4.3 ಕೋಟಿ ವೆಚ್ಚದಲ್ಲಿ ಪರ್ಯಾಯ ರಸ್ತೆ-ದೋಣಿಗಾಲ್ ಪಕ್ಕದಲ್ಲೇ ಶೀಘ್ರ ಕಾಮಗಾರಿ ಆರಂಭ ಎಂದ ಡಿಸಿ ಗಿರೀಶ್

ಹಾಸನ: ಸಕಲೇಶಪುರ ತಾಲೂಕು ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿದಿರುವುದರಿಂದ ಅದರ ಪಕ್ಕದಲ್ಲೇ ಬದಲಿ ರಸ್ತೆ ಮಾಡಲು ಎನ್‌ಹೆಚ್‌ಎಐ ಅಧಿಕಾರಿಗಳಿಗೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.

ಮಂಗಳವಾರ(ಜುಲೈ 19) ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪರ್ಯಾಯ ರಸ್ತೆ ನಿರ್ಮಾಣದ ಬಗ್ಗೆ ಕೂಲಂಕಷ ಚರ್ಚೆ ನಡೆಯಿತು. ದೋಣಿಗಾಲ್ ಪಕ್ಕದಲ್ಲೇ ಇರುವ ಗ್ರಾಮ ರಸ್ತೆಯನ್ನು ಸುಮಾರು 8 ಮೀಟರ್ ವಿಸ್ತರಣೆ ಮಾಡಲು ಸೂಚಿಸಲಾಗಿದೆ. ಅಂದಾಜು 4.3 ಕೋಟಿ ರೂ. ವೆಚ್ಚದಲ್ಲಿ 2.2 ಕಿಮೀ ಉದ್ದದ ಪರ್ಯಾಯ ಹೊಸ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಯವರು ಅನುಮತಿ ಕೇಳಿದ್ದಾರೆ ಎಂದರು.

ಇದಕ್ಕೆ ಶೀಘ್ರ ಅನುಮತಿ ಸಿಗುವ ನಿರೀಕ್ಷೆಯಿದ್ದು, ಮುಂದಿನ ಎರಡು-ಮೂರು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಪರ್ಯಾಯ ರಸ್ತೆ ಶೀಘ್ರ ಮುಗಿದು ಅಲ್ಲಿ ವಾಹನ ಸಂಚಾರ ಆರಂಭವಾದರೆ ದೋಣಿಗಾಲ್ ಬಳಿ ಕುಸಿತ ಆಗಿರುವ ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಸಚಿವರು ಹೇಳಿದ್ದಾರೆ ಎಂದರು. ಅಂತೆಯೇ ಸಕಲೇಶಪುರದಿಂದ ಮಾರನಹಳ್ಳಿವರೆಗೂ ನಾಲ್ಕು ಪಥದ ರಸ್ತೆ ಮಾಡುವ ಕಾಮಗಾರಿಯನ್ನು ಪೂರ್ಣವಾಗಿ ಕೈಗೆತ್ತಿಕೊಳ್ಳಿ. ಅರೆ ಬರೆ ಕೆಲಸ ಮಾಡಿದರೆ ಮತ್ತೆ ಮಳೆಗೆ ಹಾಳಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ ಎಂದು ಹೇಳಿದರು.

ಈ ವಿಚಾರದಲ್ಲಿ ಎನ್‌ಹೆಚ್‌ಎಐ ಅಧಿಕಾರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮುಂದಿನ ಮೂರು ದಿನದಲ್ಲಿ ಪರ‍್ಯಾಯ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

ಲಘು ವಾಹನ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಿ ಜುಲೈ 17ರಂದೇ ಆದೇಶ ಹೊರಡಿಸಲಾಗಿದೆ. ಶಿರಾಡಿ ಬದಲಾಗಿ ಚಾರ್ಮಾಡಿ ಹಾಗೂ ಸಂಪಾಜೆ ಮೂಲಕ ಸಂಚರಿಸಲು ಹೇಳಲಾಗಿದೆ. ಆದರೆ ಈ ಮಾರ್ಗಗಳು ದೂರವಾಗಿರುವುದರಿಂದ ಲಘು ವಾಹನಗಳು ಜಿಲ್ಲೆಯಲ್ಲೇ ಪರ‍್ಯಾಯ ರಸ್ತೆಯಲ್ಲಿ ಓಡಾಡಲು ತಿಳಿಸಲಾಗಿದೆ. ಆದರೆ ಭಾರೀ ವಾಹನಗಳಿಗೆ ನಿರ್ಬಂಧ ಹೇರಿರುವುದರಿಂದ, ಮಡಿಕೇರಿ ಜಿಲ್ಲೆಯಲ್ಲೂ 16 ಟನ್ ಭಾರದ ವಾಹನ ಸಂಚಾರಕ್ಕೆ ನಿಷೇಧ ಹೇರಿರುವುದರಿಂದ ಅಲ್ಲಿಯ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಲಾಗಿದೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದರು.

ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಪರ‍್ಯಾಯ ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಿದರೆ, ಕುಸಿದಿರುವ ರಸ್ತೆಯನ್ನು ನಾಲ್ಕೈದು ದಿನಗಳಲ್ಲಿ ಪೂರ್ಣಗೊಳಿಸಿದರೆ ಅಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡಲಾಗುವುದು ಎಂದರು.

ದೋಣಿಗಾಲ್ ಬಳಿ ಕುಸಿದಿರುವ ರಸ್ತೆ ದುರಸ್ತಿ ಮಾಡಲು ಕನಿಷ್ಠ 4 ದಿನ ಬೇಕು. ಕಾಮಗಾರಿ ಮುಗಿದರೂ, ಎರಡೂ ಮಾರ್ಗದಲ್ಲಿ ಯಾವುದೇ ವಾಹನಗಳನ್ನು ಬಿಡಲು ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದಕ್ಕಾಗಿಯೇ ಪರ‍್ಯಾಯ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಹಾಲಿ ಇರುವ ಪರ್ಯಾಯ ರಸ್ತೆಯಲ್ಲಿ ಸಣ್ಣ ಸಣ್ಣ ವಾಹನಗಳು ಓಡಾಡುತ್ತಿವೆ. ಇತರೆ ವಾಹನಗಳೂ ಸಂಚರಿಸಲು 8 ಮೀಟರ್ ವಿಸ್ತರಿಸಲಾಗುತ್ತಿದೆ. ಇದಕ್ಕಾಗಿ ಅರಣ್ಯ ತೆರವು ಮಾಡಿ, ಆದಷ್ಟು ಶೀಘ್ರ ಬದಲಿ ರಸ್ತೆ ಮಾಡಲು ಸಚಿವರು ತಾಕೀತು ಮಾಡಿದ್ದಾರೆ. ಅದಾದ ಬಳಿಕ ವಾಹನ ಸಂಚಾರ ಹೇಗೆ ಎಂಬುದನ್ನು ನಿರ್ಧರಿಸಲಾಗುವುದು ಎಂದು ಗಿರೀಶ್ ತಿಳಿಸಿದರು.

ಮುಖ್ಯವಾಗಿ ದೋಣಿಗಾಲ್ ಬಳಿ ದುರಸ್ತಿ ಕಾರ್ಯವನ್ನು ತುರ್ತಾಗಿ ಮಾಡಬೇಕು. ನಾಲ್ಕೈದು ದಿನಗಳಲ್ಲಿ ಮುಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚನೆ ಕೊಟ್ಟಿದ್ದಾರೆ. ಈ ಸಂಬಂಧ ಎನ್‌ಹೆಚ್‌ಎಐ ಪ್ರಾದೇಶಿಕ ಅಧಿಕಾರಿಗಳೂ ಸಹ ಶೀಘ್ರ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದ ಅವರು, ಆಗಸ್ಟ್, ಸೆಪ್ಟೆಂಬರ್‌ನಲ್ಲೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಮತ್ತೆ ಭೂ ಕುಸಿತ ಸಂಭವಿಸಬಹುದು. ಈ ಹಿನ್ನೆಲೆ ಪರ‍್ಯಾಯ ಮಾರ್ಗದ ರಸ್ತೆಗೆ ಒತ್ತು ನೀಡಲಾಗುವುದು ಎಂದು ವಿವರಿಸಿದರು.

Donate Janashakthi Media

Leave a Reply

Your email address will not be published. Required fields are marked *