ಗದಗ ಅ. 24 : ಇದೇ ಅಕ್ಟೋಬರ್ 28 ರಂದು ಜಿಲ್ಲೆಯಲ್ಲಿ ಜರುಗುವ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆಯಲ್ಲಿ ಆರೋಗ್ಯ ಇಲಾಖೆ ಹೊರಡಿಸಿರುವ ಕೋವಿಡ್-19 ನಿಯಂತ್ರಣ ಕ್ರಮಗಳ ಪಾಲನೆ ಮಾಡುವುದರೊಂದಿಗೆ ಚುನಾವಣೆಯನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಹೇಳಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ತಹಶೀಲ್ದಾರರಿಗೆ ಹಾಗೂ ಚುನಾವಣಾ ದಿನಗಳಂದು ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು “ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗದ ಸೂಚಿಸಿದ್ದು, ಅದರಂತೆ ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ”. ಚುನಾವಣೆ ನಡೆಯುವ ಪ್ರತಿ ಮತಗಟ್ಟೆಗೆ ಚುನಾವಣಾ ಸಿಬ್ಬಂದಿಗಳೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.
ಪ್ರತಿ ಮತಗಟ್ಟೆಗೆ ಅಗತ್ಯವಿರುವಷ್ಟು ಸ್ಯಾನಿಟೈಸರ್, ಸಿಬ್ಬಂದಿಗಳಿಗೆ ಮಾಸ್ಕ್, ಹ್ಯಾಂಡ್‍ಗ್ಲೌಸ್, ಪಲ್ಸ್ ಆಕ್ಷಿಮಿಟರ್, ಥರ್ಮಲ್ ಸ್ಕ್ಯಾನರ್, ಪಿಪಿಇ ಕಿಟ್ ಮತ್ತು ಹ್ಯಾಂಡ್ ವಾಶ್ ಗಳನ್ನು ನೀಡಲಾಗುತ್ತಿದ್ದು, ಮತದಾನಕ್ಕೆ ಬರುವ ಮತದಾರರಿಗೆ ಪಲ್ಸ್ ಆಕ್ಷಿ ಮೀಟರ್ ಹಾಗೂ ಐ.ಆರ್.ಥರ್ಮಲ್ ಸ್ಕ್ಯಾನರ್ ಮೂಲಕ ಆರೋಗ್ಯ ತಪಾಸಣೆಯನ್ನು ನಿಯೋಜಿಸಲಾದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಡಬೇಕು ಎಂದರು. ಮತಗಟ್ಟೆಯಲ್ಲಿ ಮತದಾನಕ್ಕೆ ಆಗಮಿಸುವ ಪ್ರತಿಯೊಬ್ಬರು ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಿರುವಂತೆ ಆರೋಗ್ಯ ಸಿಬ್ಬಂದಿ ಕಣ್ಗಾವಲು ಇಡಬೇಕೆಂದು ಹೇಳಿದರು.