ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಶ್ರೇಷ್ಠತೆಯ ಅಹಮಿಕೆಗಳಿಗೆ ಮತ್ತು ನವ ಉದಾರವಾದಿ ಡಿಜಿಟಲ್ ಯುಗದ ಆತ್ಮನಿರ್ಭರ ಭಾರತಕ್ಕೆ. ಇವೆರಡೂ ಸಹ ಭಾರತದ ಶ್ರಮಜೀವಿಗಳ ಪಾಲಿಗೆ ಶಾಶ್ವತ ಬಲಿಪೀಠಗಳಾಗಿ ಪರಿಣಮಿಸಲಿವೆ.
ನಾ ದಿವಾಕರ
ಇನ್ನು ನಾಲ್ಕು ತಿಂಗಳಲ್ಲಿ ಭಾರತ ತನ್ನ ವಿಮೋಚನೆಯ 75ನೆಯ ವರ್ಷವನ್ನು ಪ್ರವೇಶಿಸಲಿದೆ. ಭಾರತದ 75ನೆಯ ಸ್ವಾತಂತ್ರ್ಯೋತ್ಸವದ ವಿಜೃಂಭಣೆಗೆ ಈಗಿನಿಂದಲೇ ತಾಲೀಮು ನಡೆಯುತ್ತಿದೆ. ಹಸಿವು ಮುಕ್ತ, ನಿರುದ್ಯೋಗ ಮುಕ್ತ, ಬಡತನ ಮುಕ್ತ ಭಾರತಕ್ಕಾಗಿ ಹಗಲಿರುಳೂ ಹಪಹಪಿಸುವ ಬೃಹತ್ ಜನಕೋಟಿಯ ಆಶಯಗಳನ್ನು ಈಡೇರಿಸಲು ಪ್ರಭುತ್ವ ಮತ್ತು ಆಳುವ ವರ್ಗಗಳ ಪ್ರತಿನಿಧಿಗಳು ತುದಿಗಾಲಲ್ಲಿ ನಿಂತಿದ್ದಾರೆ. ವಸತಿಹೀನರಿಗೆ ಸೂರು ಒದಗಿಸುವ, ಪ್ರತಿಯೊಬ್ಬ ಪ್ರಜೆಗೂ ಕುಡಿಯುವ ನೀರು ಒದಗಿಸುವ ಬೃಹತ್ ಯೋಜನೆಗಳು ಸಂಸತ್ತಿನ ಒಳಾಂಗಣದಲ್ಲಿ ಸಿದ್ಧವಾಗುತ್ತಲೇ ಇವೆ. 2022ರ ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ಹಾರಲಿರುವ ತ್ರಿವರ್ಣ ಧ್ವಜ ನವಭಾರತದ ನವ ಯುಗದ ಸಂಕೇತವಾಗಲಿದೆ ಎಂಬ ಭ್ರಮೆಯಲ್ಲಿ ಭಾರತ ಮುನ್ನಡೆಯುತ್ತಿದೆ.
ಅಂಬೇಡ್ಕರ್ ಆಶಯದ ಭಾರತ ಹೀಗಿರಬೇಕಿತ್ತೇ ಎನ್ನುವ ಜಿಜ್ಞಾಸೆಯ ನಡುವೆಯೇ ಸಿಕ್ಕುಗಳನ್ನು ಬಿಡಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂದಿನ ರಾಜಕೀಯ ಸಂದರ್ಭದಲ್ಲಿ ಅಂಬೇಡ್ಕರ್ ಒಂದು ಉಪಮೆಯಾಗಿ ಕಾಣುತ್ತಾರೆ. ಅಧಿಕಾರ ರಾಜಕಾರಣದ ಅಧಿಪತ್ಯ ವಹಿಸಲು ಒಂದು ಕಾಲದಲ್ಲಿ ಗಾಂಧಿ ಒಂದು ಮಾರ್ಗವಾಗಿದ್ದರು. ಇಂದು ಅಂಬೇಡ್ಕರ್ ಈ ಸ್ಥಾನವನ್ನು ಅಲಂಕರಿಸಿದ್ದಾರೆ. ಹಾಗಾಗಿಯೇ 1949ರ ಸಂದರ್ಭದಲ್ಲಿ ಅಂಬೇಡ್ಕರರ ಸಾಂವಿಧಾನಿಕ ಆಶಯಗಳನ್ನು ನಿರಾಕರಿಸಿದ, ತಿರಸ್ಕರಿಸಿದ ಸಾಂಸ್ಕೃತಿಕ ರಾಜಕಾರಣದ ಶಕ್ತಿಗಳೇ ಇಂದು ಅಂಬೇಡ್ಕರರ ವಾರಸುದಾರರಂತೆ ಬಿಂಬಿಸಿಕೊಳ್ಳುತ್ತಿವೆ. ವಾರಸುದಾರರ ಸಂಖ್ಯೆ ಹೆಚ್ಚಾಗುತ್ತಿರುವಂತೆಲ್ಲಾ ಚಿಂತನೆಗಳು ಅಲಂಕಾರಿಕವಾಗುತ್ತಾ ಹೋಗುತ್ತಿವೆ.
ಇದನ್ನು ಓದಿ : ಐಎಂಎಫ್‌ನ ಇಬ್ಬಂದಿ ನೀತಿ
ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆಯ ತತ್ವಗಳು, ಪ್ರಜಾಪ್ರಭುತ್ವದ ಚಿಂತನೆಗಳು ಮತ್ತು ಶೋಷಣೆ ಮುಕ್ತ ಭಾರತದ ಕನಸುಗಳು ಈ ಅಲಂಕಾರದ ಪ್ರಭಾವಳಿಗಳಲ್ಲಿ ರಮಣೀಯವಾಗಿ ಕಾಣಿಸಲಾರಂಭಿಸುತ್ತವೆ. ಈ ಚೌಕಟ್ಟಿನಲ್ಲೇ ಸಂವಿಧಾನ ಎನ್ನುವ ಒಂದು ಗ್ರಂಥ ಗ್ರಾಂಥಿಕವಾಗಿ ಪೂಜನೀಯವಾಗಿಬಿಡುತ್ತದೆ. ಅಪಮೌಲ್ಯಕ್ಕೊಳಗಾಗುತ್ತಿರುವ ಸಂವಿಧಾನದ ತಾತ್ವಿಕ ನೆಲೆಗಳು ಪ್ರತಿಮೆಗಳಾಗಿ, ರೂಪಕಗಳಾಗಿ ಅಧಿಕಾರ ರಾಜಕಾರಣದ ಸಂಘರ್ಷದ ನೆಲೆಗಳಲ್ಲಿ ಕರಗಿಹೋಗುತ್ತವೆ. ಹಾಗಾಗಿಯೇ ಪಕ್ಷ ರಾಜಕಾರಣದಲ್ಲಿ ಈ ಪ್ರತಿಮೆ ಮತ್ತು ರೂಪಕಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪಕ್ಷಾಂತರಿಗಳಾದರೂ ಅಡ್ಡಿಯಿಲ್ಲ ತತ್ವಾಂತರಿಗಳಾಗುವುದಿಲ್ಲ ಎಂಬ ಘೋಷ ವಾಕ್ಯ ಮಂಜಿನಪರದೆಯಂತೆ ಶಿಥಿಲವಾಗುತ್ತಿರುವ ತಾತ್ವಿಕ ನೆಲೆಗಳನ್ನು ಮರೆಮಾಚಿಬಿಡುತ್ತದೆ.
ಭಾರತ ಇಂದು ಆಳುವ ವರ್ಗಗಳ ದೃಷ್ಟಿಯಲ್ಲಿ, ಪ್ರಭುತ್ವದ ಪರಿಕಲ್ಪನೆಯ ಆತ್ಮನಿರ್ಭರತೆಯತ್ತ ಸಾಗುತ್ತಿದೆ. ಸರಳ ಭಾಷೆಯಲ್ಲಿ ಆತ್ಮನಿರ್ಭರ ಎಂದರೆ ಸ್ವಾವಲಂಬಿ ಎಂದಷ್ಟೇ ಅರ್ಥ. ಅಂದರೆ ಭಾರತ ಸ್ವಾವಲಂಬಿ ಆಗಿರಲಿಲ್ಲವೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದರ ಜೊತೆಗೇ ಒಂದು ದೇಶ ಸ್ವಾವಲಂಬಿ ಆಗುವುದು ಎಂದರೇನರ್ಥ ಎನ್ನುವ ಪ್ರಶ್ನೆಯೂ ಮುನ್ನೆಲೆಗೆ ಬರುತ್ತದೆ. ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಮಂಡಿಸಿದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರತಿಪಾದನೆಗಳನ್ನು ಮತ್ತು ಆಶಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಾರತದ ಸಂವಿಧಾನವೇ ಒಂದು ಸ್ವಾವಲಂಬಿ ರಾಷ್ಟ್ರ ನಿರ್ಮಾಣಕ್ಕೆ ಬುನಾದಿಯಾಗುತ್ತದೆ.
ಇದನ್ನು ಓದಿ : ಎರಡನೇ ಕೋವಿಡ್ ಅಲೆ: ಜನಗಳ ಆರೋಗ್ಯ ಮತ್ತು ಜೀವನೋಪಾಯ ರಕ್ಷಿಸಬೇಕು
ಇಂದು ಭಾರತ ಕವಲು ಹಾದಿಯಲ್ಲಿದೆ. ಡಾ ಅಂಬೇಡ್ಕರ್ ಪ್ರತಿಪಾದಿಸಿದ ಸಾಂವಿಧಾನಿಕ ಸಮಾಜವಾದ ಸಂವಿಧಾನದಲ್ಲಿ ಧ್ವನಿಸಲಿಲ್ಲ. ಆದರೂ ಒಂದು ಆಡಳಿತ ನೀತಿಯಾಗಿ ಜಾರಿಯಲ್ಲಿತ್ತು. ಒಂದು ವೇಳೆ ಅಂಬೇಡ್ಕರ್ ಬಯಸಿದಂತೆ ಸಾಂವಿಧಾನಿಕ ಸಮಾಜವಾದವನ್ನು ಭಾರತ ಒಪ್ಪಿಕೊಂಡಿದ್ದರೆ ಆತ್ಮನಿರ್ಭರ ಭಾರತ ಸಂಪನ್ಮೂಲಗಳ ಹರಾಜು ಮಾರುಕಟ್ಟೆ ಆಗುತ್ತಿರಲಿಲ್ಲ. ದೇಶದ ಕೃಷಿ ಭೂಮಿ ಮತ್ತು ಅಮೂಲ್ಯ ಸಂಪತ್ತು ಕೆಲವೇ ಕೆಲವು ಶತಕೋಟ್ಯಧಿಪತಿಗಳ ವಶವಾಗುತ್ತಿರಲಿಲ್ಲ. ದೇಶದ ಸಂಪತ್ತು ಮತ್ತು ಸಂಪನ್ಮೂಲಗಳ ಸಮರ್ಪಕ ಬಳಕೆ, ವಿತರಣೆ ಮತ್ತು ಹಂಚಿಕೆ ಸಮಾನತೆಯನ್ನು ಸಾಧಿಸುವ ಒಂದು ಸಾಧನವಾಗಿಯೇ ಆರು ದಶಕಗಳ ಕಾಲ ನಡೆದು ಬಂದಿದ್ದರೂ ಭಾರತದಲ್ಲಿ ಶೇ 1ರಷ್ಟು ಜನ, ಶೇ 70ರಷ್ಟು ಸಂಪತ್ತಿನ ಒಡೆಯರಾಗಿರುವುದು ಸಮಾಜವಾದಿ ದೇಶದ ಲಕ್ಷಣವಾಗಲಾರದು.
ಈ ಅಸಮಾನತೆ ಮತ್ತು ಬಡವ ಶ್ರೀಮಂತರ ನಡುವಿನ ಅಗಾಧ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ ಮುನ್ನಡೆಯಬೇಕಾದರೆ ಈ ದೇಶದ ಮೂಲ ಸೌಕರ್ಯಗಳು ಮತ್ತು ಸಂಪನ್ಮೂಲಗಳು ಪ್ರಜೆಗಳ ಸ್ವತ್ತಾಗಬೇಕು. ಕೋವಿಡ್ ಸಂದರ್ಭದಲ್ಲಿ ದೇಶದ ಕೋಟ್ಯಂತರ ಶ್ರಮಜೀವಿಗಳು ತಮ್ಮ ಜೀವನೋಪಾಯಕ್ಕಾಗಿ ಅಂಡಲೆಯುವ ಪರಿಸ್ಥಿತಿ ಎದುರಿಸುತ್ತಿದ್ದಾಗಲೇ 38 ಶತಕೋಟಿ ವೀರರನ್ನು ಈ ದೇಶ ಸೃಷ್ಟಿಸಿರುವುದನ್ನು ನೋಡಿದಾಗ ಆತ್ಮನಿರ್ಭರ ಭಾರತ ಎತ್ತ ಸಾಗುತ್ತಿದೆ ಎಂದು ಅರಿವಾಗುತ್ತದೆ. ಇದು ಕೇವಲ ಆರ್ಥಿಕ ನೀತಿಗಳ ಪ್ರಶ್ನೆಯಲ್ಲ. ಪ್ರಭುತ್ವದ ಸಾಮಾಜಿಕ ಧೋರಣೆ, ಸಾಂಸ್ಕೃತಿಕ ಮಾರ್ಗ ಮತ್ತು ಆರ್ಥಿಕ ನೀತಿಗಳು ಒಂದು ದೇಶದ ಬೇಕು ಬೇಡಗಳನ್ನು ಸಮಗ್ರ ನೆಲೆಯಲ್ಲಿ ಅರ್ಥಮಾಡಿಕೊಳ್ಳಲು ನೆರವಾಗುವ ಅಂಶಗಳು.
ಇದನ್ನು ಓದಿ : ಇನ್ನೊಂದು ತೆರನ ಎರಡನೇ ಅಲೆ…
ಕಳೆದ ಏಳು ವರ್ಷಗಳಲ್ಲಿ ಈ ಮೂರೂ ನೆಲೆಗಳಲ್ಲಿ ನವ ಭಾರತ ಸೋತಿದೆ ಇನ್ನೂ ಸೋಲುತ್ತಲೇ ಇದೆ. ಇದು ಡಾ ಅಂಬೇಡ್ಕರ್ ಅವರ ದಾರ್ಶನಿಕತೆಗೆ ಮತ್ತು ಆದರ್ಶಗಳಿಗೆ ಮಾಡಿದ ಅಪಚಾರ ಎನ್ನಲು ಹಿಂಜರಿಯಬೇಕಿಲ್ಲ. ಭಾರತ ಒಂದು ಕೃಷಿ ಪ್ರಧಾನ ದೇಶ ಎನ್ನುವುದು ಜನಜನಿತ ಸಂಗತಿ. ಅಷ್ಟೇ ಅಲ್ಲ ಭಾರತದ ಕೆಳಸ್ತರದ ಜನತೆಯಲ್ಲಿ ಭೂಮಿ ಮತ್ತು ಭೂ ಸಂಬಂಧಗಳು ಹೆಚ್ಚು ಪ್ರಾಧಾನ್ಯತೆ ಪಡೆಯುತ್ತವೆ. ಇಂದಿಗೂ ಭಾರತದ ಶೇ 65ಕ್ಕೂ ಹೆಚ್ಚು ಜನರು ತಮ್ಮ ಬದುಕನ್ನು ಭೂ ಸಂಬಂಧಿತ ವೃತ್ತಿಗಳಿಂದಲೇ ಕಟ್ಟಿಕೊಳ್ಳುತ್ತಾರೆ. 1990ರ ದಶಕದ ಜಾಗತೀಕರಣದ ಪರಿಣಾಮ ಗ್ರಾಮಗಳಿಂದ ನಗರಗಳಿಗೆ ವಲಸೆ ಬಂದ ಅಸಂಖ್ಯಾತ ಜನತೆ ಇಂದಿಗೂ ತಮ್ಮ ಭೂ ಸಂಬಂಧಗಳನ್ನು ಉಳಿಸಿಕೊಂಡಿರುವುದು ಕೋವಿಡ್ ಸಂದರ್ಭದ ವಲಸಿಗರ ಸಮಸ್ಯೆಯಲ್ಲಿ ವ್ಯಕ್ತವಾಗಿದೆ.
ಈ ದೃಷ್ಟಿಯಿಂದಲೇ ಅಂಬೇಡ್ಕರ್ ಸಂವಿಧಾನ ರಚನೆಯ ಸಂದರ್ಭದಲ್ಲಿ ಭೂ ರಾಷ್ಟ್ರೀಕರಣ ಮತ್ತು ಸಾಂವಿಧಾನಿಕ ಸಮಾಜವಾದದ ಪ್ರಸ್ತಾಪ ಮಾಡುತ್ತಾರೆ. ಪ್ರಜಾಪ್ರಭುತ್ವ ಎಂದರೆ ಕೇವಲ ಆಡಳಿತ ನೀತಿಯಲ್ಲ ಅಥವಾ ರಾಜಕೀಯ ಚೌಕಟ್ಟಿಗೆ ಸೀಮಿತವಾದ ಕಲ್ಪನೆಯಲ್ಲ ಎಂದು ತಮ್ಮ ಹಲವು ಬರಹ-ಭಾಷಣಗಳಲ್ಲಿ ಸ್ಪಷ್ಟೀಕರಿಸುವ ಅಂಬೇಡ್ಕರ್, ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಪ್ರಜಾಪ್ರಭುತ್ವದ ನೆಲೆಗಳಿಗಾಗಿ ಶ್ರಮಿಸುತ್ತಾರೆ. ಭಾರತದಂತಹ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಮತ್ತು ಮೇಲ್ಜಾತಿಗಳ ಊಳಿಗಮಾನ್ಯ ಧೋರಣೆಯ ಹಿನ್ನೆಲೆಯಲ್ಲಿ, ರಾಜಕೀಯ ಪ್ರಜಾಪ್ರಭುತ್ವದ ನೆಲೆಗಳು ಮತ್ತೊಮ್ಮೆ ಇದೇ ಶೋಷಕ ವರ್ಗಗಳ ಪಾಲಾಗುತ್ತವೆ ಎನ್ನುವ ವಾಸ್ತವವನ್ನು ಅಂಬೇಡ್ಕರ್ ಸ್ಪಷ್ಟವಾಗಿ ಅರಿತಿದ್ದರು. ವರ್ಗ ಸಂಘರ್ಷವನ್ನು ಅಂಬೇಡ್ಕರ್ ಮಾರ್ಕ್ಸ್‌ವಾದಿ ಚೌಕಟ್ಟಿನಲ್ಲಿ ವಿಶ್ಲೇಷಿಸದಿದ್ದರೂ ವರ್ಗ ತಾರತಮ್ಯಗಳ ಹಿಂದಿರುವ ವರ್ಗ ಹಿತಾಸಕ್ತಿಗಳನ್ನು ಗಮನಿಸಿದ್ದರು ಎನ್ನುವುದನ್ನು ಇಂದಿನ ಪರಿಸ್ಥಿತಿಯಲ್ಲಿ ಅರ್ಥಮಾಡಿಕೊಳ್ಳಬೇಕು.
ಇದನ್ನು ಓದಿ: ಮುಷ್ಕರ-ಪ್ರತಿಭಟನೆ ಮಾಡುವವರನ್ನು ಜೈಲಿಗೆ ಹಾಕುವವರಿಗೆ, ಬೇಲ್ ನಿರಾಕರಿಸುವವರಿಗೆ ಪಾಠವಾಗಲಿ
ಇಂದಿನ ಆತ್ಮನಿರ್ಭರ ಭಾರತ ಸಮೃದ್ಧಿಯ ಉತ್ತುಂಗ ತಲುಪಿದಂತೆ ಕಾಣುತ್ತಿದ್ದರೆ ಅದು ಕೆಲವೇ ಕೋಟ್ಯಧಿಪತಿಗಳ ಸಂಪತ್ತಿನ ಪ್ರಮಾಣದಲ್ಲಿ ಮತ್ತು ಮಾರುಕಟ್ಟೆಯ ಸೂಚ್ಯಂಕಗಳಲ್ಲಿ ಮಾತ್ರ. ಉಳಿದಂತೆ ಸಮೃದ್ಧಿ ಎನ್ನುವುದು ಬಹುಪಾಲು ಜನತೆಗೆ ಮರೀಚಿಕೆಯಾಗಿಯೇ ಉಳಿದಿದೆ. ದೇಶದ ಬಡತನ, ನಿರುದ್ಯೋಗ, ಹಸಿವು ಮತ್ತು ಅಭಿವೃದ್ಧಿಯನ್ನು ಅಳೆಯುವ ಮಾನದಂಡಗಳು ಏನೇ ಇರಲಿ, ಭಾರತದಲ್ಲಿ ಹಸಿವು ಮತ್ತು ಬಡತನ ಹೆಚ್ಚಾಗುತ್ತಿರುವುದು ಮೇಲ್ನೋಟಕ್ಕೇ ಕಾಣಿಸುವಂತಿದೆ. ಇತ್ತೀಚಿನ ವರದಿಗಳ ಪ್ರಕಾರ ಹಸಿವಿನ ಸೂಚ್ಯಂಕದಲ್ಲಿ ಭಾರತ 107 ದೇಶಗಳ ಪೈಕಿ 94ನೆಯ ಸ್ಥಾನದಲ್ಲಿದೆ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 189 ರಾಷ್ಟ್ರಗಳ ಪೈಕಿ 131ನೆಯ ಸ್ಥಾನದಲ್ಲಿದೆ, ಗ್ರಾಮೀಣ ಬಡತನ 2011-18ರ ಅವಧಿಯಲ್ಲಿ ಶೇ 30ರಷ್ಟು ಹೆಚ್ಚಾಗಿದೆ. ಮೂರು ಕೋಟಿ ಜನರು ಅಧಿಕೃತ ಬಡತನ ರೇಖೆಗಿಂತಲೂ ಕೆಳಕ್ಕೆ ಕುಸಿದಿರುವುದಾಗಿ ವರದಿಯಾಗಿದೆ.
ಭಾರತದಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಸಾಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇರುವ ಹಿನ್ನೆಲೆಯಲ್ಲಿ ನೋಡಿದಾಗ ಹಸಿವಿನ ಸೂಚ್ಯಂಕದಲ್ಲಿನ ಕುಸಿತ ಕೇವಲ ಅಂಕಿಅಂಶಗಳ ಕಂತೆ ಅಲ್ಲ ಎಂದು ಅರಿವಾಗುತ್ತದೆ. 2019ರ ವಿಶ್ವಬ್ಯಾಂಕ್ ವರದಿಯ ಪ್ರಕಾರ ಭಾರತದಲ್ಲಿ ಐದು ವರ್ಷಕ್ಕಿಂತಲೂ ಮುಂಚೆಯೇ ಸಾವನ್ನಪ್ಪುವ ಮಕ್ಕಳ ಪೈಕಿ ಶೇ 68.2ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳಿ ಸಾವನ್ನಪ್ಪುತ್ತಿದ್ದಾರೆ. ಬೆಳವಣಿಗೆಯ ಕೊರತೆ ಇರುವವರ ಪ್ರಮಾಣ ಶೇ 38ರಷ್ಟಿದೆ. ಹಸಿವು ಮತ್ತು ಬಡತನದಿಂದ ಸಾಯುತ್ತಿರುವ ಮಕ್ಕಳಲ್ಲಿ ಹೆಚ್ಚಿನ ಪಾಲು ಶೋಷಿತ ವರ್ಗಗಳಿಗೆ ಸೇರಿದವರೇ ಇರುತ್ತಾರೆ. ಬಡತನ ಮತ್ತು ಹಸಿವು ಸಾರ್ವತ್ರಿಕ ವಿದ್ಯಮಾನಗಳೇ ಆದರೂ ಭಾರತದಂತಹ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಇದು ಶೋಷಿತ ಜಾತಿ ಸಮುದಾಯಗಳನ್ನೇ ಹೆಚ್ಚು ಕಾಡುವುದು ವಾಸ್ತವ. ಏಕೆಂದರೆ ಸಾಮಾಜಿಕ ಸಮಾನತೆ ಆರ್ಥಿಕ ಸಮಾನತೆಗೂ ಕಾರಣವಾಗುತ್ತದೆ. ಸಾಮಾಜಿಕ ಸಮಾನತೆಯನ್ನು ಸಾಧಿಸದೆ ಆರ್ಥಿಕ ಸಮಾನತೆಯನ್ನು ಸಾಧಿಸುವುದು ಸಾಧ್ಯವಿಲ್ಲ ಎಂದೇ ಅಂಬೇಡ್ಕರ್ ಪ್ರತಿಪಾದಿಸಿದ್ದರು.
ಇದನ್ನು ಓದಿ : ಅಭಿವ್ಯಕ್ತಿಯ ನಿಷೇಧ ಸಂಸ್ಕೃತಿಯ ಅವಾಂತರಗಳು
ಆದರೆ ಹಸಿವು ಮತ್ತು ಬಡತನ ಎಲ್ಲ ಸಮುದಾಯಗಳನ್ನೂ ಕಾಡುತ್ತಿರುವ ಸಮಸ್ಯೆಯಾಗಿದೆ. ಇಲ್ಲಿ ವರ್ಗ ಪ್ರಜ್ಞೆ ಮುನ್ನೆಲೆಗೆ ಬರುತ್ತದೆ. ಗ್ರಾಮೀಣ ಬಡತನ ಹೆಚ್ಚಾಗುತ್ತಿರುವುದಕ್ಕೆ ಮೂಲ ಕಾರಣ ಕೃಷಿ ಬಿಕ್ಕಟ್ಟು ಮತ್ತು ಗ್ರಾಮೀಣ ಜನತೆ ಭೂ ಸಂಬಂಧಗಳಿಂದ ವಿಮುಖರಾಗುತ್ತಿರುವುದೇ ಆಗಿದೆ. ಶೇ 86ರಷ್ಟು ಸಣ್ಣ ಮತ್ತು ಅತಿಸಣ್ಣ ರೈತರೇ ಇರುವ ಭಾರತದ ಕೃಷಿ ಕ್ಷೇತ್ರದಲ್ಲಿ ತುಂಡು ಭೂಮಿಯನ್ನೇ ನಂಬಿ ಬದುಕುವ ಕೋಟ್ಯಂತರ ಕುಟುಂಬಗಳಿವೆ. ಈ ಕೃಷಿ ಅವಲಂಬಿತ ಕುಟುಂಬಗಳು ನವ ಉದಾರವಾದಿ ಆರ್ಥಿಕ ನೀತಿಗಳ ಪರಿಣಾಮ ನಗರಗಳಿಗೆ ವಲಸೆ ಹೋಗುವುದು ಅನಿವಾರ್ಯವಾಗಿದೆ. ಐದು ದಶಕಗಳ ಹಿಂದೆ ಕಾಣಬಹುದಾಗಿದ್ದ ಭೂಮಾಲೀಕರ ಶೋಷಣೆ ಮತ್ತು ಅಟ್ಟಹಾಸ ಇಂದು ಕ್ಷೀಣಿಸಿದ್ದರೂ ಅರ್ಥವ್ಯವಸ್ಥೆಯ ಕಾರ್ಪೋರೇಟೀಕರಣದ ಹಿನ್ನೆಲೆಯಲ್ಲಿ ಗ್ರಾಮೀಣ ಬಡ ಜನತೆ ಹೊಸ ರೀತಿಯ ಶೋಷಣೆಯನ್ನು ಬಂಡವಾಳಿಗರಿಂದ ಎದುರಿಸಬೇಕಿದೆ.
ಸಂಪತ್ತಿನ ವಿತರಣೆ ಮತ್ತು ಬಳಕೆ ಇಲ್ಲಿ ಮುನ್ನೆಲೆಗೆ ಬರುತ್ತದೆ. ಹೊಸ ಕೃಷಿ ಕಾಯ್ದೆಗಳು ಭಾರತದ ರೈತಾಪಿಯನ್ನು ಕಾರ್ಪೋರೇಟ್ ಅವಲಂಬಿತರನ್ನಾಗಿ ಮಾಡುವ ಅಸ್ತ್ರವಾಗಿದೆ. ಈಗಾಗಲೇ ದೊಡ್ಡ ರೈತರ ಲೇವಾದೇವಿ ವ್ಯವಹಾರ, ಗೇಣಿ ಪದ್ಧತಿ ಮತ್ತು ಗುತ್ತಿಗೆ ಕೃಷಿ ಪದ್ಧತಿಯಿಂದ ತತ್ತರಿಸಿರುವ ಗ್ರಾಮೀಣ ಬಡಜನತೆ ಮತ್ತು ಶ್ರಮಜೀವಿ ವರ್ಗಗಳು ಈಗ ಬೃಹತ್ ಬಂಡವಾಳಿಗರು ಮತ್ತು ಕಾರ್ಪೋರೇಟ್ ಉದ್ಯಮಿಗಳ ದೌರ್ಜನ್ಯಕ್ಕೊಳಗಾಗುತ್ತಾರೆ. ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಯ ಪರಿಣಾಮ ಲಕ್ಷಾಂತರ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾಗುತ್ತಾರೆ. ಕಳೆದ ಮೂರು ದಶಕಗಳ ಜಾಗತೀಕರಣ ನೀತಿ ಮತ್ತು ನಗರೀಕರಣ ಪ್ರಕ್ರಿಯೆಯಿಂದ ಈಗಾಗಲೇ ರೈತ ಸಮುದಾಯ ಸಂಕಷ್ಟದಲ್ಲಿದೆ. ಇಲ್ಲಿ ಶೋಷಣೆ ವರ್ಗ ಸ್ವರೂಪವನ್ನು ಪಡೆಯುತ್ತದೆ. ದಲಿತ ಸಮುದಾಯ ಒಂದೆಡೆ ಆರ್ಥಿಕ ಶೋಷಣೆಯನ್ನು ಎದುರಿಸಿದರೆ ಮತ್ತೊಂದೆಡೆ ಸಾಮಾಜಿಕ ಶೋಷಣೆಯನ್ನೂ ಎದುರಿಸಬೇಕಾಗುತ್ತದೆ.
ಇದನ್ನು ಓದಿ: ಕೊವೀಡ್ -19 ಎರಡನೇ ಅಲೆಗೆ ‘ಸರಕಾರದ ನಿದ್ದೆ’ ಕಾರಣವಾಯ್ತಾ?
ಇಂದು ಈ ಎರಡು ಅಲಗಿನ ಕತ್ತಿಯ ಮೇಲೆ ಭಾರತದ ಶ್ರಮಿಕ ವರ್ಗಗಳು, ಶೋಷಿತ ವರ್ಗಗಳು ನಡೆಯುತ್ತಿವೆ. ದೇಶವನ್ನು ಕಾಂಗ್ರೆಸ್ ಮುಕ್ತ, ಬಿಜೆಪಿ ಮುಕ್ತ ಭಾರತವನ್ನಾಗಿ ಮಾಡಲು ಸದಾ ಸನ್ನದ್ಧವಾಗಿರುವ ರಾಜಕೀಯ ಪಕ್ಷಗಳು ಭಾರತವನ್ನು ಹಸಿವು, ಬಡತನ, ಅಪೌಷ್ಟಿಕತೆ, ದಾರಿದ್ರ್ಯ, ದೌರ್ಜನ್ಯ, ಅತ್ಯಾಚಾರ, ಅಸ್ಪೃಶ್ಯತೆ, ಜಾತಿ ತಾರತಮ್ಯ ಇವುಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಸೊಲ್ಲೆತ್ತುವುದಿಲ್ಲ. ಅಂಬೇಡ್ಕರ್ ಮತ್ತು ಮಾರ್ಕ್ಸ್ ಹೆಚ್ಚು ಪ್ರಸ್ತುತ ಎನಿಸುವುದು ಇಲ್ಲಿಯೇ. ಭಾರತದಲ್ಲಿ ವ್ಯಕ್ತಿಗತ ಅಸ್ಮಿತೆಗಳು ಜಾತಿ ಚೌಕಟ್ಟಿನಲ್ಲೇ ವ್ಯಕ್ತವಾಗುತ್ತವೆ. ಆದರೆ ಸಮಾಜೋ ಆರ್ಥಿಕ ಅಭಿವೃದ್ಧಿಯ ನೆಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ವರ್ಗ ಪ್ರಜ್ಞೆಯೂ ಗಟ್ಟಿಯಾಗುತ್ತಲೇ ಹೋಗುವುದನ್ನು ಗಮನಿಸಬೇಕು. ಸಾಮಾಜಿಕವಾಗಿ ಮೇಲ್ ಚಲನೆ ಪಡೆದ ಶೋಷಿತ ಸಮುದಾಯಗಳ ಒಂದು ವರ್ಗ ವರ್ಗಕೇಂದ್ರಿತ ಶೋಷಣೆಗೆ ಮೂಕ ಪ್ರೇಕ್ಷಕರಾಗಿರುವುದನ್ನು ಗಮನಿಸಲೇಬೇಕಿದೆ.
ಭೂ ಸಂಬಂಧಗಳು ಮತ್ತು ಉತ್ಪಾದನಾ ಸಂಬಂಧಗಳ ನೆಲೆಯಲ್ಲಿ ಭಾರತೀಯ ಸಮಾಜವನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಜಾತಿ ಶೋಷಣೆಯೊಡನೆಯೇ ವರ್ಗಕೇಂದ್ರಿತ ಶೋಷಣೆಯೂ ಅಷ್ಟೇ ಗಂಭೀರ ಸಮಸ್ಯೆಯಾಗಿ ಕಾಣುತ್ತದೆ. ವರ್ಗ ಸಂಘರ್ಷದ ನೆಲೆಗಳನ್ನು ನಿರಾಕರಿಸಿ, ವರ್ಗ ತಾರತಮ್ಯವನ್ನು ಜಾತಿಯ ಮಸೂರದಿಂದಲೇ ನೋಡುವುದರಿಂದ ಶೋಷಿತರು ಶೋಷಣೆಯ ಮೂಲವನ್ನು ಗ್ರಹಿಸದೆ ಹೋಗುತ್ತಾರೆ. ನವ ಉದಾರವಾದ ಮತ್ತು ಆತ್ಮನಿರ್ಭರ ಭಾರತದ ಸಂದರ್ಭದಲ್ಲಿ, ಆರ್ಥಿಕ ಅಭಿವೃದ್ಧಿಯ ಫಲಾನುಭವಿಗಳು ಕಾರ್ಪೋರೇಟ್ ಆರ್ಥಿಕತೆಯ ಪರವಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬದಲಾಗುತ್ತಿರುವ ಶೋಷಣೆಯ ಆಯಾಮಗಳನ್ನು ಗ್ರಹಿಸುವಲ್ಲಿ ವಿಫಲವಾಗಿರುವುದು ಸ್ಪಷ್ಟವಾಗುತ್ತದೆ.
ಸಾಮಾಜಿಕ ನೆಲೆಯಲ್ಲಿ ಅಸ್ಪೃಶ್ಯತೆಯ ವಿರುದ್ಧ, ಜಾತಿ ದೌರ್ಜನ್ಯದ ವಿರುದ್ಧ ದನಿ ಎತ್ತುವ ಶೋಷಿತ ಸಮುದಾಯದ ಪ್ರತಿನಿಧಿಗಳೂ ಇದೇ ಸಮುದಾಯದ ಒಂದು ಬೃಹತ್ ಸಂಖ್ಯೆ ವರ್ಗ ತಾರತಮ್ಯ ಮತ್ತು ವರ್ಗ ಶೋಷಣೆಗೊಳಗಾಗುತ್ತಿರುವುದನ್ನು ನಿರ್ಲಕ್ಷಿಸುತ್ತಿರುವುದನ್ನು ಗಮನಿಸಬೇಕಿದೆ. ಭೂ ಹೋರಾಟಗಳು ಈ ಸಂದರ್ಭದಲ್ಲಿ ಮತ್ತೊಮ್ಮೆ ಚರ್ಚೆಗೊಳಗಾಗಬೇಕಿದೆ. ತುಂಡು ಭೂಮಿಯನ್ನು ಹೊಂದದಿದ್ದರೂ ಜೀವನಪರ್ಯಂತ ಭೂಮಿಯನ್ನೇ ಆಶ್ರಯಿಸಿ ಬದುಕುವ ಅಸಂಖ್ಯಾತ ಜನತೆ ಶೋಷಿತ ಸಮುದಾಯಕ್ಕೇ ಸೇರಿದವರಾಗಿದ್ದಾರೆ. ಈ ಸಮುದಾಯ ಎದುರಿಸುವ ಆರ್ಥಿಕ ಶೋಷಣೆಗಳಿಗೆ ಜಾತಿಯನ್ನೂ ಮೀರಿದ ಒಂದು ವರ್ಗ ಸಮಾಜ ಕಾರಣ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.
ಇದನ್ನು ಓದಿ: ಅಂಬೇಡ್ಕರ್ ಅವರ ಕೆಲವು ಮಹತ್ವದ ನುಡಿಗಳು
ಡಾ ಅಂಬೇಡ್ಕರ್ ಅವರನ್ನು ಸಂವಿಧಾನ ಮತ್ತು ಮೀಸಲಾತಿಯಿಂದಾಚೆಗೂ ನೋಡುವ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಬೇಕಿದೆ. ಆಗಲೇ ಅವರ ಭೂ ರಾಷ್ಟ್ರೀಕರಣ, ಸಾಂವಿಧಾನಿಕ ಸಮಾಜವಾದ ಮತ್ತು ಇತರ ಚಿಂತನೆಗಳ ಒಳಸುಳಿಗಳು ನಮಗೆ ಅರ್ಥವಾಗಲು ಸಾಧ್ಯ. ಇಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್ ಮುಖಾಮುಖಿಯಾದರೆ ಯಾವುದೇ ಮಡಿವಂತಿಕೆ ಇಲ್ಲದೆ ಚರ್ಚೆ ನಡೆಸುವ ಹೃದಯ ವೈಶಾಲ್ಯವೂ ಇಂದಿನ ತುರ್ತು. ಎಡಪಕ್ಷಗಳು ಜಾತಿ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನುವ ಸಂದರ್ಭದಲ್ಲೇ ದಲಿತ ಹೋರಾಟಗಳು ವರ್ಗ ಸಂಘರ್ಷದ ನೆಲೆಗಳನ್ನು ವರ್ಗ ಅಸ್ಮಿತೆಯ ನೆಲೆಯಲ್ಲಿ ಪರಾಮರ್ಶಿಸಲಿಲ್ಲ ಎನ್ನುವುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಇದರ ಪರಿಣಾಮವೇ ಭೂ ಹೋರಾಟಗಳು ಮತ್ತು ಭೂಮಿ ಸಂಬಂಧಿತ ಸಂಘರ್ಷದ ನೆಲೆಗಳು ಏಕಮುಖಿಯಾಗಿಯೇ ಚಲಿಸುತ್ತಾ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.
ಇವತ್ತಿನ ಸಂದರ್ಭದಲ್ಲಿ ನಾವು ಮುಖಾಮುಖಿಯಾಗಬೇಕಿರುವುದು ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಶ್ರೇಷ್ಠತೆಯ ಅಹಮಿಕೆಗಳಿಗೆ ಮತ್ತು ನವ ಉದಾರವಾದಿ ಡಿಜಿಟಲ್ ಯುಗದ ಆತ್ಮನಿರ್ಭರ ಭಾರತಕ್ಕೆ. ಇವೆರಡೂ ಸಹ ಭಾರತದ ಶ್ರಮಜೀವಿಗಳ ಪಾಲಿಗೆ ಶಾಶ್ವತ ಬಲಿಪೀಠಗಳಾಗಿ ಪರಿಣಮಿಸಲಿವೆ. ಇಂದು ಭೂಮಿ ಕಳೆದುಕೊಳ್ಳುತ್ತಿರುವ ಕೃಷಿಕರು, ನೌಕರಿ ಕಳೆದುಕೊಳ್ಳುತ್ತಿರುವ ದುಡಿಮೆಗಾರರು, ಉದ್ಯೋಗಾವಕಾಶಗಳನ್ನೇ ಕಳೆದುಕೊಳ್ಳುತ್ತಿರುವ ಯುವ ಸಮುದಾಯ, ಸಮಾಜದಲ್ಲಿ ತಮ್ಮ ಅಸ್ಮಿತೆಗಾಗಿ ಹೋರಾಡುತ್ತಿರುವ ಅಸ್ಪೃಶ್ಯ ಸಮುದಾಯಗಳು, ನಿರಂತರ ಶೋಷಣೆಗೊಳಗಾಗುತ್ತಿರುವ ಅಲ್ಪಸಂಖ್ಯಾತರು, ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಿರುವ ಆದಿವಾಸಿ ಸಮುದಾಯಗಳು ಮತ್ತು ಆಧುನಿಕ ನಗರೀಕರಣ ಪ್ರಕ್ರಿಯೆಯಿಂದ ಬದುಕಿನ ಬುನಾದಿಯನ್ನೇ ಕಳೆದುಕೊಳ್ಳುತ್ತಿರುವ ಗ್ರಾಮೀಣ ಬಡ ಜನತೆಗೆ ನಾವು ಮುಖಾಮುಖಿಯಾಗಬೇಕಿದೆ.
ಈ ಮುಖಾಮುಖಿಯ ಸಂದರ್ಭದಲ್ಲಿ ನಮಗೆ ಡಾ ಬಿ ಆರ್ ಅಂಬೇಡ್ಕರ್ ಜಾತಿ ಶೋಷಣೆಯ ವಿಭಿನ್ನ ಆಯಾಮಗಳನ್ನು ನೆನಪಿಸಿದರೆ, ಮಾರ್ಕ್ಸ್ ವರ್ಗ ಕೇಂದ್ರಿತ ಶೋಷಣೆಯ ಆಯಾಮಗಳನ್ನು ಪರಿಚಯಿಸುತ್ತಾರೆ. ಈ ಎರಡೂ ಚಿಂತನೆಗಳನ್ನು ಹೊಸಕಿ ಹಾಕಲು ಭಾರತದ ಸಾಂಸ್ಕೃತಿಕ ರಾಜಕಾರಣದ ರಾಯಭಾರಿಗಳು ನವ ಉದಾರವಾದದ ಮಾರ್ಗವನ್ನು ಅನುಸರಿಸುತ್ತಿರುವುದನ್ನೂ ಗಮನಿಸಬೇಕಿದೆ. ಹಿಂದುತ್ವ ರಾಜಕಾರಣ ಈಗಾಗಲೇ ಅಂಬೇಡ್ಕರ್ ಮಾರ್ಗದ ಅನುಯಾಯಿಗಳನ್ನು ಮತೀಯವಾದದ ಚೌಕಟ್ಟಿನಲ್ಲಿ ಬಂಧಿಸಿದೆ. ಪಶ್ಚಿಮ ಬಂಗಾಲ ಮತ್ತು ಕೇರಳದಲ್ಲಿ ಮಾರ್ಕ್ಸ್ ವಾದಿ ಚಿಂತನಾ ವಾಹಿನಿಯ ತೊರೆಗಳನ್ನೂ ಫ್ಯಾಸಿಸ್ಟ್ ಚಿಂತನೆಗಳು ನುಂಗಿಹಾಕುತ್ತಿರುವುದನ್ನು ಕಾಣುತ್ತಿದ್ದೇವೆ. ಅಂಬೇಡ್ಕರರನ್ನು ಆರಾಧಿಸುತ್ತಲೇ ಅವರ ಚಿಂತನೆಗಳನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಸಂಚು ಸಮಾಜೋ ಆರ್ಥಿಕ ನೆಲೆಗಳಲ್ಲಿ ಅನಾವರಣವಾಗುತ್ತಿದೆ.
ಮೀಸಲಾತಿಯ ನೆಲೆಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲೇ ಮೀಸಲಾತಿಯ ಆಕಾಂಕ್ಷಿಗಳು ಹೆಚ್ಚಾಗುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಮತ್ತೊಂದು ಅಂಬೇಡ್ಕರ್ ಜಯಂತಿ ಆಚರಿಸುತ್ತಿದ್ದೇವೆ. ಸಮಾಜೋ ಆರ್ಥಿಕ ಸಮಾನತೆ ಮರೀಚಿಕೆಯಾಗುತ್ತಿರುವ ಸಂದರ್ಭದಲ್ಲೇ ಸಾಮಾಜಿಕ ಅಸ್ಮಿತೆಗಾಗಿ, ಆರ್ಥಿಕ ಅಸ್ತಿತ್ವಕ್ಕಾಗಿ ಹೋರಾಡುತ್ತಾ ಅಂಬೇಡ್ಕರರನ್ನು ನೆನೆಯುತ್ತಿದ್ದೇವೆ. ಈ ಸಂಭ್ರಮ ಸಂತಸಗಳ ನಡುವೆಯೇ ಆತ್ಮನಿರ್ಭರ ಭಾರತದ ಸಕಲ ಉತ್ಪಾದಿತ ಸಂಪತ್ತು, ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳು ಖಾಸಗಿ ಬಂಡವಾಳಶಾಹಿಗಳ ಅಧಿಪತ್ಯಕ್ಕೆ ಒಳಪಡುತ್ತಿದೆ. ಭಾರತ ವಸಾಹತುಕಾಲದ ಬಂಡವಾಳ ಗುಲಾಮಿ ಸ್ಥಿತಿಯನ್ನು ತಲುಪುತ್ತಿದೆ. ಶೋಷಣೆಯ ಆಯಾಮಗಳು ಬದಲಾಗುತ್ತಿವೆ, ಶೋಷಣೆಯ ಸ್ವರೂಪ ಸ್ಪಷ್ಟವಾಗಿಯೇ ಇದೆ. ಈ ಸವಾಲುಗಳನ್ನು ಎದುರಿಸುವುದು ನಮ್ಮ ಆದ್ಯತೆಯಾಗಬೇಕಿದೆ.