ಮೈಸೂರು: ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸೆ-9 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಯಡಿಯೂರಪ್ಪನವರು ನಮ್ಮ ಪ್ರಶ್ನಾತೀತ ನಾಯಕರು. ಅವರು ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡಿ ಪಕ್ಷ ಕಟ್ಟಿದವರು. ಅವರು ಏನೇ ತೀರ್ಮಾನ ಮಾಡಿದ್ದರೂ ಪಕ್ಷದ ಒಳತಿಗಾಗಿ ಮಾಡಿರುತ್ತಾರೆ ಎಂದರು. ಬಿಜೆಪಿ-ಜೆಡಿಎಸ್ ಮೈತ್ರಿ
ಇದನ್ನೂ ಓದಿ:ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ: ಸಿಎಂ ಸಿದ್ದರಾಮಯ್ಯ
ರಾಜ್ಯದ ಜನ ಕಳೆದ 40 ವರ್ಷಗಳಿಂದಲೂ, ಪ್ರತಿ 5 ವರ್ಷಕ್ಕೊಮ್ಮೆ ರಾಜ್ಯ ಸರ್ಕಾರವನ್ನು ಬದಲಿಸುತ್ತಾ ಬಂದಿದ್ದಾರೆ. ಆದರೆ 2004ರ ಲೋಕಸಭಾ ಚುನಾವಣೆಯಿಂದ 2019ರವರೆಗೂ ನಿರಂತರವಾಗಿ ಬಿಜೆಪಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಹೆಚ್ಚಿನ ಬೆಂಬಲ ಸಿಗುತ್ತದೆ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲೂ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ನಾನು ಎರಡು ಬಾರಿ ಸಂಸದನಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದೇನೆ. ನನ್ನ ಅಭಿವೃದ್ದಿ ಕಾರ್ಯಗಳನ್ನು ನೋಡಿರುವ ಮೈಸೂರು ಕೊಡಗಿನ ಜನರು ಮತ ನೀಡುತ್ತಾರೆ. ಜನರು ಹಾಗು ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಮುಂದಿನ ಚುನಾವಣೆಯಲ್ಲೂ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ತಲೆ ಕೆಡಿಸಕೊಳ್ಳುವುದಿಲ್ಲ ಎಂದರೆ ಸುಮ್ಮನಿರಿ. ಪದೇ ಪದೇ ಯಾಕೆ ಅದೇ ವಿಚಾರ ಮಾತನಾಡುತ್ತೀರಿ. ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಗ್ಯಾರೆಂಟಿ ಯೋಜನೆಗಳ ಬಗ್ಗೆ ಬಸ್ಸಿನಲ್ಲಿ ಸ್ಟಿಕ್ಕರ್ ಅಂಟಿಸಿಕೊಂಡು ಇರಬೇಡಿ. ಯಾವಾಗಲೂ ಚುನಾವಣೆ ರಾಜಕೀಯ ಮಾಡಿಕೊಂಡು ಇರಬೇಡಿ ಎಂದು ತಿಳಿಸಿದರು.