ಚಂಡೀಗಢ: ಪಂಜಾಬ್ ರಾಜ್ಯದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ಭದ್ರಕೋಟೆಯಾಗಿದ್ದ ಪಾಟಿಯಾಲ ಅರ್ಬನ್ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.
ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಆಮ್ ಆದ್ಮಿ ಪಕ್ಷ (ಎಎಪಿ)ದ ತಮ್ಮ ಎದುರಾಳಿ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಸೋಲು ಕಂಡಿದ್ದಾರೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಅವರ ಗೆಲುವಿನ ಅಂತರ ಶೇಕಡ 49 ರಷ್ಟಿತ್ತು.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳದಿಂದಾಗಿ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಅವರ ಸ್ಥಾನಕ್ಕೆ ಚರಣ್ ಜಿತ್ ಸಿಂಗ್ ಚನ್ನಿಯನ್ನು ಅವರನ್ನು ಆಯ್ಕೆ ಮಾಡಿದ್ದ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡ ಅಮರೀಂದರ್ ಸಿಂಗ್ ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮದೇ ಸ್ವಂತ ಪಕ್ಷ ಪಂಜಾಬ್ ಲೋಕ್ ಕಾಂಗ್ರೆಸ್ ಸ್ಥಾಪಿಸಿದ್ದರು.
ಅಮರಿಂದರ್ ಸಿಂಗ್ ತಮ್ಮದೇ ಪಕ್ಷ ಸ್ಥಾಪಿಸಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದರು. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರೂ, ಮುಖ್ಯಮಂತ್ರಿಯಾಗಿಯೂ ಇದ್ದ ಅಮರೀಂದರ್ ಸಿಂಗ್ 25,169 ಮತ ಗಳಿಸಿದ್ದು, ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಅಜಿತ್ ಪಾಲ್ ಸಿಂಗ್ 39,852 ಮತಗಳಿಸಿ ಜಯಗಳಿಸಿದ್ದಾರೆ. ಪಟಿಯಾಲಾದಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಈಗ ಪಂಜಾಬಿನಲ್ಲಿ ಅಮರಿಂದರ್ ಸಿಂಗ್, ನವಜೋತ್ ಸಿಂಗ್ ಸಿಧು, ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಸೇರಿದಂತೆ ಘಟಾನುಘಟಿ ನಾಯಕರು ಸೋಲು ಅನುಭವಿಸಿದ್ದು ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತ ಪಡೆದಿದೆ.