ನಾ ದಿವಾಕರ
ಕ್ಷಮಿಸಿ ಮಕ್ಕಳೇ
ನಿಮ್ಮ ತಲೆಯ ಮೇಲಿನ ಹೊದಿಕೆ
ಮೊಗದ ಮೇಲಿನ ಮುಸುಕು
ನಮ್ಮೊಳಗಿನ ಹೊಲಸನ್ನು ಹೀಗೆ
ಎಳೆದುಹಾಕಲಿದೆಯೆಂದು
ಊಹಿಸಿಯೂ ಇರಲಿಲ್ಲ ;
ಪಾಪ ನೀವು ವಿದ್ಯೆಗೆ ಕೈ ಚಾಚಿದಿರಿ
ನಾವು ಗೇಟು ಮುಚ್ಚಿಬಿಟ್ಟೆವು,, ಆ
ರಂಗುರಂಗಿನ ಮುಸುಕಿನೊಳಗಿನ
ಮುಗ್ಧ ಜೀವ ಕಾಣಲೇ ಇಲ್ಲ…
ಹೇಗೆ ಕಂಡೀತು ಕಂದಮ್ಮಗಳಿರಾ
ನಮ್ಮ ಕಣ್ ಪಾಪೆಗಳು ಭ್ರಷ್ಟವಾಗಿವೆ
ನಿನ್ನೆ ಮೊನ್ನೆ ಒಡಲ ಮಕ್ಕಳಂತಿದ್ದಿರಿ
ಇಂದೇಕೋ ಅನ್ಯಗ್ರಹ ವಾಸಿಗಳಂತೆ
ಕಾಣುತ್ತಿರುವಿರಿ , ನಮ್ಮವರಲ್ಲದಂತೆ !!!
ಪಾಪ ನಿಮ್ಮದೇನು ತಪ್ಪು ಮಕ್ಕಳಿರಾ
ನಮ್ಮ ದೃಷ್ಟಿಮಾಲಿನ್ಯ
ಧರ್ಮಗ್ರಸ್ತರಾಗಿಬಿಟ್ಟಿದ್ದೇವೆ
ನೋಡಿ… ತೊಟ್ಟಿಕ್ಕುತಿರುವ ನಿಮ್ಮ
ಕಂಬನಿಯಲಿ ತೊಯ್ದ ಕೆಮ್ಮಣ್ಣು
ಕೆಕ್ಕರಿಸುತಿದೆ…. ಮಣ್ಣು ನಿಮ್ಮ ಕಾಲಡಿ
ಧೂಳು ನಮ್ಮ ಕಣ್ಣಲಿ
ವಿದ್ಯಾವಾಹಕರೆಂದು ಭಾವಿಸಿದ್ದೀರಾ ?
ಅಲ್ಲ ಮಕ್ಕಳೇ ನಾವು
ದ್ವೇಷವಾಹಿನಿಗಳಾಗಿಬಿಟ್ಟಿದ್ದೇವೆ
ಜ್ಞಾನಭಂಡಾರಗಳೆಲ್ಲಾ ಮಾಲಿನ್ಯ
ಕೂಪಗಳಾಗಿಬಿಟ್ಟಿವೆ ;
ನಾವು ಮುಚ್ಚಿರುವುದು ಲೋಹದ
ಗೇಟುಗಳನ್ನಲ್ಲ ಮಕ್ಕಳೇ
ನಿಮ್ಮ ಭವಿಷ್ಯದ ಹಾದಿಗಳನ್ನು…..
ಪ್ರಜ್ಞೆ ಸತ್ತವರು ನಾವು
ಬುದ್ಧಿಮಾಲಿನ್ಯದ ಸರಕುಗಳು
ಕೊಂಚ ದೃಷ್ಟಿ ಹಾಯಿಸಿನೋಡಿ
ಸೂತ್ರಧಾರರು ಕಾಣಬಹುದು
ನರಸತ್ತ ಆಜ್ಞಾಪಾಲಕರು ನಾವು
ಎಲ್ಲವನ್ನೂ ಕಳೆದುಕೊಂಡು
ರಸ್ತೆಯಲಿ ಬೆತ್ತಲಾಗಿಬಿಟ್ಟಿದ್ದೇವೆ
ಅಕ್ಷರಶಃ ಎಲ್ಲವನ್ನೂ……
ಕಡೆಗೆ ಮಾನವೀಯತೆಯನ್ನೂ…. !!!!