- ವಿದ್ಯಾರ್ಥಿಗಳ ಮಹಾನ್ ಆದರ್ಶಗಳು ನಾಶಗೊಳಿಸುತ್ತಿರುವ ರಾಜ್ಯ ಸರ್ಕಾರ
- ಪಠ್ಯಪರಿಷ್ಕರಣೆಯ ಆಕ್ಷೇಪಗಳಿಗೆ ಉತ್ತರ ನೀಡದ ರಾಜ್ಯ ಬಿಜೆಪಿ ಸರ್ಕಾರ
- ಎಐಡಿಎಸ್‌ಓ ಸಂಘಟನೆ ವತಿಯಿಂದ ಹೋರಾಟಕ್ಕೆ ಕರೆ
ಬೆಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ ಮರು ಪರಿಷ್ಕರಣೆಯ ಹಲವು ಅಕ್ಷೇಪಗಳಿಗೆ ಉತ್ತರ ನೀಡದ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮುಂದುವರೆಯುತ್ತದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೇಜಷನ್(ಎಐಡಿಎಸ್‌ಒ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ.
ಪಠ್ಯ ಪುಸ್ತಕಗಳ ಪರಿಷ್ಕರಣೆ / ಮರು ಪರಿಷ್ಕರಣೆ ಕುರಿತು ಹಲವು ವಿವಾದಗಳು / ಆಕ್ಷೇಪಗಳು ಬಂದಿದ್ದ ಈ ಹಿನ್ನೆಲೆಯಲ್ಲಿ, ರಾಜ್ಯದ ಮುಖ್ಯಮಂತ್ರಿಗಳು ಆ ಅಕ್ಷೇಪಗಳಿಗೆ ಉತ್ತರ ನೀಡುತ್ತಾ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಮೊಟ್ಟ ಮೊದಲನೆಯದಾಗಿ ಹೋರಾಟಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಸರ್ಕಾರದ ಈ ಪ್ರತಿಕ್ರಿಯೆ ಬಂದಿದೆ ಎಂಬುದನ್ನು ನಾವು ಹೇಳಲು ಬಯಸುತ್ತೇವೆ ಹಾಗು ಜನತೆಯ ಅವಿರತ ಹೋರಾಟದಿಂದಾಗಿ ಸರ್ಕಾರ ಪತ್ರದಲ್ಲಿ ‘ ಆಕ್ಷೇಪಾರ್ಹ ವಿಷಯಗಳು ಇದ್ದಲ್ಲಿ ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸು ಸರ್ಕಾರ ಹೊಂದಿದೆ ‘ ಎಂದು ಬರೆದಿದ್ದಾರೆ.
ಹೀಗಾಗಿ ಪಠ್ಯದಲ್ಲಿ ದೋಷಗಳು , ಸಮಸ್ಯೆಗಳು ಇದ್ದವು ಎಂದು ಸರ್ಕಾರ ಒಪ್ಪಿಕೊಂಡಿದೆ. ಆದರೆ ಆಕ್ಷೇಪಿತ ವಿಷಯಗಳಲ್ಲಿ ಯಾವುದು ಪರಿಷ್ಕರಣೆ ಆಗಲಿದೆ? ಯಾವ ಸಮಿತಿ ಇದನ್ನು ನಡೆಸುತ್ತದೆ? ಅಲ್ಲಿಯವರೆಗೂ ವಿದ್ಯಾರ್ಥಿಗಳು ಯಾವ ಪಠ್ಯ ಓದಬೇಕು? ಯಾವ ಮಹಾನ್ ವ್ಯಕ್ತಿಗಳ ಚಾರಿತ್ರ್ಯಕ್ಕೆ ಧಕ್ಕೆ ತರಲಾಗಿತ್ತು, ಅವುಗಳೆಲ್ಲವೂ ಪರಿಷ್ಕರಣೆ ಆಗುತ್ತದೆಯೇ? – ಈ ಯಾವ ಅಂಶಗಳೂ ಪತ್ರದಲ್ಲಿ ಸ್ಪಷ್ಟವಾಗಿ ಬಂದಿಲ್ಲ. ಇವುಗಳಿಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಬದ್ಧ ನಿಲುವು ತಳೆದಿಲ್ಲ.
ಸಾವಿತ್ರಿ ಬಾಯಿ ಫುಲೆ, ಕನಕದಾಸರು, ಪುರಂದರದಾಸರ ಕುರಿತಾದ ಪಠ್ಯ ತೆಗೆದಿರುವುದಕ್ಕಾಗಲಿ ಅಥವಾ ಕುವೆಂಪು, ಅಂಬೇಡ್ಕರ್ ಅವರ ಚಾರಿತ್ರ್ಯಕ್ಕೆ ಭಂಗ ಮಾಡಿರುವುದಕ್ಕಾಗಲಿ, ಪತ್ರದಲ್ಲಿ ಯಾವುದೇ ಉಲ್ಲೇಖ ಇಲ್ಲ. ಬಸವಣ್ಣ ಅವರ ಕುರಿತು ಮಾತ್ರ ಪರಿಷ್ಕರಣೆ ಮಾಡುವುದಾಗಿ, ಅಂದರೆ ಅವರ ವಿಷಯದಲ್ಲಿ ತಪ್ಪಾಗಿದೆ ಎಂಬುದಾಗಿ ಸರ್ಕಾರ ಹೇಳಿದೆ.
ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಮುಂದೆ ಯಾವುದೇ ಮಹಾನ್ ಆದರ್ಶಗಳು ಇರದಂತೆ ಅವರೆಲ್ಲರ ಆಶಯಗಳನ್ನು ನಾಶಗೊಳಿಸುತ್ತಿದೆ. ಈ ಕುತಂತ್ರವನ್ನು ನಾವು ಅರಿಯಬೇಕು. ರಾಜ್ಯದ ವಿದ್ಯಾರ್ಥಿ ಸಮುದಾಯ ಮತ್ತು ಜನತೆ ಇಂತಹ ವಿಷಯಗಳಲ್ಲಿ ಎಚ್ಚರವಾಗಿದ್ದು ನಮ್ಮ ದೇಶದ ಭವ್ಯ ಹೋರಾಟದ ಇತಿಹಾಸ ಉಳಿಸಲು ಸಜ್ಜಾಗಬೇಕು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹಿಂದಿನ ಪಠ್ಯ ಪುಸ್ತಕಗಳು ಮುಂದುವರೆಯಬೇಕು ಹಾಗೂ ದ್ವಿತೀಯ ಪಿಯು ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಈ ಕೂಡಲೇ ಕೈಬಿಡಬೇಕು ಎಂಬ ಬೇಡಿಕೆಗಳೊಂದಿಗೆ ಎಐಡಿಎಸ್‌ಒ ರಾಜ್ಯ ಸಮಿತಿ ನಾಳೆ (ಜೂನ್ 6) ‘ ರಾಜ್ಯವ್ಯಾಪಿ ಆಗ್ರಹ ದಿನ ‘ ಕ್ಕೆ ಕರೆ ನೀಡಿದೆ.
ಈ ಆಗ್ರಹ ಈ ದಿನವನ್ನು ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿ ಜನತೆ ಯಶಸ್ವಿಗೊಳಿಸಬೇಕೆಂದು ಅಜಯ್ ಕಾಮತ್ ಕರೆ ನೀಡಿದ್ದಾರೆ.