕರಣ ಎಂಬುದು ಕೇಂದ್ರದಿಂದ ರಾಜ್ಯ ಸರ್ಕಾರಗಳ ದಮನವನ್ನು ಮತ್ತು ಆಮೂಲಕ ಸೂಚ್ಯವಾಗಿಯಾದರೂ ಪ್ರಾದೇಶಿಕ-ಭಾಷಾ ರಾಷ್ಟ್ರೀಯತೆಯ ಪ್ರಜ್ಞೆಯ ಅಪಮೌಲ್ಯೀಕರಣವನ್ನು ಒಳಗೊಂಡಿರುತ್ತದೆ. ಸಂವಿಧಾನದ ಉಲ್ಲಂಘನೆಯ ಈ ನಿರ್ದಿಷ್ಟ ನಿದರ್ಶನವು ಪ್ರಜಾಪ್ರಭುತ್ವ-ವಿರೋಧಿ ಮಾತ್ರವಲ್ಲ; ಇದು ಅತ್ಯಂತ ಗಂಭೀರ ಪರಿಣಾಮಗಳನ್ನು ಉಂಟು ಮಾಡುವಂತದ್ದು, ದೂರದೃಷ್ಟಿಯಿಲ್ಲದ ಕೇಂದ್ರ ಸರ್ಕಾರಕ್ಕೆ ಇದರ ಪರಿವೆಯೇ ಇದ್ದಂತಿಲ್ಲ.

Donate Janashakthi Media

Leave a Reply

Your email address will not be published. Required fields are marked *