ಪಶ್ಚಿಮ ಬಂಗಾಲ : ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಗಳನ್ನು ಪ್ರಕಟಿಸುತ್ತಿರುವಂತೆ ಆ ಪಕ್ಷದೊಳಗೆ ಎದ್ದಿರುವ ಪ್ರತಿಭಟನೆಗಳು ಮೂರನೆ ದಿನವೂ ಮುಂದುವರೆದಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಮಾರ್ಚ್ 15ರಂದು ಕೊಲ್ಕತಾದಲ್ಲಿ ಪಕ್ಷದ ಚುನಾವಣಾ ಕಚೇರಿಯ ಹೊರಗೆ ನೂರಾರು ಬಿಜೆಪಿ ಬೆಂಬಲಿಗರು ಪ್ರತಿಭಟನೆಗಳನ್ನು ನಡೆಸಿದರು. ಹೂಗ್ಲಿ ಮತ್ತು 24 ಪರಗಣ ಜಿಲ್ಲೆಯಿಂದ ಬಂದ ಬೆಂಬಲಿಗರು ಪ್ರತಿಭಟನೆಗಳ ಮುಂಚೂಣಿಯಲ್ಲಿದ್ದರು ಎಂದು ಇಂಡಿಯನ್ ಎಕ್ಸ್ ಪ್ರೆಸ್(ಮಾರ್ಚ್ 16) ವರದಿ ಮಾಡಿದೆ.
ಅಭ್ಯರ್ಥಿಗಳ ಪಟ್ಟಿಗಳಲ್ಲಿ ಪಕ್ಷಾಂತರಿಗಳಿಗೇ, ಅದರಲ್ಲೂ ನಿನ್ನೆ-ಮೊನ್ನೆ ಸೇರಿದವರಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂಬುದು ಅವರ ಮುಖ್ಯ ಆಕ್ರೋಶ.
ಪಕ್ಷದ ಕೊಲ್ಕತ ಚುನಾವಣಾ ಕಚೇರಿಗೆ ಪ್ರವೇಶಿಸುತ್ತಿದ್ದಾಗ ಹಿಂದೆ ಟಿಎಂಸಿಯ ಹಿರಿಯ ಮುಖಂಡರಾಗಿದ್ದು, ಈಗ ಬಿಜೆಪಿಯ ಒಬ್ಬ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಮುಕುಲ್ ರಾಯ್, ಬ್ಯಾರಕ್ ಪುರ್ ನ ಸಂಸತ್ ಸದಸ್ಯ ಅರ್ಜುನ್ ಸಿಂಗ್ ಮತ್ತು ಒಬ್ಬ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ರ ವರ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಬೆಂಬಲಿಗರು ಪೋಲೀಸ್ ಬ್ಯಾರಿಕೇಡುಗಳನ್ನು ಮುರಿಯಲು ಪ್ರಯತ್ನಿಸಿದರು ಎಂದೂ ವರದಿಯಾಗಿದೆ.
ಬಿಜೆಪಿಯ ಹಲವು ಜಿಲ್ಲಾ ಕಚೇರಿಗಳಿಗೆ ಬೀಗ ಹಾಕಲಾಯಿತು, ಇಲ್ಲವೇ ಅಸ್ತವ್ಯಸ್ತಗೊಳಿಸಲಾಯಿತು. ಕೊಲ್ಕತ, ಹೂಗ್ಲಿ, ಹೌರಾ ಮತ್ತು 24 ಪರಗಣ ಜಿಲ್ಲೆಗಳಲ್ಲಿ ಹಲವೆಡೆ ಟೈರುಗಳನ್ನು ಸುಟ್ಟು ಪ್ರತಿಭಟನೆಗಳು ನಡೆದಿವೆ.
ಉದಾಹರಣೆಗೆ, ಸಿಂಗೂರ್ ನಿಂದ ನಾಲ್ಕು ಬಾರಿ ಟಿಎಂಸಿ ಶಾಸಕರಾಗಿದ್ದ ರಬೀಂದ್ರನಾಥ್ ಭಟ್ಟಾಚಾರ್ಯ ಈ ಬಾರಿ ಟಿಕೇಟ್ ನಿರಾಕರಿಸಲ್ಪಟ್ಟಾಗ , ಈ 89 ವರ್ಷದ ನಿವೃತ್ತ ಶಾಲಾ ಅಧ್ಯಾಪಕರು ಬಿಜೆಪಿ ಸೇರಿದರು. ಮಾರ್ಚ್ 15ರಂದು ಅವರನ್ನು ಸಿಂಗೂರ್ ನ ಬಿಜೆಪಿ ಅಭ್ಯರ್ಥಿ ಎಂದು ಪ್ರಕಟಿಸಲಾಗಿದೆ. ತಕ್ಷಣವೇ ಸಿಂಗೂರ್ ನಲ್ಲಿ ಪ್ರತಿಭಟನೆ ಸ್ಫೋಟಗೊಂಡಿತು. ಅಲ್ಲಿ ಪ್ರಚಾರಕ್ಕೆಂದು ಮಧ್ಯಪ್ರದೇಶದಿಂದ ಬಂದಿದ್ದ ಅಲ್ಲಿಯ ವೈದ್ಯಕೀಯ ಶಿಕ್ಷಣ ಮಂತ್ರಿ ವಿಶ್ವಾಸ್ ಸಾರಂಗ್ ಮತ್ತು ಉತ್ತರ ಪ್ರದೇಶದ ಹಿರಿಯ ಬಿಜೆಪಿ ಮುಖಂಡರನ್ನು ಪಕ್ಷದ ಕಚೇರಿಯೊಳಗೆ ನಾಲ್ಕು ಗಂಟೆಗಳ ಕಾಲ ಬೀಗ ಹಾಕಿ ಇಡಲಾಯಿತು (ದಿ ವೈರ್, ಮಾರ್ಚ್ 16).
“ನಾನು ಬಿಜೆಪಿಯಲ್ಲಿ 21 ವರ್ಷಗಳಿಂದ ದುಡಿಯುತ್ತಿದ್ದೇನೆ.. ಪಕ್ಷ ನನ್ನನ್ನು ಅಭ್ಯರ್ಥಿಯಾಗಿ ಮಾಡದೆ ನಾನು ಅನರ್ಹ ಎಂದು ಭಾವಿಸುವಂತೆ ಮಾಡಿದೆ. ನಾನು ಈ ಪಕ್ಷದಿಂದ ಇನ್ನು ಹೆಚ್ಚೇನನ್ನೂ ನಿರೀಕ್ಷಿಸುವಂತಿಲ್ಲ” ಎನ್ನುತ್ತ ಭಾಸ್ಕರ್ ಭಟ್ಟಾಚಾರ್ಯ ಎಂಬವರು ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇವರು ಬಿಜೆಪಿಯ ರಾಜ್ಯಸಮಿತಿಯ ಮಾಜಿ ಸದಸ್ಯರು ಎನ್ನಲಾಗಿದೆ.
ಇನ್ನೊಬ್ಬ ಮಾಜಿ ರಾಜ್ಯಸಮಿತಿ ಸದಸ್ಯ ರಾಜಕಮಲ್ ಪಾಠಕ್ ಎಂಬವರೂ 30ವರ್ಷಗಳು ಪಕ್ಷಕ್ಕಾಗಿ ದುಡಿದ ನಂತರ ಈಗಿನ ಪರಿಸ್ತಿತಿ ತಾನು ರಾಜಕೀಯದಿಂದ ನಿವೃತ್ತಿ ಪಡೆಯುವಂತೆ ಹೇಳುತ್ತಿದೆ ಎಂದು ತನ್ನ ಫೇಸ್ ಬುಕ್‍ನಲ್ಲಿ ಹೇಳಿಕೊಂಡಿದ್ದಾರಂತೆ. ಇದಕ್ಕೆ ಮೊದಲು ಹೂಗ್ಲಿ ಜಿಲ್ಲಾಧ್ಯಕ್ಷ ಸುಬಿರ್ ನಾಗ್ ಪಕ್ಷ ಬಿಟ್ಟಿದ್ದರು.
ಮತ್ತೊಂದೆಡೆಯಲ್ಲಿ, ಈ ಹಿಂದೆ ಟಿಎಂಸಿಯ ಹಿರಿಯ ಮುಖಂಡ ಮತ್ತು ಕೊಲ್ಕತಾ ಮೇಯರ್ ಆಗಿದ್ದ, ಆದರೆ ಕಳೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಬಿಜೆಪಿ ಸೇರಿದ ಸೊವನ್ ಚಟರ್ಜಿ ತನಗೆ ಈ ಬಾರಿ ಟಿಕೆಟ್ ಕೊಡಲಿಲ್ಲವೆಂದು ಪಕ್ಷ ತ್ಯಜಿಸಿದ್ದಾರಂತೆ.
ಬಿಜೆಪಿಯ ಈ ಪಟ್ಟಿಯಲ್ಲಿ ಮೂವರು ಹಾಲಿ ಸಂಸತ್ ಸದಸ್ಯರ ಹೆಸರುಗಳು ಇರುವುದನ್ನು ಕೂಡ ಬಿಜೆಪಿ ಬೆಂಬಲಿಗರು ಪ್ರತಿಭಟಿಸಸುತ್ತಿದ್ದಾರೆ. ಬಿಜೆಪಿಗೆ ಅರ್ಹ ಅಭ್ಯರ್ಥಿಗಳ ಬರ ಬಂದಿದೆಯೇ ಎಂಬದು ಹಲವರ ಸಂದೇಹ. ರಾಜ್ಯಸಭಾದ ನಾಮನಿರ್ದೇಶಿತ ಸದಸ್ಯರಾಗಿರುವ ಪತ್ರಕರ್ತ ಸ್ವಪನ್ ದಾಸ್ ಗುಪ್ತರವರನ್ನು ಈಗ ಅಭ್ಯರ್ಥಿಯಾಗಿ ಆರಿಸಿರುವುದರಿಂದ, ಅನರ್ಹತೆಯನ್ನು ತಪ್ಪಿಸಿಕೊಳ್ಳಲು ಅವರು ರಾಜ್ಯಸಭಾ ಸದಸ್ಯತ್ವಕ್ಕೆ ಈಗಲೇ ರಾಜೀನಾಮೆ ಕೊಡಬೇಕಾಗಿ ಬಂದಿದೆ.
ಈ ವ್ಯಾಪಕ ಪ್ರತಿಭಟನೆಗಳಿಂದಾಗಿ ಕೇಂದ್ರ ಗೃಹಮಂತ್ರಿ ಅಮಿತ್ ಷಾ ರವರ ಪ್ರಚಾರ ಕಾರ್ಯಕ್ರಮದ ಮೇಲೂ ಪರಿಣಾಮವಾಗಿದೆ ಎಂದು ವರದಿಯಾಗಿದೆ.
ಇದುವರೆಗೆ 294 ಕ್ಷೇತ್ರಗಳ ಪೈಕಿ 123 ರ ಅಭ್ಯರ್ಥಿಗಳ ಹೆಸರುಗಳನ್ನಷ್ಟೇ ಪ್ರಕಟಿಸಲಾಗಿದೆ. ಆದರೂ ಇವೆಲ್ಲ ‘ತಾತ್ಕಾಲಿಕ’ ಎಂದು ಬಿಜೆಪಿ ವಕ್ತಾರ ಶಮಿಕ್ ಭಟ್ಟಾಚಾರ್ಯ ತಳ್ಳಿ ಹಾಕಿದ್ದಾರೆ.
ಎಡರಂಗ ಮತ್ತು ಕಾಂಗ್ರೆಸ್ ನೊಂದಿಗೆ ಸಂಯುಕ್ತ ಮೋರ್ಚಾದ ಭಾಗವಾಗಿರುವ ಐ.ಎಸ್.ಎಫ್. ತನ್ನ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.. ಈ ಪಟ್ಟಿಯಲ್ಲಿ ಮೇಲ್ಜಾತಿ ಹಿಂದುಗಳು, ದಲಿತರು ಮತ್ತು ಬುಡಕಟ್ಟು ಜನಗಳು ಸೇರಿದಂತೆ ಎಲ್ಲ ಧರ್ಮಗಳ, ಎಲ್ಲ ಜಾತಿಗಳ ಹೆಸರುಗಳನ್ನು ನೋಡಿ ಇದು ‘ಕೋಮುವಾದಿ ‘ಎಂದು ಹಣೆಪಟ್ಟಿ ಹಚ್ಚುತ್ತಿರುವ ಟಿಎಂಸಿ , ಬಿಜೆಪಿ ಮಂದಿ, ಮತ್ತು ಸಿಪಿಐ(ಎಂ) ಮತ್ತು ಕಾಂಗ್ರೆಸನ್ನು ಈ ಬಗ್ಗೆ ದೂಷಿಸುತ್ತಿರುವವರು ಅಚ್ಚರಿಪಡುವಂತಾಗಿದೆ.