ಹಾಸನ: ಪೆನ್ಡ್ರೈವ್ ಲೈಂಗಿಕ ಹಗರಣ ದಿನದಿನಕ್ಕೂ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಕುರಿತು ಮೇ 18 ಕ್ಕೆ ಹಾಸನದಲ್ಲಿ ರಾಜ್ಯಮಟ್ಟದ ಸಮಾಲೋಚನಾ ಸಭೆ ನಿಗದಿಯಾಗಿದೆ ಎಂದು ಜನಪರ ಸಂಘಟನೆಗಳು ತಿಳಿಸಿವೆ. ಪೆನ್ಡ್ರೈವ್
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಸಂಸದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳ ವಿರುದ್ಧ ಈಗಾಗಲೇ ಅತ್ಯಂತ ವ್ಯಾಪಕವಾಗಿ ತೀವ್ರ ಆಕ್ರೋಶ ಮತ್ತು ಪ್ರತಿಭಟನೆ ವ್ಯಕ್ತವಾಗಿದೆ. ಸಾರ್ವಜನಿಕವಾಗಿ ವ್ಯಕ್ತವಾದ ತೀವ್ರ ಒತ್ತಡದಿಂದಾಗಿ ರಾಜ್ಯ ಸರ್ಕಾರ ಈಗಾಗಲೇ SIT ರಚಿಸಿ, ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ತಿಳಿಸಿವೆ.
ಈ ನಡುವೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಪ್ರಕರಣದ ತನಿಖೆಯನ್ನು SIT ಬದಲು CBI ಗೆ ವಹಿಸುವಂತೆ ಒತ್ತಾಯಿಸುತ್ತಿವೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರ ವಿಶ್ವಾಸ ಕುಗ್ಗಿಸಿ ಅವರು SIT ಮುಂದೆ ಹಾಜರಾಗದಂತ ಪರಿಸ್ಥಿತಿಯನ್ನು ಈ ಪಕ್ಷಗಳು ಸೃಷ್ಟಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿವೆ. ಪೆನ್ಡ್ರೈವ್
ಕಾಂಗ್ರೇಸ್ ಪಕ್ಷ ಮತ್ತು ರಾಜ್ಯದ ಕಾಂಗ್ರೇಸ್ ಸರ್ಕಾರ ಕೂಡ ಈ ರಾಜಕೀಯ ಲಾಭನಷ್ಟಗಳ ಲೆಕ್ಕಾಚಾರದ ಬಿಟ್ಟು, ಸಂತ್ರಸ್ತ ಮಹಿಳೆಯರ ರಕ್ಷಣೆ, ಪುನರ್ವಸತಿ ಬಗ್ಗೆ ಚಿಂತಿಸಬೇಕು. ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ವೀಡಿಯೋ ಚಿತ್ರೀಕರಣ ಮಾಡಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರನ್ನು ಮತ್ತು ಲೈಂಗಿಕ ವೀಡಿಯೋಗಳನ್ನು ಸಾರ್ವಜನಿಕವಾಗಿ ಬಿತ್ತರಿಸಿರುವವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಬೇಕಾದ ಸೂಕ್ಷ್ಮತೆ, ಪ್ರಬುದ್ಧತೆ ಮತ್ತು ದಿಟ್ಟತನವನ್ನು ಕಾಂಗ್ರೇಸ್ ಸರ್ಕಾರ ತೋರಿಸಬೇಕಿದೆ ಎಂದು ಆಗ್ರಹಿಸಿವೆ.
ಇದನ್ನು ಓದಿ : ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಬಿಜೆಪಿ ಮೇಲೆ ಆರೋಪ ಹೊರಿಸುವ ಪ್ರಯತ್ನ: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್
ಪ್ರಜ್ವಲ್ ರೇವಣ್ಣ ಮತ್ತು ವೀಡಿಯೋಗಳನ್ನು ಹಂಚಿದವರನ್ನು ಕೂಡಲೇ ಬಂಧಿಸುವಂತೆ, ದೌರ್ಜನ್ಯಕ್ಕೊಳಗಾದ ಸಂತ್ರಸ್ಥ ಮಹಿಳೆಯರಿಗೆ ರಕ್ಷಣೆ ನೀಡಿ ಗೌಪ್ಯತೆ ಮತ್ತು ಘನತೆ ಕಾಪಾಡುವಂತೆ, SIT ಯಾವುದೇ ರಾಜಕೀಯ ಮತ್ತು ಪ್ರಭಾವಿಗಳ ಒತ್ತಡಗಳಿಗೆ ಒಳಗಾಗದಂತೆ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಮತ್ತು ನಿರ್ಧಿಷ್ಟ ಕಾಲಮಿತಿಯೊಳಗೆ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಿ ರಾಜ್ಯಾದ್ಯಂತ ವ್ಯಾಪಕ ಚಳುವಳಿಯನ್ನು ರೂಪಿಸುವ ಅಗತ್ಯವಿದೆ. ಈ ಚಳುವಳಿಗೆ ರಾಜ್ಯದ ಎಲ್ಲಾ ಮಹಿಳಾ, ದಲಿತ, ರೈತ, ಕಾರ್ಮಿಕ ಮತ್ತು ಜನಪರ ಸಂಘಟನೆಗಳು, ಸಾಹಿತಿಗಳು, ಕಲಾವಿದರು, ಸಮಾನ ಮನಸ್ಕರು ಒಟ್ಟಾಗಿ ಸೇರಿ ಐಕ್ಯ ವೇದಿಕೆಯ ಮುಖಾಂತರ ಕಾರ್ಯತಂತ್ರ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಮೇ 18, 2024 ರ ಶನಿವಾರ ಬೆಳಗ್ಗೆ 11 ಗಂಟೆಗೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ, ಕರ್ನಾಟಕ ರಾಜ್ಯದ ಮತ್ತು ಹಾಸನ ಜಿಲ್ಲೆಯ ಎಲ್ಲಾ ಮಹಿಳಾ, ದಲಿತ, ರೈತ, ಕಾರ್ಮಿಕ, ಅಲ್ಪಸಂಖ್ಯಾತ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳ ಹಾಗೂ ಸಾಹಿತಿಗಳು ಕಲಾವಿದರು ಸಮಾನ ಮನಸ್ಕರನ್ನು ಒಳಗೊಂಡಂತೆ ರಾಜ್ಯ ಮಟ್ಟದ ಸಮಾಲೋಚನಾ ಸಭೆಗೆ ಕರೆ ನೀಡಲಾಗಿದೆ. ಈ ಸಭೆಯಲ್ಲಿ ಮಹಿಳೆಯರ ಘನತೆಯನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಒಂದು ಪ್ರಬಲ ಚಳುವಳಿ ರೂಪಿಸುವ ಹಾಗೂ ಹಾಸನದಲ್ಲಿ ಒಂದು ದೊಡ್ಡ ಸ್ವರೂಪದ ಹೋರಾಟ ಹಾಗೂ ಬಹಿರಂಗ ಸಮಾವೇಶವನ್ನು ಆಯೋಜಿಸುವ ನಿಟ್ಟಿನಲ್ಲಿ ಚರ್ಚಿಸಿ ಎಲ್ಲರನ್ನೂ ಒಳಗೊಳ್ಳುವ ಒಂದು ವಿಶಾಲ ಐಕ್ಯ ವೇದಿಕೆ ರಚಿಸಲು ತೀರ್ಮಾನಿಸಲಾಗುವುದು ಎಂದು ಜನಪರ ಸಂಘಟನೆಗಳು ಮನವಿ ಮಾಡಿವೆ.ಪೆನ್ಡ್ರೈವ್
ಇದನ್ನು ನೋಡಿ : 90 ದಿನ ವಿದೇಶದಲ್ಲಿ ಇರ್ತಾರಾ ಪ್ರಜ್ವಲ್ ರೇವಣ‍್ಣ!ಇಂಟರ್ ಪೋಲ್ ಬಂಧಿಸಿ ಭಾರತಕ್ಕೆ ಕರೆ ತರುತ್ತಾ?