ಪರಿಶಿಷ್ಟರ ವಸತಿ ಯೋಜನೆಗೆ ಪ್ರಭಾವಿಗಳ ಅಡ್ಡಗಾಲು: ಸಿಪಿಐ(ಎಂ) ಖಂಡನೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಟ್ರೈಬಲ್ ಉಪ ಯೋಜನೆ ಅಡಿ ಬಳಕೆಯಾಗದೆ ಉಳಿದಿದ್ದ ಹಣದಲ್ಲಿ ಪರಿಶಿಷ್ಟ ಜನರಿಗೆ ವಸತಿ ನಿವೇಶನ  ನೀಡಲು 2014 ಜುಲೈನಲ್ಲಿ ರಾಜ್ಯ ಸರ್ಕಾರದ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಾಡಲಾಗಿದ್ದ ತೀರ್ಮಾನವನ್ನು ಜಾರಿ ಮಾಡಲು ಬಿಡದ ಬಿಜೆಪಿ ಸಚಿವರು ಹಾಗೂ ಶಾಸಕರ ಕ್ರಮಗಳನ್ನು ಸಿಪಿಐ(ಎಂ) ಪಕ್ಷ ಖಂಡಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್.ಪ್ರತಾಪ್‌ ಸಿಂಹ ಮತ್ತು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್.ಉಮೇಶ್‌ ಅವರು ಕೂಡಲೇ ಸದರಿ ಫಲಾನುಭವಿಗಳಿಗೆ ಸದರಿ ವಸತಿ ನಿವೇಶನಗಳನ್ನು ವಿತರಿಸಲು ಆಗ್ರಹಿಸಿದ್ದಾರೆ.

ವಸತಿ ಸಚಿವರು ಮತ್ತು ಬಿಡಿಎ ಅಧ್ಯಕ್ಷರ ಒತ್ತಡಕ್ಕೆ ಮಣಿದು ಅಂದಿನ ಮುಖ್ಯಮಂತ್ರಿ 2019 ಆಗಸ್ಟ್‌ನಲ್ಲಿ ಈ ಪ್ರಕ್ರಿಯೆಯನ್ನು ರದ್ದುಮಾಡಲು ನೀಡಿದ್ದ ಸೂಚನೆಯಂತೆ 1,100 ಪರಿಶಿಷ್ಟ ವರ್ಗ ಮತ್ತು ಪಂಗಡದ ಫಲಾನುಭವಿಗಳಿಗೆ ಲಭಿಸಬೇಕಿದ್ದ ವಸತಿ ನಿವೇಶನಗಳು ದಶಕ ಕಳೆಯುತ್ತಿದ್ದರೂ ಲಭಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದಾಸನಪುರ ಹಾಗೂ ಕೆಂಗೇರಿ ಹೋಬಳಿಯಲ್ಲಿ ಗುರುತಿಸಿ ಬಿಬಿಎಂಪಿಗೆ ನೀಡಲಾಗಿದ್ದ ಜಮೀನಿನಲ್ಲಿ ಕೈಗೊಳ್ಳಬೇಕಾಗಿದ್ದ ಪರಿಶಿಷ್ಟರ ಈ ವಸತಿ ನಿವೇಶನ ಯೋಜನೆ ಬಿಜೆಪಿ ಸರ್ಕಾರದ ದಲಿತ ವಿರೋಧಿ ನೀತಿಯಿಂದಾಗಿ ರದ್ದಾಗಬೇಕಾಗಿ ಬಂದಿದೆ. ಇದರಿಂದಾಗಿ 1,100 ಫಲಾನುಭವಿಗಳು ವಸತಿ ನಿವೇಶನದಿಂದ ವಂಚಿತರಾಗಬೇಕಾಗಿ ಬಂದಿದೆ ಎಂದು ಸಿಪಿಐ(ಎಂ) ಸರ್ಕಾರದ ಕ್ರಮವನ್ನು ಖಂಡಿಸಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಘಟಕ ಯೋಜನೆ ಮತ್ತು ಟ್ರೈಬಲ್ ಉಪ ಯೋಜನೆಗಳ ಹಣ ಪರಿಶಿಷ್ಟರಿಗೆ ಮಾತ್ರ ಬಳಕೆಯಾಗಬೇಕು. ಬಿಬಿಎಂಪಿಯ ಅಸಮರ್ಥ ಆಡಳಿತದಿಂದಾಗಿ ಸದರಿ ಯೋಜನೆಗೆ ಮೀಸಲಿಟ್ಟಿದ್ದ ಹಣ ಬಳಕೆಯಾಗದೆ ಉಳಿದಿದ್ದು ಸದರಿ ಹಣವನ್ನು ವಸತಿ ನಿವೇಶನ ರಹಿತರಿಗೆ ವಸತಿ ನಿವೇಶನ ನೀಡಲು ಬಳಸಬೇಕೆಂಬ 2021ರ ಅಂದಿನ ಸರ್ಕಾರದ ಕ್ರಮಕ್ಕೆ ಬಿಜೆಪಿ ಸರ್ಕಾರವು ಅಡ್ಡಿಪಡಿಸಿರುವುದು ಬಿಜೆಪಿಯ ದಲಿತ ದ್ರೋಹಿ ಕ್ರಮವನ್ನು ತೋರುತ್ತದೆ ಎಂದು ಸಿಪಿಐ(ಎಂ) ಪಕ್ಷವು ಟೀಕಿಸಿದೆ.

Donate Janashakthi Media

Leave a Reply

Your email address will not be published. Required fields are marked *