ರೈತರು ಮತ್ತು ಕೃಷಿಕಾರ್ಮಿಕರ ಆಂದೋಲನ ಆರಂಭ : ಸಂಯುಕ್ತ ಕಿಸಾನ್‍ ಮೋರ್ಚಾ (ಅಕ್ಟೋಬರ್ 3 – ಹುತಾತ್ಮ ದಿನಾಚರಣೆ; ನವೆಂಬರ್ 26- ವಿಜಯ ದಿನಾಚರಣೆ)

ಏಪ್ರಿಲ್ 30ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ)ದ ರಾಷ್ಟ್ರೀಯ ಸಭೆ ನಡೆಯಿತು, ಇದರಲ್ಲಿ 200 ಕ್ಕೂ ಹೆಚ್ಚು ಘಟಕ ಸಂಘಟನೆಗಳ ರೈತ ಮುಖಂಡರು ಭಾಗವಹಿಸಿದ್ದರು. ವಿವರವಾದ ಚರ್ಚೆ ಮತ್ತು ಸಮಾಲೋಚನೆಯ ನಂತರ ಈ ತಿಂಗಳಿಂದ ರೈತರು ಮತ್ತು ಕೃಷಿ ಕಾರ್ಮಿಕರ ವಿವಿಧ ಹಕ್ಕೊತ್ತಾಯಗಳ ಮೇಲೆ ಅಖಿಲ ಭಾರತ ಆಂದೋಲನವನ್ನು ನಿರ್ಧರಿಸಲಾಯಿತು,ಮತ್ತು 3 ನಿರ್ಣಯಗಳನ್ನು ಕೈಗೊಳ್ಳಲಾಯಿತು.
ರಾಷ್ಟ್ರೀಯ ಸಭೆಯು ಈ ಕೆಳಗಿನ ನಿರ್ಧಾರಗಳನ್ನು ತೆಗೆದುಕೊಂಡಿತು:

1) ಕನಿಷ್ಟ ಬೆಂಬಲ ಬೆಲೆ ಕಾಯ್ದೆ, ಸಾಲದಿಂದ ವಿಮೋಚನೆ, ರೈತ ಮತ್ತು ರೈತ ಕಾರ್ಮಿಕರ ಪಿಂಚಣಿ, ಸಮಗ್ರ ಬೆಳೆ ವಿಮಾ ಯೋಜನೆ, ರೈತರ ಕೊಲೆಗಾರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಬಂಧನ, ರೈತರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯುವುದು, ಹುತಾತ್ಮ ರೈತರ ಕುಟುಂಬಗಳಿಗೆ ಪರಿಹಾರ ಈ ಎಲ್ಲ ಮೂಲ ಪ್ರಶ್ನೆಗಳ ಮೇಲೆ ಮೇ 26 ರಿಂದ 31ರ ವರೆಗೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಪ್ರತಿಭಟನೆಗಳು ಮತ್ತು ಆಂದೋಲನಗಳನ್ನು ನಡೆಸಲಾಗುವುದು. ಇದರಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿ, ಎಲ್ಲಾ ಸಂಸತ್ ಸದಸ್ಯರು ಮತ್ತು ಪ್ರಮುಖ ರಾಜಕೀಯ ನಾಯಕರಿಗೆ ಅವರ ಕ್ಷೇತ್ರಗಳಲ್ಲಿ ಜ್ಞಾಪಕ ಪತ್ರವನ್ನು ಸಲ್ಲಿಸುವುದು, ರೈತರ ಎಲ್ಲ ಪ್ರಶ್ನೆಗಳನ್ನು ಪರಿಹರಿಸಲು ವಿಫಲವಾದರೆ ಮುಂದೆ ಇನ್ನಷ್ಟು ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರಿಗೆ ಎಚ್ಚರಿಕೆ ನೀಡುವುದು.

2) ಮೇ, ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ, ಎಸ್‍ಕೆಎಂ ನ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಾವೇಶಗಳನ್ನು ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ರೈತರು ಮತ್ತು ರೈತ ಕಾರ್ಮಿಕರನ್ನು ಹುರಿದುಂಬಿಸಲು ಮತ್ತು ಸಂಘಟಿಸಲು ನಡೆಸಲಾಗುವುದು.

3) ಆಗಸ್ಟ್ 1ರಿಂದ15 ರ ನಡುವೆ, ಕೇಂದ್ರ ಸರ್ಕಾರವು ಕಾರ್ಪೊರೇಟ್‌ಗಳಿಗೆ ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಮಾರಾಟ ಮಾಡುವುದನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿ ಕಾರ್ಮಿಕ ಸಂಘಗಳು ಮತ್ತು ಸಂಘಟನೆಗಳೊಂದಿಗೆ ಸಮನ್ವಯದಲ್ಲಿ ಸಾಮೂಹಿಕ ಪ್ರತಿಭಟನೆಗಳನ್ನು ನಡೆಸಲಾಗುವುದು.

4) ಸೆಪ್ಟೆಂಬರ್‌ನಿಂದ ನವೆಂಬರ್ ಮಧ್ಯದ ಅವಧಿಯಲ್ಲಿ, ದೇಶದಾದ್ಯಂತ ಬೃಹತ್ ಅಖಿಲ ಭಾರತ ಯಾತ್ರೆಗಳನ್ನು ನಡೆಸಲಾಗುವುದು, ಇವುಗಳಿಗೆ ಎಸ್‍ಕೆಎಂನ ರಾಷ್ಟ್ರೀಯ ನಾಯಕರು ನೇತೃತ್ವ ನೀಡುತ್ತಾರೆ. ಯಾತ್ರೆಗಳು ವಿಶೇಷವಾಗಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮುಂತಾದ ವಿಧಾನಸಭಾ ಚುನಾವಣೆಗಳನ್ನು ಕಾಣಲಿರುವ ರಾಜ್ಯಗಳ ಮೇಲೆ ಗಮನ ಕೇಂದ್ರೀಕರಿಸಿ ನಡೆಯುತ್ತವೆ.

5) ಲಖಿಂಪುರ ಖೇರಿಯಲ್ಲಿ ಬಿಜೆಪಿ ನಾಯಕರು ರೈತರನ್ನು ಹತ್ಯೆ ಮಾಡಿದ ದಿನವಾದ ಅಕ್ಟೋಬರ್ 3 ರಂದು ಅಖಿಲ ಭಾರತ ಹುತಾತ್ಮ ದಿನಾಚರಣೆ ನಡೆಯಲಿದೆ.

6) ನವೆಂಬರ್ 26 ರಂದು, ರೈತರ ಐತಿಹಾಸಿಕ ದಿಲ್ಲಿ ಚಲೋ ಮೆರವಣಿಗೆ ದೆಹಲಿಯ ಗಡಿಯನ್ನು ತಲುಪಿದ ದಿನ, ಅಖಿಲ ಭಾರತ ವಿಜಯ ದಿನಾಚರಣೆಯನ್ನು ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಕನಿಷ್ಠ 3 ದಿನಗಳ ಕಾಲ ಹಗಲು-ರಾತ್ರಿ ಧರಣಿ ನಡೆಸುವ ಮೂಲಕ ಆಚರಿಸಲಾಗುತ್ತದೆ.

ಎಪ್ರಿಲ್‍ 30ರ ಎಸ್‍ಕೆಎಂ ರಾಷ್ಟ್ರೀಯ ಸಭೆಯು ಈ ಕೆಳಗಿನ ನಿರ್ಣಯಗಳನ್ನು ಅಂಗೀಕರಿಸಿತು:

1) ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ಕುಳಿತಿರುವ ಭಾರತದ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆಯನ್ನು ಎಸ್‍ಕೆಎಂ ದೃಢವಾಗಿ ಮತ್ತು ನಿಸ್ಸಂದಿಗ್ಧವಾಗಿ ಬೆಂಬಲಿಸಿದೆ ಮತ್ತು ಕ್ರೀಡಾ ಪಟುಗಳಿಗೆ ಸೌಹಾರ್ದ ವ್ಯಕ್ತಪಡಿಸಿದೆ ,ಬಿಜೆಪಿ ಸಂಸದನನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದೆ. ಎಸ್‌ಕೆಎಂ ಮುಖಂಡರ ಪೂರ್ಣ ನಿಯೋಗವು ಪ್ರತಿಭಟನಾ ಸ್ಥಳಕ್ಕೆ ಹೋಗಿ ಕ್ರೀಡಾಪಟುಗಳನ್ನು ಭೇಟಿ ಮಾಡಿ ಅವರಿಗೆ ಎಸ್‌ಕೆಎಂ ನ ಬೆಂಬಲವನ್ನು ವ್ಯಕ್ತಪಡಿಸಿದರು.
2) ರೈತರ ಚಳವಳಿ ಮತ್ತು ಎಸ್‌ಕೆಎಂನ ದೃಢ ಬೆಂಬಲಿಗರಾಗಿದ್ದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ವಿರುದ್ಧ ಬಿಜೆಪಿ ಸರ್ಕಾರವು ಸಿಬಿಐನಂತಹ ಕೇಂದ್ರೀಯ ಏಜೆನ್ಸಿಗಳನ್ನು ಹರಿಯ ಬಿಟ್ಟಿರುವುದನ್ನು ಎಸ್‌ಕೆಎಂ ಖಂಡಿಸಿದೆ. ಪುಲ್ವಾಮಾದಲ್ಲಿ ನಮ್ಮ ಸೈನಿಕರ ಅನಗತ್ಯ ಪ್ರಾಣಹಾನಿ, ಉನ್ನತ ಮಟ್ಟದ ಬಿಜೆಪಿ ನಾಯಕತ್ವದ ಭ್ರಷ್ಟಾಚಾರ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಶ್ರೀ ಮಲಿಕ್ ಬಿಜೆಪಿ ಸರ್ಕಾರದ ದುಷ್ಕೃತ್ಯಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಶ್ರೀ ಮಲಿಕ್ ಅವರ ಧೈರ್ಯವನ್ನು ಶ್ಲಾಘಿಸಿದ ಎಸ್‍ಕೆಎಂ, ಶ್ರೀ ಮಲಿಕ್‌ ಬಾಯಿ ಮುಚ್ಚಿಸುವ ಬಿಜೆಪಿ ಸರ್ಕಾರದ ಯತ್ನಗಳನ್ನು ಪ್ರತಿರೋಧಿಸುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ನಿರ್ಧರಿಸಿದೆ.
3) ಭಾರತದ ಅಂಚೆ ನೌಕರರ ಅತ್ಯಂತ ಹಳೆಯ ಸಂಘಗಳಾದ ರಾಷ್ಟ್ರೀಯ ಅಂಚೆ ನೌಕರರ ಒಕ್ಕೂಟ ಮತ್ತು ಅಖಿಲ ಭಾರತ ಅಂಚೆ ನೌಕರರ ಸಂಘಗಳ ಮಾನ್ಯತೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವುದನ್ನು ಎಸ್‍ಕೆಎಂ ಖಂಡಿಸಿದೆ, ಈ ಸಂಘಗಳು ದೆಹಲಿಯ ಐತಿಹಾಸಿಕ ಹೋರಾಟವನ್ನು ಬೆಂಬಲಿಸಿವೆ ಮತ್ತು ರೈತ ಸಂಘಟನೆಗಳಿಗೆ ಕೆಲವು ನಿಧಿಗಳ ದೇಣಿಗೆ ನೀಡಿವೆ ಎಂಬ ಕಾರಣಕ್ಕೆ ಈ ಕ್ರಮ ಕೈಗೊಂಡಿರುವುದಾಗಿ ಹೇಳಲಾಗಿದೆ. ಎಸ್‌ಕೆಎಂ ಈ ಸಂಘಟನೆಗಳೊಂದಿಗೆ ಸೌಹಾರ್ದವನ್ನು ವ್ಯಕ್ತಪಡಿಸಿದೆ ಮತ್ತು ಮಾನ್ಯತೆ ರದ್ದುಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ, ಹಾಗೂ ರೈತ ವಿರೋಧಿ, ಕಾರ್ಮಿಕ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಮಿಕ ರೈತ ಐಕ್ಯತೆ ಹೆಚ್ಚುವದನ್ನು ಎದುರು ನೋಡುತ್ತಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *