ವಸಂತರಾಜ ಎನ್.ಕೆ
ಶಾರುಖ್ ಖಾನ್ ಅವರ ಇತ್ತೀಚಿನ ಫಿಲಂ ‘ಪಠಾಣ್’ ಅನಿರೀಕ್ಷಿತ ಅಭೂತಪೂರ್ವ ಕಮರ್ಶಿಯಲ್ ಯಶಸ್ಸು ಕಂಡಿದೆ. ಪಠಾಣ್’ ಯಶಸ್ಸು ಈ ನಂಬಿಕೆಗೆ ಏಟು ಕೊಟ್ಟಿದೆ. ಕಳೆದ ಎರಡು ವರ್ಷಗಳಲ್ಲಿ ನಡೆಯುತ್ತಿರುವ #BoycottBollywood (ಬಾಯ್ಕಾಟ್ ಬಾಲಿವುಡ್) ಗ್ಯಾಂಗಿಗೆ ಇದು ದೊಡ್ಡ ಸೋಲು ಎನ್ನಲಾಗುತ್ತಿದೆ. ಇದು ನಿಜವೇ? ಇದನ್ನು ಎರಡು ಭಾಗಗಳಲ್ಲಿ ವಿಶ್ಲೇಷಿಸಲಾಗಿದೆ.
ಬಾಯ್ಕಾಟ್ ಬಾಲಿವುಡ್’ ಗ್ಯಾಂಗಿನ ಮೇಲೆ ಹೇಳಿದ ದಾಂಧಲೆಗಳ ಮತ್ತು ದೇಶದ ಒಟ್ಟಾರೆ ಗಂಭೀರ ಕೋಮುವಾದೀಕರಣದ ರಾಜಕೀಯ-ಸಾಂಸ್ಕೃತಿಕ ಹಿನ್ನೆಲೆಯಲ್ಲಿ ‘ಪಠಾಣ್’ ಯಶಸ್ಸು ಬಾಲಿವುಡ್’ ಗ್ಯಾಂಗಿನ ಮೇಲೊಂದು ಗಮನಾರ್ಹ ಪ್ರತಿದಾಳಿಯಂತೂ ಖಂಡಿತ. ಆದರೆ ಅದನ್ನು ಸೋಲು ಎನ್ನಬಹುದೇ? ಎಂಬ ಪ್ರಶ್ನೆಯನ್ನು ಭಾಗ 1 ಪರಿಶೀಲಿಸಿದೆ.
ಭಾಗ 2 ರಲ್ಲಿ ಸಂಘ ಗ್ಯಾಂಗಿನ ಸಾಂಸ್ಕೃತಿಕ ರಾಜಕಾರಣದ ಮೂರು ಕಾರ್ಯಾಚರಣೆಗಳ ನ್ನು ಗುರುತಿಸಿ, ಅವುಗಳ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಲಾಗಿದೆ.
ಬಾಯ್ಕಾಟ್ ಗ್ಯಾಂಗ್ ಮತ್ತು ಅದರ ಹಿಂದಿರುವ ಸಂಘಿ ಗ್ಯಾಂಗಿನ ಕಳೆದ 4-5 ವರ್ಷಗಳ ವ್ಯೂಹ, ತಂತ್ರಗಳನ್ನು ಗಮನಿಸಿದರೆ, ಈ ಗ್ಯಾಂಗುಗಳು ಹರಿಯಬಿಟ್ಟಿರುವ ಹಲವು ಸಾಂಸ್ಕೃತಿಕ ರಾಜಕಾರಣದ ಕಾರ್ಯಾಚರಣೆಗಳು ಒಟ್ಟಿಗೆ ನಡೆಯುತ್ತಿರುವುದು ಹಾಗೂ ಅವುಗಳ ಸಾಪೇಕ್ಷ ಗೆಲುವು/ಸೋಲುಗಳು ವಿಭಿನ್ನವಾಗಿರುವುದು ಮತ್ತು ಕೆಲವು ತಕ್ಷಣದ, ಇನ್ನು ಕೆಲವು ಮಧ್ಯಮ/ದೀರ್ಘ ಕಾಲೀನ ಕಾರ್ಯಾಚರಣೆಗಳಿರುವುದು ಕಂಡು ಬರುತ್ತದೆ. ಇವುಗಳಲ್ಲಿ ಈ ಕೆಳಗಿನ ಪ್ರತ್ಯೇಕ ಕಾರ್ಯಾಚರಣೆಗಳನ್ನು ಗುರುತಿಸಬಹುದು :
1. ಸಂಘ ಗ್ಯಾಂಗಿನ ಕೋಮುವಾದಿ ಫ್ಯಾಸಿಸಂ ನ್ನು ಟೀಕಿಸುವ ಅಥವಾ ಅದಕ್ಕೆ ಎದುರಾಗುವ ಎಲ್ಲ ಸಾಂಸ್ಕೃತಿಕ ಕೃತಿಗಳನ್ನು (ಫಿಲಂ ಮಾತ್ರವಲ್ಲ – ನಾಟಕ, ಪುಸ್ತಕ ಇತ್ಯಾದಿ) ಅನೌಪಚಾರಿಕ ‘ಸೆನ್ಸಾರ್ ಶಿಪ್ ಗೆ ಮತ್ತು ಅದಕ್ಕೆ ಮಣಿಯದಿದ್ದರೆ ಕೃತಿಕಾರರರನ್ನು ಬೀದಿ ದಾಳಿ’ಗೆ ಒಳಪಡಿಸುವುದು; ಮತ್ತು ಆ ಮೂಲಕ ಇಂತಹ ಕೃತಿಗಳು ಪ್ರದರ್ಶನ/ಪ್ರಕಟಣೆಯಾಗದಂತೆ ಮಾಡುವುದು; ಅಥವಾ ಕೃತಿಕಾರರು, ಕಲಾವಿದರು ಹಾಗೂ ಕೃತಿಯಲ್ಲಿ ಹಣ ಹೂಡುವವರು ಗ್ಯಾಂಗಿನ ಸೂತ್ರಕ್ಕನುಸಾರವಾಗಿ ಸ್ವಯಂ-ಸೆನ್ಸಾರ್ ಮಾಡುವ ಪರಿಸ್ಥಿತಿಯನ್ನು ಉಂಟು ಮಾಡುವ ಕಾರ್ಯಾಚರಣೆ ಮೊದಲನೆಯದು. ‘ಪದ್ಮಾವತ್’ ನಿಂದ ‘ಪಠಾಣ್’ ವರೆಗಿನ ಫಿಲಂಗಳ ಮೇಲಿನ ‘ಬಾಯ್ಕಾಟ್’ ಈ ರೀತಿಯದ್ದು. ಇದರಲ್ಲಿ ಕೆಲವೇ ಸಾಮಾಜಿಕ ಮಾಧ್ಯಮ ಟ್ರಾಲ್, ವಾಟ್ಸಾಪ್ ಜಾಲ ಹಾಗೂ ‘ಸಾ.ಮಾ ಗಳಲ್ಲಿ ‘ಪೇಯ್ಡ್ ಪ್ರೊಮೊಶನ್; ಬಳಸಿ ಕೃತಿಗೆ, ಕೃತಿಕಾರ/ಕಲಾವಿದರಿಗೆ ಭಾರೀ ಸಾಮಾಜಿಕ ವಿರೊಧ ಇದೆ ಎಂಬ ಭ್ರಮೆ ಹುಟ್ಟಿಸುವುದು; ಈ ಭಾರೀ ವಿರೋಧದ ಭ್ರಮೆಯನ್ನು ಗೋದಿ ಮೀಡಿಯಾದ ಮೂಲಕ ಸಾಮೂಹಿಕ ಮಾಧ್ಯಮಗಳಲ್ಲೂ ವಿಸ್ತರಿಸುವುದು; ಸಂಘ ಗ್ಯಾಂಗಿನ ಬಿಜೆಪಿ ಪಕ್ಷದ/ಸರಕಾರದ ಕೆಳ/ಮಧ್ಯಮ ಮತ್ತು ಕೆಲವೊಮ್ಮೆ ಉನ್ನತ ನಾಯಕರೂ ‘ಬಾಯ್ಕಾಟ್’ ಗೆ ದನಿಗೂಡಿಸುವುದು – ಇವೆಲ್ಲವನ್ನು ಒಟ್ಟಿಗೆ ಕೂಡಿಸಿ ಹಲವು ದಿನಗಳ ಸತತ ‘ಬಾಯ್ಕಾಟ್’ ಒತ್ತಡ ಸೃಷ್ಟಿಸುವುದು; ಇದಕ್ಕೆ ಜನರಿಂದ ಕೃತಿಕಾರ/ಕಲಾವಿದರಿಂದ, ಪ್ರದರ್ಶಕರಿಂದ ಸಾಕಷ್ಟು ಸ್ಪಂದನೆ ದೊರೆಯದಿದ್ದರೆ ಬೀದಿ ದಾಳಿ, ಹಿಂಸಾಚಾರಕ್ಕೆ ತೊಡಗುವುದು – ಈ ಕಾರ್ಯಾಚರಣೆಯ ಮುಖ್ಯ ತಂತ್ರಗಳು. ಇದು ಸ್ವಯಂಸ್ಫೂರ್ತವಾಗಿ ‘ಭಕ್ತರಿಂದ ನಡೆಯುವ ಕಾರ್ಯಾಚರಣೆಯಲ್ಲ. ಜಾಗ್ರತೆಯಿಂದ ಅಯ್ಕೆ ಮಾಡಲಾದ ‘ಗುರಿ’ಗಳಿರುವ ಕೇಂದ್ರೀಯವಾಗಿ ನಿರ್ದೇಶಿತ ಕಾರ್ಯಾಚರಣೆ. ಕಳೆದ 4-5 ವರ್ಷಗಳಲ್ಲಿ ಈ ಮೊದಲ ಕಾರ್ಯಾಚರಣೆಯ ಪದೇ ಪದೇ ಬಳಕೆಯಿಂದ ಅದರ ಪರಿಣಾಮಕಾರಿತನ ಕಡಿಮೆಯಾಗಿರಬಹುದು. ‘ಬಾಯ್ಕಾಟ್’ ಗ್ಯಾಂಗಿನ ವಿರುದ್ಧ ಆಕ್ರೋಶ ಸಹ ಅದಕ್ಕೆ ಸೆಡ್ಡು ಹೊಡೆಯಬೇಕೆಂಬ ಛಲವನ್ನು ಕೃತಿಕಾರ/ಕಲಾವಿದರಲ್ಲೂ, ನೋಡುಗರಲ್ಲೂ, ತಯಾರಕ/ಪ್ರದರ್ಶಕ ಇತ್ಯಾದಿ ಉದ್ಯಮಿಗಳಲ್ಲೂ ಹುಟ್ಟಿಸಿರುವುದು ಸಹ ಕಾರಣವಿರಬಹುದು.
ಇದನ್ನು ಓದಿ: ‘ಪಠಾಣ್’ ಯಶಸ್ಸು #BoycottBollywood ಗ್ಯಾಂಗಿನ ಸೋಲಿನ ಸೂಚನೆಯೇ?- ಭಾಗ1
‘ಪಠಾಣ್’ ನ ಅಥವಾ ಯಾವುದೇ ಬಾಯ್ಕಾಟ್ ಗೆ ಒಳಗಾದ ಕೃತಿಯ ಕಮರ್ಶಿಯಲ್ ಯಶಸ್ಸಿನ ಆಧಾರದ ಮೇಲೆ ಬಾಯ್ಕಾಟ್ ವಿಫಲವಾಗಿದೆ ಅಥವಾ ಸೋತಿದೆಯೆನ್ನುವಂತಿಲ್ಲ. ಏಕೆಂದರೆ ಈ ಬಾಯ್ಕಾಟ್ ಹಿಂದಿರುವ ಸಂಘ ಗ್ಯಾಂಗಿನ ಉದ್ದೇಶ ಅದಲ್ಲವೇ ಅಲ್ಲ. ಅದರ ಉದ್ಧೇಶ ಹಿಂದೆ ಹೇಳಿದ ಹಾಗೆ ತನ್ನ ಕೋಮುವಾದಿ ಅನಿಸಿಕೆಗಳನ್ನು ‘ಸಾಮಾನ್ಯ ತಿಳಿವಳಿಕೆ’ಯಾಗಿಸುವುದು: ಸತತ ಬಾಯ್ಕಾಟ್ ಪ್ರಚಾರಗಳಿಂದ ಇಂತಹ ವಲಯವನ್ನು ವಿಸ್ತರಿಸುತ್ತಾ ಹೋಗುವುದು, ಕೃತಿಕಾರ/ಕಲಾವಿದ, ತಯಾರಕ/ಪ್ರದರ್ಶಕರೇ ಸ್ವಯಂ-ಸೆನ್ಸಾರ್ ಮಾಡುವ ವಾತಾವರಣ ಸೃಷ್ಟಿಸುವುದು. ಈ ಮೂರು ಉದ್ದೇಶಗಳಲ್ಲಿ ಹಿನ್ನಡೆಯಾಗಿದೆ ನಿಜ, ಆದರೆ ಸೋಲಾಗಿದೆ ಎನ್ನುವಂತಿಲ್ಲ. ಯಾವುದೇ ಕೃತಿಯ ತಯಾರಿ/ಪ್ರದರ್ಶನ ಕ್ಕೆ (ಫಿಲಂ ಸಂದರ್ಭದಲ್ಲಿ ಅದು ಬಾರಿ ಪ್ರಮಾಣದ್ದು) ಹಣ ಹೂಡಿಕೆ ಬೇಕಾಗುತ್ತದೆ. ಹೂಡಿಕೆದಾರ ತನ್ನ ಲಾಭದ ಸಾಧ್ಯತೆಯನ್ನೂ, ನಷ್ಟದ ಅಪಾಯಗಳನ್ನು ಅಂದಾಜು ಮಾಡುತ್ತಾನೆ. ಒಂದು ಬಾರಿ ಬಾಯ್ಕಾಟ್ ನಿಂದ ನಷ್ಟಕ್ಕೊಳಗಾದ (ಇಂತಹ ಹಲವು ಉದಾಹರಣೆಗಳಿವೆಯೆಂಬುದನ್ನು ಮರೆಯಬಾರದು) ತಯಾರಕ/ಪ್ರದರ್ಶಕ ಅಂತಹ ಕೃತಿ/ಕೃತಿಕಾರರ ಗೋಜಿಗೆ ಹೋಗದಿರುವ ಸಾಧ್ಯತೆಯಿದೆ. ಹಾಗಾಗಿ ‘ಪಠಾಣ್’ ಯಶಸ್ಸಿನ ಾಧಾರದ ಮೇಲೆ ಈ ಕಾರ್ಯಾಚರಣೆಗಳ ದೀರ್ಘಕಾಲೀನ ಪರಿಣಾಮವಿಲ್ಲದ ಪರಿಸ್ಥಿತಿ ಈಗಾಗಲೇ ಉಂಟಾಗಿದೆ ಎಂದು ಹೇಳುವಂತಿಲ್ಲ.
ಇದನ್ನು ಓದಿ: ಮೂರ್ಖರು-ಮತಾಂಧರು ಬೊಗಳುತ್ತಾರೆ-ಕಚ್ಚುವುದಿಲ್ಲ: ನಟ ಪ್ರಕಾಶ್ ರೈ
2. ದೇಶದ ಎಲ್ಲ ಸಾಂಸ್ಕೃತಿಕ ಸಮಸ್ಯೆಗಳಿಗೆ ಅಧಃಪತನಗಳಿಗೆ ಬಾಲಿವುಡ್ ಕಾರಣವೆಂಬ ಸತತ ಅಪಪ್ರಚಾರದ ದಾಳಿ, ಸತತ ಅವಹೇಳನ; ಬಾಲಿವುಡ್ ನ ಎಲ್ಲ ಸಮಸ್ಯೆಗಳಿಗೆ ಅಲ್ಲಿ ಮುಸ್ಲಿಂ ಕೃತಿಕಾರರು, ಕಲಾವಿದರು, ತಯಾರಕರು ಮುಂತಾದ ಉದ್ಯಮಿಗಳ ಯಜಮಾನಿಕೆಯೇ ಕಾರಣ. ಆದ್ದರಿಂದ ಬಾಲಿವುಡ್ ನ್ನೇ ಬಹಿಷ್ಕರಿಸಬೇಕು, ಅದರ ಮುಸ್ಲಿಂ ಯಜಮಾನರನ್ನು ವಿಶೇಷವಾಗಿ ಮಟ್ಟ ಹಾಕಬೇಕು – ಇದು ಸಂಘ ಗ್ಯಾಂಗಿನ ಎರಡನೆಯ ಕಾರ್ಯಾಚರಣೆ. ಮೊದಲನೆಯ ಕಾರ್ಯಾಚರಣೆಯ ಜತೆ ಇದು ಹೆಣೆದುಕೊಂಡಿದ್ದರೂ ಇದೊಂದು ಪ್ರತ್ಯೇಕ ಕಾರ್ಯಾಚರಣೆ. ಇಲ್ಲಿ ನಿರ್ದಿಷ್ಟ ಫಿಲಂ ಅಥವಾ ಕಲಾವಿದನ ಬಾಯ್ಕಾಟ್ ಉದ್ಧೇಶವಲ್ಲ. ಇಡೀ ಬಾಲಿವುಡ್ ನ್ನು ಬಾಯ್ಕಾಟ್ ಮಾಡಿ ನಿರ್ನಾಮ ಮಾಡುವುದೇ ನಿಜವಾದ ಉದ್ಧೇಶ. ಹಾಗಾಗಿಯೇ #BoycottBollywood 2022ರ ಅತ್ಯಂತ ವೈರಲ್ ಆದ ಹ್ಯಾಶ್ ಟ್ಯಾಗ್ ಆಗಿತ್ತು. ಅಗಸ್ಟ್ 1 ರಿಂದ 42 ದಿನಗಳ ಅವಧಿಯಲ್ಲೇ 1.7 ಲಕ್ಷ ಟ್ವಿಟ್ಟರ್ ಅಕೌಂಟುಗಳಿಂದ 14 ಲಕ್ಷ ಈ ಹ್ಯಾಶ್ ಟ್ಯಾಗ್ ನ್ನು ಬಳಸಿದರು. ಹಲವು ಬಾರಿ ನಿರ್ದಿಷ್ಟ ಬಾಯ್ಕಾಟ್ ಕಾರ್ಯಾಚರಣೆಯ ಜತೆ ಜತೆಗೆ ನಡೆಸಿದ್ದೂ ಇದೆ.
ಇಲ್ಲಿನ ಕಾರ್ಯತಂತ್ರ ಸಹ ಮೊದಲಿನ ಕಾರ್ಯಾಚರಣೆಯಂತೆಯೇ ಸಾಮಾಜಿಕ ಮಾಧ್ಯಮ, ಗೋದಿ ಮೀಡಿಯಾ, ಬೀದಿ ಗ್ಯಾಂಗ್ ಸ್ಟರ್ ಗಳ ಮೂಲಕವೇ ನಡೆಯುತ್ತದೆ. ಸುಶಾಂತ ಸಿಂಗ್ ರಾಜಪುತ್ ಶಂಕಿತ ಆತ್ಮಹತ್ಯೆ ಬಳಸಿ, ಹಲವಾರು ವಾರಗಳ ಕಾಲ ನಡೆದ ಬಾಲಿವುಡ್ ನ ಗಣ್ಯರ ‘ಮೀಡಿಯಾ ವಿಚಾರಣೆ’ಯಲ್ಲಂತೂ ರಿಪಬ್ಲಿಕನ್ ಟಿವಿ ಪ್ರಧಾನ ಪಾತ್ರ ವಹಿಸಿತ್ತು. ಅದೇ ರೀತಿ ಹಲವು ವಾರಗಳ ಕಾಲ ನಡೆದ ಶಾರುಖ್ ಖಾನ್ ಮಗನ ಹುಸಿ ‘ಡ್ರಗ್ಸ್ ಪ್ರಕರಣ’ದಲ್ಲೂ ‘ಮೀಡಿಯಾ ವಿಚಾರಣೆ’ಯಲ್ಲೂ ರಿಪಬ್ಲಿಕನ್ ಟಿವಿ ಪ್ರಧಾನ ಪಾತ್ರ ವಹಿಸಿ, ಬಾಲಿವುಡ್ ನಿಂದನೆಯನ್ನು ಪರಾಕಾಷ್ಟೆಗೆ ಒಯ್ದಿತ್ತು. ಈ ಎರಡೂ ಪ್ರಕರಣಗಳ ಮೀಡಿಯಾ ವಿಚಾರಣೆ’ಗಳಲ್ಲೂ ರಿಪಬ್ಲಿಕನ್ ಟಿವಿ ಯು ತನಿಖಾ ಪೋಲಿಸ್, ಪಬ್ಲಿಕ್ ಪ್ರೊಸೆಕ್ಯುಟರ್, ಜಜ್ – ಎಲ್ಲ ಪಾತ್ರಗಳನ್ನು ವಹಿಸಿತು. ಕೇಂದ್ರ ಸರಕಾರದ ಏಜೆನ್ಸಿಗಳು ಸಹ ‘ಬಾಯ್ಕಾಟ್ ಬಾಲಿವುಡ್’ ಗ್ಯಾಂಗಿಗೆ ಹೆಚ್ಚು ಕಡಿಮೆ ನೇರ ‘ಸಾಥ್’ ನೀಡಿದವು.
ಇದನ್ನು ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ತೀರ್ಪುಗಾರ ನಾದವ್ ಲ್ಯಾಪಿಡ್ ಬೆನ್ನಿಗೆ ನಿಂತ ಮೂವರು ತೀರ್ಪುಗಾರರು
ಬಾಲಿವುಡ್ ಅದರದೇ ಆದ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದೆ. ಪಠಾಣ್ ಕ್ಕಿಂತ ಮೊದಲು ಕಳೆದ ಎರಡು ವರ್ಷಗಳಲ್ಲಿ ಸತತವಾಗಿ 10-12 ಭಾರಿ ಬಜೆಟ್ ಬಿಗ್ ಬ್ಯಾನರ್ ಬಾಲಿವುಡ್ ಫಿಲಂಗಳು ಭಾರೀ ಯಶಸ್ಸು ಕಾಣದೆ ಹೆಚ್ಚಿನವು ಗೋತಾ ಹೊಡೆಯುತ್ತಿದ್ದವು. ಅದೇ ಸಮಯದಲ್ಲಿ ಇತರ ಪ್ರಾದೇಶಿಕ ಅಥವಾ ಬಾಲಿವುಡ್ ನ ಹೊರಗಿನ ಬಹುಭಾಷಿ ಫಿಲಂಗಳು ಯಶಸ್ಸು ಕಾಣುತ್ತಿವೆ. ಥಿಯೇಟರ್ ನಲ್ಲಿ ಹೋಗಿ ನೋಡಬೇಕಾದರೆ ವೆಚ್ಚ ವಿಪರೀತ ಹೆಚ್ಚಿದ್ದು ಒಟಿಟಿ ವೇದಿಕೆಗಳ ಜನಪ್ರಿಯತೆ ಹೆಚ್ಚಾಗಿದ್ದು ಸಹ ಬಿಗ್ ಬ್ಯಾನರ್ ಬಾಲಿವುಡ್ ಫಿಲಂಗಳ ಗಳಿಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಬಾಲಿವುಡ್ ಲ್ಲಿ ಹಣ ಹೂಡುವವರ ಸ್ವರೂಪ (ಕಾರ್ಪೊರೆಟ್ ಬಂಡವಾಳ ಸಹ ಬರುತ್ತಿದೆ) ಬದಲಾಗುತ್ತಿದ್ದು ಅದರ ಸಂಘಟನೆ ಮೇಲೆ ಪ್ರಭಾವ ಬೀರುತ್ತಿದೆ. ಮುಂಬಯಿ ಕೇಂದ್ರಿತ ಫಿಲಂ ತಯಾರಿಕಾ ವ್ಯವಸ್ಥೆ ಸಹ ವಿಕೇಂದ್ರೀಕರಣವಾಗುತ್ತಿದೆ. ಕೆಲವರದೇ ಅಧಿಪತ್ಯ ನಡೆಯುವ ಬಾಲಿವುಡ್ ನ ತಾರಾ ವ್ಯವಸ್ಥೆ, ಭಾರೀ ಹಣದ ಪ್ರಭಾವ, ಫಿಲಂ ಉದ್ಯಮದ ಗಣ್ಯರ ಎಂದಿನ ಸೆಕ್ಸ್-ಡ್ರಗ್ಸ್ ಭಾನಗಡಿಗಳು ಇನ್ನೂ ಮುಂದುವರೆಯುತ್ತಿದ್ದು ಹಲವು ಬಾರಿ ತೀವ್ರವಾಗುತ್ತಿದ್ದು, ಹೆಚ್ಚೆಚ್ಚು ಬಾಲಿವುಡ್ ನ ಕುಖ್ಯಾತಿಗೆ ಕಾರಣವಾಗಿದೆ.
ಹಾಗಾದರೆ ಈಗಾಗಲೇ ‘ಅವನತಿ’ ಹೊಂದುತ್ತಿರುವ ಬಾಲಿವುಡ್ ಮೇಲೆ ದಾಳಿ ಮಾಡಲು ಸಂಘ ಗ್ಯಾಂಗ್ ಏಕೆ ಇಷ್ಟು ತರಾತುರಿಯಲ್ಲಿ ಹೊರಟಿದೆ? ಬಾಲಿವುಡ್ ಅದರ ಎಲ್ಲ ನ್ನೂನತೆಗಳು, ಗೊಂದಲಗಳು, ಸಂದಿಗ್ಧಗಳು, ವೈರುಧ್ಯಗಳ ನಡುವೆಯೂ ಸಾಮೂಹಿಕ ಜನಪ್ರಿಯ ಸಂಸ್ಕೃತಿಯ ಪ್ರಧಾನ ಅಂಗವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಮೊದಲು ಸ್ವಾತಂತ್ರ್ಯ ಚಳುವಳಿಯ, ಆಮೇಲೆ ಹೊಸ ಗಣತಂತ್ರದ ಸಂವಿಧಾನದ ಸದಾಶಯಗಳ ಮೌಲ್ಯಗಳ ವಾಹಕವಾಗಿದೆ. ಅದು ಸಮಾನತೆ, ಸಮೃದ್ಧಿ ಗಳ ಕುರಿತು ಭಾರತದ ಜನತೆಯ ಕನಸುಗಾರಿಕೆಯ ಸಾಮ್ರಾಜ್ಯ ಸಹ. ಸ್ವಾತಂತ್ರ್ಯ ಚಳುವಳಿಯ, ಕಾಲದಿಂದಲೂ ಬಾಲಿವುಡ್ ಈ ಪಾತ್ರವನ್ನು ವಹಿಸಿದ್ದು, ಅದಕ್ಕಾಗಿ ಅದು ಒಂದು ‘ದೇಶವ್ಯಾಪಿ ಸಮುದಾಯ’ವನ್ನು ಕಟ್ಟಿದ್ದು, ಅದರ ಎಲ್ಲ ಸಮಸ್ಯೆಗಳ ನಡುವೆಯೂ ಅದನ್ನು ಈಗಲೂ ಉಳಿಸಿ ಬೆಳೆಸಲು ಹೆಣಗುತ್ತಿದೆ.
ಇದನ್ನು ಓದಿ: ‘ದಿ ಕಾಶ್ಮೀರಿ ಫೈಲ್ಸ್’, ‘ಕಾಂತಾರ’, ಕನ್ನಡ ಸಿನಿಮಾಗಳು, ಬರಹಗಾರರ ನಿಷ್ಕ್ರಿಯತೆ ಇತ್ಯಾದಿ
ಒಂದು ಕಡೆ ಇಂತಹ ಸಮುದಾಯ ಅದಕ್ಕೆ ‘ಒಂದು ದೇಶವ್ಯಾಪಿ ದೊಡ್ಡ ಮಾರುಕಟ್ಟೆಯನ್ನು ಕಟ್ಟಲು ಅನಿವಾರ್ಯ. ಜತೆಗೆ ಸ್ವಾತಂತ್ರ್ಯ ಚಳುವಳಿಯ, ಸಂವಿಧಾನದ ಪ್ರಗತಿಪರ ಮೌಲ್ಯಗಳಿಗೆ ಬದ್ಧವಾದ ಕಲಾವಿದರು, ಕೃತಿಕಾರರು, ತಯಾರಕರು ಇದನ್ನು ಹಲವು ತೊಡಕುಗಳ ನಡುವೆ ಮುಂದುವರೆಸಿದ್ದಾರೆ. ಇಂದಿನ ಹಲವು ಬಾಲಿವುಡ್ ನ ಗಣ್ಯರೂ (ಅಮೀರ್ ಖಾನ್, ಸಂಜಯ ಲೀಲಾ ಬನ್ಸಾಲಿ, ಅನುರಾಗ್ ಕಶ್ಯಪ್ ಇತ್ಯಾದಿ) ಇದರಲ್ಲಿ ಸೇರಿದ್ದಾರೆ. ಬಾಲಿವುಡ್ ಸಂಘ ಗ್ಯಾಂಗಿನ ಸಾಮಾಜಿಕ ವಿಭಜಕ ಅಜೆಂಡಾಕ್ಕೆ ಭಾರೀ ತೊಡಕು. ಹಿಂದು-ಮುಸ್ಲಿಂ ಸಹಕಾರ, ಸೌಹಾರ್ದತೆ, ಬಹುಮಟ್ಟಿಗೆ ಜಾತಿ-ಪ್ರದೇಶ-ಭಾಷೆ ಗಡಿಗಳನ್ನು ಮೀರುವ ಬಾಲಿವುಡ್ ಅದಕ್ಕೆ ದೊಡ್ಡ ಸವಾಲು. ಸೌಹಾರ್ದತೆ, ಸೋದರತೆ, ಸಮಾನತೆ, ಸಮೃದ್ಧಿ ಯ ಕನಸನ್ನು ಹೊಸಕಿ ಹಾಕಿ ಕಾಲ್ಪನಿಕ ಶತ್ರುಗಳ ವಿರುದ್ಧ ಆಕ್ರಾಮಕತೆ, ಆಳುವವರ ಪ್ರಭುತ್ವದ ಕುರಿತು ಭಯ, ವಿಧೇಯತೆಯ ಮೌಲ್ಯಗಳನ್ನು ಬಿತ್ತುವ ಸಂಘಿ ಗ್ಯಾಂಗಿನ ಸಾಂಸ್ಕೃತಿಕ ರಾಜಕಾರಣದ ಅಜೆಂಡಾಕ್ಕೆ ದೊಡ್ಡ ಕಂಟಕ. ಹಾಗಾಗಿ ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಮುಖ್ಯ ಗುರಿಯಾದಂತೆ, ಸಾಂಸ್ಕೃತಿಕವಾಗಿ ಬಾಲಿವುಡ್ ಅದರ ಮುಖ್ಯ ಶತ್ರು.
ಇದನ್ನು ಸಾಧಿಸಲು ‘ಬಾಯ್ಕಾಟ್’ ಮುಂತಾದ ಸಾಂಸ್ಕೃತಿಕ ಕಾರ್ಯಾಚರಣೆಗಳನ್ನು ಮಾತ್ರ ಸಂಘ ಗ್ಯಾಂಗ್ ನೆಚ್ಚಿ ಕೂತಿಲ್ಲ. ಫಿಲಂ ಕಲಾವಿದರನ್ನು ತಯಾರಿಸುವ ಪುಣೆಯ ಎಫ್.ಟಿ.ಐ.ಐ ಗೆ ಸಂಘಿ ನಿರ್ದೇಶಕ ಹೊರಿಸುವುದರಿಂದ ಆರಂಭಿಸಿ, ಫಿಲಂ ತಯಾರಿಕೆ, ಪ್ರಾಯೋಜನ, ಪ್ರೋತ್ಸಾಹ, ಹೂಡಿಕೆ, ಮೌಲ್ಯಮಾಪನ, ಸೆನ್ಸಾರ್ ಶಿಪ್ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಆಮೂಲಾಗ್ರ ಪರಿಣಾಮ ಬೀರಬಲ್ಲ ಫಿಲಂ ನ ಸಂಸ್ಥೆಗಳಲ್ಲಿ ಸಂಘಿ ಬೆಂಬಲಿಗರನ್ನು ತುರುಕುವ ಆಡಳಿತಾತ್ಮಕ ಕಾರ್ಯಾಚರಣೆಯೂ ನಡೆದಿದೆ. ಇತ್ತೀಚೆಗೆ ಫಿಲಂ ಗೆ ಸಂಬಂಧಿಸಿದ 4 ಸಂಸ್ಥೆಗಳನ್ನು ಎನ್.ಎಫ್.ಡಿ.ಸಿ ಗೆ ಸೇರಿಸಿದ್ದೂ ಇದೇ ಕಾರ್ಯಾಚರಣೆಯ ಭಾಗ. ಮಾತ್ರವಲ್ಲ ಉತ್ತರ ಪ್ರದೇಶದ ನೊಯ್ಡಾ ದಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುವ ಮುಖ್ಯಮಂತ್ರಿ ಯೋಗಿ ದೂರಗಾಮಿ ಯೋಜನೆ ಸಹ ಇದರ ಬಾಗ. ನೊಯ್ಡಾ ಫಿಲಂ ಸಿಟಿ ಗೆ ತಮ್ಮ ತಯಾರಿಕಾ ಉದ್ಯಮವನ್ನು ವರ್ಗಾಯಿಸಲು ಬಾಲಿವುಡ್ ಉದ್ಯಮ ಕಲಾವಿದ ವಲಯದ ದಿಗ್ಗಜಗಳ ಮೇಲೆ ಒತ್ತಡ, ಬೆದರಿಕೆ ಸೇರಿದಂತೆ ಪ್ರೋತ್ಸಾಹ, ಆಮಿಷಗಳನ್ನು ಒಡ್ಡಲಾಗುತ್ತಿದೆ. ಇವೆಲ್ಲವೂ ನೊಯ್ಡಾ ಫಿಲಂ ಸಿಟಿ ನಿರ್ಮಾಣ ಕ್ಕೆ ಮಾತ್ರವಲ್ಲ, ಬಾಲಿವುಡ್ ಸೊಂಟ ಮುರಿದು ಅದನ್ನು ನಿರ್ನಾಮ ಮಾಡಲು ಸಹ. ಆದರೆ ಬಾಲಿವುಡ್ ಗಣ್ಯರು ಅದಕ್ಕೆ ಸ್ಪಂದಿಸುತ್ತಿಲ್ಲ ಮತ್ತು ಪ್ರತಿರೋಧವನ್ನೂ ಒಡ್ಡುತ್ತಿದ್ದಾರೆ. ‘ಪಠಾಣ್’ ಯಶಸ್ಸು ಅವರ ಮನೋಬಲವನ್ನು ಹೆಚ್ಚಿಸಬಹುದು. ಸತತ ‘ಬಾಯ್ಕಾಟ್ ಬಾಲಿವುಡ್’ ಕಾರ್ಯಾಚರಣೆ ಈ ಪ್ರತಿರೋಧವನ್ನು ಮುರಿಯಲಿಕ್ಕಾಗಿಯೇ.
3. ಮೇಲಿನ ಎರಡೂ ಸಾಂಸ್ಕೃತಿಕ ರಾಜಕಾರಣದ ಕಾರ್ಯಾಚರಣೆಗಳು ‘ಪ್ರತಿಕ್ರಿಯಾತ್ಮಕ’ವಾದ್ದು. ಸೆಕ್ಯುಲರ್ ಜಾತಿ-ರಹಿತ ಸೌಹಾರ್ದಯುತ ಬಹುಸಂಸ್ಕೃತಿಯನ್ನು ನಾಶ ಮಾಡುವ ನಕಾರಾತ್ಮಕ ಕಾರ್ಯಾಚರಣೆ. ಸಂಘ ಗ್ಯಾಂಗಿನ ಸಿದ್ಧಾಂತವನ್ನು ಅರಗಿಸಿಕೊಂಡ ಹೊಸ ಸಾಂಸ್ಕೃತಿಕ ಕೃತಿಗಳನ್ನು ಸೃಷ್ಟಿಸದೆ ಸಾಂಸ್ಕೃತಿಕ ರಾಜಕಾರಣ ಪರಿಣಾಮಕಾರಿ ಆಗುವುದಿಲ್ಲವೆಂದು ಅದಕ್ಕೆ ಅರಿವಾಗಿದೆ. ಅಂತಹ ಕೃತಿಗಳನ್ನು ಸೃಷ್ಟಿಸಬಲ್ಲ ಕೃತಿಕಾರ/ಕಲಾವಿದರನ್ನು ತೀವ್ರ ಕೊರತೆಯಿದ್ದು , ಅವರನ್ನು ಸೃಷ್ಟಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಈಗ (ಮೂರನೇಯ ದರ್ಜೆಯವರಾದರೂ ಸರಿ) ಕ್ರಿಯಾಶೀಲರಾಗಿರುವ ಕೃತಿಕಾರ/ಕಲಾವಿದರನ್ನು ಸೆಳೆದು ತಮ್ಮ ಧೋರಣೆಯ ಕೃತಿಗಳ ಸೃಷ್ಟಿ ಮೇಲೆ ಒತ್ತು ಕೊಡುವಂತಹುದೇ ಮೂರನೇಯ ಕಾರ್ಯಾಚರಣೆ.
‘ಕಾಶ್ಮೀರ್ ಫೈಲ್ಸ್’ ಫಿಲಂ, ಕರ್ನಾಟಕದ ‘ಟಿಪ್ಪುವಿನ ನಿಜ ಕನಸುಗಳು’ ಇತ್ಯಾದಿ ಈ ರೀತಿಯ ಕಾರ್ಯಾಚರಣೆಯ ಪ್ರಯತ್ನಗಳು. ಇಂತಹ ಪ್ರಯತ್ನಗಳು ಜನರನ್ನು ಮುಟ್ಟುವಂತೆ ಸಂಘ ಗ್ಯಾಂಗಿನ ಎಲ್ಲ ಸಂಘಟನೆಗಳ ಪ್ರಚಾರಯಂತ್ರ ಮತ್ತು ಪ್ರಭುತ್ವದ ಎಲ್ಲ ಅಧಿಕೃತ ಸಂಸ್ಥೆಗಳನ್ನು ಬಳಸಲಾಗುತ್ತದೆ. ಇದನ್ನು ಈಗಾಗಲೇ ಈ ಎರಡು ಕೃತಿಗಳ ಸಂದರ್ಭದಲ್ಲಿ ನೋಡಿದ್ದೇವೆ. ಬಹುಶಃ ಮುಂದಿನ ದಿನಗಳಲ್ಲಿ ಮೂರನೆಯ ರೀತಿಯ ಕಾರ್ಯಾಚರಣೆ ಮುಖ್ಯ ಕಾರ್ಯಾಚರಣೆಯಾಗಬಹುದು. ಈ ಕೃತಿಗಳಿಗೆ ಪ್ರೇಕ್ಷಕರು, ಅವಕಾಶ ಸೃಷ್ಟಿಸಲು ಅದಕ್ಕೆ (ಅದರಲ್ಲೂ ಮಾನವೀಯ ಪ್ರಗತಿಪರ ಮೌಲ್ಯಗಳಿರುವ) ಬದಲಿಗಳನ್ನು ನಾಶ ಮಾಡಲು ಮೊದಲ ಎರಡು ಕಾರ್ಯಾಚರಣೆಗಳು ಇನ್ನೂ ತೀವ್ರವಾಗಿ ಮುಂದುವರೆಯಬಹುದು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ