ಬೆಂಗಳೂರು: ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣ ಸಮಿತಿ ರದ್ದುಗೊಳಿಸಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕೂಡಲೇ ರಾಜೀನಾಮೆ ನೀಡಬೇಕು, ಪ್ರೊ. ಬರಗೂರು ರಾಮಚಂದ್ರ ಸಮಿತಿ ರೂಪಿಸಿರುವ ಪಠ್ಯಪುಸ್ತಕಗಳನ್ನೇ ಅಳವಡಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ.
ಕರ್ನಾಟಕದ ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ ಜಾತೀಯತೆ, ಮತೀಯವಾದ ಮತ್ತು ಸಂವಿಧಾನ ವಿರೋಧಿ ವಿಚಾರಗಳನ್ನು ತುರುಕಲಾಗುತ್ತಿದೆ. ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣ ಸಮಿತಿಯು ಹಲವಾರು ವಿಷಯಗಳ ತಜ್ಞರು ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡಿದ್ದ ಉಪಸಮಿತಿಗಳ ಅಧ್ಯಯನ ಮತ್ತು ಶಿಫಾರಸ್ಸುಗಳ ಆಧಾರದಲ್ಲಿ ವೈಜ್ಞಾನಿಕವಾಗಿ ಪರಿಷ್ಕರಣೆ ಮಾಡಿದ್ದ ಶಾಲಾ ಪಠ್ಯಪುಸ್ತಕಗಳನ್ನು ಇದುವರೆಗೂ ರಾಜ್ಯದ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ. ಈಗ ಏಕಾಏಕಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸ್ವಲ್ಪವೂ ಅನುಭವವಿಲ್ಲದ ಯಾವುದೇ ವಿಷಯದಲ್ಲಿಯೂ ತಜ್ಞನಲ್ಲದ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಬಹುತೇಕ ಒಂದೇ ಜಾತಿ ಮತ್ತು ಸಿದ್ಧಾಂತಕ್ಕೆ ಸೇರಿದ 9 ಜನರ ಪಠ್ಯಪುಸ್ತಕಗಳ ಮರುಪರಿಷ್ಕರಣೆ ಸಮಿತಿಯನ್ನು, ಸಾಮಾಜಿಕ ನ್ಯಾಯವನ್ನು ಕಡೆಗಣಿಸಿಲಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಅಲ್ಲದೆ, ರಾಜ್ಯದ ಬಿಜೆಪಿ ಸರ್ಕಾರ ಹಾಗೂ ಸ್ವತಃ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮರು ಪರಿಷ್ಕರಣಾ ಸಮಿತಿಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಇಡೀ ಶಿಕ್ಷಣ ವ್ಯವಸ್ಥೆಯನ್ನು ಕೋಮುವಾದೀಕರಣಗೊಳಿಸುವ ಕುತಂತ್ರವಾಗಿದೆ. ಶಿಕ್ಷಣ ಸಚಿವರು ನೀಡುತ್ತಿರುವ ಹೇಳಿಕೆಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ, ಬದಲಾಗಿ ಸಂವಿಧಾನದ ಆಶಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿ ಹಾಗಾಗಿ ಕೂಡಲೇ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಗಿದೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಪಠ್ಯಪುಸ್ತಕಗಳನ್ನು ತರಾತುರಿಯಲ್ಲಿ ಮರುಪರಿಷ್ಕರಣೆ ಮಾಡಿದ್ದು ಈ ಹಿಂದೆ ಶಾಲಾ ಪಠ್ಯಪುಸ್ತಕಗಳಲ್ಲಿದ್ದ ಕನ್ನಡದ ಹಲವು ಪ್ರಮುಖ ಲೇಖಕರು ಮತ್ತು ಸಾಹಿತಿಗಳ ರಚನೆಗಳನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ.
ಮತಧರ್ಮ ನಿರಪೇಕ್ಷತೆ, ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ವೈಜ್ಞಾನಿಕ ಮನೋಭಾವ ಮತ್ತು ಸಹಬಾಳ್ವೆಯಂತಹ ಸಂವಿಧಾನಾತ್ಮಕ ಮೌಲ್ಯಗಳನ್ನು ಒಳಗೊಂಡ ಪಾಠಗಳನ್ನು ಕೈಬಿಟ್ಟು ಜಾತೀಯತೆ, ಮತೀಯವಾದ, ಲಿಂಗ ತಾರತಮ್ಯ, ಮೂಢನಂಬಿಕೆ ಮತ್ತು ಕಂದಾಚಾರವನ್ನು ಪ್ರೇರೇಪಿಸುವ ಮತ್ತು ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯ ಆಶಯವನ್ನೇ ಅಪಮಾನ ಮಾಡುವ ವಿಚಾರಗಳಿರುವ ಪಾಠಗಳನ್ನು ಸೇರಿಸಲಾಗಿದೆ.
ದೇಶದ ಸ್ವಾತಂತ್ರ್ಯ ಹೋರಾಟದ ವಿರುದ್ಧವಾಗಿ ಬ್ರಿಟಿಷರ ಪರವಾಗಿದ್ದ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸಿದ ಆರ್‌ಎಸ್‌ಎಸ್‌ನ ಹೆಡ್ಗೇವಾರ್ ಭಾಷಣವನ್ನು ಸೇರಿಸುವ ಮುಖಾಂತರ ದೇಶದ ರಾಷ್ಟ್ರೀಯ ಚಳುವಳಿ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಅವಮಾನ ಮಾಡಲಾಗಿದೆ. ಗೌತಮ ಬುದ್ಧ ಮತ್ತು ಪೆರಿಯಾರರ ವಿಚಾರಗಳು ಮತ್ತು ಪಿ. ಲಂಕೇಶರ ಲೆಖನವನ್ನು ಕೈಬಿಡಲಾಗಿದೆ. ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಸಂವಿಧಾನ ವಿರೋಧಿಯಾದ ಪ್ರತಿಗಾಮಿ ಮತ್ತು ಮನುವಾದಿ ವಿಚಾರಗಳನ್ನು ಸೇರಿಸಲಾಗಿದೆ.
ಇತಿಹಾಸದ ಹೆಸರಿನಲ್ಲಿ ಪುರಾಣವನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ. ಸುಳ್ಳು ಮತ್ತು ತಿರುಚಿದ ಮಾಹಿತಿಗಳನ್ನು ಒಳಗೊಂಡಿರುವ ದ್ವೇಷಪೂರಿತ ಕೋಮುವಾದಿ ಭಾಷಣಗಳನ್ನು ಮಾಡುವ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆಯ ಲೇಖನವನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ. ಪಠ್ಯಪುಸ್ತಕಗಳ ಪಾಠಗಳಲ್ಲಿ ಬಹುತೇಕ ಬ್ರಾಹ್ಮಣರಿಗೇ ಆಧ್ಯತೆ ನೀಡಲಾಗಿದೆ.
ಮಕ್ಕಳಲ್ಲಿ ಸಂವಿಧಾನದ ಮೌಲ್ಯಗಳಾದ ಜಾತ್ಯಾತೀತತೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಬದಲಾಗಿ ಜಾತಿವಾದಿ ಮತ್ತು ಕಂದಾಚಾರದ ವಿಚಾರಗಳನ್ನು ತುಂಬುವ ಮುಖಾಂತರ ಮಕ್ಕಳಿಗೆ ಮತೀಯವಾದದ ವಿಷವನ್ನು ತುಂಬುವ ಪ್ರಯತ್ನ ಎದ್ದು ಕಾಣುತ್ತಿದೆ. ಇದು ಸಂವಿಧಾನ ವಿರೋಧಿಯಾದ ಕೃತ್ಯವಾಗಿದೆ ಎಂದಿದ್ದಾರೆ.
ಇದರೊಂದಿಗೆ, ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದ್ದು ಪಠ್ಯಪುಸ್ತಕಗಳ ಮರುಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿರುವ ಸ್ವತಃ ರೋಹಿತ್ ಚಕ್ರತೀರ್ಥ ಎಂಬ ಬ್ರಾಹ್ಮಣ್ಯವಾದಿ ವ್ಯಕ್ತಿಯು ಕುವೆಂಪು ಅವರ ಬಗ್ಗೆ ಶೂದ್ರ ಎನ್ನುವ ಕಾರಣಕ್ಕೆ ಅವರ ಪ್ರತಿಭೆಯನ್ನು ಅಪಹಾಸ್ಯ ಮಾಡಿ ಹಾಗೂ ಕುವೆಂಪು ಅವರ ರಚನೆಯ ನಾಡಗೀತೆಯನ್ನು ಅತೀ ಕೆಟ್ಟ ಶಬ್ಧಗಳನ್ನು ಬಳಸಿ ತಿರುಚಿ ಬರೆದಿರುವ ಬರಹಗಳನ್ನು ಪ್ರಕಟಿಸಿ ಅವಮಾನಿಸಲಾಗಿದೆ. ಇದು ನಾಡಗೀತೆಗೆ ಅಷ್ಟೇ ಅಲ್ಲದೆ ಇಡೀ ಕನ್ನಡನಾಡಿಗೆ ಮಾಡಿದ ಅಪಚಾರವಾಗಿದೆ ಎಂದು ಪ್ರತಿಭಟಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಬೆಂಬಲಿಗರು ರಾಷ್ಟ್ರಕವಿ ಕುವೆಂಪು, ಬರಗೂರು ರಾಮಚಂದ್ರಪ್ಪ, ದೇವನೂರು ಮಹದೇವ ಅಂತಹ ಕನ್ನಡದ ಹಿರಿಯ ಸಾಹಿತಿಗಳನ್ನು ಅವರ ಜಾತಿಯ ಕಾರಣಕ್ಕೆ ಅಪಮಾನಿಸುವ ಬರಹಗಳನ್ನು ಪ್ರಕಟಿಸುವ ಮುಖಾಂತರ ಅವರನ್ನು ಅಸಭ್ಯವಾಗಿ ನಿಂದಿಸಲಾಗುತ್ತಿದೆ. ಇದು ಕನ್ನಡ ಭಾಷೆ, ಸಂಸ್ಕೃತಿ ಮತ್ತು ನಾಡಿಗೆ ಎಸಗಿದ ದ್ರೋಹವಾಗಿದೆ.
ಈಗಾಗಲೇ ಸಾಂಸ್ಕೃತಿಕ ವಲಯದಲ್ಲಿ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡನಾಡಿನ ಸಾಕ್ಷಿಪ್ರಜ್ಞೆಯಂತಿರುವ ದೇವನೂರು ಮಹದೇವ ಮತ್ತು ಡಾ. ಜಿ. ರಾಮಕೃಷ್ಣ ಅವರುಗಳು ಪ್ರತಿಭಟನೆಯ ಭಾಗವಾಗಿ ಪಠ್ಯಪುಸ್ತಕದಲ್ಲಿ ತಮ್ಮ ಬಹರಗಳನ್ನು ಸೇರಿಸದಂತೆ ಅವರ ಅನುಮತಿಯನ್ನು ನಿರಾಕರಿಸಿದ್ದಾರೆ. ಇದು ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆ ಮತ್ತು ಪಠ್ಯಪುಸ್ತಕಗಳ ಮರುಪರಿಷ್ಕರಣೆ ಸಮಿತಿಗೆ ಆದ ತೀವ್ರ ಮುಖಭಂಗ ಮತ್ತು ಹಿನ್ನೆಡೆಯಾಗಿದೆ.
ರಾಜ್ಯದಲ್ಲಿ ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ, ಶಾಲೆಗಳು ಆರಂಭವಾಗಿ ತಿಂಗಳು ಕಳೆದರೂ ಸಹ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯಪುಸ್ತಕ ಪೂರೈಸಲು ವಿಫಲವಾಗಿರುವ, ಪಠ್ಯಪುಸ್ತಕಗಳ ಮರುಪರಿಷ್ಕರಣೆಯ ವಿವಾದವನ್ನು ಸಂವಿಧಾನಾತ್ಮಕವಾಗಿ ನಿಭಾಯಿಸದ, ಅತ್ಯಂತ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿರುವ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗಿರುವ ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ರಾಷ್ಟ್ರಕವಿ ಕುವೆಂಪುರವರ ಕುರಿತು ಹಾಗೂ ದೇವನೂರು ಮಹಾದೇವ, ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ಪಠ್ಯಪುಸ್ತಕಗಳ ಮರುಪರಿಷ್ಕರಣೆಯನ್ನು ವಿರೋಧಿಸುವವರನ್ನು ಗುರಿಯಾಗಿಸಿಕೊಂಡು ಅಸಭ್ಯ ಮತ್ತು ಅಶ್ಲೀಲವಾದ ರೀತಿಯಲ್ಲಿ ಸಂಘಟಿತವಾದ ದಾಳಿ ನಡೆಸುತ್ತಿರುವ ಸಂಘ ಪರಿವಾರ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರ ವಿರುದ್ಧ ಕಾನೂನು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕೆಂದು ಆಗ್ರಹಿಸಲಾಗಿದೆ.
ಕರ್ನಾಟಕದ ಎಲ್ಲಾ ಪ್ರಮುಖ ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ವಿಚಾರವಾದಿಗಳು ಹಾಗೂ ದಲಿತ, ಪ್ರಗತಿಪರ, ಕನ್ನಡಪರ, ಪ್ರಜಾಸತ್ತಾತ್ಮಕ ಮತ್ತು ಜಾತ್ಯಾತೀತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸುತ್ತಿದ್ದಾರೆ.
ಬೆಂಗಳೂರು
ಬೆಂಗಳೂರಿನಲ್ಲಿ ಸಿಟಿ ಸಿವಿಲ್ ನ್ಯಾಯಾಲಯದ ಸಮೀಪ ಜಮಾಯಿಸಿದ ಪ್ರತಿಭಟನಾಕಾರರು ಮಕ್ಕಳ ಶೈಕ್ಷಣಿಕ ವ್ಯವಸ್ಥೆಯ ಉಳಿವಿಗಾಗಿ ಆಗ್ರಹಿಸಿದರು, ಪ್ರತಿಭಟನೆಯಲ್ಲಿ ವಕೀಲರು, ಸಾಹಿತಿಗಳು, ದಲಿತ ಸಂಘಟನೆ ಮುಖಂಡರು, ಪ್ರಗತಿಪರರು, ಹಲವು ಮಂದಿ ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಹಿರಿಯ ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲ ಸೇರಿದಂತೆ ಹಲವರು ಭಾಗವಹಿಸಿದ್ದರು.
ರೋಹಿತ್ ಚಕ್ರವರ್ತಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ ಪ್ರತಿಭಟನೆ ನಡೆಸಿದ್ದು, ಮಲ್ಲೇಶ್ವರದ ಕುವೆಂಪು ಕಂಚಿನ ಪ್ರತಿಮೆ ಮುಂಭಾಗ ಸೇರಿದ್ದ ಪ್ರತಿಭಟನಾಕಾರರು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ತಮಗಿಷ್ಟ ಬಂದಂತೆ ವಿಷಯ ತುಂಬಲಾಗಿದೆ. ರಾಷ್ಟ್ರ ಕವಿ ಕುವೆಂಪು ರವರು ರಚಿಸಿರುವ ನಾಡಗೀತೆ ವ್ಯಂಗ್ಯಮಾಡಿ ಅವಹೇಳನ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿ ರೋಹಿತ್ ಚಕ್ರತೀರ್ಥ ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ದಹನ ಮಾಡಿದರು. ಅಲ್ಲದೆ, ಪೊಲೀಸರು ರೋಹಿತ್ ಚಕ್ರತೀರ್ಥ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಆಗ್ರಹಿಸಿದರು.
ಹಾಸನ
ಹಾಸನ ಜಿಲ್ಲೆಯ ಪ್ರಮುಖ ಸಾಹಿತಿಗಳು, ವಿಚಾರವಾದಿಗಳು, ದಲಿತ, ಜನಪರ, ಕನ್ನಡಪರ, ಪ್ರಗತಿಪರ, ಪ್ರಜಾಸತ್ತಾತ್ಮಕ ಮತ್ತು ಜಾತ್ಯಾತೀತ ವ್ಯಕ್ತಿಗಳು ಮತ್ತು ಸಂಘಟನೆಗಳ ನೇತೃತ್ವದಲ್ಲಿ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿರುವ ರಾಷ್ಟ್ರಕವಿ ಕುವೆಂಪು, ಗೌತಮ ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಪ್ರತಿಭಟನಾ ಮೆರವಣಿಗೆ ನಡೆಸಿ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಡಾ. ಹಂಪನಹಳ್ಳಿ ತಿಮ್ಮೇಗೌಡ, ಡಾ. ವೈ.ಎಸ್. ವೀರಭದ್ರಪ್ಪ, ಮೇಟಿಕೆರೆ ಹಿರಿಯಣ್ಣ, ಎಚ್.ಕೆ. ಜವರೇಗೌಡ, ಕೆ.ಟಿ. ಶಿವಪ್ರಸಾದ್, ಧರ್ಮೇಶ್, ವೆಂಕಟೇಶ್, ಎಚ್.ಕೆ. ಸಂದೇಶ್, ರಾಜಶೇಖರ್, ಕೃಷ್ಣದಾಸ್, ಬಿ.ಕೆ. ಮಂಜುನಾಥ್, ಅಂಬುಗ ಮಲ್ಲೇಶ್, ಎಂ.ಬಿ. ಪುಷ್ಪ, ಮುಬಶಿರ್ ಅಹಮದ್, ಎನ್.ಎಲ್. ಚನ್ನೇಗೌಡ, ಬಿ.ಎಸ್. ದೇವರಾಜ್, ಓಬಳೇಶ್ ಗಟ್ಟಿ, ಪ್ರೊ. ಡಿ.ಜಿ. ಕೃಷ್ಣೇಗೌಡ, ಗುರುಮೂರ್ತಿ, ಎಚ್.ಆರ್. ನವೀನ್‌ಕುಮಾರ್, ಎಂ.ಜಿ. ಪೃಥ್ವಿ, ಗಂಗಾಧರ್ ಬಹುಜನ, ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.