ಪಠ್ಯವಾಗುವಷ್ಟು ಯೋಗ್ಯವಾಗಿದೆಯೇ ಹೆಡ್ಗೆವಾರ್‌ ಹೇಳಿಕೆ

ಟಿ.ಸುರೇಂದ್ರರಾವ್

  • ಆದರ್ಶ(!) ಪುರುಷ ಯಾರು? ಅವರ ಹೇಳಿಕೆಗಳು ಯಾವುವು?
  • ಭಾಷಣ/ಹೇಳಿಕೆಗಳು ನಮ್ಮ ಮಕ್ಕಳ ಶಾಲಾ ಪಠ್ಯದಲ್ಲಿ ಸೇರಿಸಲು ಯೋಗ್ಯವೆ?
  • ವಸುದೈವ ಕುಟುಂಬಕಂ ಬಗ್ಗೆ ನಂಬಿಕೆ ಇಡದ ಆರ್‌ಎಸ್‌ಎಸ್‌

ಇಂದಿನ ಪತ್ರಿಕಾ ವರದಿಯ ಪ್ರಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಸಂಸ್ಥಾಪಕ ಕೆ.ಬಿ.ಹೆಡ್ಗೆವಾರ್ ಅವರ ಭಾಷಣವನ್ನು ಹತ್ತನೇ ತರಗತಿಯ ಕನ್ನಡ ಪಠ್ಯದಲ್ಲಿ ಸೇರಿಸಲಾಗಿದೆ. ಯಾವ ಭಾಷಣ ಎನ್ನುವುದು ಆ ವರದಿಯಲ್ಲಿ ನಮೂದಾಗಿಲ್ಲ. ಆದರೆ ಆರ್.ಎಸ್.ಎಸ್. ನ ಕೆಲವು ಪ್ರವೃತ್ತಿಗಳನ್ನು ನಾವು ಅಧ್ಯಯನ ಮಾಡಿದರೆ, ಭಾರತೀಯ ಸಂವಿಧಾನದ ಆಶಯಗಳಾದ ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾಜವಾದ ಹಾಗೂ ಒಕ್ಕೂಟ ಸಂರಚನೆಗೆ ಎಷ್ಟು ಅಪಾಯಕಾರಿ ಎನ್ನುವುದು ಗೊತ್ತಾಗುತ್ತದೆ.

ಅಮಾನವೀಯ ಜಾತಿ ಪದ್ಧತಿಯನ್ನು ಸಮರ್ಥಿಸುವ ಮನುಸ್ಮೃತಿ ನಮ್ಮ ಸಂವಿಧಾನದ ಆಶಯಗಳಾಗಬೇಕಿತ್ತು ಎನ್ನುವುದು ಆರ್.ಎಸ್.ಎಸ್. ಧೋರಣೆಯಾಗಿದೆ. ದೇಶದ ಕಟ್ಟಕಡೆಯ ಪ್ರಜೆಗೂ ಸ್ವಾತಂತ್ರ್ಯ, ಸಮಾನತೆ ಸಿಗಬೇಕೆಂಬ ಸಂವಿಧಾನದ ಪ್ರಸ್ತಾವನೆಯ ಆಶಯಗಳನ್ನು ಆರ್.ಎಸ್.ಎಸ್. ವಿರೋಧಿಸುತ್ತದೆ. ಇಟಲಿ ಮತ್ತು ಜರ್ಮನಿಗೆ ಭೇಟಿ ನೀಡಿದ್ದ ಆರ್.ಎಸ್.ಎಸ್. ಮುಖ್ಯಸ್ಥ ಡಾ.ಬಿ.ಎಸ್.ಮೂಂಜೆಯವರು ಆಗ ಅಲ್ಲಿ ಅಧಿಕಾರದಲ್ಲಿದ್ದ ಫ್ಯಾಸಿಸ್ಟ್ ಸಂಘಟನೆ ಹಾಗೂ ಸರ್ಕಾರವನ್ನು ಹಾಡಿ ಹೊಗಳಿದ್ದಲ್ಲದೇ, ಭಾರತದಲ್ಲೂ ಅಂತಹ ಆಡಳಿತ ಇರಬೇಕೆನ್ನುವುದು ಅವರ ಇರಾದೆಯಾಗಿತ್ತು ಎನ್ನುವುದನ್ನು ನಾವು ಅರಿಯಬೇಕು.

ಆರ್‌ಎಸ್‌ಎಸ್ ನ ಹಿಂದುತ್ವಕ್ಕೂ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಹಿಂದೂವಾದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬ ಸತ್ಯವನ್ನು ಎಲ್ಲಾ ಭಾರತೀಯರೂ ಅರಿಯಬೇಕು. ಜಗತ್ತಿನ ಎಲ್ಲಾ ಜನರೂ ಒಂದೇ ಎಂಬ “ವಸುದೈವ ಕುಟುಂಬಕಂ” ಎಂಬ ಮಾನವತಾ ವಾದದಲ್ಲಿ ಅವರಿಗೆ ನಂಬಿಕೆಯಿಲ್ಲ.

ಈ ಕಾರಣಗಳಿಂದ ಸಂವಿಧಾನ ವಿರೋಧಿ ಮಾನವ ವಿರೋಧಿ ಆರ್.ಎಸ್.ಎಸ್. ನ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸಿ ನಮ್ಮ ಮುಂದಿನ ಪೀಳಿಗೆಯವರ ಬದುಕನ್ನು ನಾಶ ಮಾಡುವ ಕರ್ನಾಟಕ ರಾಜ್ಯ ಸರ್ಕಾರದ ಹುನ್ನಾರವನ್ನು ಎಲ್ಲರೂ ವಿರೋಧಿಸಬೇಕು.

Donate Janashakthi Media

Leave a Reply

Your email address will not be published. Required fields are marked *