– ವಸಂತರಾಜ ಎನ್.ಕೆ.
ಸಾವಿರಾರು ಕೈಗಳು ಲಕ್ಷಾಂತರ ಹತಾರಗಳುಳ್ಳ ಸರ್ವಶಕ್ತ ಪ್ರಭುತ್ವ ಮತ್ತು ದೈತ್ಯ ಕಾರ್ಪೊರೆಟ್ ಮಾಧ್ಯಮಗಳ ಅಪವಿತ್ರ ಮೈತ್ರಿಯ ವಿರುದ್ಧ ಪರ್ಯಾಯ ಮಾಧ್ಯಮ ಕಟ್ಟುವುದು ಹೂಹಾಸಿದ ಹಾದಿಯಲ್ಲ.ಕಲ್ಲುಮುಳ್ಳುಗಳ ಹೋರಾಟದ ಹಾದಿ. ಇದನ್ನು ಸಾಧಿಸಲು ಒಂದು ಕಡೆ ಜನಸಮೂಹಗಳ ಜತೆ ಸಾವಯವ ಸಂವಹನ ಸಂಪರ್ಕ ಸಾಧಿಸುತ್ತಾ ಪರ್ಯಾಯ ಮಾಧ್ಯಮಗಳ ಜಾಲವನ್ನು ಕಟ್ಟಿಕೊಳ್ಳಬೇಕು ಮತ್ತು ಇನ್ನೊಂದೆಡೆ ಕಾರ್ಪೊರೆಟ್ ಮಾಧ್ಯಮದಲ್ಲೂ ಕಿರು ಆವರಣಗಳನ್ನು ಕಟ್ಟಿಕೊಳ್ಳಬೇಕು
ನಾವು ಮುಖ್ಯವಾಹಿನಿ ಮಾಧ್ಯಮ ಎಂದು ಕರೆಯುತ್ತಿರುವುದು ನಿಜವಾಗಿಯೂ,ಕಾರ್ಪೊರೆಟುಗಳ ಮತ್ತು ಕಾರ್ಪೊರೆಟುಗಳಿಗಾಗಿ ಇರುವ ಕಾರ್ಪೊರೆಟ್ ಮಾಧ್ಯಮವಾಗಿದೆ.ಹೀಗೆಂದವರು ಖ್ಯಾತ ಪತ್ರಕರ್ತ ಪಿ ಸಾಯಿನಾಥ್. ಅವರು ಅಕ್ಟೋಬರ್ 17ರಂದು ಜನಶಕ್ತಿ ಮೀಡಿಯಾ ವೆಬ್ ಪತ್ರಿಕೆ ಲೋಕಾರ್ಪಣೆಯ ಭಾಗವಾಗಿ ಏರ್ಪಡಿಸಿದ್ದ ವೆಬಿನಾರ್ ಸರಣಿಯ ‘ಪರ್ಯಾಯ ಮಾಧ್ಯಮ ಏಕೆ? ಹೇಗೆ? : ಕೊರೊನಾ ಕಾಲದಲ್ಲಿ,ಮೊದಲು ಮತ್ತು ನಂತರ’ ಎಂಬ ವೆಬಿನಾರಿನಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ಇದಕ್ಕಿಂತ ಮೊದಲು ವೆಬಿನಾರ್ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಡಿ ಉಮಾಪತಿ ಅವರು ಆಶಯ ಭಾಷಣ ಮಾಡಿದರು.ಪ್ರಚಂಡ ನಾಯಕರು ತಮ್ಮ ಅಭಿಪ್ರಾಯಗಳನ್ನು ಭಾರತದ ಜನತೆಯ ಮೇಲೆ ಹೊರಿಸಿ ಅದು ಅವರದೇ ಅಭಿಪ್ರಾಯ ಎಂದು ಭಾರತದ ಜನತಂತ್ರವನ್ನು ಅಪಹಾಸ್ಯ ಮಾಡುತ್ತಿರುವ ಇಂದಿನ ಸ‍್ಥಿತಿಯನ್ನು ‘ಧ್ವನಿ ಗಾರುಡಿ’ ಅಥವಾ ‘ಮಾತಾಡುವ ಗೊಂಬೆ’ ರೂಪಕದ ಮೂಲಕ, ಉಮಾಪತಿ ಅವರು ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಿದರು. ಇಂದಿನ ಮಾಧ್ಯಮ ಪರಿಸ್ಥಿತಿಯನ್ನು ತಮ್ಮ ಆಶಯ ಮಾತುಗಳಲ್ಲಿ ಉಮಾಪತಿ ಅವರು ಬಿಚ್ಚಿಟ್ಟರು.
ಆ ನಂತರ ಹಿರಿಯ ಪತ್ರಕರ್ತರಾದ ಡಾ. ಆರ್.ಪೂರ್ಣಿಮಾ, ಗೌರೀಶ್ ಅಕ್ಕಿ ಮತ್ತು ಗೌರಿ ಮೀಡಿಯಾ ಸಂಪಾದಕರಾದ ಡಾ.ಎಚ್.ವಿ, ವಾಸು ಭಾಗವಹಿಸಿದ ‘ಪರ್ಯಾಯ ಮಾಧ್ಯಮ : ಏಕೆ, ಹೇಗೆ?’ ಎಂಬ ವಿಷಯದ ಕುರಿತು ಸಂವಾದ ನಡೆಯಿತು. ಸಂವಾದವನ್ನು ಸಂವಹನ ಸಮಾಲೋಚಕರಾದ ಎಸ್.ಸತ್ಯಾ ಅವರು ನಡೆಸಿಕೊಟ್ಟರು.ಅಧ್ಯಕ್ಷತೆ ವಹಿಸಿದ್ದ ಡಿ ಉಮಾಪತಿ ಅವರು ಸಹ ಸಂವಾದದಲ್ಲಿ ಭಾಗವಹಿಸಿದರು.
ಪರ್ಯಾಯ ಮಾಧ್ಯಮ ಏಕೆ? – ಎಂಬುದು ದಿಕ್ಸೂಚಿ ಮತ್ತು ಆಶಯ ಮಾತುಗಳಲ್ಲಿ ಇದು ‘ಕಾಲದ ಅಗತ್ಯ’ ಎಂದು ಸ್ಪಷ್ಟವಾಗಿದ್ದರಿಂದ ಪರ್ಯಾಯ ಮಾಧ್ಯಮ ಹೇಗೆ ಎಂಬುದೇ ಸಂವಾದದ ಪ್ರಮುಖ ವಿಷಯವಾಯಿತು. ಸಂವಾದ ‘ಸಂಬಂಧಿಸಿದ ಹಲವು ನಿರ್ದಿಷ್ಟ ಪ್ರಶ್ನೆಗಳ ಸುತ್ತ ನಡೆಯಿತು.
ಜನಪರ (ಅಥವಾ ಜನತಾ) ಮಾಧ್ಯಮಗಳು ನಿಜವಾದ ಮುಖ್ಯವಾಹಿನಿ ಸಮೂಹ ಮಾಧ್ಯಮ ಆಗಲು ನೋಡುಗ/ಓದುಗ ಪ್ರಮಾಣ (ಗಾತ್ರ) ಮುಖ್ಯವೇ? ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಹಿಂದೆ ಸಣ್ಣ ‘ಪರ್ಯಾಯ ಪತ್ರಿಕೆ’ಗಳಾಗಿ ಆರಂಭವಾಗಿ ಮುಖ್ಯವಾಹಿನಿ ಪತ್ರಿಕೆಯಾಗುವ ಗಂಭೀರ ಪ್ರಯತ್ನಗಳಿಂದ ಪಾಠ ಕಲಿಯಬಹುದೇ? ಕರ್ನಾಟಕ ಮತ್ತು ದೇಶದಲ್ಲಿ ಸಾಮಾಜಿಕ ಸಾಂಸ್ಕೃತಿಕ ಚಳುವಳಿಗಳ ಮತ್ತು ರಾಜಕೀಯ ಚಳುವಳಿ-ಪಕ್ಷಗಳ ಪತ್ರಿಕೆಗಳ ಅನುಭವದಿಂದ ಏನನ್ನು ಕಲಿಯಬಹುದು? ಎಲ್ಲ ಜನಪರ ಮಾಧ್ಯಮಗಳು ಮತ್ತು ಪತ್ರಕರ್ತರು ಒಟ್ಟಾಗಿ ತಮ್ಮೆಲ್ಲ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಒಂದು ಸಶಕ್ತ ದೊಡ್ಡ ಮಾಧ್ಯಮ ಕಟ್ಟುವುದು ಸಾಧ್ಯವಿಲ್ಲವೆ? ಇಂತಹ ಕ್ರೋಢೀಕರಣ ಇಂದಿನ ಗಂಭೀರ ಪರಿಸ್ಥಿತಿಯಲ್ಲಿ ಜನಚಳುವಳಿಗಳ ಐಕ್ಯತೆ ಮತ್ತು ಕ್ರೋಡೀಕರಣಕ್ಕೂ ಹಾದಿ ಮಾಡಿಕೊಡಬಹುದೆ? ಸ್ವತಃ ದೈತ್ಯ ಕಾರ್ಪೊರೆಟ್ ಗಳಾಗಿರುವ ನೆಟ್-ಆಧಾರಿತ ಡಿಜಿಟಲ್ (ಫೇಸ್ ಬುಕ್, ಯೂ ಟ್ಯೂಬ್, ವಾಟ್ಸಪ್ ಇತ್ಯಾದಿ) ವೇದಿಕೆಗಳಿಂದ ಜನಪರ ಮಾದ್ಯಮಗಳಿಗೆ ಯಾವ ಸಾಧ್ಯತೆ, ಸವಾಲುಗಳನ್ನು ನಿರೀಕ್ಷಿಸಬಹುದು.? ಸಣ್ಣ ಗಾತ್ರದ ಜನಪರ ಮಾಧ್ಯಮಗಳು ಮುಖ್ಯವಾಹಿನಿಯ ಜನಸಮೂಹ ಆಗುವುದು ಹೇಗೆ ? ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಹೊಂಚುವುದು ಹೇಗೆ? ಈ ಹಲವು ಪ್ರಶ್ನೆಗಳ ಸುತ್ತ ಆಸಕ್ತಿಕಾರಕ ಸಂವಾದ ನಡೆಯಿತು.
ಸಮೂಹ ಮಾಧ್ಯಮ ಆಗಲು ನೋಡುಗ/ಓದುಗ ಪ್ರಮಾಣ (ಗಾತ್ರ) ಮುಖ್ಯವೇ?
ನಿಜವಾದ ಮುಖ್ಯವಾಹಿನಿ ಸಮೂಹ ಮಾಧ್ಯಮ ಆಗಲು ನೋಡುಗ/ಓದುಗ ಪ್ರಮಾಣ (ಗಾತ್ರ) ಮುಖ್ಯವಲ್ಲ. ಹಿಂದೆ ಸ್ವಾತಂತ್ರ್ಯ ಚಳುವಳಿಯಲ್ಲಿ ಮತ್ತು ನಂತರವೂ ಸಾಮಾಜಿಕ-ಸಾಂಸ್ಕೃತಿಕ ರಾಜಕೀಯ ಚಳುವಳಿಗಳ ಮತ್ತು ಇತರ ಪರ್ಯಾಯ ಸಣ್ಣ ಪತ್ರಿಕೆಗಳ ಪ್ರಸಾರ ಕಡಿಮೆ ಇದ್ದರೂ ಅವು ಪರಿಣಾಮಕಾರಿಯಾಗಿದ್ದವು. ಆಗ ಸಾಕ್ಷರತೆ ಕಡಿಮೆ ಇದ್ದು ತಂತ್ರಜ್ಞಾನ ಮಟ್ಟ ಹಾಗೂ ಪ್ರಸಾರಕ್ಕೆ ಹಲವು ಅಡೆತಡೆಗಳು ಇದ್ದರೂ ಅವುಗಳ ಪರಿಣಾಮಕಾರಿತನಕ್ಕೆ ಅಡ್ಡಿಯಾಗಿರಲಿಲ್ಲ. ಈಗಲೂ ಆಗಬೇಕಿಲ್ಲ. ಇದಕ್ಕೆ ಒಂದು ಕಾರಣ ಅವು ಜನತೆಯೊಂದಿಗೆ ಹೊಂದಿದ್ದ ಸಾವಯವ ಸಂಬಂಧಗಳು. ಅದನ್ನು ಸಾಧಿಸಿದರೆ ಈಗಲೂ ಅದು ಸಾಧ್ಯ ಎಂಬ ಒಂದು ಅಭಿಪ್ರಾಯ ವ್ಯಕ್ತವಾಯಿತು. ಇಂದಿನ ಬದಲಾದ ಸಂವಹನ ವಿಜ್ಞಾನ-ತಂತ್ರಜ್ಞಾನಗಳ ವ್ಯಾಪಕ ಲಭ್ಯತೆ, ಸಾಕ್ಷರತೆ, ಕಾರ್ಪೊರೆಟ್ ಮಾಧ್ಯಮಗಳ ಅಗಾಧ ತಲುಪುವಿಕೆ ಮತ್ತು ಶಕ್ತಿ, ಆಳುವವರ ಜತೆ ಜನತೆಯ ಮೇಲೆ ನಿಯಂತ್ರಣಕ್ಕೆ ಶಾಮೀಲು – ಇತ್ಯಾದಿ ಬೆಳವಣಿಗೆಗಳಿಂದ ಜನಪರ ಮಾಧ್ಯಮಗಳ ತಲುಪುವಿಕೆಯ ಗಾತ್ರ ಮುಖ್ಯವಾಗುತ್ತದೆ. ಅವು ನಿಜವಾದ ಸಮೂಹ ಮಾಧ್ಯಮವಾಗದೆ ಕಾರ್ಪೊರೆಟ್-ಆಳುವವರ ಕೂಟಕ್ಕೆ ಪರಿಣಾಮಕಾರಿ ಸವಾಲು ಹಾಕುವುದು ಕಷ್ಟಸಾಧ್ಯ ಎಂಬ ಇನ್ನೊಂದು ಅಭಿಪ್ರಾಯವೂ ವ್ಯಕ್ತವಾಯಿತು.
ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಹಿಂದೆ ಸಣ್ಣ ‘ಪರ್ಯಾಯ ಪತ್ರಿಕೆ’ಗಳಾಗಿ ಆರಂಭವಾಗಿ ಮುಖ್ಯವಾಹಿನಿ ಪತ್ರಿಕೆಯಾಗುವ ಗಂಭೀರ ಪ್ರಯತ್ನಗಳನ್ನು ನಡೆಸಿದ ಲಂಕೇಶ್ ಪತ್ರಿಕೆ, ಮುಂಗಾರು ಮುಂತಾದ ಪತ್ರಿಕೆಗಳು ಒಂದು ಹಂತದ ನಂತರ ಮುಂದಕ್ಕೆ ಹೋಗಲು ಸಾಧ್ಯವಾಗದ್ದರ ಕಾರಣಗಳ ಕುರಿತು ಇನ್ನಷ್ಟು ಕೂಲಂಕಷ ಅಧ್ಯಯನ-ವಿಶ್ಲೇಷಣೆಗಳ ಅಗತ್ಯವಿದೆ. ಅವುಗಳ ಪ್ರಯತ್ನಗಳಿಂದ, ಶಕ್ತಿ ಹಾಗೂ ನ್ಯೂನತೆಗಳಿಂದ ಇಂದಿನ ದಿನಮಾನಗಳಿಗೆ ಏನು ಕಲಿಯಬಹುದು ಎಂಬುದರ ಕುರಿತು ಹೆಚ್ಚಿನ ಚರ್ಚೆಯ ಅಗತ್ಯವಿದೆ. ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದು ದೀರ್ಘಕಾಲ ಅಸ್ತಿತ್ವದಲ್ಲಿದ್ದರೂ ಜನಸಮೂಹ ಅಥವಾ ಮುಖ್ಯವಾಹಿನಿ ಪತ್ರಿಕೆಯಾಗದೆ ಹೋದ ಚಳುವಳಿಗಳ ಪರ್ಯಾಯ ಪತ್ರಿಕೆಗಳಿಗೂ ಅನ್ವಯವಾಗುತ್ತದೆ.
ಎಲ್ಲ ಜನಪರ ಮಾಧ್ಯಮಗಳು ಮತ್ತು ಪತ್ರಕರ್ತರು ಒಟ್ಟಾಗಿ ದೊಡ್ಡ ಮಾಧ್ಯಮ ಕಟ್ಟುವುದು ಸಾಧ್ಯವಿಲ್ಲವೆ?
ಎಲ್ಲ ಜನಪರ ಮಾಧ್ಯಮಗಳು ಮತ್ತು ಪತ್ರಕರ್ತರು ಒಟ್ಟಾಗಿ ತಮ್ಮೆಲ್ಲ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಒಂದು ಸಶಕ್ತ ದೊಡ್ಡ ಮಾಧ್ಯಮ ಕಟ್ಟುವುದು ಸಾಧ್ಯವೂ ಇಲ್ಲ. ಅದರ ಅಗತ್ಯವೂ ಇಲ್ಲ. ಜನಪರ ಮಾಧ್ಯಮಗಳಲ್ಲಿ ಭಿನ್ನದನಿಗಳು ಬೇಕು. ಮತ್ತು ಬದಲಾವಣೆಯ ಹಲವು ಹಾದಿಗಳ ಅನ್ವೇಷಣೆಗಳು ನಡೆಯಬೇಕು. ಆದರೆ ಅವೆಲ್ಲ ಜನತೆ, ಜನಚಳುವಳಿಗಳ ಮತ್ತು ಜನಸಂಘಟನೆಗಳ ಜತೆ ಸಾವಯವ ಸಂಬಂಧ ಹೊಂದುವುದು ಮುಖ್ಯ. ಜನಪರ ಮಾಧ್ಯಮಗಳು ತಮ್ಮ ವೈವಿಧ್ಯತೆ ಮತ್ತು ಸ್ವಾಯತ್ತತೆ ಕಳೆದುಕೊಳ್ಳದೆ, ಅರ್ಥಪೂರ್ಣ ಸಂವಾದ ಸಹಕಾರ ಸಾಧ್ಯವಾಗಿಸುತ್ತಾ, ಒಂದು ಜಾಲ ಕಟ್ಟಿಕೊಂಡು ಜನಪರ ವಿಷಯಗಳನ್ನು ಚಳುವಳಿಗಳನ್ನು (ಕಾರ್ಪೊರೆಟ್ ಮಾಧ್ಯಮಗಳ ಮೇಲೆ ಒತ್ತಡ ಸೃಷ್ಟಿಸುವುದು ಸೇರಿದಂತೆ) ಮುನ್ನೆಲೆಗೆ ತರುವಲ್ಲಿ ಪರಿಣಾಮಕಾರಿ ಮಟ್ಟದ ಪ್ರಚಾರ ಮಾಡುವುದು ಅಗತ್ಯ ಮತ್ತು ಸಾಧ್ಯ.ಇಂತಹ ಜಾಲ ಕಟ್ಟಲು ಸಾಮಾಜಿಕ ಮಾಧ್ಯಮವನ್ನು ಮಾತ್ರ ಆಧರಿಸದೆ ವ್ಯಾಪಕ ಸಾಮಾಜಿಕ ಜಾಲವನ್ನು ಕಟ್ಟುವ ಮೂಲಕ ಇದನ್ನು ಸಾಧ್ಯಗೊಳಿಸಬೇಕು.ಇದೇ ಒಂದು ಚಳುವಳಿಯಾಗಬೇಕು ಮತ್ತು ಇದು ಜನಚಳುವಳಿಯ ಪ್ರಮುಖ ಭಾಗವೂ ಆಗಬೇಕು. ಆ ಮೂಲಕ ಜನಪರ ಮಾಧ್ಯಮಗಳ ತಲುಪುವಿಕೆ ಮತ್ತು ಪರಿಣಾಮಕಾರಿತನ ಹೆಚ್ಚಿಸುವುದು ಸಾಧ್ಯವೆಂಬ ಅಭಿಪ್ರಾಯ ವ್ಯಕ್ತವಾಯಿತು.
ಲಭ್ಯ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುತ್ತಲೇ, ತಮ್ಮ ಮತ್ತು ಕಾರ್ಪೊರೆಟ್-ಆಳುವ ರಾಜಕೀಯ ಕೂಟದ ಹಿತಾಸಕ್ತಿ ಕಾಪಾಡಲು ಅವು ಜನಪರ ಮಾಧ್ಯಮಗಳ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಅಡೆತಡೆಗಳನ್ನು ಹಾಕುತ್ತವೆ ಎಂದು ನಿರೀಕ್ಷಿಸಿಯೇ ಕೆಲಸ ಮಾಡಬೇಕು. ಮುಕ್ತ ತಂತ್ರಾಂಶ (ಫ್ರೀ ಸಾಫ್ಟ್ ವೇರ್ ) ಚಳುವಳಿಯ ಸಹಕಾರದೊಂದಿಗೆ, ದೈತ್ಯ ಡಿಜಿಟಲ್ ವೇದಿಕೆಗಳಿಗೆ ಬದಲಿ ಡಿಜಿಟಲ್ ವೇದಿಕೆಗಳನ್ನು ರೂಪಿಸಿಕೊಳ್ಳಬೇಕು. ಈ ದೈತ್ಯ ಡಿಜಿಟಲ್ ವೇದಿಕೆಗಳ ಅಗಾಧ ರಾಜಕೀಯ ಶಕ್ತಿಗೆ ಕಡಿವಾಣ ಹಾಕಲು ಇಂಟರ್ನೆಟ್ ನ ಪ್ರಜಾಸತ್ತೀಕರಣದ ಚಳುವಳಿಯಲ್ಲೂ ಜನಪರ ಮಾಧ್ಯಮಗಳು ತೊಡಗಿಸಿಕೊಳ್ಳಬೇಕು.
ಜನಸಮೂಹಗಳ ಜತೆ ಸಾವಯವ ಸಂವಹನ ಸಂಪರ್ಕ ಸಾಧಿಸಬೇಕು
ಸಣ್ಣ ಗಾತ್ರದ ಜನಪರ ಮಾಧ್ಯಮಗಳು ಮುಖ್ಯವಾಹಿನಿಯ ಜನಸಮೂಹ ಮಾಧ್ಯಮ ಆಗುವುದು ಹೇಗೆ ? ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಹೊಂಚುವುದು ಹೇಗೆ? ಎಂಬುದು ಸರಳವಲ್ಲ. ಅದು ಖಂಡಿತ ಅಸಾಧ್ಯವೇನಲ್ಲ. ಅದರೆ. ಸುಲಭವಾದ ತಕ್ಷಣದ ಉತ್ತರಗಳಿಲ್ಲದ ಅತ್ಯಂತ ಸಂಕೀರ್ಣವಾದ ಪ್ರಶ್ನೆ. ಸಾಕಷ್ಟು ಪರಿಣಾಮಕಾರಿಯಾಗಿದ್ದರೂ ಹೆಚ್ಚಿನ ಸಂಪನ್ಮೂಲ ಹಾಗೂ ಸಾಧ್ಯತೆಗಳನ್ನು ಹೊಂದಿರುವ ಇಂಗ್ಲಿಷ್ ಪರ್ಯಾಯ ಮಾಧ್ಯಮಗಳು ಸಹ ಬದುಕುಳಿಯಲು ಇನ್ನೂ ಹೋರಾಡುತ್ತಿವೆ, ಕನ್ನಡದಂತಹ ಪ್ರಾದೇಶಿಕ ಪರ್ಯಾಯ ಮಾಧ್ಯಮಗಳ ಸವಾಲುಗಳು ಇನ್ನೂ ಹೆಚ್ಚಿವೆ.ಇದರ ಕುರಿತು ಹಲವು ಸುತ್ತಿನ ಚರ್ಚೆ, ಚಿಂತನ-ಮಂಥನ ಪ್ರಯೋಗಗಳು ಬೇಕಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಕೊನೆಯಲ್ಲಿ ಸಂವಾದಕಾರರೊಂದಿಗೆ ಸಭಿಕರ ಪ್ರಶ್ನೋತ್ರರ ಸಹ ನಡೆಯಿತು.
ವೆಬಿನಾರಿನ ಅಧ್ಯಕ್ಷತೆ ವಹಿಸಿ ಸಂವಾದದಲ್ಲೂ ಭಾಗವಹಿಸಿದ್ದ ಡಿ ಉಮಾಪತಿ ಅವರು, ವೆಬಿನಾರಿನಲ್ಲಿ ಹೊಮ್ಮಿದ ಯೋಚನೆ, ಚರ್ಚೆಗಳ ಒಟ್ಟು ಸಾರವನ್ನು ಸಮಾರೋಪ ಮಾತುಗಳಲ್ಲಿ ಮುಂದಿಟ್ಟರು. ಸಾವಿರಾರು ಕೈಗಳು ಲಕ್ಷಾಂತರ ಹತಾರಗಳುಳ್ಳ ಸರ್ವಶಕ್ತ ಪ್ರಭುತ್ವ ಮತ್ತು ದೈತ್ಯ ಕಾರ್ಪೊರೆಟ್ ಮಾಧ್ಯಮಗಳ ಅಪವಿತ್ರ ಮೈತ್ರಿಯ ವಿರುದ್ಧ ಪರ್ಯಾಯ ಮಾಧ್ಯಮ ಕಟ್ಟುವುದು ಹೂಹಾಸಿದ ಹಾದಿಯಲ್ಲ.ಕಲ್ಲುಮುಳ್ಳುಗಳ ಹೋರಾಟದ ಹಾದಿ. ಇದನ್ನು ಸಾಧಿಸಲು ಒಂದು ಕಡೆ ಜನಸಮೂಹಗಳ ಜತೆ ಸಾವಯವ ಸಂವಹನ ಸಂಪರ್ಕ ಸಾಧಿಸುತ್ತಾ ಪರ್ಯಾಯ ಮಾಧ್ಯಮಗಳ ಜಾಲವನ್ನು ಕಟ್ಟಿಕೊಳ್ಳಬೇಕು ಮತ್ತು ಇನ್ನೊಂದೆಡೆ ಕಾರ್ಪೊರೆಟ್ ಮಾಧ್ಯಮದಲ್ಲೂ ಕಿರು ಆವರಣಗಳನ್ನು ಕಟ್ಟಿಕೊಳ್ಳಬೇಕು ಎಂದರು.
ಕಾರ್ಪೊರೆಟ್ ಮಾಧ್ಯಮಗಳು ಬರಿಯ ಸುದ್ದಿ-ವಿಶ್ಲೇಷಣೆ ಕೊಡುತ್ತಿಲ್ಲ.ಬರಿಯ ಉದ್ಯಮಗಳ ಉತ್ಪನ್ನಗಳನ್ನು ಮಾರುತ್ತಿಲ್ಲ.ಅವು ತನ್ನ ಓದುಗ/ನೋಡುಗರ ಕಣ‍್ಣಾಲಿಗಳನ್ನು ತನ್ನ ಜಾಹೀರಾತುದಾರ ಉದ್ಯಮಗಳಿಗೆ ಮಾರುತ್ತಿವೆ.ಆಳುವವರ ಮತ್ತು ಉದ್ಯಮಪತಿಗಳ ಪರವಾಗಿ ಜನಸಮೂಹಗಳಲ್ಲಿ ಒಪ್ಪಿಗೆಯನ್ನು ಉತ್ಪಾದಿಸುತ್ತಿವೆ. ಜನರು ತಮ್ಮ ಸಮಸ್ಯೆಗಳನ್ನು ಮರೆಯುವಂತೆ – ವಲಸೆಗಾರ, ಮುಸ್ಲಿಂ, ಕಮ್ಯುನಿಸ್ಟ್ ಇತ್ಯಾದಿ – ಕಾಲ್ಪನಿಕ ಶತ್ರುಗಳನ್ನು ಸೃ಼ಷ್ಟಿಸುತ್ತಿವೆ. ಈಗಲೂ ಬಹಳ ಪ್ರಸ್ತುತವಾಗಿರುವ, ನೋಮ್ ಚೋಮ್ ಸ್ಕಿ ಬಹಳ ಹಿಂದೆ ಬರೆದ ‘ಮನ್ಯುಫಾಕ್ಚರಿಂಗ್ ಕನ್ಸೆಂಟ್ (ಒಪ್ಪಿಗೆಯ ಸಾಮೂಹಿಕ ಉತ್ಪಾದನೆ) ಎಂಬ ಪುಸ್ತಕದಲ್ಲಿ ಮಂಡಿಸಿದ ಪರಿಕಲ್ಪನೆಯನ್ನು ಪರ್ಯಾಯ ಮಾಧ್ಯಮ ಕಟ್ಟಬಯಸುವವರು ಅಧ್ಯಯನ ಮಾಡಬೇಕು. ಕಾರ್ಪೊರೆಟ್ ಮಾಧ್ಯಮಗಳು ನಮ್ಮ ಮುಂದೆ ಇಡುವ ಪ್ರತಿ ಸುದ್ದಿ ಐದು ಜರಡಿ (ಫಿಲ್ಟರ್) ಗಳನ್ನು ಹಾದು ಬರುತ್ತದೆ ಎಂಬ ವಿಶ್ಲೇಷಣೆಯನ್ನು ಸಹ ವಿವರವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಿ ಹೇಳಿದರು.
ಮೊದಲಿಗೆ ಜನಶಕ್ತಿ ಮೀಡಿಯಾದ ಪರವಾಗಿ ವಸಂತರಾಜ್, ವೆಬಿನಾರಿನ ಆಶಯದ ಮಾತುಗಳನ್ನಾಡಿ ಪಿ ಸಾಯಿನಾಥ್, ಡಿ ಉಮಾಪತಿ ಹಾಗೂ ಸಂವಾದದಲ್ಲಿ ಭಾಗವಹಿಸಿದವರನ್ನು ಪರಿಚಯ ಮಾಡಿ ಸ್ವಾಗತಿಸಿದರು, ವೆಬಿನಾರಿನ ನಿರ್ವಹಣೆ ಮಾಡಿದರು. ಗುರುರಾಜ ದೇಸಾಯಿ ಅವರು ಕೊನೆಯಲ್ಲಿ ಫೊಟೊ/ವಿಡಿಯೊ ಸ್ಪರ್ಧೆಯ ತೀರ್ಪನ್ನು ಘೋಷಿಸಿ ವಂದನಾರ್ಪಣೆ ಮಾಡಿದರು.