ನವದೆಹಲಿ : ಪ್ರಸಕ್ತ ವರ್ಷದ ಸಂಸತ್ತು ಚಳಿಗಾಲ ಅಧಿವೇಶನ ಇಂದಿನಿಂದ ಶರುವಾಗಲಿದೆ. ಡಿಸೆಂಬರ್ 23ರ ವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಚರ್ಚೆ ಕಾವೇರುವ ಸಾಧ್ಯತೆ ಇದೆ.
ರೈತರ ಹೋರಾಟ, ಇಂಧನ ಬೆಲೆ ಏರಿಕೆ, ಹಣದುಬ್ಬರ, ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಹತ್ಯೆ, ಲಖೀಂಪುರ ಖೇರಿ ದುರ್ಘಟನೆ, ಸೇರಿ ಹಲವು ವಿಚಾರಗಳನ್ನ ಮುಂದಿಟ್ಟುಕೊಂಡು ಕೇಂದ್ರವನ್ನ ತಾರಟೆಗೆ ತೆಗೆದುಕೊಳ್ಳೋದಕ್ಕೆ ವಿಪಕ್ಷಗಳು ತುದಿಗಾಲಲ್ಲಿ ನಿಂತುಕೊಂಡಿವೆ.
ಅಧಿವೇಶನದಲ್ಲಿ 29ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗಲಿವೆ. ಪ್ರಮುಖವಾಗಿ ಕೃಷಿ ಕಾನೂನು ರದ್ದು, ಕ್ರಿಪ್ಟೋ ಕರೆನ್ಸಿ ನಿಯಂತ್ರಣ, ಕೆಲ ಸರ್ಕಾರಿ ಬ್ಯಾಂಕ್ ಖಾಸಗೀಕರಣ, ಡ್ರಗ್ಸ್ ನಿಯಂತ್ರಣ ಸೇರಿ ಹಲವು ಮಹತ್ವದ ಮಸೂದೆಗಳು ಈ ಬಾರಿ ಮಂಡನೆಯಾಗ್ತಿವೆ.
ಅನ್ನದಾತರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ ನೂತನ ಕೃಷಿ ಕಾನೂನುಗಳನ್ನ ರದ್ದು ಮಾಡುವುದಾಗಿ ನವೆಂಬರ್ 19 ರಂದು ಘೋಷಿಸಿತ್ತು. ಕೃಷಿ ಕಾಯ್ದೆಯನ್ನು ವಿರೋಧಿಸಿ ಇಡೀ ದೇಶದ ಗಡಿಗಳಲ್ಲಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ಅನ್ನದಾತನ ಆಕ್ರೋಶಕ್ಕೆ ಕೊನೆಗೂ ಕೇಂದ್ರ ಸರಕಾರ ತಲೆಬಾಗಬೇಕಾಯಿತು. 700 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದು, ಹೋರಾಟದ ವೇಳೆ ರೈತರಿಗೆ ಕೇಂದ್ರ ಸರಕಾರ ಸಾಕಷ್ಟು ಹಿಂಸೆಯನ್ನು ನೀಡಿತ್ತು. ಬೆಂಬಲ ಬೆಲೆ ಘೋಷಣೆ ಜಾರಿಯಾಗುವ ವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ರೈತರು ಈಗಾಗಲೆ ಘೋಷಿಸಿದ್ದಾರೆ. ಈ ಬೆನ್ನಲ್ಲೆ ಕೇಂದ್ರ ಕೃಷಿ ಕಾನೂನುಗಳ ರದ್ದತಿ ಬಗ್ಗೆ ಮಹತ್ವದ ಮಸೂದೆ ಮಂಡನೆ, ಬೆಂಬಲ ಬೆಲೆ ಕುರಿತು ಸರಕಾರದ ನಿರ್ಣಯ ಏನಾಗಬಹುದು ಎಂಬ ಕುತೂಹಲ ಮೂಡಿಸಿದೆ.