ಚಂಡೀಗಢ: ಪಂಜಾಬ್‌ನ ಪಟಿಯಾಲದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮೂವರು ಉನ್ನತ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಅಲ್ಲದೆ, ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪಂಜಾಬ್‌ನ ಪಟಿಯಾಲ ನಗರದಲ್ಲಿ ನೆನ್ನೆ (ಏಪ್ರಿಲ್ 29) ‘ಖಾಲಿಸ್ತಾನ ವಿರೋಧಿ ಮೆರವಣಿಗೆ’ ವೇಳೆ ಎರಡು ಗುಂಪುಗಳ ನಡುವೆ ನಡೆದ ಭೀಕರ ಘರ್ಷಣೆ ಸಂಭವಿಸಿತು. ಈ ಸಂದರ್ಭದಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ನೆನ್ನೆ ಸಂಜೆಯಿಂದ ಕರ್ಫ್ಯೂ ಹೇರಲಾಗಿತ್ತು.
ಘಟನೆ ನಡೆದ ಒಂದು ದಿನದ ನಂತರ ಇಂದು ಪಂಜಾಬ್ ಸರ್ಕಾರ ರಾಜ್ಯ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲರಾದ ಪೊಲೀಸ್ ಇಲಾಖೆಯ ಮೂವರು ಉನ್ನತ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಹಿಂಸಾಚಾರದ ಬಗ್ಗೆ ಪೊಲೀಸರ ವರದಿಗಳ ಬಗ್ಗೆ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಆದೇಶದ ನಂತರ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಪಟಿಯಾಲ ರೇಂಜ್), ಪಟಿಯಾಲಾ ಹಿರಿಯ ಪೊಲೀಸ್ ಅಧೀಕ್ಷಕ ಮತ್ತು ಪೊಲೀಸ್ ಅಧೀಕ್ಷಕರನ್ನು ಹುದ್ದೆಯಿಂದ ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಲ್ಲು ತೂರಾಟ, ಝಳಪಿಸಿದ ಕತ್ತಿ
ಖಲಿಸ್ತಾನಿ ಗುಂಪುಗಳ ವಿರುದ್ಧ ನಿನ್ನೆ ಪಂಜಾಬ್ ಶಿವಸೇನೆ (ಬಾಲ್ ಠಾಕ್ರೆ) ಎಂದು ಕರೆದುಕೊಳ್ಳುವ ಸಂಘಟನೆಯ ಸದಸ್ಯರು ಕಾರ್ಯಾಧ್ಯಕ್ಷ ಹರೀಶ್ ಸಿಂಗ್ಲಾ ನೇತೃತ್ವದಲ್ಲಿ ಮೆರವಣಿಗೆ ಹಮ್ಮಿಕೊಂಡಿದ್ದರು. ಪಟಿಯಾಲದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಬಳಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ಮತ್ತು ಕತ್ತಿಗಳು ಝಳಪಿಸಿವೆ. ಗುಂಪು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜೊತೆಗೆ ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ರ್‍ಯಾಲಿಯ ಜನಸಂದಣಿಯಿಂದ ಹಲವಾರು ಜನರು “ಖಾಲಿಸ್ತಾನ್ ಮುರ್ದಾಬಾದ್” ಘೋಷಣೆಗಳನ್ನು ಎತ್ತಿದಾಗ ಸಿಖ್ ಸಂಘಟನೆಯ ಸದಸ್ಯರು ಮತ್ತು ಹಿಂದೂ ಸಂಘಟನೆಯ ಸದಸ್ಯರ ನಡುವೆ ರ್‍ಯಾಲಿಯಲ್ಲಿ ಪರಸ್ಪರ ಘರ್ಷಣೆ ನಡೆದಿದೆ. ಕೆಲವು ಸಿಖ್ ಸಂಘಟನೆಗಳ ಸದಸ್ಯರು ಕತ್ತಿಗಳನ್ನು ಹಿಡಿದು ಬೀದಿಗಿಳಿದರು. ಎರಡೂ ಗುಂಪುಗಳು ಕಲ್ಲು ತೂರಾಟ ಆರಂಭಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು.