ಗದಗ: ವಿಧಾನ ಪರಿಷತ್ ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ನಡೆಯುವ ಚುನಾವಣೆ ಕ್ಲೆಮ್ಯಾಕ್ಸ್ ಹಂತಕ್ಕೆ ತಲುಪಿದ್ದು. ಕೆಲವೇ ಸಮಯದಲ್ಲಿ ಚುನಾವಣೆ ನಡೆಯಲಿದ್ದು ಮೂವರ ಭವಿಷ್ಯ ಪದವೀಧರ ಮತದಾರರ ಕೈಯಲ್ಲಿದೆ. ನಾಮಪತ್ರ ಸಲ್ಲಿಸಿ, ಆಟಕ್ಕುಂಟು-ಲೆಕ್ಕಕ್ಕಿಲ್ಲದಂತಾಗಿದ್ದ ಜೆಡಿಎಸ್ ಅಭ್ಯರ್ಥಿ ಕೊನೆ ಘಳಿಗೆಯಲ್ಲಿ ಕಣದಿಂದ ನಿವೃತ್ತಿ ಘೋಷಿಸಿ, ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬೆಂಬಲ ಸೂಚಿಸಿದೆ.
ಸಿಪಿಐಎಂ ಕೂಡಾ ಗುರಿಕಾರರಿಗೆ ಬೆಂಬಲ ನೀಡಿದ್ದರಿಂದ ಕ್ಷೇತ್ರದಲ್ಲಿ ಗುರಿಕಾರ ಅವರ ಗೆಲುವು ಖಚಿತದ ಮಾತುಗಳು ಕೇಳಿ ಬರುತ್ತಿವೆ. ಈ ಕ್ಷೇತ್ರದಲ್ಲಿ ಎರಡನೇ ಬಾರಿ ಮರು ಆಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಗೆಲ್ಲುವುದಕ್ಕೆ ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನು ಕಾಂಗ್ರೆಸ್‌ನ ಡಾ.ಆರ್. ಎಂ. ಕುಬೇರಪ್ಪ ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಈ ಮೂವರ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಯಾರು-ಯಾರಿಗೆ ಕಾಲು ಎಳಿತ್ತಾರೆ ಎನ್ನೊದು ರಾಜಕೀಯ ಲೆಕ್ಕಾಚಾರದ ಎಲ್ಲ ಪಕ್ಷದ ನಾಯಕರ ಗರಡಿ ಮನೆಯಲ್ಲಿ ಶುರುವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿರುವ ಬಸವರಾಜ ಗುರಿಕಾರ ಶಿಕ್ಷಕರಾಗಿ, ಶಿಕ್ಷಕರ ಸಂಘಟನೆಯ ಮೂರು ಅವಧಿಗೆ ರಾಜ್ಯಾಧ್ಯಕ್ಷರಾಗಿ, ಕೇಂದ್ರ ಉಪಾಧ್ಯಕ್ಷರಾಗಿ, ನೌಕರರ ಸಂಘದ ಅಧ್ಯಕ್ಷರಾಗಿ ಅನೇಕ ಜನಪರ ಕಾರ್ಯಗಳಿಂದ ಜನಪ್ರಿಯತೆ ಪಡೆದುಕೊಂಡವರು. ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಹೊಸಳ್ಳಿ ಗ್ರಾಮದವರು ಆದ್ದರಿಂದ ಗುರಿಕಾರ ಅವರಿಗೆ ಇದು ಗದಗ ಜಿಲ್ಲೆಯ ಮತದಾರರನ್ನು ಒಲಿಸಿಕೊಳ್ಳಲು ಪ್ಲಸ್ ಪಾಯಿಂಟ್.
ಶಿಕ್ಷಕರ ವಲಯದ ಮತಗಳು ಗುರಿಕಾರ ಅವರಿಗೆ ಪಿಕ್ಸ್ ಎನ್ನುವ ಗುಸು ಗುಸು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಇನ್ನು ಕೈ ಅಭ್ಯರ್ಥಿ ಡಾ.ಕುಬೇರಪ್ಪ ಹಾವೇರಿ ಜಿಲ್ಲೆಯವರಾದರೆ, ಬಿಜೆಪಿಯ ಸಂಕನೂರ ಸೇರಿದಂತೆ ೧೧ ಜನರು ಅಂತಿಮವಾಗಿ ಕಣದಲ್ಲಿದ್ದು ಮೂವರು ಪ್ರಬಲ ನಾಯಕರ ಮಧ್ಯೆ ಪೈಪೋಟಿ ನಡೆದಿದೆ. ಮತದಾರನಿಂದ ಅದೃಷ್ಟ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಂಕನೂರ ಅವರ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ, ಹಾಗೂ ಸಂಕನೂರರವರು ಅಧಿಕಾರದಲ್ಲಿದ್ದಾಗ ಯಾವುದೇ ರೀತಿಯ ಹೇಳಿಕೊಳ್ಳುವ ಅಭಿವೃದ್ಧಿ ಕೆಲಸ ಮಾಡಿಲ್ಲ, ಯಾವುದೇ ಸಮಸ್ಯೆಗೆ ಸ್ಪಂದಿಸಿಲ್ಲ. ಅವರು ಪದವೀಧರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಕಾಂಗ್ರೆಸ್‌ನ ಡಾ. ಆರ್.ಎಮ್ ಕುಬೇರಪ್ಪ ಅವರು ಒಂದು ವರ್ಷದ ಹಿಂದೆಯೇ ಅಭ್ಯರ್ಥಿ ಎಂದು ಘೋಷಿಸಿದ್ದರಿಂದ ಅವರು ತಮ್ಮದೇಯಾದ ಯುವ ಪಡೆಯೊಂದಿಗೆ ಮತದಾರರ ನೋಂದಣಿಯಲ್ಲಿ ಮುಂಚೂಣಿಯಲ್ಲಿದ್ದರೂ ಪ್ರಚಾರದಲ್ಲಿ ಅವರ ಪಕ್ಷದ ನಾಯಕರ ಪಾಲ್ಗೊಳ್ಳುವಿಕೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಬಾಹ್ಯವಾಗಿ ಕಾಣಿಸುತ್ತಿಲ್ಲ. ಎರಡು ಬಾರಿ ಸೋಲನ್ನು ಅನುಭವಿಸಿವುದರಿಂದ ಅನುಕಂಪದ ಅಲೆ ಕೈ ಹಿಡಿಯಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಗದಗ, ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಸೇರಿದಂತೆ ನಾಲ್ಕು ಜಿಲ್ಲೆಗಳನ್ನೊಳಗೊಂಡ ಈ ಕ್ಷೇತ್ರದಲ್ಲಿ ಒಟ್ಟು 32 ಜನ ಶಾಸಕರು, ನಾಲ್ವರು ಸಂಸದರು, ನಾಲ್ವರು ವಿಪ ಸದಸ್ಯರು ಬರುತ್ತಾರೆ. ಈ ಪೈಕಿ ಐವರು ಕಾಂಗ್ರೆಸ್ ಶಾಸಕರು, ಒಂದು ವಿಪ ಸದಸ್ಯ ಸೇರಿ ಉಳಿದವರು ಬಿಜೆಪಿಯವರು. ಈಗ ನಡೆಯಲಿರುವ ಮತದಾನದಲ್ಲಿ ಪದವೀಧರ ಮತದಾರ ಪುನಃ ಸಂಕನೂರು ಅವರಿಗೆ ಸಾಥ್ ನೀಡುತ್ತಾರಾ…? ಅಥವಾ ಕುಬೇರಪ್ಪ ಅವರ ಕೈ ಹಿಡಿತಾರಾ….? ಇಲ್ಲ ಬಸವರಾಜ ಗುರಿಕಾರರ ಕೊರಳಿಗೆ ವಿಜಯದ ಮಾಲೆ ಹಾಕ್ತಾರ…? ಎಂಬುದು ತೀವ್ರ ಈ ತ್ರಿಕೋನ ಸ್ಪರ್ಧೆಯ ಕುತೂಹಲವನ್ನು ಮೂಡಿಸಿದೆ. ಒಟ್ಟಾರೇಯಾಗಿ ಯಾರೇ ಆಯ್ಕೆ ಆದರೂ ಕೂಡಾ ಚುನಾಯಿತ ವ್ಯಕ್ತಿ ಅಭಿವೃದ್ಧಿ ಪರ ಕೆಲಸ ಮಾಡಲಿ ಎಂದು ನಮ್ಮಲ್ಲರ ಆಶಯ.
ವರದಿ : ದಾವಲಸಾಬ್ ಟಿ.