ಮಂಗಳೂರು: ಭಾರತ ವಿದ್ಯಾರ್ಥಿ ಫೆಡರೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕ್ಲಾಕ್ ಟವರ್ ಮಂಗಳೂರು ಬಳಿ ಅವೈಜ್ಞಾನಿಕ ರೀತಿಯ ಪಠ್ಯಪುಸ್ತಕ ಪರಿಷ್ಕರಣೆಯ ವಿರುದ್ಧ ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಎಫ್ಐನ ಮಾಜಿ ಮುಖಂಡರಾದ ಮನೋಜ್ ವಾಮಂಜೂರು ಮಾತನಾಡುತ್ತಾ ರೋಹಿತ್ ಚಕ್ರತೀರ್ಥ ರವರ ಅಧ್ಯಕ್ಷತೆಯಲ್ಲಿ ನಡೆಸಿರುವ ಪಠ್ಯಪುಸ್ತಕ ಪರಿಷ್ಕರಣೆಯನ್ನು ನಾಡಿನ ಪ್ರಜ್ಞಾವಂತರು ಒಪ್ಪುವಂತಿಲ್ಲ.
ಇಲ್ಲಿನ ಸಮಾಜ ಸುಧಾರಕರಾದ ನಾರಾಯಣ ಗುರುಗಳನ್ನು, ಸ್ವಾತಂತ್ರ್ಯ ಹೋರಾಟದ ಧ್ರುವತಾರೆಯಾದ ಭಗತ್ ಸಿಂಗರ ಪಠ್ಯಗಳನ್ನು ತೆಗೆದಿರುವುದು ಖಂಡನೀಯ. ಮತ್ತು ಕನ್ನಡದ ಸಾಹಿತಿಕ ನೆಲೆಯ ಬಹುಮುಖ್ಯ ಭಾಗವಾಗಿರುವ ಪಿ.ಲಂಕೇಶ್, ಸಾರಾ ಅಬೂಬಕ್ಕರ್, ಜಿ.ರಾಮಕೃಷ್ಣರ ಪಠ್ಯಗಳನ್ನು ತೆಗೆದಿದ್ದು. ರಾಷ್ಟ್ರಕವಿ ಕುವೆಂಪುರವರನ್ನು ಮತ್ತು ನಾಡಗೀತೆಯನ್ನು ಅವಮಾನಿಸುತ್ತಾ ಬಂದಿರುವುದು ಕರುನಾಡಿನ ನಾಡು-ನುಡಿಗೆ ಎಸಗಿರುವ ದ್ರೋಹ ಎಂದು ಹೇಳಿದರು.
ನಾರಾಯಣ ಗುರುಗಳ ಬ್ರಾಹ್ಮಣ ಸಾಹಿತ್ಯವನ್ನು ದಿಕ್ಕರಿಸಿ ,ಜಾತಿಮತದ ಭೇದವನ್ನು ಧಿಕ್ಕರಿಸಿ ಐಕ್ಯತೆಯನ್ನು ಸಾರಿದ ಕುವೆಂಪುರವರು ಕೂಡ ಈ ಮಣ್ಣನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಬಣ್ಣಿಸಿದವರು ಹಾಗಾಗಿ ಇಂದಿನ ಕೋಮುವಾದಿ ಸರ್ಕಾರವು ಇವರನ್ನು ಅವಮಾನಿಸುತ್ತಿದೆ. ಶಿಕ್ಷಣ ತಜ್ಞರೇ ಅಲ್ಲದವರನ್ನು ಪುಸ್ತಕ ಪರಿಷ್ಕರಣ ಸಮಿತಿಯಲ್ಲಿ ಸೇರಿಸಿ ಈ ನಾಡಿನ ಶ್ರೀಮಂತ ಸಾಹಿತ್ಯವನ್ನು ಹೀಗಳೆಯುತ್ತಿದ್ದಾರೆ ಎಂದು ಮಾತನಾಡಿದರು.
ದೇಶದ ಸ್ವಾತಂತ್ರ ಚಳುವಳಿಯ ಸಮಯದಲ್ಲಿ ಬ್ರಿಟಿಷರ ಜೊತೆಯಲ್ಲಿ ಶಾಮೀಲಾದ ಹೆಡಗೇವಾರ್ ರನ್ನು ರಾಷ್ಟ್ರ ನಾಯಕನೆಂದು ಬಿಂಬಿಸಿ ಪಠ್ಯಗಳಲ್ಲಿ ಸೇರಿಸಿರುವುದು ನಾಚಿಕೆಗೇಡು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ)ನ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾದ ವಿನಿತ್ ದೇವಾಡಿಗ ಹೇಳಿದರು.
ಈ ಪ್ರತಿಭಟನಾ ಸಭೆಯಲ್ಲಿ ಸಹ ಸಂಚಾಲಕರಾದ ವಿನುಷ ರಮಣ ಭಟ್ , ಮುಖಂಡರಾದ ತಿಲಕ್ ಕುತ್ತಾರ್, ಭಾಷಿತ್, ವಿಕಾಸ್ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.