ಕಾರ್ಲ್ ಮಾರ್ಕ್ಸ್ ಮತ್ತು ಆತನ ವಿಶ್ಲೇಷಣೆಗಳನ್ನು ತೀವ್ರವಾಗಿ ಟೀಕಿಸುವ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ನ ಒಂದು ಭಾಷಣ ಸರಣಿಯಿಂದಾಗಿ ಮಾರ್ಕ್ಸ್ ನನ್ನು ಓದುವ ಕುತೂಹಲ ಮೂಡಿ, ಆತನ ಕೃತಿಗಳನ್ನು ಓದುತ್ತಾ ಕೊನೆಗೆ ಮಾರ್ಕ್ಸ್ ವಾದಿ ಯಾಗಿಬಿಟ್ಟ ಪಾಲ್ಲ್ ಸ್ವೀಜಿಯವರ ಚಿಂತನೆಗಳು ಈಗ ಜಾಗತೀಕರಣದ ಸಮಯದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿವೆ. ಪಾಲ್
-ಟಿ.ಎಸ್.ವೇಣುಗೋಪಾಲ್
ಪಾಲ್ ಮಾರ್ಲರ್ ಸ್ವೀಜಿ ಪ್ರಖ್ಯಾತ ಮಾರ್ಕ್ಸ್ವಾದಿ ಅರ್ಥಶಾಸ್ತ್ರಜ್ಞ. ಅರ್ಥಶಾಸ್ತ್ರಕ್ಕೆ ಅದರಲ್ಲೂ ವಿಶೇಷವಾಗಿ ಮಾರ್ಕ್ಸ್ ವಾದಿ ಅರ್ಥಶಾಸ್ತ್ರಕ್ಕೆ ಅವರ ಕೊಡುಗೆ ಅಪಾರ. ಅವರು ಪ್ರಾರಂಭಿಸಿದ ‘ಮಂತ್ಲಿ ರಿವ್ಯೂ’ ಪತ್ರಿಕೆ ಒಂದು ಎಡಪಂಥೀಯ ವಿಶ್ವವಿದ್ಯಾನಿಲಯವೇ ಆಗಿತ್ತು. ಅದರಿಂದ ಪ್ರಭಾವಿತರಾದವರಿಗೆ ಲೆಕ್ಕವೇ ಇಲ್ಲ. ಮಾರ್ಕ್ಸ್ ಆರ್ಥಿಕ ಚಿಂತನೆಯನ್ನು ಬೆಳೆಸಿದ ಕೆಲವರಲ್ಲಿ ಸ್ವೀಜಿ ಒಬ್ಬರು. ಪಾಲ್
ಸ್ವೀಜಿ ಏಪ್ರಿಲ್ 10, 1910ರಲ್ಲಿ ನ್ಯೂಯಾರ್ಕ್ ಪಟ್ಟಣದಲ್ಲಿ ಜನಿಸಿದರು. ಅಸಾಧಾರಣ ಬುದ್ಧಿವಂತ. ‘ಗ್ರೀಕ್ ದೇವತೆಗ’ಳನ್ನು ಹೋಲುವ ಸ್ಫುರದ್ರೂಪಿ. ಓದಿದ್ದು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ. ನಂತರ ಆಗ ಬಹುತೇಕ ಜನ ಮಾಡುತ್ತಿದ್ದಂತೆ ಕೆಲ ಕಾಲ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಓದಿದರು. ಪ್ರಖ್ಯಾತ ಅರ್ಥಶಾಸ್ತ್ರಜ್ಞ ಜೋಸೆಫ್ ಷಂಪೀಟರ್ ಮಾರ್ಗದರ್ಶನದಲ್ಲಿ “ಮನೋಪಲಿ ಅಂಡ್ ಕಾಂಪಿಟೇಷನ್ ಇನ್ ದಿ ಇಂಗ್ಲೀಷ್ ಕೋಲ್ ಟ್ರೇಡ್ 1550-1850” ಕುರಿತು ಸಂಶೋಧನೆ ಮಾಡಿದರು. ಪಾಲ್ ಸ್ಯಾಮ್ಯಯಲ್ಸನ್ ಇವರ ಸಹಪಾಠಿ. ಇಬ್ಬರೂ ಷಂಪೀಟರಿಗೆ ತೀರಾ ಅಚ್ಚುಮೆಚ್ಚಾದ ಶಿಷ್ಯರಾಗಿದ್ದರು. ಷಂಪೀಟರ್ ಮಾರ್ಕ್ಸ್ ನನ್ನು ಚೆನ್ನಾಗಿ ಓದಿಕೊಂಡಿದ್ದರು. ಆದರೆ ಅವನನ್ನು ತೀವ್ರವಾಗಿ ಟೀಕಿಸುತ್ತಿದ್ದರು. ಪಾಲ್
ಇದನ್ನೂ ಓದಿ: ಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ.. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿ ಯಾ ವಿರುದ್ಧ ಭರ್ಜರಿ ಗೆಲುವು
ಅದು ಜೆ ಎಂ ಕೇನ್ಸ್ ಅವರ ಪ್ರಭಾವ ಪ್ರಬಲವಾಗಿದ್ದ ಕಾಲ. ಸ್ವೀಜಿಗೆ ಕೂಡ ಕೇನ್ಸ್ ಬಗ್ಗೆ ಅಪಾರ ಗೌರವವಿತ್ತು. ಬಹುಶಃ ಕೇನ್ಸ್ ಅವರ ಒಳನೋಟವನ್ನು ಮಾರ್ಕ್ಸ್ವಾದಿ ಚಿಂತನೆಯ ಪರಿಧಿಯೊಳಕ್ಕೆ ಮೊದಲಿಗೆ ತಂದವರೇ ಸ್ವೀಜಿ ಇರಬೇಕು. ಕೇನ್ಸ್ ಚಿಂತನೆಗಳನ್ನು ವಿರೋಧಿಸುವವರು ಸಾಕಷ್ಟೇ ಇದ್ದರು. ಕೇನ್ಸ್ ಚಿಂತನೆಗಳನ್ನು ಖಂಡಿಸುವ ಉದ್ದೇಶದಿಂದಲೇ ಲಿಯೊನಲ್ ರಾಬಿನ್ಸ್ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ ನಲ್ಲಿ ಫ್ರೆಡ್ರಿಕ್ ವಾನ್ ಹಯೆಕ್ ಅವರಿಂದ ಭಾಷಣ ಸರಣಿಯನ್ನೇ ಏರ್ಪಡಿಸಿದ್ದರು. ಹಯೆಕ್ ಭಾಷಣದುದ್ದಕ್ಕೂ ಮಾರ್ಕ್ಸ್ನನ್ನು ತೀವ್ರವಾಗಿ ಟೀಕಿಸಿದ್ದರು. ಸ್ವೀಜಿಗೆ ಮಾರ್ಕ್ಸ್ನನ್ನು ಓದುವ ಕುತೂಹಲ ಮೂಡಿತು. ಮಾರ್ಕ್ಸ್ನನ್ನುಓದುತ್ತಾ ಕೊನೆಗೆ ಮಾರ್ಕ್ಸ್ವಾದಿ ಯಾಗಿಬಿಟ್ಟರು. ಆಗ ಅಮೇರಿಕೆಯಲ್ಲಿ ಬಲಪಂಥೀಯ ಚಿಂತನೆ ಹೆಚ್ಚು ಪ್ರಬಲವಾಗಿತ್ತು. ಹಾಗಾಗಿ ಇವರಿಗೆ ಹಾರ್ವರ್ಡಿನಲ್ಲಿ ಅಧ್ಯಾಪಕರಾಗಿ ಮುಂದುವರಿಯುವುದು ಕಷ್ಟವಿತ್ತು. ಪಾಲ್
ರಾಜೀನಾಮೆ ಕೊಟ್ಟು ಹೊರಬಂದರು. ಗೆಳೆಯ ಲಿಯೊ ಹ್ಯೂಬರ್‌ಮನ್ ಜೊತೆ ಸೇರಿಕೊಂಡು ಸ್ವತಂತ್ರ ಸಮಾಜವಾದೀ ಜರ್ನಲ್ ‘ಮಂತ್ಲಿ ರಿವ್ಯೂ’ ಪ್ರಾರಂಭಿಸಿದರು. ಅಲ್ಬರ್ಟ್ ಐನಸ್ಟೀನ್ ಒಂದಿಷ್ಟು ಹಣ ನೀಡಿದ್ದರು. ‘ವೈ ಸೋಷಿಯಲಿಸಂ’ ಎಂಬ ಲೇಖನವನ್ನೂ ಬರೆದುಕೊಟ್ಟಿದ್ದರು. ಮೇ 1949ರಲ್ಲಿ ಪ್ರಥಮ ಸಂಚಿಕೆ ಹೊರಬಂತು. 1997ರವರೆಗೆ ಅದರ ಸಂಪಾದಕತ್ವ ವಹಿಸಿಕೊಂಡಿದ್ದರು. ಕೇವಲ ಅಕೆಡೆಮಿಕ್ ಆಗಿ ಮಾತ್ರವಲ್ಲ, ಜನಪರ ಹೋರಾಟಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಕ್ಯೂಬನ್ ಕ್ರಾಂತಿ, ಫ್ಯಾಸಿಸಂ ವಿರುದ್ಧದ ಚಳುವಳಿಗಳು, ವಿಯಟ್ನಾಂ ಮೇಲಿನ ದಾಳಿಯ ವಿರುದ್ಧದ ಹೋರಾಟ ಎಲ್ಲವನ್ನು ಬೆಂಬಲಿಸುತ್ತಾ ಸಕ್ರಿಯವಾಗಿದ್ದರು.
ಪ್ರಾರಂಭದಲ್ಲಿ ಅವರ ಬರಹಗಳಲ್ಲಿ ಮಾರ್ಕ್ಸ್ವಾದ ಇರಲಿಲ್ಲ. ಮುಖ್ಯವಾಹಿನಿಯ ಅರ್ಥಶಾಸ್ತ್ರದ ಬಗ್ಗೆ ಸಾಕಷ್ಟೇ ಬರೆದಿದ್ದರು. ಅವರ ಮೊದಲ ಲೇಖನ ಎ. ಸಿ. ಪಿಗೂ ಅವರ ‘ಥಿಯರಿ ಆಫ್ ಎಂಪ್ಲಾಯ್‌ಮೆಂಟ್’ ಕುರಿತ ಟೀಕೆಯಾಗಿತ್ತು. ಪಿಗು ಅವರ ದೃಷ್ಟಿಯಲ್ಲಿ ಹೆಚ್ಚಿನ ನೈಜ ಕೂಲಿಗಾಗಿನ ಕಾರ್ಮಿಕರ ಬೇಡಿಕೆಯೇ ನಿರುದ್ಯೋಗಕ್ಕೆ ಕಾರಣವಾಗಿತ್ತು. ಕೂಲಿ ನಿರುದ್ಯೋಗಕ್ಕೆ ಕಾರಣವಲ್ಲ ಎಂದು ವಾದಿಸಿದ ಸ್ವೀಜಿಯವರು ಪಿಗು ಅವರ ವಾದವನ್ನು ಬಲವಾಗಿ ಖಂಡಿಸಿದರು. ಅವರ ಲೇಖನಗಳಲ್ಲಿ ಕೇನ್ಸ್ ಚಿಂತನೆಗಳ ಪ್ರಭಾವವನ್ನು ಕಾಣಬಹುದಿತ್ತು. 1937-38ರ ಆರ್ಥಿಕ ಹಿಂಜರಿತದ ಸಮಯದಲ್ಲಿ ಬಜೆಟ್ ಕೊರತೆಯ ಮೂಲಕ ಸರ್ಕಾರ ಹೆಚ್ಚು ವೆಚ್ಚ ಮಾಡಬೇಕು ಎಂದು ಸೂಚಿಸಿದ್ದರು. ಪಾಲ್
ಸ್ವೀಜಿಯವರ ಬಾಗಿದ ಬೇಡಿಕೆ ರೇಖೆ (ಕಿಂಕಡ್ ಡಿಮಾಂಡ್ ಕರ್ವ್) ಇಂದಿಗೂ ಪ್ರಸಿದ್ಧ. ಕೆಲವೇ ದೊಡ್ಡ ಉದ್ದಿಮೆಗಳು ನಿಯಂತ್ರಿಸುವ ಒಲಿಗೋಪಾಲಿ ಮಾರುಕಟ್ಟೆಯಲ್ಲಿ ಬೆಲೆ ಬಹುತೇಕ ಸ್ಥಿರವಾಗಿರುವುದಕ್ಕೆ ಇದು ವಿವರಣೆಯಾಗಿತ್ತು. ಒಲಿಗೋಪಾಲಿ ಮಾರುಕಟ್ಟೆಯಲ್ಲಿ ಒಬ್ಬ ಮಾರಾಟಗಾರ ಬೆಲೆ ಇಳಿಸಿದರೆ ಉಳಿದವರೂ ಬೆಲೆ ಇಳಿಸುವುದು ಅನಿವಾರ್ಯವಾಗುತ್ತದೆ. ಇಲ್ಲದಿದ್ದರೆ ಅವರ ಸರಕುಗಳು ಮಾರಾಟವಾಗುವುದಿಲ್ಲ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಯಾರಾದರೂ ಬೆಲೆ ಹೆಚ್ಚಿಸಿದರೆ ಉಳಿದವರು ಬೆಲೆ ಹೆಚ್ಚಿಸುವುದಿಲ್ಲ. ಬೆಲೆಗಳು ಸ್ಥಿರವಾಗಿರುತ್ತವೆ. ಪಾಲ್
“ದಿ ಥಿಯರಿ ಆಫ್ ಕ್ಯಾಪಿಟಲಿಸ್ಟ್ ಡೆವಲಪ್‌ಮೆಂಟ್” ಅವರ ಮಹತ್ವದ ಪುಸ್ತಕ. ಸ್ವೀಜಿ ಈ ಕೃತಿಯಲ್ಲಿ ಮೊದಲಿಗೆ ಮಾರ್ಕ್ಸ್ ನ ಆರ್ಥಶಾಸ್ತ್ರದ ಚಿಂತನೆಗಳನ್ನು ವಿವರಿಸುತ್ತಾರೆ. ಸರಕುಗಳ ಪೂರೈಕೆಗೆ ತಕ್ಕಂತೆ ಬೇಡಿಕೆ ಸೃಷ್ಟಿಯಾಗುತ್ತದೆ ಅನ್ನುವ ಜೆ ಬಿ ಸೇಯವರ ನಿಯಮವನ್ನು ಸರಿಯಲ್ಲ ಅನ್ನುವುದನ್ನು ಕೇನ್ಸ್ಗಿಂತ ಮುಕ್ಕಾಲು ಶತಮಾನ ಮೊದಲೇ ಮಾರ್ಕ್ಸ್ ಕಂಡುಕೊಂಡಿದ್ದರು ಎಂದು ಅವರು ತಿಳಿಸುತ್ತಾರೆ. ಸ್ವೀಜಿಯವರು ಹೇಳುವಂತೆ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸಮಗ್ರ ಬೇಡಿಕೆಯ ಕೊರತೆಯುಂಟಾಗುತ್ತದೆ ಅನ್ನುವುದು ಮಾರ್ಕ್ಸ್ಗೆ ತಿಳಿದಿತ್ತು. ಆದರೆ ದುರದೃಷ್ಟವೆಂದರೆ ಮಾರ್ಕ್ಸ್ ನ ಈ ಒಳನೋಟವನ್ನು ಮುಂದಿನ ಮಾರ್ಕ್ಸ್ವಾದಿ ಚಿಂತಕರು ನಿರ್ಲಕ್ಷಿಸಿದರು. ಪಾಲ್
ಆಗ ಬಹುತೇಕ ಜನ ಬಂಡವಾಳಶಾಹಿ ವ್ಯವಸ್ಥೆಯೊಳಗೆ ನಿಯತಕಾಲಿಕವಾಗಿ ಕಾಣಿಸಿಕೊಳ್ಳುತ್ತಿದ್ದ ಬಿಕ್ಕಟ್ಟಿನ ಹಿಂದೆ ಬೇಡಿಕೆಯ ಸಮಸ್ಯೆ ಇದೆ ಎಂದಷ್ಟೇ ಹೇಳುತ್ತಿದ್ದರು. ಆದರೆ ದೀರ್ಘಕಾಲದಲ್ಲಿ ಅದೇ ಬಂಡವಾಳಶಾಹಿ ವ್ಯವಸ್ಥೆಗೆ ಸವಾಲಾಗುತ್ತದೆ ಎಂದು ಅವರು ಭಾವಿಸಿರಲಿಲ್ಲ. ಬೇಡಿಕೆಯ ಕೊರತೆಯಿಂದ ಸಾಮಾಜಿಕ ವರಮಾನ ಕಾರ್ಮಿಕರಿಂದ ಬಂಡವಾಳಶಾಹಿಗೆ ವರ್ಗಾವಣೆಯಾಗುತ್ತದೆ. ಈ ಪ್ರಕ್ರಿಯೆಯಿಂದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸ್ಥಗಿತತೆ ಉಂಟಾಗುತ್ತದೆ ಅನ್ನುವುದನ್ನು ಸಿಸ್‌ಮಂಡಿ, ಹಾಬ್ಸನ್, ರೋಸಾ ಲುಕ್ಷಂಬರ್ಗ್ ಹೀಗೆ ಹಲವರು ಚರ್ಚಿಸಿದ್ದರು. ಕಾರ್ಮಿಕರ ಸೀಮಿತ ಕೊಳ್ಳುವ ಶಕ್ತಿಯಿಂದಾಗಿ ಬೇಡಿಕೆ ಕಡಿಮೆಯಾಗುತ್ತದೆ. ಅದರಿಂದ ಬಂಡವಾಳಶಾಹಿ ವ್ಯವಸ್ಥೆಗೆ ತಾನು ಉತ್ಪಾದಿಸಿದ ವಸ್ತುಗಳನ್ನು ಮಾರುವುದಕ್ಕೆ ದೇಶದೊಳಗಿನ ಮಾರುಕಟ್ಟೆ ಸಾಲುವುದಿಲ್ಲ. ಬಂಡವಾಳಶಾಹಿ ವ್ಯವಸ್ಥೆ ಶಾಶ್ವತವಾಗಿ ಅತಿ ಉತ್ಪಾದನೆಯ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ರೋಸಾ ಲುಕ್ಷಂಬರ್ಗ್ ವಾದಿಸಿದ್ದರು. ಪಾಲ್
ಹಾಗಾಗಿಯೇ ಬಂಡವಾಳಶಾಹಿ ವ್ಯವಸ್ಥೆಯೊಳಗಿನ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳುವುದಕ್ಕೆ ಸರಕುಗಳ ವಿತರಣೆಯ ಪ್ರಕ್ರಿಯೆಯನ್ನೂ ಗಮನಿಸಬೇಕು ಎಂದು ವಾದಿಸಿದ್ದರು. ಆದರೆ ಅದನ್ನು ಬಹುತೇಕ ಮಾರ್ಕ್ಸ್ ವಾದಿಗಳು ಒಪ್ಪಿರಲಿಲ್ಲ. ನಿಕೊಲಯ್ ಬುಕಾರಿನ್ ಇದು ತಾತ್ಕಾಲಿಕ ಸಮಸ್ಯೆಯಾಗಬಹುದೇ ಹೊರತು ಶಾಶ್ವತ ಸಮಸ್ಯೆಯಾಗುವುದಿಲ್ಲಎಂದರು. ಇದು ಬಹುತೇಕ ಸಾಂಪ್ರದಾಯಿಕ ಮಾರ್ಕ್ಸ್ವಾದಿಗಳ ನಿಲುವಾಗಿತ್ತು. ಪ್ರಭಾತ್ ಪಟ್ನಾಯಕ್ ಗುರುತಿಸುವಂತೆ ಮಾರ್ಕ್ಸ್ ಕೂಡ ಅತಿ ಉತ್ಪಾದನೆಯ ಪ್ರಕ್ರಿಯೆಯನ್ನು, ಅದಕ್ಕೆ ಕಾರಣಗಳನ್ನು ಗಮನಿಸಿದ್ದರೂ ಅದರ ಪರಿಣಾಮವನ್ನು ಚರ್ಚಿಸಿರಲಿಲ್ಲ. ಅಧಿಕ ಉತ್ಪಾದನೆಯ ಸಂದರ್ಭದಲ್ಲಿ ವ್ಯವಸ್ಥೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಗಮನಿಸಿರಲಿಲ್ಲ. ಕೇನ್ಸ್ ಹಾಗೂ ಮೈಕೆಲ್ ಕೆಲಸ್ಕಿ ಈ ಬಗ್ಗೆ ವಿವರವಾದ ಅಧ್ಯಯನವನ್ನು ಮುಂದಿಟ್ಟ ನಂತರವೂ ಈ ಒಳನೋಟವನ್ನು ಮಾರ್ಕ್ಸ್ವಾದಿ ಪರಂಪರೆ ಬಳಸಿಕೊಳ್ಳಲಿಲ್ಲ. ಪಾಲ್
ಸಾಂಪ್ರದಾಯಿಕ ಮಾರ್ಕ್ಸ್ವಾದಿಗಳು ಉತ್ಪಾದನೆಯ ಪ್ರತಿಕ್ರಿಯೆಗಷ್ಟೇ ತಮ್ಮನ್ನು ಸೀಮಿಗೊಳಿಸಿಕೊಳ್ಳುತ್ತಾರೆ. ಅಂದರೆ ಸರಕುಗಳ ಉತ್ಪಾದನಾ ಕ್ರಮ, ವರ್ಗ ಸಂಬಂಧಗಳು, ಶೋಷಣೆ ಇತ್ಯಾದಿ ವಿಷಯಗಳನ್ನೇ ಚರ್ಚಿಸುತ್ತಾರೆ. ವಿನಿಮಯದ ಬಗ್ಗೆ ಅಂದರೆ ಸರಕುಗಳನ್ನು ಕೊಳ್ಳುವ, ಮಾರಾಟ ಮಾಡುವ, ವಿತರಣೆ ಮಾಡುವ ಬಗ್ಗೆ ಅಷ್ಟಾಗಿ ಚರ್ಚಿಸುವುದಿಲ್ಲ. ಬೇಡಿಕೆಯು ವಿನಿಮಯಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ಇದಕ್ಕೆ ಮಹತ್ವ ನೀಡುವುದು ಅವರಿಗೆ ಮಾರ್ಕ್ಸ್ವಾದವನ್ನು ತೆಳುಗೊಳಿಸಿದಂತೆ ತೋರುತ್ತದೆ. ಹಾಗಾಗಿ ಸ್ವೀಜಿಯಂತಹವರನ್ನು ಟೀಕಿಸಲಾಗಿದೆ. ಅದೇ ಕಾರಣಕ್ಕೆ ಅವರಿಗೆ ಲುಕ್ಸಂಬರ್ಗ್ ಅವರ ಹೆಚ್ಚುವರಿ ಉತ್ಪಾದನೆಯನ್ನು ಖಾಲಿ ಮಾಡುವುದಕ್ಕೆ ಹೊರಗಿನ ಮಾರುಕಟ್ಟೆ ಅವಶ್ಯಕ ಅನ್ನುವ ವಾದ ಪಥ್ಯವಾಗುವುದಿಲ್ಲ.
ಆದರೆ ಬೇಡಿಕೆಯ ಆಯಾಮವನ್ನು ಪರಿಗಣಿಸದೇ ಕೇವಲ ಉತ್ಪಾದನೆಗೆ ಮಹತ್ವ ನೀಡಿದರೆ ಬಂಡವಾಳಶಾಹಿ ವ್ಯವಸ್ಥೆಯನ್ನು ಸ್ವಯಂಪೂರ್ಣ ವ್ಯವಸ್ಥೆಯಾಗಿ ಪರಿಗಣಿಸುವ ಅಪಾಯವಿದೆ. ಆ ಮೂಲಕ ಕಾರ್ಮಿಕರು ಹಾಗೂ ಬಂಡವಾಳಿಗರು ರಾಷ್ಟ್ರೀಯ ಉತ್ಪಾದನಾ ಪ್ರಕ್ರಿಯೆಯ ಪರಿಧಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ ಎಂದು ಭಾವಿಸಿಕೊಳ್ಳಲಾಗುತ್ತದೆ. ಸಾಮ್ರಾಜ್ಯಶಾಹಿ ಹಾಗೂ ವಸಾಹತು ಶಾಹಿಯಂತಹ ಬಂಡವಾಳಶಾಹಿ ವ್ಯವಸ್ಥೆಯ ಅಂತಾರಾಷ್ಟ್ರೀಯ ಆಯಾಮವನ್ನು ನಿರ್ಲಕ್ಷಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಬಂಡವಾಳಶಾಹಿ ವ್ಯವಸ್ಥೆ ರಾಷ್ಟ್ರೀಯ ಪರಿಧಿಯ ಆಚೆಗೆ ಹರಡಿಕೊಂಡಿರುತ್ತದೆ. ಬಂಡವಾಳ ಕ್ರೋಡೀಕರಣದ ಪ್ರಕ್ರಿಯೆಯಲ್ಲಿ ವಸಾಹತುಗಳ ಲೂಟಿಯೂ ಸೇರಿರುತ್ತದೆ. ಹಾಗಾಗಿ ಬಂಡವಾಳಶಾಹಿ ವ್ಯವಸ್ಥೆ ಹೇಗೆ ಉಳಿಯುತ್ತದೆ ಹಾಗು ವಿಸ್ತರಣೆಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ವಿದೇಶಿ ಮಾರುಕಟ್ಟೆ, ವಸಾಹತು ಶೋಷಣೆ, ಜಾಗತಿಕ ವ್ಯಾಪಾರ ಮುಂತಾದ ಬೇಡಿಕೆ ಸಂಬಂಧಿಸಿದ ಅಂಶಗಳು ಮುಖ್ಯವಾಗುತ್ತವೆ. ಹಾಗಾಗಿಯೇ ಬಂಡವಾಳಶಾಹಿ ವ್ಯವಸ್ಥೆಯ ಚರ್ಚೆಯಲ್ಲಿ ಬೇಡಿಕೆಯ ಆಯಾಮವನ್ನು ತಂದದ್ದು ಸ್ವೀಜಿಯವರ ಮಿತಿಯಲ್ಲ, ಅದು ಅವರ ವಿಶ್ಲೇಷಣೆಯ ಸಾಮರ್ಥ್ಯ.
ಅಪ್ರತಿಮ ಮಾರ್ಕ್ಸ್ ವಾದಿ ಅರ್ಥಶಾಸ್ತ್ರಜ್ಞರಾದ ಕೆಲಸ್ಕಿ, ಸ್ಟೈಂಡಲ್, ಲಾಂಗೆ, ಬಾರನ್ ಹಾಗೂ ಸ್ವೀಜಿಯಂತಹವರು ಕೇನ್ಸ್ ವಾದದ ಒಳನೋಟಗಳನ್ನು ಮಾರ್ಕ್ಸ್ವಾದಿ ಪರಂಪರೆಯೊಳಕ್ಕೆ ತಂದರು. ಜೊತೆಗೆ ಕೇನ್ಸ್ ಸೂಚಿಸುವ ಮದ್ದಿನಿಂದ ಬಂಡವಾಳಶಾಹಿ ವ್ಯವಸ್ಥೆಯನ್ನು ಸ್ಥಿರಗೊಳಿಸುವುದಕ್ಕೆ ಸಾಧ್ಯವಿಲ್ಲ ಅನ್ನುವುದನ್ನೂ ತೋರಿಸಿದರು. ಆ ಕಾರಣಕ್ಕೆ ಸ್ವೀಜಿಯವರ ‘ಥಿಯರಿ ಆಫ್ ಕ್ಯಾಪಿಟಲಿಸ್ಟ್ ಡೆವಲಪ್‌ಮೆಂಟ್’ ಹಾಗೂ ಬಾರನ್ ಅವರ ‘ಪೊಲಿಟಿಕಲ್ ಎಕಾನಮಿ ಆಫ್ ಗ್ರೋಥ್’ಮಹತ್ವದ ಕೃತಿಗಳು. ಅವರಿಬ್ಬರೂ ಜೊತೆಯಾಗಿ ರಚಿಸಿದ ‘ಮನೊಪಲಿ ಕ್ಯಾಪಿಟಲ್’ ಈ ಚರ್ಚೆಯನ್ನು ಇನ್ನಷ್ಟು ವಿಸ್ತರಿಸಿತು. ಒಂದು ಹೊಸ ಗಾಳಿಯನ್ನು ಹುಟ್ಟುಹಾಕಿತು.
ಏಕಸ್ವಾಮ್ಯ ಬಂಡವಾಳಶಾಹಿ ವ್ಯವಸ್ಥೆಯ ಗಮನವೆಲ್ಲಾ ಖರ್ಚನ್ನು ಕಡಿಮೆ ಮಾಡುವ ಕಡೆಗೇ ಇರುತ್ತದೆ. ಅದೇ ಅದರ ಲಕ್ಷಣವೂ ಹೌದು. ಅದರಲ್ಲೂ ವಿಶೇಷವಾಗಿ ದುಡಿಮೆಯ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅದು ಕೆಲಸ ಮಾಡುತ್ತಿರುತ್ತದೆ. ಆದರೆ ಖರ್ಚು ಕಡಿಮೆಯಾದಾಗ ಬೆಲೆಯನ್ನು ಇಳಿಸುವುದಿಲ್ಲ. ಯಾಕೆಂದರೆ ಲಾಭದ ಪಾಲನ್ನು ಹೆಚ್ಚಿಸಬೇಕು. ಹಾಗಾಗಿ ಒಟ್ಟಾರೆ ಉತ್ಪಾದನೆಯಲ್ಲಿ ಮಿಗುತಾಯದ (ಸಮಾಜದಲ್ಲಿ ಆಗುವ ಒಟ್ಟಾರೆ ಉತ್ಪಾದನೆ ಹಾಗೂ ಉತ್ಪಾದನೆಗೆ ತಗಲುವ ವೆಚ್ಚದ ನಡುವಿನ ವ್ಯತ್ಯಾಸವನ್ನು ಮಿಗುತಾಯ ಅಂತ ಬಾರನ್ ಕರೆಯುತ್ತಾರೆ) ಪಾಲು ಹೆಚ್ಚುತ್ತದೆ.
ಮಿಗುತಾಯದ ಹೆಚ್ಚಳದ ಜೊತೆಗೆ ಕೂಲಿಯ ದರ ಕಡಿಮೆಯಾಗುತ್ತಿರುತ್ತದೆ. ಅದರಿಂದ ಕಾರ್ಮಿಕರ ವರಮಾನ ಕಡಿಮೆಯಾಗಿ ಅದು ಬಂಡವಾಳಿಗರ ಕಡೆ ಹರಿಯತೊಡಗಿತು. ಕಾರ್ಮಿಕರ ಕೊಳ್ಳುವ ಶಕ್ತಿ ಕಡಿಮೆಯಾಯಿತು. ಇದರಿಂದ ಅನುಭೋಗದ ಕೊರತೆಯ ಬಿಕ್ಕಟ್ಟು ತೀವ್ರವಾಗತೊಡಗಿತು. ಸಮಗ್ರ ಬೇಡಿಕೆಯಲ್ಲಿ ಕೊರತೆ ಬೀಳುತ್ತದೆ. ಮಿಗುತಾಯದ ಹೆಚ್ಚಳಕ್ಕೆ ಅನುಗುಣವಾಗಿ ಬಂಡವಾಳಿಗರು ಹೂಡಿಕೆಯನ್ನು ಹೆಚ್ಚಿಸುವುದಿಲ್ಲ. ಆಗ ಆರ್ಥಿಕತೆಯಲ್ಲಿ ಸ್ಥಗಿತತೆ ಉಂಟಾಗುತ್ತದೆ. ಸ್ವೀಜಿಯವರು ಈ ಬಿಕ್ಕಟ್ಟಿನ ಮೂಲ ಬಂಡವಾಳಶಾಹಿ ವ್ಯವಸ್ಥೆಯಲ್ಲೇ ಇದೆ ಎಂಬುದನ್ನು ತಮ್ಮ ಅಧ್ಯಯನದಲ್ಲಿ ತೋರಿಸಿದರು.
ಆದರೆ ಈ ಅನುಭೋಗದ ಬಿಕ್ಕಟ್ಟು ಆ ಸಮಯದಲ್ಲಿ ಗೋಚರಕ್ಕೆ ಬರಲಿಲ್ಲ. ಅದಕ್ಕೆ ಕಾರಣ ಸರ್ಕಾರದ ವೆಚ್ಚ ಅದರಲ್ಲೂ ವಿಶೇಷವಾಗಿ ಮಿಲಿಟರಿ ವೆಚ್ಚ ವಿಪರೀತವಾಗಿತ್ತು. ಬಂಡವಾಳಿಗರೂ ಹೂಡಿಕೆಯನ್ನು ಹೆಚ್ಚಿಸಿದ್ದರು. ಜೊತೆಗೆ ಏಕಸ್ವಾಮ್ಯ ಸಂಸ್ಥೆಗಳು ವಿಪರೀತ ಜಾಹಿರಾತು ಹಾಗೂ ಇತರ ತಂತ್ರಗಳಿಂದ ಸರಕುಗಳ ಮಾರಾಟವನ್ನು ಹೆಚ್ಚಿಸುವುದಕ್ಕೆ ವಿಶೇಷ ಪ್ರಯತ್ನಪಟ್ಟರು. ಸರ್ಕಾರದ ಮಧ್ಯ ಪ್ರವೇಶವಿಲ್ಲದೇ ಹೋಗಿದ್ದರೆ ಬೇಡಿಕೆ ಕಡಿಮೆಯಾಗಬೇಕಿತ್ತು. ಬಾರನ್ ಹಾಗೂ ಸ್ವೀಜಿಯವರ ಪ್ರಕಾರ ಜಾಗತಿಕ ಯುದ್ದದ ನಂತರವೂ ಸರ್ಕಾರ ಅಪಾರ ಮಿಲಿಟರಿ ವೆಚ್ಚ ಮಾಡಿದ್ದರಿಂದ ಬೇಡಿಕೆಯ ಕೊರತೆಯ ಕಾಣಲಿಲ್ಲ.
ಅಭಿವೃದ್ಧಿಗೊಂಡ ಬಂಡವಾಳಶಾಹಿ ವ್ಯವಸ್ಥೆ ತನ್ನ ಆಂತರಿಕ ವೈರುಧ್ಯಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಯಿತು. ವೈರುಧ್ಯ ತೃತೀಯ ಜಗತ್ತಿನ ದೇಶಗಳಿಗೆ ವರ್ಗಾಂತರಗೊಂಡಿದೆ. ಈ ಸಾಮ್ರಾಜ್ಯಶಾಹಿ ರಾಷ್ಟ್ರಗಳು ತಮ್ಮ ಮಿಲಿಟರಿ ಶಕ್ತಿಯನೆಲ್ಲಾ ಅಲ್ಲಿಯ ಶೋಷಣೆಗೆ ಬಳಸಿಕೊಳ್ಳುತ್ತಿವೆ. ಸಾಮ್ರಾಜ್ಯಶಾಹಿಯ ಬೆಳವಣಿಗೆಗೆ ಅಲ್ಲಿಯ ಅಗ್ಗದ ಕಚ್ಚಾಪದಾರ್ಥಗಳು, ಮಾರುಕಟ್ಟೆ ಅದಕ್ಕೆ ಅವಶ್ಯಕ. ಹಾಗಾಗಿ ತೃತೀಯ ಜಗತ್ತಿನ ಶೋಷಣೆ ವಿಪರೀತವಾಯಿತು. ಜಗತ್ತಿನ ಹಿಂದುಳಿದ ಪ್ರದೇಶಗಳಿಂದ ಮಿಗುತಾಯವನ್ನು ವಿಪರೀತವಾಗಿ ದೋಚಿದ್ದು ಪಾಶ್ಚಾತ್ಯ ಕಾರ್ಮಿಕ ವರ್ಗದ ಹೋರಾಟದ ಮೊನಚನ್ನು ಕಡಿಮೆ ಮಾಡಿತು.
ಈ ಮಿಲಿಟರಿ ದಬ್ಬಾಳಿಕೆಯಿಂದ ವಸಾಹತು ಹಾಗೂ ಮಾಜಿ ವಸಾಹತು ದೇಶಗಳ ರೈತರು ಹೆಚ್ಚು ಕ್ರಾಂತಿಕಾರಿ ಮನೋಭಾವ ಬೆಳೆಸಿಕೊಂಡರು ಎನ್ನುವುದು ಬಾರನ್ ಅವರ ವಾದ. ಹಾಗಾಗಿ ಅವರು ವಿಯೆಟ್ನಾಂ, ಚೀನಾ, ಕ್ಯುಬಾ ಹಾಗೂ ಅಲ್ಜೀರಿಯಾದಂತಹ ದೇಶಗಳಲ್ಲಿನ ಕ್ರಾಂತಿಕಾರಿ ಜನರೇ ಇಂದು ಜಗತ್ತಿನ ಭರವಸೆ ಎಂದು ಘೋಷಿಸಿದರು. ಅಂದರೆ ಅವರು ಅಭಿವೃದ್ಧ ಬಂಡವಾಳಶಾಹಿ ಜಗತ್ತಿನ ಆಚೆಗಿನ ದೇಶಗಳಲ್ಲಿ ಕ್ರಾಂತಿಯ ಸಾಧ್ಯತೆಯನ್ನು ಕಂಡರು.
‘ಮನೋಪಲಿ ಕ್ಯಾಪಿಟಲ್’ ಗ್ರಂಥ ಈಗ ಜಾಗತೀಕರಣದ ಸಮಯದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ. ಈಗ ಜಾಗತಿಕ ವ್ಯವಸ್ಥೆಯಾಗಿ ಅದು ವೈರುಧ್ಯಗಳನ್ನು ನಿಭಾಯಿಸಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿದೆ. ಹಾಗಾಗಿಯೇ ಬಿಕ್ಕಟ್ಟು ನಿರಂತರವಾಗಿ ಮುಂದುವರಿಯುತ್ತಿದೆ. ಈಗ ಬಂಡವಾಳ ಜಾಗತಿಕವಾಗಿ ಚಲನಶೀಲವಾಗಿದೆ. ಆ ದೃಷ್ಟಿಯಿಂದ ಜಗತ್ತಿನ ರಾಷ್ಟ್ರಗಳು ಪ್ರತ್ಯೇಕ ದ್ವೀಪಗಳಲ್ಲ. ಮುಂದುವರಿದ ದೇಶದ ಕಾರ್ಮಿಕರು ತೃತೀಯ ಜಗತ್ತಿನ ಕಡಿಮೆ ಕೂಲಿಯ ಕಾರ್ಮಿಕರೊಂದಿಗೆ ಸ್ಪರ್ಧಿಸಬೇಕಾಗಿದೆ. ಅವರ ಶ್ರಮದ ಉತ್ಪಾದಕತೆ ಹೆಚ್ಚಿದರೂ ಕೂಲಿಯಲ್ಲಿ ಹೆಚ್ಚಳ ಸಾಧ್ಯವಾಗುತ್ತಿಲ್ಲ.
ಹಲವು ಉತ್ಪಾದನಾ ಹಾಗೂ ಸೇವಾ ಕ್ಷೇತ್ರಗಳು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ವರ್ಗಾಯಿಸಲ್ಪಟ್ಟರೂ ತೃತೀಯ ಜಗತ್ತಿನಲ್ಲಿ ಕೆಲಸವಿಲ್ಲದೆ ಇರುವ ಕಾರ್ಮಿಕರ ಪಡೆ ದೊಡ್ಡ ಪ್ರಮಾಣದಲ್ಲೇ ಇದೆ. ಹಾಗಾಗಿ ಜಾಗತಿಕ ನೈಜಕೂಲಿಯಲ್ಲಿ ಹೆಚ್ಚಳವಾಗುತ್ತಿಲ್ಲ. ಆದರೆ ಉತ್ಪಾದಕತೆ ಹೆಚ್ಚುತ್ತಿರುವುದರಿಂದ ಒಟ್ಟಾರೆ ಜಾಗತಿಕ ಉತ್ಪಾದನೆಯಲ್ಲಿ ಮಿಗುತಾಯದ ಪಾಲು ಹೆಚ್ಚುತ್ತಲೇ ಇದೆ. ಹಾಗಾಗಿ ‘ಮನೋಪಲಿ ಕ್ಯಾಪಿಟಲ್’ ಊಹಿಸಿದ್ದು ಈಗ ಜಾಗತೀಕರಣದ ಸಮಯದಲ್ಲಿ ಹೆಚ್ಚು ತೀವ್ರವಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ ಇಂದು ಕಾಣಿಸಿಕೊಳ್ಳುತ್ತಿರುವ ಜಾಗತಿಕ ಮಟ್ಟದ ಆರ್ಥಿಕ ಸ್ಥಗಿತತೆಯನ್ನು ನಿಭಾಯಿಸುವ ಸ್ಥಿತಿಯಲ್ಲಿ ಜಾಗತಿಕ ವ್ಯವಸ್ಥೆ ಇಲ್ಲ. ಯಾಕೆಂದರೆ ಇದಕ್ಕೆ ಪ್ರತಿಕ್ರಿಯಿಸುವುದಕ್ಕೆ ಜಾಗತಿಕ ಸರ್ಕಾರ ಅನ್ನುವುದಿಲ್ಲ.
ಯಾವುದೇ ದೇಶವೂ ಸ್ವತಂತ್ರವಾಗಿ ಬಿಕ್ಕಟ್ಟಿನಿಂದ ಹೊರಬರುವುದಕ್ಕೆ ಆಗುವುದಿಲ್ಲ. ಯಾಕೆಂದರೆ ಜಾಗತೀಕರಣದ ಯುಗದಲ್ಲಿ ಅವಕ್ಕೆ ವಿತ್ತೀಯ ಕೊರತೆ ಸಾಧ್ಯವಾಗುವುದಿಲ್ಲ. ಜೊತೆಗೆ ಮಿಗುತಾಯದ ಮೇಲೆ ತೆರಿಗೆಯನ್ನು ವಿಧಿಸುವುದಕ್ಕೂ ಸಾಧ್ಯವಿಲ್ಲ. ಹಾಗೆ ಮಾಡಿದರೆ ಬಂಡವಾಳ ಬೇರೆ ದೇಶಕ್ಕೆ ಹೋಗಿಬಿಡುತ್ತದೆ ಅನ್ನುವ ಆತಂಕ ಇರುತ್ತದೆ. ಹಾಗಾಗಿ ಇಂದು ಪಾಲ್ ಸ್ವೀಜಿಯಂತಹವರ ಚಿಂತನೆಗಳು ಬಹಳ ಪ್ರಸ್ತುತವಾಗುತ್ತವೆ. ಮಾರ್ಕ್ಸ್ ರಿಕಾರ್ಡೋನಿಂದ ಕಲಿತದ್ದು ಇದೆ.
ಸ್ವೀಜಿಯ ತಲೆಮಾರಿನವರು ಕೇನ್ಸ್ ಚಿಂತನೆಗಳನ್ನು ಮಾರ್ಕ್ಸ್ವಾದದ ಚೌಕಟ್ಟಿನೊಳಕ್ಕೆ ತಂದರು. ಅತ್ಯಂತ ಜಟಿಲವಾಗುತ್ತಿರುವ ಆರ್ಥಿಕತೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ, ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಇಂತಹ ಚಿಂತನೆಯ ಪರಂಪರೆಯನ್ನು ಗಮನಿಸಿ ಮುಂದುವರಿಸಬೇಕಾಗಿದೆ.
ಇದನ್ನೂ ನೋಡಿ: ಶ್ರಮಿಕರ ಅಹೋರಾತ್ರಿ ಹೋರಾಟ | ಬಿಸಿಯೂಟ ನೌಕರರ ಪ್ರತಿಭಟನೆ| ಸಾಗರದಂತೆ ಬಂದ ಹೋರಾಟಗಾರರು