ಮುಂಬೈ: ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿಲ್ಲ ಎನ್ನುವ ಕೇಂದ್ರದ ನಿಲುವಿಗೆ ಸಾವನ್ನಪ್ಪಿದವರ ಸಂಬಂಧಿಕರು ಹೇಗೆ ಸ್ವೀಕರಿಸುತ್ತಾರೆ ಎಂದು ಪತ್ತೆ ಮಾಡಬೇಕಿದೆ. ಹೀಗೆ ಹೇಳಿಕೆ ಕೇಳಿಸಿಕೊಂಡ ಮೇಲೆ ಮಾತೇ ಹೊರಡುತ್ತಿಲ್ಲ. ಹೀಗೆ ಸುಳ್ಳು ಹೇಳುತ್ತಿರುವ ಕೇಂದ್ರ ಸರಕಾರದ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಇದಕ್ಕಾಗಿ ಕೋವಿಡ್ ರೋಗಿಗಳ ಬಂಧುಗಳು, ಕೇಂದ್ರ ಸರ್ಕಾರವನ್ನು ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸುವಂತೆ ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಕೋವಿಡ್ ಎರಡನೇ ಅಲೆಯಿಂದ ತೀವ್ರಗತಿಯಲ್ಲಿ ಏರಿಕೆ ಪಡೆದುಕೊಂಡಿದ್ದ ಕೊರೊನಾ ರೋಗಿಗಳಿಂದಾಗಿ ದೇಶದಲ್ಲಿ ಗಂಭೀರ ಸಮಸ್ಯೆಗಳು ಎದುರಾದವು ಈ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಎದುರಾಗಿದ್ದರಿಂದ ಕೋವಿಡ್-19 ನಿಂದಾಗಿ ಸಾವುಗಳು ಸಹ ಗಣನೀಯವಾಗಿ ಏರಿಕೆ ಕಂಡಿದ್ದವು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಸರಕಾರವು ನಿನ್ನೆ ನಡೆದ ಸಂಸತ್ ಅಧಿವೇಶನದಲ್ಲಿ ಆಮ್ಲಜನಕ ಕೊರತೆಯಿಂದ ಕೋವಿಡ್ ಸಾವುಗಳು ಸಂಭವಿಸಿಲ್ಲ ಎಂದು ವರದಿ ಮಾಡಿದೆ.
ಇದನ್ನು ಓದಿ: ಕೋವಿಡ್ ನಿರ್ವಹಣೆ ಅಲ್ಲ-ನಿಯಮಗಳ ಉಲ್ಲಂಘನೆಯೇ ಸರಕಾರದ ಸಾಧನೆ: ಮಲ್ಲಿಕಾರ್ಜು ಖರ್ಗೆ
‘ಕೋವಿಡ್ ಮೊದಲ ಅಲೆಯಲ್ಲಿ 3095 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಅವಶ್ಯಕತೆ ಇತ್ತು. ನಂತರ ಎರಡನೇ ಅಲೆಯ ವೇಳೆಗೆ ಆ ಬೇಡಿಕೆ ದ್ವಿಗುಣಗೊಂಡಿತು. ಎರಡನೇ ಅಲೆಯಲ್ಲಿ 9 ಸಾವಿರ ಮೆಟ್ರಿಕ್ ಟನ್ನಷ್ಟು ವೈದ್ಯಕೀಯ ಆಮ್ಲಜನಕದ ಬೇಡಿಕೆ ಇತ್ತು. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸಮನಾಗಿ ಆಮ್ಲಜನಕವನ್ನು ಪೂರೈಕೆ ಮಾಡಲು ಕ್ರಮ ಕೈಗೊಂಡಿದೆ‘ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವುತ್, ‘ಆಮ್ಲಜನಕ ಕೊರತೆಯಿಂದಾಗಿ ಕೋವಿಡ್ ರೋಗಿಗಳ ಸಾವುಗಳು ಸಂಭವಿಸಿದ್ದರೂ ಸಹ ಕೇಂದ್ರವು ಸತ್ಯವನ್ನು ಮರೆಮಾಚುತ್ತಿದೆ. ಇದು ಪೆಗಾಸಸ್ ನ (ಇಸ್ರೇಲಿ ಸ್ಪೈವೇರ್) ಪರಿಣಾಮ ಎಂದು ನಾನು ಭಾವಿಸುತ್ತೇನೆ‘ ಎಂದು ವ್ಯಂಗ್ಯವಾಡಿದರು.
ಇದನ್ನು ಓದಿ: ದೆಹಲಿಗೆ ಆಮ್ಲಜನಕ ಪೂರೈಸಿ-ಇಲ್ಲ ನ್ಯಾಯಾಂಗ ನಿಂದನೆ ಎದುರಿಸಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಎಚ್ಚರಿಕೆ
ಕೇಂದ್ರ ಸರ್ಕಾರ ನೆನ್ನೆ ರಾಜ್ಯಸಭೆ ಅಧಿವೇಶನದಲ್ಲಿ ‘ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾದಂತೆ ಕೋವಿಡ್ ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದ ಕೋವಿಡ್ ಸಾವುಗಳು ಸಂಭವಿಸಿಲ್ಲ‘ ಎಂದು ಮಾಹಿತಿ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಾವುತ್, ‘ಹಲವು ರಾಜ್ಯಗಳಲ್ಲಿ ಅನೇಕರು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂಬ ನಿಖರ ವರದಿಗಳು ಇವೆ‘ ಎಂದು ಹೇಳಿದರು.
ಕೇಂದ್ರ ಸರಕಾರದ ಹೇಳಿಕೆಯ ವಿರುದ್ಧ ದೇಶಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಮ್ಲಜನಕ ಕೊರತೆಯಿಂದ ಜನರ ಸಾವಾಗಿದ್ದರೂ ಸರಕಾರ ಸುಳ್ಳು ಹೇಳುತ್ತಿದೆ ಆಕ್ಷೇಪಣೆಗಳು ಕೇಳಿ ಬರುತ್ತಿವೆ.