ಬೆಂಗಳೂರು: ‘ಈ ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಏನು ಬಿಟ್ಟಿದ್ದರು, ಈಗ ನಾವೇನು ಸೇರಿಸಿದ್ದೇವೆ ಎಲ್ಲವನ್ನೂ ಸಾರ್ವಜನಿಕರ ಮುಂದೆ ಇಡುತ್ತೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯನ್ನು ಆರ್.ಟಿ. ನಗರದ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ‘ನಾವು ಈಗಾಗಲೇ ಎರಡು ತೀರ್ಮಾನ ತೆಗೆದುಕೊಂಡಿದ್ದೇವೆ’ ‘ಜನರು ತಪ್ಪಿದೆ ಎಂದು ಹೇಳಿದ್ದನ್ನು ಬದಲಾಯಿಸುವ ಮನಸ್ಸಿದೆ ಎಂದು ಈಗಾಗಲೇ ಮುಖ್ಯಮಂತ್ರಿ ಹೇಳಿದ್ದಾರೆ. ತಪ್ಪಿದೆ ಅಂದಿದ್ದನ್ನು ನಾವು ಸರಿಪಡಿಸಿದ್ದೇವೆ’ ಎಂದರು.
ಆರ್ಎಸ್ಎಸ್ ಪ್ರಮುಖರ ಸಭೆಯಲ್ಲಿ ನಾಗೇಶ್ ಅವರು ಸೋಮವಾರ ಭಾಗವಹಿಸಿದ್ದರು. ಆ ಸಭೆ ಹಾಗೂ ಆರ್ಎಸ್ಎಸ್ನವರ ಸಂದೇಶದ ಬಗ್ಗೆ ಮುಖ್ಯಮಂತ್ರಿಗೆ ನಾಗೇಶ್ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ ಸರಿಪಡಿಸುವ ಸಂಬಂಧವೂ ಸಮಾಲೋಚನೆ ನಡೆಸಿದ್ದಾಗಿ ತಿಳಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜಕಾರಣಕ್ಕಾಗಿ ಮಾತನಾಡುತ್ತಿದೆ. ಪಠ್ಯದಲ್ಲಿ ಬಿಟ್ಟ ಅಂಶವನ್ನ ಮತ್ತೆ ಸೇರಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು. ಪಠ್ಯದಲ್ಲಿ ಬಿಟ್ಟಿರುವ ಬಸವಣ್ಣ. ಡಾ.ಬಿ.ಆರ್ ಅಂಬೇಡ್ಕರ್ ಅವರ ಬಗೆಗಿನ ಅಂಶ ಸೇರಿಸುತ್ತೇವೆ. ಸಿಎಂ ಹೇಳಿದ ಮೇಲೂ ಸಿದ್ಧರಾಮಯ್ಯ ಮಾತನಾಡುತ್ತಾರೆ. ರಾಜಕಾರಣಕ್ಕಾಗಿ ಮಾತನಾಡುತ್ತಿದ್ದಾರೆ. ಎಲ್ಲವನ್ನೂ ಜನರ ಮುಂದಿಡುತ್ತೇವೆ. ಸರಿತಪ್ಪು ಯಾವುದು ಎಂಬುದನ್ನ ಜನರೇ ತೀರ್ಮಾನಿಸಲಿ. ಶೀಘ್ರದಲ್ಲೇ ಪಠ್ಯಪುಸ್ತಕ ಜನರ ಮುಂದಿಡುತ್ತೇವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.